ಪದಕ ಗೆಲ್ಲದ ನೋವಿನಲ್ಲೇ ತವರಿಗೆ ಮರಳಿದ ವಿನೇಶ್ ಫೋಗಾಟ್; ಅಭಿಮಾನಿಗಳ ಪ್ರೀತಿ ಕಂಡು ಕುಸ್ತಿಪಟು ಕಣ್ಣೀರು
Vinesh Phogat: ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದ ಕುಸ್ತಿ ಫೈನಲ್ನಲ್ಲಿ ಅನರ್ಹಗೊಂಡು ಪದಕ ಗೆಲ್ಲಲು ವಿಫಲರಾಗಿದ್ದ ವಿನೇಶ್ ಫೋಗಾಟ್ ಅವರು ಭಾರತಕ್ಕೆ ಮರಳಿದ್ದು, ಅದ್ಧೂರಿ ಸ್ವಾಗತ ಪಡೆದುಕೊಂಡಿದ್ದಾರೆ.
ನಿಗದಿಗಿಂತ 100 ಗ್ರಾಂ ತೂಕ ಹೆಚ್ಚಿದ್ದ ಕಾರಣ ಪ್ಯಾರಿಸ್ ಒಲಿಂಪಿಕ್ಸ್ 2024 ಕುಸ್ತಿ ಫೈನಲ್ನಿಂದ ಅನರ್ಹಗೊಂಡು ಪದಕ ವಂಚಿತರಾದ ವಿನೇಶ್ ಫೋಗಾಟ್ ಅವರು ಕ್ರೀಡಾಕೂಟ ಮುಕ್ತಾಯಗೊಂಡ ಆರು ದಿನಗಳ ಮತ್ತು ಕ್ರೀಡಾ ನ್ಯಾಯಾಲಯ ಮೇಲ್ಮನವಿ ವಜಾಗೊಳಿಸಿದ ಬಳಿಕ ಭಾರತಕ್ಕೆ ಮರಳಿದ್ದಾರೆ. ಆಗಸ್ಟ್ 17ರಂದು ಶನಿವಾರ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸ್ಟಾರ್ ಕುಸ್ತಿಪಟುಗೆ ಅದ್ಧೂರಿ ಸ್ವಾಗತ ದೊರೆಯಿತು.
ವಿನೇಶ್ ಅವರು ರಾಷ್ಟ್ರ ರಾಜಧಾನಿಗೆ ಬಂದಿಳಿಯುತ್ತಿದ್ದಂತೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಒಲಿಂಪಿಕ್ಸ್‌ನಲ್ಲಿ 100 ಗ್ರಾಂ ತೂಕದ ಮಿತಿ ಮೀರಿದ ಕಾರಣ ಭಾರತದ ಕುಸ್ತಿಪಟು 50 ಕೆಜಿ ಫ್ರೀಸ್ಟೈಲ್ ಫೈನಲ್ನಿಂದ ಅನರ್ಹಗೊಂಡರು. ಇದರ ಬೆನ್ನಲ್ಲೇ ಜಂಟಿ ಬೆಳ್ಳಿ ಪದಕಕ್ಕಾಗಿ ಕ್ರೀಡಾ ನ್ಯಾಯಾಲಯಕ್ಕೆ ವಿನೇಶ್ ಫೋಗಟ್ ಮನವಿ ಮಾಡಿದ್ದರು. ಆದರೆ, ಈ ವಾರದ ಆರಂಭದಲ್ಲಿ ಆ ಮನವಿ ವಜಾಗೊಳಿಸಲಾಯಿತು. ಹೀಗಾಗಿ ಅವರು ಪ್ಯಾರಿಸ್ನಲ್ಲೇ ಉಳಿದುಕೊಳ್ಳಬೇಕಾಯಿತು.
ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಅಭಿಮಾನ ಕಂಡು ವಿನೇಶ್ ಕಣ್ಣೀರು ಹಾಕಿದರು. ಪದಕ ಗೆಲ್ಲಲಾಗದ ನೋವಿನಲ್ಲಿದ್ದ ವಿನೇಶ್ರನ್ನು ಅಭಿಮಾನಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಫ್ಯಾನ್ಸ್ ಪ್ರೀತಿ ಕಂಡು ಕಣ್ಣೀರು ಹಾಕುತ್ತಾ ಕೈಮುಗಿದು ಧನ್ಯವಾದ ಅರ್ಪಿಸಿದರು. ಈ ವೇಳೆ ಅವರೊಂದಿಗೆ ಕುಟುಂಬದ ಸದಸ್ಯರು, ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಸೇರಿದಂತೆ ಕುಸ್ತಿಪಟುಗಳು ಜೊತೆಗಿದ್ದರು. ಅದರಲ್ಲೂ ಸಾಕ್ಷಿ ಮಲಿಕ್ ಬಿಗಿಯಾಗಿ ಅಪ್ಪಿಕೊಂಡು ಕಣ್ಣೀರು ಹಾಕಿದರು.
ಒಲಿಂಪಿಕ್ಸ್‌ನಲ್ಲಿ ಫೈನಲ್ ಆಡಲು ಕೆಲವೇ ಗಂಟೆಗಳು ಬಾಕಿ ಇರುವ ವೇಳೆ ವಿನೇಶ್ ಅವರನ್ನು ಅನರ್ಹ ಮಾಡಲಾಗಿತ್ತು. ದೇಹ ತೂಕದಲ್ಲಿ ನಿಗದಿತ 100 ಗ್ರಾಂ ಅಧಿಕವಾಗಿದ್ದ ಕಾರಣಕ್ಕೆ ಅನರ್ಹ ಮಾಡಲಾಗಿತ್ತು. ವಿಮಾನ ನಿಲ್ದಾಣದಲ್ಲಿ ವಿನೇಶ್ ಜೊತೆಗಿನ ಫೋಟೋ ಹಂಚಿಕೊಂಡ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಗಗನ್ ನಾರಂಗ್ ಅವರು ಚಾಂಪಿಯನ್ ಎಂದು ಕರೆದಿದ್ದಾರೆ. ವಿನೇಶ್ ಒಂದು ಪೀಳಿಗೆಗೆ ಸ್ಪೂರ್ತಿ. ಹಾಗಾಗಿ ಅವರಿಗೆ ಒಲಿಂಪಿಕ್ ಪದಕದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಒಂದು ರಾತ್ರಿಗೆ ಹೆಚ್ಚಾಗಿತ್ತು 2 ಕೆಜಿ ತೂಕ
ಫೈನಲ್ಗೂ ಮುನ್ನ ನಡೆದ ಫ್ರೀ ಕ್ವಾರ್ಟರ್ ಫೈನಲ್, ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯದಲ್ಲಿ ವಿನೇಶ್ 49.9 ಕೆಜಿ ತೂಕ ಇದ್ದರು. ಆದರೆ ಫೈನಲ್ಗೂ ಮುನ್ನ ಶಕ್ತಿ ಕಾಪಾಡಿಕೊಳ್ಳಲು ಹೈ ಎನರ್ಜಿ ಆಹಾರ ಸೇವಿಸಿದ್ದರು. ಹಾಗಾಗಿ ಅವರು 2 ಕೆಜಿಗೂ ಹೆಚ್ಚು ತೂಕ ಹೆಚ್ಚಳವಾಗಿದ್ದರು. ಹಾಗಾಗಿ, ತೂಕ ಇಳಿಸಲು ಅವರು ರಾತ್ರಿ ಇಡೀ ಕಷ್ಟಪಟ್ಟಿದ್ದರು. ರಕ್ತ ಡ್ರಾ ಮಾಡಲಾಗಿತ್ತು. ಕೂದಲು ಕಟ್ ಮಾಡಲಾಗಿತ್ತು. ಸ್ಕಿಪಿಂಗ್, ರನ್ನಿಂಗ್, ಸೈಕ್ಲಿಂಗ್ ಸೇರಿ ಎಲ್ಲವನ್ನೂ ಮಾಡಿದ್ದರು. ಆದರೂ 100 ಗ್ರಾಂ ಹೆಚ್ಚಿದ್ದರು.
ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್, ವಿಜೇಂದರ್ ಸಿಂಗ್ ಅವರೊಂದಿಗೆ ತೆರೆದ ವಾಹನದಲ್ಲಿ ವಿನೇಶ್ ನಿಂತು ಫ್ಯಾನ್ಸ್ಗೆ ಧನ್ಯವಾದ ಅರ್ಪಿಸಿದರು. ನಾನು ಇಡೀ ದೇಶಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಆಕೆ ನಮ್ರತೆಯಿಂದ ಕೈ ಮುಗಿದು ಹೇಳಿದರು. ಫೋಗಟ್ಗೆ ರಾಷ್ಟ್ರ ರಾಜಧಾನಿಗೆ ಬಂದಿಳಿದಿದ್ದರಿಂದ ದಟ್ಟವಾದ ಭದ್ರತೆ ಇತ್ತು. ಹಲವಾರು ಕಾರುಗಳು ಮತ್ತು ಅಭಿಮಾನಿಗಳೊಂದಿಗೆ ಮೆರವಣಿಗೆಯ ಮೂಲಕ ವಿಮಾನ ನಿಲ್ದಾಣದಿಂದ ಹರಿಯಾಣಕ್ಕೆ ಪ್ರಯಾಣಿಸಿದರು.