logo
ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೂರನೇ ಪದಕ; ಶೂಟಿಂಗ್‌ನಲ್ಲಿ ಐತಿಹಾಸಿಕ ಕಂಚು ಗೆದ್ದ ಸ್ವಪ್ನಿಲ್ ಕುಸಾಲೆ

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೂರನೇ ಪದಕ; ಶೂಟಿಂಗ್‌ನಲ್ಲಿ ಐತಿಹಾಸಿಕ ಕಂಚು ಗೆದ್ದ ಸ್ವಪ್ನಿಲ್ ಕುಸಾಲೆ

Jayaraj HT Kannada

Aug 01, 2024 06:04 PM IST

google News

ಶೂಟಿಂಗ್‌ನಲ್ಲಿ ಐತಿಹಾಸಿಕ ಕಂಚು ಗೆದ್ದ ಸ್ವಪ್ನಿಲ್ ಕುಸಾಲೆ

    • ಭಾರತದ ಶೂಟರ್ ಸ್ವಪ್ನಿಲ್ ಕುಸಾಲೆ ಪುರುಷರ 50 ಮೀಟರ್ ರೈಫಲ್‌ ಶೂಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.‌ ಇದರೊಂದಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ ಮೂರಕ್ಕೇರಿದೆ.
ಶೂಟಿಂಗ್‌ನಲ್ಲಿ ಐತಿಹಾಸಿಕ ಕಂಚು ಗೆದ್ದ ಸ್ವಪ್ನಿಲ್ ಕುಸಾಲೆ
ಶೂಟಿಂಗ್‌ನಲ್ಲಿ ಐತಿಹಾಸಿಕ ಕಂಚು ಗೆದ್ದ ಸ್ವಪ್ನಿಲ್ ಕುಸಾಲೆ (AP)

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತ ಮೂರನೇ ಪದಕ ಗೆದ್ದಿದೆ. ಈ ಮೂರೂ ಪದಕಗಳು ಶೂಟಿಂಗ್‌ನಲ್ಲೇ ಬಂದಿರುವುದು ವಿಶೇಷ. ಭಾರತದ ಶೂಟರ್ ಸ್ವಪ್ನಿಲ್ ಕುಸಾಲೆ, ಪುರುಷರ 50 ಮೀಟರ್ ರೈಫಲ್ ಫೈನಲ್‌ನಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದಿದ್ದಾರೆ. ಭಾರತದ ಶೂಟರ್ ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಪಡೆಯುವ ಮೂಲಕ, 50 ಮೀಟರ್ ರೈಫಲ್ ಫೈನಲ್‌ಗೆ ಅರ್ಹತೆ ಪಡೆದಿದ್ದರು. 3 ಪೊಸಿಷನ್‌ಗಳಲ್ಲಿ ನಡೆಯುವ 50 ಮೀಟರ್ ರೈಫಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಅವರು, ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಪ್ರೇಮನಗರಿಯಲ್ಲಿ ಭಾರತದ ಶೂಟರ್‌ಗಳ ಪರಾಕ್ರಮ ಮುಂದುವರೆದಿದೆ.

50 ಮೀಟರ್ ರೈಫಲ್ ಶೂಟಿಂಗ್‌ಅನ್ನು ಮೂರು ಸ್ಥಾನಗಳಲ್ಲಿ ಇದ್ದು ಗುರಿಯತ್ತ ಶೂಟ್‌ ಮಾಡಬೇಕಾಗುತ್ತದೆ. ಮಂಡಿಯೂರಿ, ಪ್ರೋನ್‌ ಅಥವಾ ಮಲಗಿದ ಭಂಗಿಯಲ್ಲಿ ಹಾಗೂ ನಿಂತಿರುವ ಭಂಗಿಯಲ್ಲಿ ಗುರಿಯತ್ತ ಶೂಟ್‌ ಮಾಡಬೇಕಾಗುತ್ತದೆ.

ಮಹಾರಾಷ್ಟ್ರದ ಕೊಲ್ಹಾಪುರ ಸಮೀಪದ ಕಂಬಲವಾಡಿ ಗ್ರಾಮದವರಾದ ಸ್ವಪ್ನಿಲ್, 2012ರಿಂದ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ ಒಲಿಂಪಿಕ್ಸ್‌ಗೆ ಪಾದಾರ್ಪಣೆ ಮಾಡಲು ಅವರು 12 ವರ್ಷ ಕಾಯಬೇಕಾಯಿತು. ಮೊದಲ ಪ್ರಯತ್ನದಲ್ಲೇ, ಅಂದರೆ 29 ವರ್ಷ ವಯಸ್ಸಿನಲ್ಲಿ ಅವರು ಒಲಿಂಪಿಕ್ಸ್‌ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಭೋಪಾಲ್‌ನ ಎಂಪಿ ಸ್ಟೇಟ್ ಶೂಟಿಂಗ್ ಅಕಾಡೆಮಿ ರೇಂಜಸ್‌ನಲ್ಲಿ ನಡೆದ ಅಂತಿಮ ಒಲಿಂಪಿಕ್ ಟ್ರಯಲ್ಸ್ ನಂತರ ಸ್ವಪ್ನಿಲ್ ಪ್ಯಾರಿಸ್‌ ಟಿಕೆಟ್ ಪಡೆದಿದ್ದರು.

ಶೂಟಿಂಗ್‌ನಲ್ಲಿ ಹ್ಯಾಟ್ರಿಕ್

ಈಗಾಗಲೇ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರು ಕ್ರೀಡಾಕೂಟದಲ್ಲಿ ಪದಕ ಗೆದ್ದಿದ್ದಾರೆ. ಇದೀಗ ಸ್ವಪ್ನಿಲ್‌ ಅವರ ರೂಪದಲ್ಲಿ ಭಾರತೀಯರು ಶೂಟಿಂಗ್‌ನಲಿ ಹ್ಯಾಟ್ರಿಕ್ ಪದಕಗಳ ಸಾಧನೆ ಪೂರ್ಣಗೊಳಿಸಿದರು. ಒಲಿಂಪಿಕ್ ಕ್ರೀಡಾಕೂಟದ ಒಂದೇ ಆವೃತ್ತಿಯಿಂದ ಭಾರತವು ಮೂರು ಶೂಟಿಂಗ್ ಪದಕಗಳನ್ನು ಗೆದ್ದಿರುವುದು ಇದೇ ಮೊದಲು.

ದಾಖಲೆಯ ಮೇಲೆ ದಾಖಲೆ

ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ ಫೈನಲ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಸ್ವಪ್ನಿಲ್, ಈ ವಿಭಾಗದಲ್ಲಿ ಒಲಿಂಪಿಕ್ ಪದಕ ಗೆದ್ದ ಏಕೈಕ ಭಾರತೀಯ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅದರಲ್ಲೂ ತಮ್ಮ ಮೊದಲ ಒಲಿಂಪಿಕ್ ಪ್ರದರ್ಶನದಲ್ಲಿಯೇ ಈ ಸಾಧನೆ ಮಾಡಿದ್ದು ವಿಶೇಷ.

ಸ್ವಪ್ನಿಲ್‌ಗೆ ಕ್ರಿಕೆಟ್‌ ಐಕಾನ್‌ ಎಂಎಸ್ ಧೋನಿಯೇ ಸ್ಫೂರ್ತಿಯಂತೆ. ತಮ್ಮ ವೃತ್ತಿಜೀವನದ ಆರಂಭದಲ್ಲಿ ಮಾಹಿಯಂತೆ ಸ್ವಪ್ನಿಲ್‌ ಕೂಡಾ ರೈಲ್ವೆ ಟಿಕೆಟ್ ಕಲೆಕ್ಟರ್ ಆಗಿದ್ದರು. ಸಾಮಾನ್ಯ ವ್ಯಕ್ತಿಯಾಗಿದ್ದ ಸ್ವಪ್ನಿಲ್‌ ಇದೀಗ ಒಲಿಂಪಿಕ್ಸ್‌ನಲ್ಲಿ ಆಡುವ ಅವಕಾಶ ಪಡೆಯುವುದರ ಜೊತೆಗೆ ಪದಕ ಸಾಧನೆಯನ್ನೂ ಮಾಡಿದ್ದಾರೆ.‌

ನೀತಾ ಅಂಬಾನಿ ಅಭಿನಂದನೆ

"50 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕವನ್ನು ಗೆಲ್ಲುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದಕ್ಕಾಗಿ ಸ್ವಪ್ನಿಲ್ ಕುಸಾಲೆ ಅವರ ಬಗ್ಗೆ ಅತ್ಯಂತ ಹೆಮ್ಮೆಪಡುತ್ತೇವೆ. ಈ ಒಲಿಂಪಿಕ್ ಗೇಮ್ಸ್‌ನ ಶೂಟಿಂಗ್‌ ವಿಭಾಗದಲ್ಲಿ ನಮ್ಮ ದೇಶಕ್ಕೆ ಇದು ಮೂರನೇ ಕಂಚು. ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ರಾಷ್ಟ್ರಕ್ಕೆ ಕೀರ್ತಿ ತಂದಿದೆ. ಸ್ವಪ್ನಿಲ್ ಅವರ ಕುಟುಂಬ ಮತ್ತು ಇಡೀ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು,” ಎಂದು ಐಒಸಿ ಸದಸ್ಯೆ ನೀತಾ ಅಂಬಾನಿ ತಿಳಿಸಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ