ಪ್ಯಾರಿಸ್ನಲ್ಲಿ ಕನ್ನಡದ ಕಂಪು; ರಘು ದೀಕ್ಷಿತ್-ಭಾವನಾ ಪ್ರದ್ಯುಮ್ನ ತಂಡದಿಂದ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
Jul 24, 2024 04:44 PM IST
ಪ್ಯಾರಿಸ್ನಲ್ಲಿ ಕನ್ನಡದ ಕಂಪು; ರಘು ದೀಕ್ಷಿತ್-ಭಾವನಾ ಪ್ರದ್ಯುಮ್ನ ತಂಡದಿಂದ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
- Raghu Dixit and Bhavana Pradyumna: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ರಘು ದೀಕ್ಷಿತ್-ಭಾವನಾ ಪ್ರದ್ಯುಮ್ನ ಅವರು ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಹಬ್ಬದ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಇಡೀ ವಿಶ್ವದ ಸಾವಿರಾರು ಕ್ರೀಡಾಪಟುಗಳು ಪ್ರೀತಿಯ ಪ್ಯಾರಿಸ್ನತ್ತ ಹೆಜ್ಜೆ ಹಾಕುತ್ತಿದ್ದಾರೆ. ಅದರಂತೆ ಭಾರತದ 117 ಕ್ರೀಡಾಪಟುಗಳು ಪದಕ ಗೆಲ್ಲುವ ಧ್ಯೇಯದೊಂದಿಗೆ ಪ್ಯಾರಿಸ್ ತಲುಪಿದ್ದಾರೆ. ಕರ್ನಾಟಕದ 9 ಕ್ರೀಡಾಪಟುಗಳು ಸಹ 117 ಮಂದಿಯ ತಂಡದಲ್ಲಿ ಸ್ಥಾನ ಪಡೆದಿರುವುದು ವಿಶೇಷ. ಇದೀಗ ಇವರೊಂದಿಗೆ ಮತ್ತಿಬ್ಬರು ಕನ್ನಡಿಗರು ಸೇರ್ಪಡೆಗೊಂಡಿದ್ದಾರೆ. ಆದರೆ ಅವರು ಕ್ರೀಡಾಪಟುಗಳಲ್ಲ! ಮತ್ಯಾರು?
ಹೌದು, ಕರ್ನಾಟಕದ ಇಬ್ಬರು ಶ್ರೇಷ್ಠರು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕನ್ನಡದ ಗಾಯಕ ರಘು ದೀಕ್ಷಿತ್ ಅವರು ಸಂಗೀತ ಕಾರ್ಯಕ್ರಮ ಮತ್ತು ಕರ್ನಾಟಕದ ಸಂಗೀತಗಾರ್ತಿ ಭಾವನಾ ಪ್ರದ್ಯುಮ್ನ ಅವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಜುಲೈ 26ರಿಂದ ಪ್ರಾರಂಭವಾಗುವ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಕನ್ನಡದ ಪಸರಿಸಲು ಈ ಇಬ್ಬರು ಸಜ್ಜಾಗಿದ್ದಾರೆ. ವಿದೇಶಗಳಲ್ಲೂ ಅಭಿಮಾನಿಗಳನ್ನು ಹೊಂದಿರುವ ಇವರು, ಕನ್ನಡ ಹಾಡುಗಳ ಮೂಲಕ ಪ್ಯಾರಿಸ್ನಲ್ಲೂ ಮಿಂಚಲಿದ್ದಾರೆ.
ಕಾರ್ಯಕ್ರಮಗಳು ಯಾವಾಗ?
ಗಾಯಕ ರಘು ದೀಕ್ಷಿತ್ ಅವರ ನೇತೃತ್ವದ ತಂಡವು ಜುಲೈ 29 ಮತ್ತು 30ರಂದು ಪಾರ್ಕ್ ಡೆ ಲಾ ವಿಲೆಟ್‌ನಲ್ಲಿರುವ ಒಲಿಂಪಿಕ್ ಹೌಸ್ ಆಫ್ ಇಂಡಿಯಾದಲ್ಲಿ ಪ್ರತಿ ದಿನ ಒಂದು ಗಂಟೆಗೂ ಹೆಚ್ಚು ಕಾಲ ಸಂಗೀತ ಪ್ರದರ್ಶನ ನೀಡಲಿದೆ. ರಘು ದೀಕ್ಷಿತ್ ಅವರು ಶಿಶುನಾಳ ಶರೀಫ್ ಅವರ ತತ್ವ ಪದಗಳನ್ನು ವೇದಿಕೆಯ ಮೇಲೆ ಹಾಡಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ ರಾ ಬೇಂದ್ರೆ, ಕಬೀರ್ ದಾಸ್ ಅವರ ಹಾಡುಗಳನ್ನು ಹಾಡುವುದಾಗಿ ರಘು ಹೇಳಿದ್ದಾರೆ. ಇದೇ ವೇಳೆ ಬರುವ ಪ್ರೇಕ್ಷಕರು ಡ್ಯಾನ್ಸ್ ಮಾಡುವಂತೆ ಮನವಿ ಮಾಡಿದ್ದಾರೆ.
ಒಲಿಂಪಿಕ್ಸ್ನಲ್ಲಿ ಸಾಂಸ್ಕೃತಿಕ ಸೊಬಗೂ ಇರಲಿದೆ. ಶಾಸ್ತ್ರೀಯ ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜುಲೈ 27ರಂದು ಭಾವನಾ ಅವರು ಶಾಸ್ತ್ರೀಯ ಸಂಗೀತ ಕಚೇರಿ ನಡೆಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಭಾವನಾ ಅವರ ಕನ್ಸರ್ವೇಟರಿ ಆಫ್ ಪ್ಯಾರಿಸ್ ಸಂಸ್ಥೆ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದೆ.
ಪ್ರತಿದಿನ ಬೆಳಗ್ಗೆ ಯೋಗ ಪ್ರದರ್ಶನ ಆಯೋಜನೆ ಮಾಡಲಾಗುತ್ತದೆ. ಸಂಜೆ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಗಳನ್ನು ಕನ್ಸರ್ವೇಟರಿ ಆಫ್ ಪ್ಯಾರಿಸ್ ಸಂಸ್ಥೆ ನಡೆಸಿಕೊಡಲಿದೆ. ಭರತನಾಟ್ಯ, ಕೂಡಿಯಾಟ್ಟಂ, ಜಾನಪದ ನೃತ್ಯಗಳನ್ನು ಪ್ರದರ್ಶಿಸಲಾಗುತ್ತದೆ. ಇದಲ್ಲದೆ, ಮೆಹೆಂದಿ ಮತ್ತು ರಂಗೋಲಿ ಕಲೆಗಳನ್ನು ದೂರದೂರಲ್ಲಿ ಪರಿಚಯಿಸಲು ಕಾರ್ಯಾಗಾರ ಆಯೋಜಿಸಲು ಭಾವನಾ ತಂಡ ಸಿದ್ಧವಾಗಿದೆ. ಭೇಟಿಕೊಡುವ ಮಕ್ಕಳಿಗೆ ಪಂಚತಂತ್ರ ನಾಟಕಗಳನ್ನೂ ಪ್ರದರ್ಶಿಸುವುದಾಗಿ ಅವರು ಹೇಳಿದ್ದಾರೆ.
ಒಲಿಂಪಿಕ್ಸ್ನಲ್ಲಿ ಕರ್ನಾಟಕದ ಕ್ರೀಡಾಪಟುಗಳು
ಈ ಕ್ರೀಡಾಕೂಟದಲ್ಲಿ ರಾಜ್ಯದ ಪರವಾಗಿ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ನಲ್ಲಿ ಅಶ್ವಿನಿ ಪೊನ್ನಪ್ಪ, ಮಹಿಳಾ ಗಾಲ್ಫ್ನ ಅದಿತಿ ಅಶೋಕ್, ಮಹಿಳಾ ಫ್ರೀಸ್ಟೈಲ್ ಈಜು ಸ್ಫರ್ಧೆಯಲ್ಲಿ ಧಿನಿಧಿ ದೇಸಿಂಗೂ, ಮಿಕ್ಸೆಡ್ ರಿಲೇ ಓಟದಲ್ಲಿ ಎಂಆರ್ ಪೂವಮ್ಮ, ಟೇಬಲ್ ಟೆನಿಸ್ನಲ್ಲಿ ಅರ್ಚನಾ ಕಾಮತ್, ಪುರುಷರ ಈಜು ಸ್ಫರ್ಧೆಯಲ್ಲಿ ಶ್ರೀಹರಿ ನಟರಾಜ್, ಪುರುಷರ ಟೆನಿಸ್ ಡಬಲ್ಸ್ನಲ್ಲಿ ರೋಹನ್ ಭೋಪಣ್ಣ, ಪುರುಷರ 71 ಕೆಜಿ ಬಾಕ್ಸಿಂಗ್ಸ್ನಲ್ಲಿ ನಿಶಾಂತ್ ದೇವ್, ಮಿಕ್ಸೆಡ್ ರಿಲೇ ಓಟದಲ್ಲಿ ಮಿಜೋ ಚಾಕೋ ಅವರು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.