logo
ಕನ್ನಡ ಸುದ್ದಿ  /  ಕ್ರೀಡೆ  /  2019ರ ನಂತರ ಥಾಯ್ಲೆಂಡ್ ಓಪನ್​​ ಗೆದ್ದ ಸಾತ್ವಿಕ್-ಚಿರಾಗ್; ಪ್ರಶಸ್ತಿಯೊಂದಿಗೆ ನಂಬರ್ 1 ಪಟ್ಟಕ್ಕೇರಿದ ಭಾರತದ ಜೋಡಿ

2019ರ ನಂತರ ಥಾಯ್ಲೆಂಡ್ ಓಪನ್​​ ಗೆದ್ದ ಸಾತ್ವಿಕ್-ಚಿರಾಗ್; ಪ್ರಶಸ್ತಿಯೊಂದಿಗೆ ನಂಬರ್ 1 ಪಟ್ಟಕ್ಕೇರಿದ ಭಾರತದ ಜೋಡಿ

Prasanna Kumar P N HT Kannada

May 20, 2024 02:19 AM IST

google News

2019ರ ನಂತರ ಥಾಯ್ಲೆಂಡ್ ಓಪನ್​​ ಗೆದ್ದ ಸಾತ್ವಿಕ್-ಚಿರಾಗ್; ಪ್ರಶಸ್ತಿಯೊಂದಿಗೆ ನಂಬರ್ 1 ಪಟ್ಟಕ್ಕೇರಿದ ಭಾರತದ ಜೋಡಿ

    • Thailand Open Super 500: ಥಾಯ್ಲೆಂಡ್ ಓಪನ್​ ಸೂಪರ್​-50 ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿತು.
2019ರ ನಂತರ ಥಾಯ್ಲೆಂಡ್ ಓಪನ್​​ ಗೆದ್ದ ಸಾತ್ವಿಕ್-ಚಿರಾಗ್; ಪ್ರಶಸ್ತಿಯೊಂದಿಗೆ ನಂಬರ್ 1 ಪಟ್ಟಕ್ಕೇರಿದ ಭಾರತದ ಜೋಡಿ
2019ರ ನಂತರ ಥಾಯ್ಲೆಂಡ್ ಓಪನ್​​ ಗೆದ್ದ ಸಾತ್ವಿಕ್-ಚಿರಾಗ್; ಪ್ರಶಸ್ತಿಯೊಂದಿಗೆ ನಂಬರ್ 1 ಪಟ್ಟಕ್ಕೇರಿದ ಭಾರತದ ಜೋಡಿ

ಮೇ 20ರ ಭಾನುವಾರ ನಡೆದ ಥಾಯ್ಲೆಂಡ್ ಓಪನ್ ಸೂಪರ್-500 ಫೈನಲ್‌ ಪಂದ್ಯದಲ್ಲಿ ಚೀನಾದ ಚೆನ್ ಬೊ ಯಾಂಗ್ ಮತ್ತು ಲಿಯು ಯಿ ಜೋಡಿಯನ್ನು ಸೋಲಿಸಿ ಭಾರತದ ಸ್ಟಾರ್ ಷಟ್ಲರ್​​​ಗಳಾದ​ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (Satwiksairaj Rankireddy & Chirag Shetty) ಗೆದ್ದು ಎರಡನೇ ಬಾರಿಗೆ ಚಾಂಪಿಯನ್​ ಆಗಿದ್ದಾರೆ. ಇದರ ಫಲವಾಗಿ ಸಾತ್ವಿಕ್ ಮತ್ತು ಚಿರಾಗ್ ಪುರುಷರ ಡಬಲ್ಸ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದು, ಜುಲೈನಲ್ಲಿ ಆರಂಭಗೊಳ್ಳುವ ಪ್ಯಾರಿಸ್ ಒಲಿಂಪಿಕ್ಸ್​​​ ಕ್ರೀಡಾಕೂಟಕ್ಕೂ ಮುನ್ನ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.

ಏಕಪಕ್ಷೀಯವಾಗಿ ಸಾಗಿದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಭಾರತದ ಜೋಡಿ, 46 ನಿಮಿಷಗಳಲ್ಲಿ 21-15, 21-15 ನೇರ ಗೇಮ್​​ಗಳಿಂದ ಚೀನಾ ಜೋಡಿಯನ್ನು ಹಿಮ್ಮೆಟ್ಟಿತು. ಸಾತ್ವಿಕ್ ಮತ್ತು ಚಿರಾಗ್ 2019ರ ನಂತರ ಥಾಯ್ಲೆಂಡ್ ಓಪನ್‌ನಲ್ಲಿ ತಮ್ಮ ಮೊದಲ ಸೂಪರ್‌ ಸರಣಿ/ಸೂಪರ್ 500 ಮಟ್ಟದ ಪ್ರಶಸ್ತಿ ಗೆದ್ದಿದ್ದಾರೆ. 2022ರಲ್ಲಿ ಭಾರತ ಅದೇ ನಗರದಲ್ಲಿ ಐತಿಹಾಸಿಕ ಥಾಮಸ್ ಕಪ್ ಸ್ಪರ್ಧೆಯನ್ನೂ ಗೆದ್ದುಕೊಂಡಿತ್ತು. ಈಗ ಪ್ರತಿಷ್ಠಿತ ಪ್ರಶಸ್ತಿ ಜಯಿಸಿದ್ದರ ಜತೆಗೆ ಪ್ಯಾರಿಸ್​ ಒಲಿಂಪಿಕ್ಸ್​​ಗೂ ಭರ್ಜರಿ ಸಿದ್ಧತೆ ಮಾಡಿಕೊಂಡಿತು.

ಮೇ 18ರ ಶನಿವಾರ ಜರುಗಿದ್ದ ಸೆಮಿಫೈನಲ್ ಪಂದ್ಯದಲ್ಲಿ ಚಿರಾಗ್‌- ಸಾತ್ವಿಕ್‌ ಜೋಡಿ ಚೈನೀಸ್‌ ತೈಪೆಯ ಲು ಮಿಂಗ್‌ ಚೆ ಮತ್ತು ಟಾಂಗ್‌ ಕೈ ವೀ ವಿರುದ್ಧವೂ 21-11, 21-12 ನೇರ ಗೇಮ್​​ಗಳಿಂದ ಸುಲಭ ಜಯ ಸಾಧಿಸಲು ಯಶಸ್ವಿಯಾಗಿತ್ತು. ಫೈನಲ್​ ಹಣಾಹಣಿಯಲ್ಲೂ ಇಂತಹದ್ದೇ ಪ್ರದರ್ಶನ ತೋರುವ ಮೂಲಕ ಟ್ರೋಫಿಗೆ ಮುತ್ತಿಕ್ಕಿದೆ ಭಾರತದ ಸ್ಟಾರ್​ ಜೋಡಿ. ಈ ಟೂರ್ನಿಗೂ ಮುನ್ನ ಅಂದರೆ ಕೆಲವೇ ವಾರಗಳ ಹಿಂದೆ ನಡೆದಿದ್ದ ಥಾಮಸ್ ಕಪ್​​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಈ ಜೋಡಿ ಈಗ ಪುನರಾಗಮನ ಮಾಡಿದ್ದಾರೆ.

ಪಂದ್ಯದ ಗೆಲುವಿನ ಕುರಿತು ಮಾತನಾಡಿದ ಸಾತ್ವಿಕ್, ‘ಇದು ನಮಗೆ ಅದೃಷ್ಟದ ಪಂದ್ಯವಾಗಿದೆ. ಇಲ್ಲಿಂದ ಪಯಣ ಆರಂಭಗೊಂಡಿದೆ. ನಾವು 2019 ರಲ್ಲಿ ಮೊದಲ ಬಾರಿಗೆ ಟ್ರೋಫಿ ಗೆದ್ದಿದ್ದೆವು. 2019 ರ ನಂತರ, ನಾವು ಅನೇಕ ಪಂದ್ಯಾವಳಿಗಳನ್ನು ಗೆದ್ದಿದ್ದೇವೆ. ಮತ್ತು ಮುಂಬರುವ ಪ್ರಮುಖ ಟೂರ್ನಿಗಳಲ್ಲಿ ಇದು ನಮಗೆ ಹೆಚ್ಚಿನ ಉತ್ತೇಜನವನ್ನು ನೀಡುತ್ತದೆ ಎಂದು ಆಶಾದಾಯಕವಾಗಿ ಹೇಳುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಲಿಂಪಿಕ್ಸ್​​ನಲ್ಲೂ ಪದಕ ಗೆಲ್ಲುವ ವಿಶ್ವಾಸ

ಜುಲೈ 26ರಿಂದ ಪ್ರಾರಂಭವಾಗುವ ವಿಶ್ವದ ಶ್ರೀಮಂತ ಕ್ರೀಡಾಕೂಟ ಒಲಿಂಪಿಕ್ಸ್​​ಗೆ ಪಿವಿ ಸಿಂಧು, ಕನ್ನಡತಿ ಅಶ್ವಿನಿ ಪೊನ್ನಪ್ಪ ಸೇರಿ ಏಳು ಭಾರತೀಯ ಷಟ್ಲರ್​ಗಳು ಅರ್ಹತೆ ಪಡೆದುಕೊಂಡಿದ್ದಾರೆ. ಪಿವಿ ಸಿಂಧು, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ, ಲಕ್ಷ್ಯ ಸೇನ್, ಅಶ್ವಿನಿ ಪೊನ್ನಪ್ಪ, ತನಿಶಾ ಕ್ರಾಸ್ಟೊ, ಎಚ್ ಎಸ್ ಪ್ರಣಯ್ ಅರ್ಹತೆ ಪಡೆದವರು. ಎಲ್ಲರೂ ಉತ್ತಮ ಲಯದಲ್ಲಿದ್ದು, ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

ಜುಲೈ 26 ರಿಂದ ಒಲಿಂಪಿಕ್ಸ್ ಆರಂಭ

ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್​ (ಸಮ್ಮರ್​) ಆರಂಭಕ್ಕೆ ಎರಡು ತಿಂಗಳಷ್ಟೇ ಬಾಕಿ ಉಳಿದಿದೆ. 2024ರ ಜುಲೈ 26 ರಿಂದ 2024ರ ಆಗಸ್ಟ್​ 11 ವರೆಗೂ ಈ ಕ್ರೀಡಾಕೂಟ ನಡೆಯಲಿದೆ. ಫ್ರಾನ್ಸ್​ನ ಪ್ಯಾರಿಸ್​ನಲ್ಲಿ ನಡೆಯುವ ಈ ಒಲಿಂಪಿಕ್​ನಲ್ಲಿ 32 ಕ್ರೀಡೆಗಳಲ್ಲಿ 329 ಈವೆಂಟ್​​ಗಳು ಜರುಗಲಿದ್ದು, ವಿವಿಧ ದೇಶಗಳಿಂದ 10,500 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಜಾರ್ಡಿನ್ಸ್ ಡು ಟ್ರೋಕಾಡೆರೊ ಮತ್ತು ಸೀನ್​​ ನದಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ