ಫುಟ್ಬಾಲ್ ಆಟಗಾರ್ತಿಗೆ ಕಿಸ್ ಕೊಟ್ಟ ಅಧ್ಯಕ್ಷ ಸಸ್ಪಂಡೆ; ಪುತ್ರನ ಪರ ತಾಯಿ ಉಪವಾಸ ಸತ್ಯಾಗ್ರಹ
Aug 29, 2023 10:02 AM IST
ಫುಟ್ಬಾಲ್ ಆಟಗಾರ್ತಿಗೆ ವೇದಿಕೆಯಲ್ಲೇ ಕಿಸ್ ಕೊಟ್ಟ ಸ್ಪೇನ್ ಸಾಕರ್ ಫೆಡರೇಷನ್ ಅಧ್ಯಕ್ಷ ಲೂಯಿಸ್ ರುಬೆಲ್ಸ್ ಅವರ ಅಮಾನತು ಖಂಡಿಸಿ ಅವರ ತಾಯಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಫುಟ್ಬಾಲ್ ಆಟಗಾರ್ತಿಗೆ ವೇದಿಕೆಯಲ್ಲೇ ಕಿಸ್ ಕೊಟ್ಟ ಸ್ಪೇನ್ ಸಾಕರ್ ಫೆಡರೇಷನ್ ಅಧ್ಯಕ್ಷ ಲೂಯಿಸ್ ರುಬೆಲ್ಸ್ ಅಮಾನತು ಖಂಡಿಸಿ ಅವರ ತಾಯಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಮ್ಯಾಡ್ರಿಡ್: ಮಹಿಳಾ ಫುಟ್ಬಾಲ್ ವಿಶ್ವಕಪ್ ಚಾಂಪಿಯನ್ (Women Football World Cup 2023) ಆಟಗಾರ್ತಿ ಕೆನ್ನೆಗೆ ಕಿಸ್ ಮಾಡಿದ್ದ ಸ್ಪೇನ್ ಸಾಕರ್ ಫೆಡರೇಷನ್ ಅಧ್ಯಕ್ಷರನ್ನು (Spain Soccer Federation President) ಅಮಾನತು ಮಾಡಿರುವುದನ್ನು ಅವರ ತಾಯಿ ತೀವ್ರವಾಗಿ ಖಂಡಿಸಿದ್ದು, ತಮ್ಮ ಮಗನ ರಕ್ಷಣೆಗಾಗಿ ಸೋಮವಾರ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
ಸ್ಪೇನ್ ಸಾಕರ್ ಫೆಡರೇಷನ್ ಅಧ್ಯಕ್ಷ ಲೂಯಿಸ್ ರುಬೆಲ್ಸ್ (Luis Rubiales) ಅವರ ತಾಯಿ ಏಂಜಲೀಸ್ ಬೆಜಾರ್ (Angeles Bejar) ಅವರು ದಕ್ಷಿಣ ಸ್ಪೇನ್‌ನ ಚರ್ಚ್‌ನಲ್ಲಿ ಹಗಲು ಮತ್ತು ರಾತ್ರಿ ಉಪವಾಸ (Fasting) ಸತ್ಯಾಗ್ರಹದಲ್ಲಿ ಇರುವುದಾಗಿ ಹೇಳಿದ್ದಾರೆ ಎಂದು ಅಲ್ಲಿನ ಸುದ್ದಿ ಸಂಸ್ಥೆ ಇಎಫ್ಇ ವರದಿ ಮಾಡಿದೆ ಎಂದು ಎಪಿ ನ್ಯೂಸ್ ಏಜೆನ್ಸಿ ತಿಳಿಸಿದೆ.
‘ಮಗನ ವಿರುದ್ಧ ಅಮಾನವೀಯತೆ ಕೊನೆಗೊಳ್ಳುವವರೆಗೆ ಉಪವಾಸ’
ತನ್ನ ಮಗನ ವಿರುದ್ಧ ಅಮಾನವೀಯತೆ ಕೊನೆಗೊಳ್ಳುವವರೆಗೆ ದಕ್ಷಿಣ ಸ್ಪೇನ್‌ನಲ್ಲಿರುವ ಮೋಟ್ರಿಲ್ ಚರ್ಚ್‌ನಲ್ಲಿ ಉಪವಾಸ ಸತ್ಯಾಗ್ರಹ ಮಾಡಲಾಗುತ್ತಿದೆ ಎಂದು ಏಂಜಲೀಸ್ ತಿಳಿಸಿದ್ದಾರೆ. ರುಬೆಲ್ಸ್ ಸದೋರಸಂಬಂಧಿ ವನೆಸ್ಸಾ ಮಾತನಾಡಿ, ರುಬೆಲ್ಸ್ ಯಾವುದೇ ರೀತಿಯ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ವೇದಿಕೆಯಲ್ಲೇ ಫುಟ್ಬಾಲ್ ಆಟಗಾರ್ತಿಗೆ ಮುತ್ತು ನೀಡಿದ ಪರಿಣಾಮವಾಗಿ ಲೂಯಿಸ್ ರುಬೆಲ್ಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಒತ್ತಾಯಗಳು ಹೆಚ್ಚಾಗಿದ್ದವು. ಸ್ಪೇನ್ ಒಕ್ಕೂಟವನ್ನು ರೂಪಿಸುವ ಪ್ರಾದೇಶಿಕ ಸಾಕರ ಸಂಸ್ಥೆಗಳ ನಾಯಕರು ಸೋಮವಾರ ಮುಖ್ಯಸ್ಥ ಲೂಯಿಸ್ ರುಬೆಲ್ಸ್ ಅವರ ರಾಜೀನಾಮೆಗೆ ಕರೆ ನೀಡಿದ್ದರು. ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರಾಕರಿಸಿದ್ದ ರುಬೆಲ್ಸ್ ಅವರನ್ನು ವಿಶ್ವ ಫುಟ್ಬಾಲ್ ಸಂಸ್ಥೆ-ಫಿಫಾ ಈಗಾಗಲೇ 90 ದಿನಗಳ ಕಾಲ ತಾತ್ಕಾಲಿಕವಾಗಿ ಅಮಾನತು ಮಾಡಿದೆ. ಸದ್ಯ ಘಟನೆ ಬಗ್ಗೆ ಪ್ರಾಸಿಕ್ಯೂಟರ್ ಮಟ್ಟದ ಪ್ರಾಥಮಿಕ ತನಿಖೆಯನ್ನು ಆರಂಭಿಸಲಾಗಿದೆ.
ಆಟಗಾರ್ತಿಯ ಒಪ್ಪಿಗೆ ಇಲ್ಲದೆ ಮುತ್ತು ನೀಡುವಂತಿಲ್ಲ
ಆಟಗಾರ್ತಿಯ ಒಪ್ಪಿಗೆ ಇಲ್ಲದೆ ಮುತ್ತು ನೀಡುವಂತಿಲ್ಲ. ಒತ್ತಾಯ ಪೂರಕವಾಗಿ ಕಿಸ್ ಮಾಡಲಾಗಿದೆ ಎಂಬುದನ್ನು ರುಬೆಲ್ಸ್ ನಿರಾಕರಿಸಿದ್ದರು. ಮಹಿಳಾ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸ್ಪೇನ್ ತಂಡ 1-0 ಅಂತರದಿಂದ ಚಾಂಪಿಯನ್ ಆಗಿತ್ತು. ಪ್ರವೇಶ ಸ್ವೀಕಾರ ಸಮಾರಂಭದ ವೇದಿಕೆಯಲ್ಲಿದ್ದ ಲೂಯಿ ರುಬೆಲ್ಸ್ ತಮ್ಮ ತಂಡದ ಆಟಗಾರ್ತಿಯನ್ನು ಜೋರಾಗಿ ತಬ್ಬಿಕೊಂಡು ಕಿಸ್ ಮಾಡಿದ್ದರು.
ಸ್ಪೇನ್ ಸಾಕರ್ ಫೆಡರೇಷನ್ ಅಧ್ಯಕ್ಷ ಲೂಯಿಸ್ ರುಬೆಲ್ಸ್ ಅವರ ನಡೆಯನ್ನು ಹಲವು ಆಟಗಾರರು ಖಂಡಿಸಿದ್ದರು. ಅಲ್ಲದೆ, ರುಬೆಲ್ಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೆ ಯಾವುದೇ ಪಂದ್ಯಗಳನ್ನು ಆಡುವುದಿಲ್ಲ ಎಂದು ಸ್ಪೇನ್ ರಾಷ್ಟ್ರೀಯ ತಂಡದ ಆಟಗಾರರು ಕಳೆದ ವಾರ ಹೇಳಿದ್ದರು.
ರುಬೆಲ್ಸ್ ಹೇಳಿಕೆ ನಿರಾಕರಿಸಿದ್ದ ಆಟಗಾರ್ತಿ ಹರ್ಮೊಸೊ
ಆಗಸ್ಟ್ 20 ರಂದು ಆಸ್ಟ್ರೇಲಿಯದ ಸಿಡ್ನಿಯಲ್ಲಿ ನಡೆದಿದ್ದ ಮಹಿಳಾ ವಿಶ್ವಕಪ್ ಚಾಂಪಿಯನ್ ಪದಕ ವಿತರಣೆ ಸಮಾರಂಭದ ವೇದಿಕೆಯಲ್ಲಿ ಪರಸ್ಪರ ಸಮ್ಮತಿಯೆಂದಿಗೆ ಕಿಸ್ ಮಾಡಿಕೊಂಡಿದ್ದಾಗಿ ಲೂಯಿಸ್ ರುಬೆಲ್ಸ್ ಹೇಳಿಕೊಂಡಿದ್ದರು. ಆದರೆ ಸ್ಪೇನ್ ಆಟಗಾರ್ತಿ ಜೆನ್ನಿ ಹರ್ಮೊಸೊ ಈ ಹೇಳಿಕೆಯನ್ನು ನಿರಾಕರಿಸಿದ್ದರು.
ರಾಜಕುಮಾರಿ ಭುಜ ಮುಟ್ಟಿ ಟೀಕೆಗೆ ಗುರಿಯಾಗಿದ್ದ ರುಬೆಲ್ಸ್
ಸ್ಪೇನ್ ರಾಣಿ ಲೆಟಿಜಿಯಾ ಮತ್ತು ಅವರ ಪುತ್ರಿ ರಾಜಕುಮಾರಿ ಸೋಫಿಯಾ ಭುಜವನ್ನು ಹಿಡಿದಿದ್ದಕ್ಕಾಗಿ ರುಬೆಲ್ಸ್ ಭಾರಿ ಟೀಕೆಗೆ ಗುರಿಯಾಗಿದ್ದರು. ಸದ್ಯ ಲೂಯಿ ರುಬೆಲ್ಸ್ ವಿರುದ್ಧ ತನಿಖೆ ನಡೆಯುತ್ತಿದ್ದು, ವರದಿ ಬಂದ ಮೇಲೆ ಅವರ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ತಿಳಿಯಲಿದೆ.
ವಿಭಾಗ