ತಾಯಿಯ ಬೆಚ್ಚನೆ ಅಪ್ಪುಗೆ, ಅರ್ಷದ್ ನದೀಮ್ ಮನೆಗೆ ಬಂದು ಹಲವರಿಂದ ಧನಸಹಾಯ, ಸರ್ಕಾರಕ್ಕೆ ಕಿವಿಮಾತು
Aug 13, 2024 12:37 PM IST
ತಾಯಿಯ ಬೆಚ್ಚನೆ ಅಪ್ಪುಗೆ, ಅರ್ಷದ್ ನದೀಮ್ ಮನೆಗೆ ಬಂದು ಹಲವರಿಂದ ಧನಸಹಾಯ, ಸರ್ಕಾರಕ್ಕೆ ಕಿವಿಮಾತು
- ಅರ್ಷದ್ ನದೀಮ್ ಮನೆಗೆ ಹಲವರು ಬಂದು ಧನಸಹಾಯ ಮಾಡುತ್ತಿದ್ದಾರೆ. ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಒಲಿಂಪಿಕ್ಸ್ ವೇದಿಕೆಯಲ್ಲಿ ಹಾಡಿಸಿದ ಸಾಧಕನನ್ನು ದೇಶ ಕೊಂಡಾಡುತ್ತಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಬಂಗಾರದ ಸಾಧನೆ ಮಾಡಿದರು. ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ, ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರನ್ನು ಮೀರಿಸಿ ಅರ್ಷದ್ ಸ್ವರ್ಣಪದಕ ಗೆದ್ದರು. ಆ ಮೂಲಕ ಅರ್ಷದ್ ವೈಯಕ್ತಿಕ ವಿಭಾಗದಲ್ಲಿ ಒಲಿಂಪಿಕ್ ಚಿನ್ನ ಗೆದ್ದ ಪಾಕಿಸ್ತಾನದ ಏಕೈಕ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದು ಅವರನ್ನು ದೇಶದ ಸ್ಟಾರ್ ಆಟಗಾರನಾಗಿ ಮಾಡಿದೆ. ಪ್ಯಾರಿಸ್‌ನಿಂದ ತಮ್ಮ ತವರು ನೆಲಕ್ಕೆ ಮರಳಿರುವ ಅರ್ಷದ್‌ಗೆ ದೇಶದಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಪಾಕ್ ಕೇಂದ್ರ ಸರ್ಕಾರ ಸೇರಿದಂತೆ ರಾಜ್ಯ ಸರ್ಕಾರದಿಂದಲೂ ನಗದು ಬಹುಮಾನಗಳು ಘೋಷಣೆಯಾಗಿವೆ. ಇದೇ ವೇಳೆ ಅರ್ಷದ್ ವಾಸ ಮಾಡುವ ಹಳ್ಳಿಯಲ್ಲಿ, ಒಲಿಂಪಿಕ್ಸ್ ಪದಕ ವಿಜೇತ ಆಟಗಾರನ್ನು ನೋಡಲು ಬರುವವರು ಕೈಯಲ್ಲೇ ನಗದು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.
ಅರ್ಷದ್ ನದೀಮ್, ಪಾಕಿಸ್ತಾನ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅರ್ಷದ್ ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ಸಾರ್ವಜನಿಕರು ಭೇಟಿಯಾಗುತ್ತಿದ್ದಾರೆ. ಅಲ್ಲದೆ ವೈಯಕ್ತಿಕವಾಗಿ ಕೈಯಲ್ಲೇ ಅವರವರ ಸಾಮರ್ಥ್ಯದಂತೆ ಹಣ ನೀಡುತ್ತಿದ್ದಾರೆ.
ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಅರ್ಷದ್‌ಗೆ ನಗದು ಹಸ್ತಾಂತರಿಸುತ್ತಿರುವುದನ್ನು ನೋಡಬಹುದು, “ನಾನು ಮಾಡಿದ ರೀತಿಯಲ್ಲಿ ಅರ್ಷದ್‌ಗೆ ನಗದು ಬಹುಮಾನವನ್ನು ನೀಡುವಂತೆ ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ. ಸರ್ಕಾರ ಆಗಾಗ ಭರವಸೆಗಳನ್ನು ಮಾತ್ರ ನೀಡುತ್ತದೆ. ಆದರೆ ಹಣ ತಲುಪಿಸುವುದಿಲ್ಲ,” ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದ ಪಂಜಾಬ್‌ನ ಖನೇವಾಲ್ ಎಂಬ ಗ್ರಾಮೀಣ ಪ್ರದೇಶದವರಾದ ನದೀಮ್, ತರಬೇತಿಗಾಗಿ ಕಷ್ಟಪಟ್ಟಿದ್ದಾರೆ. ಸ್ಪರ್ಧೆಗಳಿಗಾಗಿ ವಿದೇಶಕ್ಕೆ ಪ್ರಯಾಣಿಸಲು ತಮಗಿರುವ ಸೀಮಿತ ಮಾರ್ಗಗಳನ್ನೇ ಅವಲಂಬಿಸಿದ್ದರು. ಹೀಗಾಗಿ ಆರಂಭದಲ್ಲಿ ವಿದೇಶದಲ್ಲಿ ಸ್ಪರ್ಧಿಸಲು ಅವರ ಗ್ರಾಮಸ್ಥರು ಹಾಗೂ ಸಂಬಂಧಿಕರು ಹಣಕಾಸಿನ ನೆರವು ನೀಡಿದ್ದಾರೆ. ತಮ್ಮ ಊರಿನ ಜನರ ಸಹಕಾರದಿಂದ ಒಲಿಂಪಿಕ್ಸ್ ವೇದಿಕೆಯಲ್ಲಿ ಮಿಂಚಿ ದೇಶಕ್ಕೆ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ತಾಯಿಯ ಅಪ್ಪುಗೆ
ಪದಕ ಗೆದ್ದು ಪ್ಯಾರಿಸ್‌ನಿಂದ ಪಾಕಿಸ್ತಾನಕ್ಕೆ ಮರಳಿದ ಅರ್ಷದ್ ನದೀಮ್‌ಗೆ ಅದ್ಧೂರಿ ಸ್ವಾಗತ ದೊರೆಕಿದೆ. ಸ್ವಾಗತದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇದೇ ವೇಳೆ ತಮ್ಮ ಹುಟ್ಟೂರಿಗೆ ಬಂದ ಅರ್ಷದ್ ಅವರನ್ನು ಮಿಯಾನ್ ಚನ್ನುನಲ್ಲಿ ಅವರ ತಾಯಿ ತಬ್ಬಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಮಗನನ್ನು ನೋಡಿ ತಾಯಿ ಭಾವುಕರಾಗಿದ್ದಾರೆ ಎಂದು ವರದಿಯಾಗಿದೆ.
ಒಲಿಂಪಿಕ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಪ್ರೇಮನಗರಿಯಲ್ಲಿ ಪ್ರೇಮನಿವೇದನೆ; ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಗಮನಸೆಳೆದ ಅಥ್ಲೀಟ್ಗಳ ಮದುವೆ ಪ್ರಪೋಸಲ್