logo
ಕನ್ನಡ ಸುದ್ದಿ  /  ಕ್ರೀಡೆ  /  ಒಲಿಂಪಿಕ್ ಪದಕ ಗೆಲ್ಲದಿದ್ದರೂ ವಿನೇಶ್ ಫೋಗಟ್ ಬ್ರಾಂಡ್ ಮೌಲ್ಯದಲ್ಲಿ ಭಾರಿ ಏರಿಕೆ; ಅಂದು 25 ಲಕ್ಷ, ಈಗ…

ಒಲಿಂಪಿಕ್ ಪದಕ ಗೆಲ್ಲದಿದ್ದರೂ ವಿನೇಶ್ ಫೋಗಟ್ ಬ್ರಾಂಡ್ ಮೌಲ್ಯದಲ್ಲಿ ಭಾರಿ ಏರಿಕೆ; ಅಂದು 25 ಲಕ್ಷ, ಈಗ…

Jayaraj HT Kannada

Aug 21, 2024 11:05 PM IST

google News

ಒಲಿಂಪಿಕ್ ಪದಕ ಗೆಲ್ಲದಿದ್ದರೂ ವಿನೇಶ್ ಫೋಗಟ್ ಬ್ರಾಂಡ್ ಮೌಲ್ಯದಲ್ಲಿ ಭಾರಿ ಏರಿಕೆ

    • ಕುಸ್ತಿಪಟು ವಿನೇಶ್‌ ಫೋಗಟ್‌ ಅವರ ಬ್ರಾಂಡ್‌ ಮೌಲ್ಯವು ಭಾರಿ ಏರಿಕೆ ಕಂಡಿದೆ. ಒಲಿಂಪಿಕ್ಸ್‌ನಲ್ಲಿ ಅವರು ಪದಕ ವಂಚಿತರಾದರೂ, ಜಾಹೀರಾತಿಗಾಗಿ ಕಲವು ಕಂಪನಿಗಳು ವಿನೇಶ್‌ ಹಿಂದೆ ಬಿದ್ದಿವೆ.
ಒಲಿಂಪಿಕ್ ಪದಕ ಗೆಲ್ಲದಿದ್ದರೂ ವಿನೇಶ್ ಫೋಗಟ್ ಬ್ರಾಂಡ್ ಮೌಲ್ಯದಲ್ಲಿ ಭಾರಿ ಏರಿಕೆ
ಒಲಿಂಪಿಕ್ ಪದಕ ಗೆಲ್ಲದಿದ್ದರೂ ವಿನೇಶ್ ಫೋಗಟ್ ಬ್ರಾಂಡ್ ಮೌಲ್ಯದಲ್ಲಿ ಭಾರಿ ಏರಿಕೆ

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 50 ಕೆಜಿ ಕುಸ್ತಿಯಲ್ಲಿ ವಿನೇಶ್ ಫೋಗಟ್ ಅವರಿಗೆ ಬಂಗಾರದ ಪದಕ ಕೈತಪ್ಪಿತು. ಫೈನಲ್‌ ಸುತ್ತಿಗೂ ಮುನ್ನ ಭಾರತದ ಅನುಭವಿ ಕುಸ್ತಿಪಟು ಅನರ್ಹಗೊಂಡರು. ಕೇವಲ 100 ಗ್ರಾಂ ತೂಕ ವ್ಯತ್ಯಾಸದಿಂದ ಫೈನಲ್‌ನಿಂದ ಹೊರಬಿದ್ದ ವಿನೇಶ್, ಆ ಬಳಿಕ ಕ್ರೀಡಾ ನ್ಯಾಯ ಮಂಡಳಿಗೆ ಮೇಲ್ಮನವಿ ಸಲ್ಲಿಸಿದರೂ ಪದಕ ಮಾತ್ರ ಸಿಗಲಿಲ್ಲ. ಕನಿಷ್ಠ ಬೆಳ್ಳಿ ಪದಕದ ಭರವಸೆಯಲ್ಲಿದ್ದ ಅವರು, ಕೊನೆಗೆ ಯಾವುದೇ ಪದಕವಿಲ್ಲದೆ ತವರಿಗೆ ಮರಳಬೇಕಾಯ್ತು. ಆದರೆ, ತಾಯ್ನೆಲಕ್ಕೆ ಮರಳಿದ ವಿನೇಶ್ ಅವರಿಗೆ ಭಾರತದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿತು. ಬಂಗಾರ ವಿಜೇತೆಗೆ ಸಿಗಬೇಕಾದ ಪ್ರೀತಿ-ಗೌರವ ಭಾರತೀಯರಿಂದ ಸಿಕ್ಕಿತು.

ಪದಕ ಗೆಲ್ಲದಿದ್ದರೂ, ಪ್ಯಾರಿಸ್‌ ಕ್ರೀಡಾಕೂಟದಲ್ಲಿ ವಿನೇಶ್‌ ಅವರ ಕೆಚ್ಚೆದೆಯ ಹೋರಾಟ ಭಾರತೀಯರ ಮೆಚ್ಚುಗೆಗೆ ಕಾರಣವಾಯ್ತು. ಅದರಲ್ಲೂ ಜಪಾನ್‌ನ ಚಾಂಪಿಯನ್‌ ಆಟಗಾರ್ತಿಯನ್ನೇ ಸೋಲಿಸಿದ ಅವರ ಚಾಕಚಕ್ಯತೆಗೆ ಕುಸ್ತಿಲೋಕ ಸಲಾಂ ಹೇಳಿತು. ಅಧಿಕೃತವಾಗಿ ಅವರಿಗೆ ಪದಕ ಸಿಗದಿರಬಹುದು. ಆದರೆ, ಚತುರ್ವಾರ್ಷಿಕ ಈವೆಂಟ್‌ನಲ್ಲಿ ನೀಡಿದ ದಿಟ್ಟ ಪ್ರದರ್ಶನವು ಅವರನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬ್ರಾಂಡ್ ಅಂಬಾಸಿಡರ್ ಆಗಿ ಮಾಡಿದೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಅಥ್ಲೀಟ್‌ಗಳಂತೆಯೇ ವಿನೇಶ್‌ ಅವರ ಬ್ರಾಂಡ್‌ ಮೌಲ್ಯ ಕೂಡಾ ಭಾರಿ ಏರಿಕೆ ಕಂಡಿದೆ.

ಸುದ್ದಿಸಂಸ್ಥೆ ಎಕನಾಮಿಕ್ ಟೈಮ್ಸ್‌ ವರದಿಯ ಪ್ರಕಾರ, ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಜಾಹೀರಾತುಗಳಿಗಾಗಿ ವಿನೇಶ್ ವಿಧಿಸುತ್ತಿದ್ದ ಶುಲ್ಕ ಹಣಕ್ಕೆ ಹೋಲಿಸಿದರೆ, ಈಗಿನ ಅವರ ಎಂಡೋರ್ಸ್‌ಮೆಂಟ್ ಡೀಲ್‌ ಶುಲ್ಕವು ಗಗನಕ್ಕೇರಿದೆ. ಒಲಿಂಪಿಕ್ಸ್‌ ಸ್ಟಾರ್‌ ಬ್ರಾಂಡ್‌ ಮೌಲ್ಯ ಗಮನಾರ್ಹ ಏರಿಕೆ ಸಾಧಿಸಿದೆ. ಭಾರತದಾದಯಂತ ಅವರಿಗೆ ವ್ಯಕ್ತವಾದ ಬೆಂಬಲ ಹಾಗೂ ಜನಪ್ರಿಯತೆಯೇ ಇದಕ್ಕೆ ಪ್ರಮುಖ ಕಾರಣ.

25 ಲಕ್ಷದಿಂದ 1 ಕೋಟಿಗೆ ಜಿಗಿತ

ಈ ಬಾರಿ ನಡೆದ ಪ್ಯಾರಿಸ್‌ ಒಲಂಪಿಕ್ಸ್‌ಗಿಂತ ಮುಂಚೆ, ಪ್ರತಿ ಎಂಡೋರ್ಸ್‌ಮೆಂಟ್ ಒಪ್ಪಂದಕ್ಕಾಗಿ ವಿನೇಶ್‌ ಫೋಗಟ್ ಸುಮಾರು 25 ಲಕ್ಷ ರೂ ಚಾರ್ಜ್‌ ಮಾಡುತ್ತಿದ್ದರು. ಈಗ ಕೇವಲ ಬ್ರ್ಯಾಂಡ್‌ ಡೀಲ್‌ಗಾಗಿ ಬರೋಬ್ಬರಿ 75 ಲಕ್ಷದಿಂದ 1 ಕೋಟಿ ರೂಪಾಯಿವರೆಗೆ ಬೇಡಿಕೆ ಇಡುತ್ತಿದ್ದಾರೆ.

ಪ್ಯಾರಿಸ್‌ನಿಂದ ವಿನೇಶ್ ಫೋಗಟ್ ಭಾರತಕ್ಕೆ ಮರಳಿದ ಬೆನ್ನಲ್ಲೇ, ಕನಿಷ್ಠ 15 ಬ್ರಾಂಡ್‌ಗಳು ವಿನೇಶ್‌ ಬೆನ್ನ ಹಿಂದೆ ಬಿದ್ದಿವೆ ಎಂದು ವರದಿಯಾಗಿದೆ. ಪ್ಯಾಕ್ ಮಾಡಲಾದ ಆಹಾರಗಳು, ಆರೋಗ್ಯ, ಪೋಷಣೆ, ಆಭರಣ, ಬ್ಯಾಂಕಿಂಗ್ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಬ್ರಾಂಡ್‌ಗಳು ಈ ಪಟ್ಟಿಯಲ್ಲಿವೆ.

ನೀರಜ್‌ ಚೋಪ್ರಾ, ಮನು ಭಾಕರ್‌ಗೂ ಡಿಮ್ಯಾಂಡ್

ಅತ್ತ ಫೋಗಟ್‌ ಅವರೊಂದಿಗೆ ಒಲಿಂಪಿಕ್ಸ್‌ ಪದಕ ಗೆದ್ದ ನೀರಜ್ ಚೋಪ್ರಾ ಹಾಗೂ ಮನು ಭಾಕರ್ ಬ್ರಾಂಡ್‌ ಮೌಲ್ಯ ಕೂಡಾ ಹೆಚ್ಚಿದೆ.ಪ್ಯಾರಿಸ್‌ನಲ್ಲಿ ಮನು ಭಾಕರ್ ಎರಡು ಕಂಚಿನ ಪದಕಗಳನ್ನು ಗೆದ್ದರೆ, ಜಾವೆಲಿನ್‌ ಎಸೆತದಲ್ಲಿ ನೀರಜ್ ಬೆಳ್ಳಿಗೆ ಕೊರಳೊಡ್ಡಿದರು. ಹೀಗಾಗಿ ಅವರ ಬ್ರ್ಯಾಂಡ್ ಮೌಲ್ಯವು 30ರಿಂದ 40 ಪ್ರತಿಷತದಷ್ಟು ಏರಿಕೆಯಾಗಿದೆ.‌

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ