ಎಷ್ಟು ನೋಬಾಲ್ ಹಾಕೋದು; ಭಾರತೀಯ ಸ್ಪಿನ್ನರ್ ಮೇಲೆ ಕೋಪಗೊಂಡು ತಿಂತಿದ್ದ ಪ್ಲೇಟ್ ಗೋಡೆಗೆದು ಒಡೆದು ಹಾಕಿದ ಸುನಿಲ್ ಗವಾಸ್ಕರ್
Sunil Gavaskar: ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ನ ಮೊದಲ ದಿನದಂದು ವಾಷಿಂಗ್ಟನ್ ಸುಂದರ್ ಪದೇ ಪದೇ ನೋಬಾಲ್ ಹಾಕುತ್ತಿದ್ದ ಕಾರಣ ಸುನಿಲ್ ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ನಲ್ಲಿ ಹೆಚ್ಚು ಪುನರಾವರ್ತಿತ ನುಡಿಗಟ್ಟುಗಳಲ್ಲಿ ಒಂದು ಅಂದರೆ, ಸ್ಪಿನ್ನರ್ಗಳು ಯಾವತ್ತೂ ನೋಬಾಲ್ ಎಸೆಯಬಾರದು. ಏಕೆಂದರೆ, ಅವರು ಕಡಿಮೆ ವೇಗ ಮತ್ತು ನಿಧಾನಗತಿಯ ಬೌಲರ್ಗಳು. ವೇಗಿಗಳು ಓಡಿ ಬಂದು ಚೆಂಡೆಸೆಯುವ ವೇಳೆ ಕ್ರೀಸ್ ಗೆರೆಯ ಮೇಲೆ ಕಾಲಿಡುವ ಸಂದರ್ಭ ಕೆಲವೊಮ್ಮೆ ಜಾರುವ ಕಾರಣ ನೋಬಾಲ್ ಹಾಕುತ್ತಾರೆ. ಆದರೆ ಸ್ಪಿನ್ ಬೌಲರ್ಗಳು ನಡೆದುಕೊಂಡು ಬಂದು ಚೆಂಡೆಸೆದರೂ ನೋ ಬಾಲ್ ಹಾಕುವುದನ್ನು ಯಾರೂ ಸಹಿಸುವುದಿಲ್ಲ. ಅದರಲ್ಲೂ ಮಾಜಿ ಕ್ರಿಕೆಟಿಗರಂತೂ ಸಹಿಸುವುದೇ ಇಲ್ಲ. ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ (India vs New Zealand 3rd Test) ಮೊದಲ ದಿನದಂದು ಇದೇ ನಡೆದಿದೆ. ಭಾರತದ ವಾಷಿಂಗ್ಟನ್ ಸುಂದರ್ (Washington Sundar) ಸಿಕ್ಕಾಪಟ್ಟೆ ನೋಬಾಲ್ ಹಾಕಿದ್ದು, ದಿಗ್ಗಜ ಆಟಗಾರರೊಬ್ಬರು ಕಿಡಿಕಾರಿದ್ದಾರೆ.
ಸುಂದರ್ ವಿರುದ್ಧ ಕೋಪಗೊಂಡಿದ್ದು ಬೇರೆ ಯಾರೂ ಅಲ್ಲ, ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್. ಸುಂದರ್ ಅವರು ಕ್ರೀಸ್ ಆಚೆಗೆ ಪದೇ ಪದೇ ಕಾಲಿಡುತ್ತಿದ್ದ ಕಾರಣ ರವಿ ಶಾಸ್ತ್ರಿ ಅವರು ತಮ್ಮ ಸಹ ವೀಕ್ಷಕವಿವರಣೆಗಾರ ಮತ್ತು ಮಾಜಿ ಸಹ ಆಟಗಾರ ಸುನಿಲ್ ಗವಾಸ್ಕರ್ ಅವರಿಗೆ ಪದೇ ಪದೇ ಅತಿಕ್ರಮಣವನ್ನು ಸಹಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು. ಆದರೆ ಅದನ್ನು ಮತ್ತೆ ಮುಂದುವರೆಸಿದ್ದರಿಂದ ಊಟ ಮಾಡುತ್ತಿದ್ದ ಪ್ಲೇಟ್ ಅನ್ನು ಸುನಿಲ್ ಗವಾಸ್ಕರ್ (Sunil Gavaskar) ಗೋಡೆಗೆ ಎಸೆದು ಒಡೆದು ಹಾಕಿದ್ದಾರೆ ಎಂದು ಶಾಸ್ತ್ರಿ ಹಾಸ್ಯಮಯವಾಗಿ ಹೇಳಿದ್ದಾರೆ. ದೇವರಿಗೆ ಧನ್ಯವಾದಗಳು. ಅವರು (ಗವಾಸ್ಕರ್) ಸ್ಲಿಪ್ನಲ್ಲಿ ಫೀಲ್ಡಿಂಗ್ ಮಾಡುತ್ತಿಲ್ಲ. ಇಲ್ಲವಾಗಿದ್ದರೆ ವಾಷಿಂಗ್ಟನ್, ವಾಷಿಂಗ್ಟನ್ ಡಿಸಿಗೆ ಹೋಗುತ್ತಿದ್ದರು ಎಂದು ಹಾಸ್ಯವಾಗಿ ಹೇಳಿದ್ದಾರೆ.
ಭಾರತ ತಂಡದಿಂದ 9 ನೋಬಾಲ್
ನ್ಯೂಜಿಲೆಂಡ್ ವಿರುದ್ಧದ ಇನ್ನಿಂಗ್ಸ್ನಲ್ಲಿ ಭಾರತ ಒಟ್ಟು 9 ನೋಬಾಲ್ಗಳನ್ನು ಹಾಕಿದೆ. ಈ ಪೈಕಿ ಆಕಾಶ್ ದೀಪ್ 1 ಹಾಕಿದರೆ, ವಾಷಿಂಗ್ಟನ್ ಸುಂದರ್ 5 ವಿಕೆಟ್, ರವೀಂದ್ರ ಜಡೇಜಾ (Ravindra Jadeja) 3 ನೋಬಾಲ್ ಹಾಕಿದ್ದಾರೆ. ನ್ಯೂಜಿಲೆಂಡ್ನ ಮಾಜಿ ಕ್ರಿಕೆಟಿಗ ಇಯಾನ್ ಸ್ಮಿತ್ ಕೂಡ ಗವಾಸ್ಕರ್ ಅವರನ್ನು ಉಲ್ಲೇಖಿಸುವ ಮೂಲಕ ಭಾರತದ ಅಸಾಧಾರಣ ಸಂಖ್ಯೆಯ ನೋಬಾಲ್ಗಳ ಕುರಿತು ವ್ಯಂಗ್ಯವಾಡಿದ್ದಾರೆ. ‘ಓಹ್ ಡಿಯರ್. ಮತ್ತೊಂದು ನೋ ಬಾಲ್. ಸನ್ನಿ ಜಿ ಎಲ್ಲಿದ್ದಾರೆ’? ಅವರು ಕೈಯಲ್ಲಿ ಮೈಕ್ ಹಿಡಿದು ಬೌಲರ್ ಅನ್ನು ಅಟ್ಟಾಡಿಸಲಿದ್ದಾರೆ ಎಂದಿದ್ದರು. ಗವಾಸ್ಕರ್ ಕಾಮೆಂಟರಿಗೆ ಮರಳಿದ ನಂತರ ಸ್ಮಿತ್ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಹೌದು, ಚಿಂತಿಸಬೇಡಿ. ನಾನು ರನ್ನಿಂಗ್ ಶೂ ಹಾಕಿದ್ದೇನೆ ಎಂದು ಮತ್ತಷ್ಟು ಹಾಸ್ಯ ಮಾಡಿದ್ದಾರೆ.
ಸ್ಪಿನ್ನರ್ ನೋಬಾಲ್ ಎಸೆಯುವುದು ಎಷ್ಟು ಅಪರಾಧ ಸ್ವರೂಪದ್ದಾಗಿದೆ ಎಂದು ಗವಾಸ್ಕರ್ ವಿವರಿಸಿದ್ದಾರೆ. ಸುಂದರ್ ಮೊದಲ ಬಾರಿಗೆ ನೋಬಾಲ್ ಹಾಕಿದಾಗ ‘ಒಪ್ಪುವಂತದ್ದಲ್ಲ’ ಎಂದು ಅವರು ಹೇಳಿದರು. ವೇಗದ ಬೌಲರ್ಗಳು ಓಡಿಬಂದು ಚೆಂಡು ಎಸೆಯುತ್ತಾರೆ. ಅಂತಹ ವೇಳೆ ಕ್ರೀಸ್ ಮೇಲೆ ಕಾಲಿಟ್ಟಾಗ ಜಾರಬಹುದು. ಹೀಗಿದ್ದಾಗ ನೋಬಾಲ್ ಆಗುತ್ತದೆ ಎಂದು ನಾವು ಅರ್ಥ ಮಾಡಿಕೊಳ್ಳಬಹುದು. ಆದರೆ ಸ್ಪಿನ್ನರ್ಗಳ ಕಥೆಯೇನು? ನಡೆದುಕೊಂಡು ಬಂದು ಚೆಂಡು ಹಾಕಿದರೂ ಪದೆಪದೇ ನೋ ಬಾಲ್ ಹಾಕುವುದೇಕೆ ಎಂದು ಪ್ರಶ್ನಿಸಿದ್ದಾರೆ.
9 ವಿಕೆಟ್ ಪಡೆದ ಸ್ಪಿನ್ ಜೋಡಿ
ಸುಂದರ್ ಮತ್ತು ಜಡೇಜಾ ಅವರ ಸ್ಪಿನ್ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್, 235 ರನ್ಗಳಿಗೆ ಆಲೌಟ್ ಆಯಿತು. ಇಬ್ಬರು ಸೇರಿ ಪ್ರವಾಸಿ ತಂಡದ ವಿರುದ್ಧ 9 ವಿಕೆಟ್ ಉರುಳಿಸಿದರು. ಸುಂದರ್ 18.1 ಓವರ್ಗಳಲ್ಲಿ 81 ರನ್ ನೀಡಿ 4 ವಿಕೆಟ್ ಪಡೆದರೆ, ಜಡೇಜಾ 22 ಓವರ್ಗಳಲ್ಲಿ 65 ರನ್ ಬಿಟ್ಟುಕೊಟ್ಟು 5 ವಿಕೆಟ್ ಕಿತ್ತರು. ಕಿವೀಸ್ ಪರ ವಿಲ್ ಯಂಗ್ 71, ಡ್ಯಾರಿಲ್ ಮಿಚೆಲ್ 82 ರನ್ ಸಿಡಿಸಿದರು. ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 263 ರನ್ ಗಳಿಸಿ ಆಲೌಟ್ ಆಗಿದೆ. ಶುಭ್ಮನ್ ಗಿಲ್ 90 ರನ್ ಬಾರಿಸಿ ಶತಕದ ಸಮೀಪ ಔಟಾದರು. ಕಿವೀಸ್ ಪರ ಅಜಾಜ್ ಪಟೇಲ್ 5 ವಿಕೆಟ್ಗಳ ಗುಚ್ಛ ಪಡೆದರು.