ವಿನೇಶ್ ಫೋಗಟ್ ಅನರ್ಹತೆ ಹಿಂದೆ ಪಿತೂರಿ ಆರೋಪ; ಸೋಷಿಯಲ್ ಮೀಡಿಯಾದಲ್ಲಿ ಮೋದಿ, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ
Aug 07, 2024 03:20 PM IST
ಸೋಷಿಯಲ್ ಮೀಡಿಯಾದಲ್ಲಿ ಮೋದಿ, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ
- ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕುಸ್ತಿ ಫೈನಲ್‌ನಿಂದ ವಿನೇಶ್ ಫೋಗಟ್ ಅನರ್ಹಗೊಂಡಿದ್ದಾರೆ. ಇದು ಭಾರತೀಯರ ಬೇಸರಕ್ಕೆ ಕಾರಣವಾಗಿದೆ. ಹೀಗಾಗಿ ಭಾರತೀಯರು ಕುಸ್ತಿ ನಿಯಮಗಳನ್ನು ಟೀಕಿಸುತ್ತಿದ್ದಾರೆ. ಇದರ ನಡುವೆ ವಿನೇಶ್ ಅನರ್ಹತೆಯ ಹಿಂದೆ ಬಿಜೆಪಿ ಸರ್ಕಾರದ ಕೈವಾಡ ಇರುವ ಕುರಿತಾಗಿಯೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
ಪ್ಯಾರಿಸ್ ಒಲಿಂಪಿಕ್ಸ್ ಮಹಿಳೆಯರ 50 ಕೆಜಿ ಕುಸ್ತಿ ಫೈನಲ್‌ನಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ. ನಿಗದಿತ ತೂಕಕ್ಕಿಂತ 100 ಗ್ರಾಮ್ ಹೆಚ್ಚಿರುವ ಕಾರಣಕ್ಕೆ ಫೈನಲ್ ಪಂದ್ಯದಿಂದ ಅವರನ್ನು ಅನರ್ಹಗೊಳಿಸಲಾಗಿದೆ. ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಹಾಗೂ ಬಲಿಷ್ಠ ಕುಸ್ತಿಪಟುಗಳನ್ನೇ ಮಣಿಸಿದ್ದ ವಿನೇಶ್, ಖಚಿತವಾಗಿ ಬಂಗಾರ ಗೆಲ್ಲುವ ಸಾಧ್ಯತೆ ಇತ್ತು. ಇದೀಗ ಅವರ ಆಸೆ ಹಾಗೂ ಕೋಟ್ಯಂತರ ಭಾರತೀಯರ ಕನಸು ಮಣ್ಣುಪಾಲಾಗಿದೆ. ಫೈನಲ್‌ನಲ್ಲಿ ಸೋತರೂ ವಿನೇಶ್‌ಗೆ ಬೆಳ್ಳಿ ಪದಕ ಖಚಿತವಾಗಿತ್ತು. ಆದರೆ, ಅನರ್ಹತೆಯ ಕಾರಣದಿಂದಾಗಿ ಅವರಿಗೆ ಈಗ ಯಾವ ಪದಕವೂ ಸಿಗುವುದಿಲ್ಲ. ಕುಸ್ತಿ ನಿಯಮಗಳ ಪ್ರಕಾರ, ಕುಸ್ತಿಪಟುಗಳು ನಿಗದಿತ ತೂಕಕ್ಕಿಂತ ಹೆಚ್ಚು ಗ್ರಾಂ ಇರುವಂತಿಲ್ಲ. ಆದರೆ ವಿನೇಶ್ ಅವರು 100 ಗ್ರಾಂ ಹೆಚ್ಚುವರಿ ತೂಕ ಇರುವುದರಿಂದ, ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ನಿಯಮಗಳ ಪ್ರಕಾರ ಅನರ್ಹಗೊಳಿಸಲಾಗಿದೆ.
ಈ ಬಾರಿಯ ಒಲಿಂಪಿಕ್ಸ್ ಪದಕ ಗೆಲುವು, ವಿನೇಶ್ ಪಾಲಿಗೆ ತುಂಬಾ ಮುಖ್ಯವಾಗಿತ್ತು. 29 ವರ್ಷದ ಕುಸ್ತಿಪಟು, ಭಾರತದಲ್ಲಿ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಬೀದಿಗಳಿದು ಪ್ರತಿಭಟಿಸಿದ್ದರು. ಲೈಂಗಿಕ ಕಿರುಕುಳದ ಆರೋಪವಿದ್ದ ಬಿಜೆಪಿ ಸಂಸದನ ವಿರುದ್ಧ ಕಟುವಾಗಿ ಧ್ವನಿ ಎತ್ತಿದ್ದರು. ಆಗ, ಅದಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳ ರಾಶಿಯನ್ನೇ ಗೆದ್ದಿದ್ದ ವಿನೇಶ್ ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿತ್ತು. ಕುಸ್ತಿಪಟುವಿನ ಮೇಲೆ ಲಾಠಿ ಬೀಸುವುದಲ್ಲದೇ ಅಪರಾಧಿಯನ್ನು ಎಳೆದಾಡಿದಂತೆ ಎಳೆದಾಡಿ ಬಂಧಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಕುಸ್ತಿಪಟುಗಳ ಪರವಾಗಿ ನಿಲ್ಲಲಿಲ್ಲ. ಹೀಗಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾಗಿದ್ದು ಸ್ಮರಿಸಿಕೊಳ್ಳಬಹುದು.
ತನ್ನದೇ ದೇಶದ ಸರ್ಕಾರದಿಂದ ಸಿಗದ ಬೆಂಬಲ ಹಾಗೂ ತನಗಾದ ಅವಮಾನವನ್ನು ಪದಕ ಗೆಲ್ಲುವ ಮೂಲಕ ಮೆಟ್ಟಿ ನಿಲ್ಲುತ್ತೇನೆ ಎಂಬ ಹಠಕ್ಕೆ ಬಿದ್ದವರು ವಿನೇಶ್ ಫೋಗಟ್. ಅದಕ್ಕೆ ತಕ್ಕನಾಗಿ ಅವರು ವಿಶ್ವ ಚಾಂಪಿಯನ್ ಕುಸ್ತಿಪಟು, ಜಪಾನ್‌ನು ಯುಯಿ ಸುಸಾಕಿ ಅವರನ್ನು ಸೋಲಿಸಿ ದಾಖಲೆ ಬರೆದರು. ಆದರೆ, ಇಂಥಾ ದಿಟ್ಟ ಆಟಗಾರ್ತಿ ಫೈನಲ್‌ನಿಂದ ಅನರ್ಹಗೊಂಡಿದ್ದಕ್ಕೆ ಜನರು ಆಕ್ರೋಶಗೊಂಡಿದ್ದಾರೆ. ಕುಸ್ತಿ ನಿಯಮಗಳನ್ನು ಟೀಕಿಸುವ ಜೊತೆಗೆ, ಅನರ್ಹತೆಯ ಹಿಂದೆ ಬಿಜೆಪಿ ಸರ್ಕಾರದ ಕೈವಾಡ ಇರುವ ಕುರಿತಾಗಿಯೂ ಚರ್ಚೆ ನಡೆಯುತ್ತಿದೆ.
ಸಾಮಾಜಿಕ ಮಾಧ್ಯಮದಲ್ಲಿ ಬೇಸರ, ಆಕ್ರೋಶ, ಆರೋಪ
ವಿನೇಶ್ ಅವರು ಕುಸ್ತಿ ಫೈನಲ್‌ನಿಂದ ಅನರ್ಹಗೊಳ್ಳುತ್ತಿದ್ದಂತೆಯೇ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ವಿನೀಶ್ ಪರ ನಿಲ್ಲುವುದಾಗಿ ಹೇಳಿದ್ದಾರೆ. ಅದರ ನಡುವೆ, ಸೋಷಿಯಲ್ ಮೀಡಿಯಾದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಗಳು ಕೇಳಿ ಬರುತ್ತಿವೆ. ವಿನೇಶ್ ಅನರ್ಹತೆಗೂ ಕೇಂದ್ರ ಸರ್ಕಾರಕ್ಕೂ ಸಂಬಂಧವಿದೆ ಎಂದು ಹೇಳುತ್ತಿದ್ದಾರೆ. ಈ ಕುರಿತ ಸೋಷಿಯಲ್ ಮೀಡಿಯಾ ರೌಂಡಪ್ ಇಲ್ಲಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನ 'ರೌಂಡ್ ಆಫ್ 16' ಪಂದ್ಯದಲ್ಲಿ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಯುಯಿ ಸುಸಾಕಿ ಅವರನ್ನುಸೋಲಿಸಿದ ನಂತರ, ಪ್ರತಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಇದೇ ವೇಳೆ ಅಭಿಮಾನಿಗಳು ಕೂಡಾ ಬಗೆಬಗೆಯ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಫೈನಲ್ ತಲುಪಿದ ನಂತರ ವಾಗ್ದಾಳಿ ತೀವ್ರವಾಗಿದೆ.
ತೃಣಮೂಲ ಕಾಂಗ್ರೆಸ್ ನಾಯಕ ಕುನಾಲ್ ಘೋಷ್, ವಿನೇಶ್ ಅನರ್ಹತೆಯ ಹಿಂದೆ ಪಿತೂರಿಯ ಗುಮಾನಿ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ವಿನೇಶ್ ಫೋಗಟ್ ಪದಕ ಗೆದ್ದರೆ ನರೇಂದ್ರ ಮೋದಿ ಸರ್ಕಾರದ ಮುಖಕ್ಕೆ ಹೊಡೆದಂತಾಗುತ್ತಿತ್ತು ಎಂಬ ಭೀತಿಯಿಂದ ಉನ್ನತ ಮಟ್ಟದಲ್ಲಿ ಪಿತೂರಿಯಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಒಲಿಂಪಿಕ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಒದಿ | ವಿನೇಶ್ ಫೋಗಾಟ್ ಅನರ್ಹತೆಗೂ ಮುನ್ನ ಗೇಲಿ ಮಾಡಿದ್ದ ಕಂಗನಾ ರಣಾವತ್; ಇನ್ಸ್ಟಾಗ್ರಾಂ ಸ್ಟೋರಿ ವೈರಲ್