Bengaluru Bulls: ಕಂಬ್ಯಾಕ್ ಮಾಡಿ ಮತ್ತೆ ಸೋತ ಬೆಂಗಳೂರು ಬುಲ್ಸ್; ಗೂಳಿಗಳಿಗೆ 5ನೇ ಪರಾಭವ, ಹೀಗಾದರೆ ಕಷ್ಟ!
Nov 03, 2024 12:16 AM IST
ಕಂಬ್ಯಾಕ್ ಮಾಡಿ ಮತ್ತೆ ಸೋತ ಬೆಂಗಳೂರು ಬುಲ್ಸ್; ಗೂಳಿಗಳಿಗೆ 5ನೇ ಪರಾಭವ
- Pro Kabaddi League 2024: 11ನೇ ಸೀಸನ್ ಪ್ರೊ ಕಬಡ್ಡಿ ಲೀಗ್ನಲ್ಲಿ ನವೆಂಬರ್ 2ರಂದು ನಡೆದ ಡಬಲ್ ಹೆಡ್ಡರ್ ಪಂದ್ಯದಲ್ಲಿ ತೆಲುಗು ಟೈಟಾನ್ಸ್, ಪಾಟ್ನಾ ಪೈರೇಟ್ಸ್ ತಂಡಗಳು ಗೆಲುವು ಸಾಧಿಸಿವೆ. ಆದರೆ ಬೆಂಗಳೂರು ಬುಲ್ಸ್, ಯುಪಿ ಯೋಧಾಸ್ ಸೋಲು ಕಂಡಿವೆ.
11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನಲ್ಲಿ (Pro Kabaddi League 2024) ಬೆಂಗಳೂರು ಬುಲ್ಸ್ (Bengaluru Bulls) ಕಂಬ್ಯಾಕ್ ಮಾಡಿದ ಮರು ಪಂದ್ಯದಲ್ಲೇ ಸೋಲು ಕಂಡಿದೆ. ಲೀಗ್ನಲ್ಲಿ ಆಡಿರುವ 6 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಪರಾಭವಗೊಂಡಿದೆ. 35-38 ಅಂಕಗಳ ಅಂತರದಿಂದ ತೆಲುಗು ಟೈಟಾನ್ಸ್ (Telugu Titans) ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಆದರೆ ಬೆಂಗಳೂರು ಬುಲ್ಸ್ ಅಂತಿಮ ಸ್ಥಾನದಲ್ಲೇ ಉಳಿದಿದೆ. ಹೈದರಾಬಾದ್ನ ಗಚ್ಚಿಬೋಲಿ ಒಳಾಂಗಣ ಮೈದಾನದಲ್ಲಿ ಈ ಪಂದ್ಯ ನಡೆಯಿತು.
ತೆಲುಗು ತಂಡದ ಪವನ್ ಸೆಹ್ರಾವತ್ (Pawan Sehrawat) ಅಬ್ಬರದ ಆಟಕ್ಕೆ ಗೂಳಿಗಳು ಮಂಕಾದರು. ಪವನ್ 14 ಅಂಕ ಪಡೆದರೆ, ಆಶಿಶ್ ನರ್ವಾಲ್ 6, ಅಜಿತ್ ಪವಾರ್ 5, ವಿಜಯ್ ಮಲಿಕ್ 5 ಅಂಕ ಪಡೆದರು. ಆದರೆ ಬೆಂಗಳೂರು ಬುಲ್ಸ್ ಪರ ಯಾರೂ ಸಹ ಉತ್ತಮ ಪ್ರದರ್ಶನ ನೀಡಲಿಲ್ಲ. ಅಜಿಂಕ್ಯ ಪವಾರ್ 9 ಅಂಕ, ಪಂಕಜ್ 9 ಅಂಕ ಗಳಿಸಿ ಹೋರಾಟ ನಡೆಸಿದರು. ಆದರೆ ಗೆಲುವು ಸಾಧ್ಯವಾಗಲಿಲ್ಲ. ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಪರ್ದೀಪ್ ನರ್ವಾಲ್ ಮತ್ತೆ ನಿರಾಸೆ ಮೂಡಿಸಿದ್ದಾರೆ.
ಪಾಟ್ನಾಗೆ ಭರ್ಜರಿ ಗೆಲುವು
ನವೆಂಬರ್ 2ರಂದು ನಡೆದ ಮತ್ತೊಂದು ಪಂದ್ಯದಲ್ಲಿ ಯುಪಿ ಯೋಧಾಸ್ (UP Yoddhas) ವಿರುದ್ಧ ಪಾಟ್ನಾ ಪೈರೇಟ್ಸ್ (Patna Pirates) ಗೆಲುವು ಸಾಧಿಸಿತು. 37-42 ಅಂಕಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿತು. ಇದರೊಂದಿಗೆ ಪಾಟ್ನಾ 16 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಸೋತರೂ ಯುಪಿ ಯೋಧಾಸ್ 18 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಪಾಟ್ನಾ ಪರ ದೇವಾಂಕ್ 11 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ ಯುಪಿ ಪರ ಗಗನ್ ಗೌಡ 9 ಅಂಕ ಪಡೆದು ಹೋರಾಡಿದರು.