ಪ್ಯಾರಿಸ್ ಒಲಿಂಪಿಕ್ಸ್: ಭಾರತಕ್ಕಿಂದು 3 ಮೆಡಲ್ ಗೆಲ್ಲುವ ಅವಕಾಶ; ಆಗಸ್ಟ್ 1ರ ಸಂಪೂರ್ಣ ವೇಳಾಪಟ್ಟಿ ಹೀಗಿದೆ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆಗಸ್ಟ್ 1ರ ಗುರುವಾರ ಆರನೇ ದಿನದ ಕ್ರೀಡೆಗಳು ನಡೆಯುತ್ತಿವೆ. ಇಂದು ಭಾರತ ಮೂರು ಪದಕಗಳನ್ನು ಗೆಲ್ಲುವ ಅವಕಾಶ ಹೊಂದಿದೆ. ಶೂಟಿಂಗ್‌ನಲ್ಲಿ ಸ್ವಪ್ನಿಲ್ ಕುಸಾಲೆ ಪದಕಕ್ಕೆ ಶೂಟ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಜುಲೈ 31ರ ಬುಧವಾರ ಭಾರತಕ್ಕೆ ಯಾವುದೇ ಪದಕ ಬಂದಿಲ್ಲ. ಆದರೆ ಭಾರತೀಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿದರು. ಅದರೊಂದಿಗೆ ಮುಂದಿನ ದಿನಗಳಲ್ಲಿ ಪದಕದ ಭರವಸೆ ಮೂಡಿಸಿದರು. ಶೂಟಿಂಗ್‌ನಲ್ಲಿ ಸ್ವಪ್ನಿಲ್ ಕುಸಾಲೆ ಫೈನಲ್ ಪ್ರವೇಶಿಸಿದ್ದು, ಗುರುವಾರ ಪದಕ ಗೆಲ್ಲುವ ಅವಕಾಶ ಹೊಂದಿದ್ದಾರೆ. 50 ಮೀಟರ್ ರೈಫಲ್‌ನಲ್ಲಿ ಏಳನೇ ಸ್ಥಾನ ಪಡೆದು ಫೈನಲ್‌ಗೆ ಪ್ರವೇಶಿಸಿದ ಕುಸಾಲೆ, ಪದಕ ಗೆಲ್ಲುವ ನಿರೀಕ್ಷೆ ಇದೆ. ಪುರುಷರ 50 ಮೀಟರ್ ರೈಫಲ್ ಫೈನಲ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಕುಸಾಲೆ ಪಾತ್ರರಾಗಿದ್ದಾರೆ. ಏಷ್ಯನ್ ಗೇಮ್ಸ್ ಚಿನ್ನದ ಪದಕ ಗೆದ್ದಿರುವ ಅವರು 50 ಮೀಟರ್ ರೈಫಲ್ 3 ಸ್ಥಾನಗಳ ತಂಡ ಸ್ಪರ್ಧೆಯಲ್ಲಿ ಗುರುವಾರ ಭಾರತಕ್ಕೆ ಪದಕ ಗೆಲ್ಲುವ ಅವಕಾಶಗಳಿವೆ. ಇದೇ ವೇಳೆ ರೇಸ್ ವಾಕರ್‌ಗಳು ಪದಕಕ್ಕಾಗಿ ಮೈದಾನಕ್ಕಿಳಿಯಲಿದ್ದಾರೆ.
ಪುರುಷರ ಮತ್ತು ಮಹಿಳೆಯರ 20 ಕಿಮೀ ಸ್ಪರ್ಧೆಗಳಲ್ಲಿ ಭಾರತದ ಅಥ್ಲೀಟ್‌ಗಳು ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್ ಪಂದ್ಯಗಳು ಕೂಡಾ ನಡೆಯಲಿದೆ. ಈಗಾಗಲೇ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಭಾರತ ಪುರುಷರ ಹಾಕಿ ತಂಡ, ಪೂಲ್ ಹಂತದ ನಾಲ್ಕನೇ ಪಂದ್ಯದಲ್ಲಿ ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ವಿರುದ್ಧ ಆಡಲಿದೆ.
ಆಗಸ್ಟ್ 1ರ ಗುರುವಾರದಂದು ಭಾರತದ ಕ್ರೀಡೆಗಳ ವೇಳಾಪಟ್ಟಿ
ಬೆಳಗ್ಗೆ 11 ಗಂಟೆ: ಪುರುಷರ 20 ಕಿಮೀ ಓಟದ ನಡಿಗೆ: ಪರಮ್‌ಜೀತ್ ಸಿಂಗ್ ಬಿಶ್ತ್, ಆಕಾಶದೀಪ್ ಸಿಂಗ್ ಮತ್ತು ವಿಕಾಶ್ ಸಿಂಗ್ (ಪದಕ ಸ್ಪರ್ಧೆ).
ಮಧ್ಯಾಹ್ನ 12:50: ಮಹಿಳೆಯರ 20 ಕಿಮೀ ಓಟದ ನಡಿಗೆ: ಪ್ರಿಯಾಂಕಾ (ಪದಕ ಸ್ಪರ್ಧೆ).
ಮಧ್ಯಾಹ್ನ 12:30: ಗಾಲ್ಫ್ - ಪುರುಷರ ವೈಯಕ್ತಿಕ 1ನೇ ಸುತ್ತಿನಲ್ಲಿ ಗಗನ್‌ಜೀತ್ ಭುಲ್ಲರ್ ಮತ್ತು ಶುಭಂಕರ್ ಶರ್ಮಾ.
ಮಧ್ಯಾಹ್ನ 1 ಗಂಟೆ: ಶೂಟಿಂಗ್ - ಪುರುಷರ 50 ಮೀಟರ್ ರೈಫಲ್ ಫೈನಲ್, ಸ್ವಪ್ನಿಲ್ ಕುಸಾಲೆ (ಪದಕ ಸ್ಪರ್ಧೆ)
ಮಧ್ಯಾಹ್ನ 1:30: ಹಾಕಿ -ಪುರುಷರ ಪೂಲ್ ಪಂದ್ಯದಲ್ಲಿ ಭಾರತ vs ಬೆಲ್ಜಿಯಂ.
ಮಧ್ಯಾಹ್ನ 2:30: ಬಾಕ್ಸಿಂಗ್ - ಮಹಿಳೆಯರ 50 ಕೆಜಿ ರೌಂಡ್ ಆಫ್ 16 ಪಂದ್ಯದಲ್ಲಿ ಚೀನಾದ ವು ಯು ವಿರುದ್ಧ ನಿಖತ್ ಜರೀನ್. (52 ಕೆಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್, ಅಗ್ರ ಶ್ರೇಯಾಂಕದ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವು ಯು ಅವರನ್ನು ನಿಖತ್ ಎದುರಿಸಲಿದ್ದಾರೆ.)
ಮಧ್ಯಾಹ್ನ 2:31: ಆರ್ಚರಿ - ಪುರುಷರ 16ರ ಸುತ್ತಿನ ಪಂದ್ಯದಲ್ಲಿ ಪ್ರವೀಣ್ ಜಾಧವ್ ವಿರುದ್ಧ ಚೀನಾದ ಕೈ ವೆಂಚಾವೊ.
ಮಧ್ಯಾಹ್ನ 3:30: ಶೂಟಿಂಗ್ - ಸಿಫ್ಟ್ ಕೌರ್ ಸಮ್ರಾ ಮತ್ತು ಅಂಜುಮ್ ಮೌದ್ಗಿಲ್ ಮಹಿಳೆಯರ 50 ಮೀಟರ್ ಶೂಟಿಂಗ್ ಅರ್ಹತಾ ಸುತ್ತು. (ಸಿಫ್ಟ್ ಕೌರ್ ಏಷ್ಯನ್ ಗೇಮ್ಸ್ ಚಿನ್ನದ ಪದಕ ಗೆದ್ದಿದ್ದಾರೆ.)
ಮಧ್ಯಾಹ್ನ 3:45: ಸೈಲಿಂಗ್ - ಪುರುಷರ ಡಿಂಗಿ ಓಟ 1 ಮತ್ತು 2 ರಲ್ಲಿ ವಿಷ್ಣು ಸರ್ವಣನ್.
ಸಂಜೆ 4:30ರ ನಂತರ: ಬ್ಯಾಡ್ಮಿಂಟನ್ - ಪುರುಷರ ಡಬಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮಲೇಷ್ಯಾದ ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ ಅವರನ್ನು ಎದುರಿಸಲಿದ್ದಾರೆ.
ಸಂಜೆ 5.30ರ ನಂತರ: ಬ್ಯಾಡ್ಮಿಂಟನ್: ಪುರುಷರ ಸಿಂಗಲ್ಸ್ 16ರ ಸುತ್ತಿನಲ್ಲಿ ಲಕ್ಷ್ಯ ಸೇನ್ vs ಹೆಚ್ಎಸ್ ಪ್ರಣೋಯ್.
ಸಂಜೆ 7:05: ಸೈಲಿಂಗ್ - ನೇತ್ರಾ ಕುಮನನ್ ಮಹಿಳೆಯರ ಡಿಂಗಿ ಓಟ 3 ಮತ್ತು 4.
ರಾತ್ರಿ 10 ಗಂಟೆಯಿಂದ: ಬ್ಯಾಡ್ಮಿಂಟನ್: ಮಹಿಳೆಯರ ಸಿಂಗಲ್ಸ್ 16ರ ಸುತ್ತಿನ ಪಂದ್ಯದಲ್ಲಿ ಪಿವಿ ಸಿಂಧು.