ಒಲಿಂಪಿಕ್ಸ್:‌ ಸಾತ್ವಿಕ್‌-ಚಿರಾಗ್‌ ಜೋಡಿಗೆ ಅಚ್ಚರಿಯ ಸೋಲು; ಹೊರಬಿದ್ದ ನಿಖತ್‌ ಜರೀನ್‌, ಬೆಲ್ಜಿಯಂ ವಿರುದ್ಧ ಮುಗ್ಗರಿಸಿದ ಹಾಕಿ ತಂಡ
ಕನ್ನಡ ಸುದ್ದಿ  /  ಕ್ರೀಡೆ  /  ಒಲಿಂಪಿಕ್ಸ್:‌ ಸಾತ್ವಿಕ್‌-ಚಿರಾಗ್‌ ಜೋಡಿಗೆ ಅಚ್ಚರಿಯ ಸೋಲು; ಹೊರಬಿದ್ದ ನಿಖತ್‌ ಜರೀನ್‌, ಬೆಲ್ಜಿಯಂ ವಿರುದ್ಧ ಮುಗ್ಗರಿಸಿದ ಹಾಕಿ ತಂಡ

ಒಲಿಂಪಿಕ್ಸ್:‌ ಸಾತ್ವಿಕ್‌-ಚಿರಾಗ್‌ ಜೋಡಿಗೆ ಅಚ್ಚರಿಯ ಸೋಲು; ಹೊರಬಿದ್ದ ನಿಖತ್‌ ಜರೀನ್‌, ಬೆಲ್ಜಿಯಂ ವಿರುದ್ಧ ಮುಗ್ಗರಿಸಿದ ಹಾಕಿ ತಂಡ

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 6ನೇ ದಿನವಾದ ಬುಧವಾರ ಭಾರತ ಮಿಶ್ರ ಫಲಿತಾಂಶ ಕಂಡಿದೆ. ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ 16ರ ಸುತ್ತಿನಲ್ಲಿ ಗೆದ್ದ ಲಕ್ಷ್ಯ ಸೇನ್ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಅತ್ತ ಪದಕದ ಭರವಸೆಯಲ್ಲಿದ್ದ ಸಾತ್ವಿಕ್‌ ಹಾಗೂ ಚಿರಾಗ್‌ ಜೋಡಿ ಸೋತಿದ್ದಾರೆ. ಬಾಕ್ಸಿಂಗ್‌ನಲ್ಲಿ ನಿಖತ್‌ ಜರೀನ್‌ ಪದಕದ ಭರವಸೆ ಕಳೆದುಕೊಂಡಿದ್ದಾರೆ.

ಒಲಿಂಪಿಕ್ಸ್:‌ ಸಾತ್ವಿಕ್‌-ಚಿರಾಗ್‌ ಜೋಡಿಗೆ ಅಚ್ಚರಿಯ ಸೋಲು; ಹೊರಬಿದ್ದ ನಿಖತ್‌ ಜರೀನ್‌
ಒಲಿಂಪಿಕ್ಸ್:‌ ಸಾತ್ವಿಕ್‌-ಚಿರಾಗ್‌ ಜೋಡಿಗೆ ಅಚ್ಚರಿಯ ಸೋಲು; ಹೊರಬಿದ್ದ ನಿಖತ್‌ ಜರೀನ್‌ (PTI)

ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ 6ನೇ ದಿನವಾದ ಇಂದು ಭಾರತ ಮೂರನೇ ಪದಕ ಗೆದ್ದಿದೆ. ಸ್ವಪ್ನಿಲ್ ಕುಸಾಲೆ ಅವರು ಪುರುಷರ 50 ಮೀಟರ್‌ ಶೂಟಿಂಗ್‌ನಲ್ಲಿ ಕಂಚಿನ ಪದಕದೊಂದಿಗೆ, ಶೂಟಿಂಗ್‌ನಲ್ಲಿ ಭಾರತದ ಹ್ಯಾಟ್ರಿಕ್‌ ಸಾಧನೆಗೆ ಕಾರಣರಾದರು. ಇದೇ ವೇಳೆ ಭಾರತದ ಪುರುಷರ ಹಾಕಿ ತಂಡವು ಹಾಲಿ ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ವಿರುದ್ಧ 2-1 ಅಂತರದಿಂದ ಸೋಲು ಕಂಡಿತು. ಅತ್ತ ಮಹಿಳೆಯರ 50 ಕೆಜಿ ವಿಭಾಗದ ಬಾಕ್ಸಿಂಗ್‌ 16ರ ಸುತ್ತಿನಲ್ಲಿ ಭಾರತದ ನಿಖತ್ ಜರೀನ್ ಅಗ್ರ ಶ್ರೇಯಾಂಕದ ವು ಯು ವಿರುದ್ಧ ಸೋತರು. ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಅವರ ಅಭಿಯಾನ ಅಂತ್ಯಗೊಂಡಿತು. ಒಲಿಂಪಿಕ್ಸ್‌ನಲ್ಲಿ ಪದಕದ ಭರವಸೆ ಮೂಡಿಸಿದ್ದ‌ ಸ್ಟಾರ್ ಬ್ಯಾಡ್ಮಿಂಟನ್‌ ಜೋಡಿ ಸಾತ್ವಿಕ್‌ ಹಾಗೂ ಚಿರಾಗ್‌, ಕ್ವಾರ್ಟರ್‌ ಫೈನಲ್‌ನಲ್ಲಿ ಅಚ್ಚರಿಯ ಸೋಲು ಕಂಡು ನಿರಾಶೆ ಮೂಡಿಸಿದ್ದಾರೆ.

ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ 16ರ ಸುತ್ತಿನಲ್ಲಿ ಭಾರತದ ಹೆಚ್​ಎಸ್ ಪ್ರಣೋಯ್ ವಿರುದ್ಧ‌ ಗೆದ್ದ ಲಕ್ಷ್ಯ ಸೇನ್ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಬ್ಯಾಡ್ಮಿಂಟನ್‌ ಜೋಡಿಗೆ ಅಚ್ಚರಿಯ ಸೋಲು

ಗ್ರೂಪ್ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾರತದ ಸ್ಟಾರ್‌ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಕ್ವಾರ್ಟರ್‌ ಫೈನಲ್‌ನಲ್ಲಿ ಅಚ್ಚರಿಯ ಸೋಲು ಕಂಡಿದ್ದಾರೆ. ಮಲೇಷ್ಯಾದ ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ ಅವರ ವಿರುದ್ಧ 21-13, 14-21, 16-21 ಸೆಟ್‌ಗಳ ಅಂತರದಿಂದ ಸೋತು ಅಭಿಯಾನ ಅಂತ್ಯಗೊಳಿಸಿದ್ದಾರೆ. ಮೊದಲ ಸೆಟ್‌ನಲ್ಲಿ ಭರ್ಜರಿ ಜಯ ಸಾಧಿಸಿದ ಭಾರತದ ಜೋಡಿ, ಆ ನಂತರದ ಎರಡು ಸೆಟ್‌ಗಳಲ್ಲೂ ಮುಗ್ಗರಿಸಿದರು. ಖಡಕ್‌ ಹೊಡೆತಗಳೊಂದಿಗೆ ಅಮೋಘ ಆಟ ಪ್ರದರ್ಶಿಸಿದ ಮಲೇಷ್ಯಾ ಮುಂದಿನ ಹಂತ ಪ್ರವೇಶಿಸಿತು.

ವನಿತೆಯರ ಶೂಟಿಂಗ್‌ನಲ್ಲಿ ನಿರಾಶೆ

ಮಹಿಳೆಯರ 50 ಮೀಟರ್ ರೈಫಲ್ ಅರ್ಹತಾ ಸುತ್ತಿನಲ್ಲಿ ಭಾರತದ ಸಿಫ್ಟ್ ಕೌರ್ ಸಮ್ರಾ ಮತ್ತು ಅಂಜುಮ್ ಮೌದ್ಗಿಲ್ ವಿಫಲರಾಗಿದ್ದಾರೆ. ಮೌದ್ಗಿಲ್ 584-26x ಅಂಕಗಳೊಂದಿಗೆ 18ನೇ ಸ್ಥಾನ ಪಡೆದರು. ಕೌರ್ 575-22x ನಿರಾಶಾದಾಯಕ ಪ್ರದರ್ಶನದೊಂದಿಗೆ 31ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಹಾಕಿಯಲ್ಲಿ ಸೋಲು

ಪುರುಷರ ಹಾಕಿಯಲ್ಲಿ ಭಾರತ ತಂಡವು ಹಾಲಿ ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ವಿರುದ್ಧ 2-1 ಗೋಲುಗಳಿಂದ ಸೋಲು ಕಂಡಿದೆ. ಬಲಿಷ್ಠ ಬೆಲ್ಜಿಯಂ ವಿರುದ್ಧ ಭಾರತದ ಪರ ಅಭಿಷೇಕ್ 18ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು. ಬೆಲ್ಜಿಯಂ ಪರ ಥಿಬೌ ಸ್ಟಾಕ್‌ಬ್ರೋಕ್ಸ್ 33 ಮತ್ತು ಜಾನ್-ಜಾನ್ ಡೊಹ್ಮೆನ್ 44ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಬಲಿಷ್ಠ ತಂಡದ ವಿರುದ್ಧ ಸೋತರೂ, ತಂಡದ ಪ್ರದರ್ಶನದ ಬಗ್ಗೆ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಸಂತಸ ವ್ಯಕ್ತಪಡಿಸಿದರು. ಈಗಾಗಲೇ ಉಭಯ ತಂಡಗಳು ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಹಾಕಿವೆ. ಆಗಸ್ಟ್ 4ರಂದು ಭಾರತ ಕ್ವಾರ್ಟರ್‌ ಫೈನಲ್‌ನಲ್ಲಿ ಆಡಲಿದೆ. ಅದಕ್ಕೂ ಮುನ್ನ ಆಗಸ್ಟ್‌ 2ರ ಶುಕ್ರವಾರ ಭಾರತ ತನ್ನ ಕೊನೆಯ ಪೂಲ್ ಬಿ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಇತರ ಫಲಿತಾಂಶಗಳು

ಪುರುಷರ 20 ಕಿ.ಮೀ. ಓಟದ ನಡಿಗೆಯ ಫೈನಲ್‌ನಲ್ಲಿ ಭಾರತದ ವಿಕಾಶ್ 30ನೇ ಸ್ಥಾನ ಪಡೆದರೆ, ಪರಮ್‌ಜೀತ್ 37ನೇ ಸ್ಥಾನ ಪಡೆದರು. ಇದೇ ವೇಳೆ ಮಹಿಳೆಯರ 20 ಕಿ.ಮೀ. ಓಟದ ನಡಿಗೆಯಲ್ಲಿ ಪ್ರಿಯಾಂಕಾ ಗೋಸ್ವಾಮಿ 1:39.55 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 41ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಆರ್ಚರಿ ಪುರುಷರ ವೈಯಕ್ತಿಕ ವಿಭಾಗದ 32ರ ಸುತ್ತಿನಲ್ಲಿ ಪ್ರವೀಣ್ ಜಾಧವ್ 0-6 ಅಂಕಗಳ ಅಂತರದಿಂದ ಚೀನಾದ ವೆಂಚವೊ ಕಾವೊ ವಿರುದ್ಧ ಸೋತು ಹೊರಬಿದ್ದರು.

ಮಹಿಳೆಯರ 50 ಕೆಜಿ ಬಾಕ್ಸಿಂಗ್‌ 16ರ ಸುತ್ತಿನಲ್ಲಿ ಚೀನಾದ ವು ಯು ವಿರುದ್ಧ ಸೋತ ನಿಖತ್ ಜರೀನ್, ಕೂಟದಿಂದ ಹೊರಬಿದ್ದರು.

Whats_app_banner