Wimbledon 2023: ಟೆನ್ನಿಸ್ ಮೈದಾನದಲ್ಲಿ ಬಿದ್ದು ನೋವಿನಿಂದ ಕಿರುಚಿದ ಅಮೆರಿಕ ಆಟಗಾರ್ತಿ; ಹುಲ್ಲು ನನ್ನನ್ನು ಕೊಂದಿತು ಎಂದ ವೀನಸ್
Jan 09, 2024 08:00 PM IST
ವೀನಸ್ ವಿಲಿಯಮ್ಸ್ ನೆರವಿಗೆ ಧಾವಿಸಿದ ಅಂಪೈರ್
- Venus Williams: ಪಂದ್ಯದ ಬಳಿಕ ಮಾತನಾಡಿದ ವೀನಸ್ ವಿಲಿಯಮ್ಸ್, ಮೈದಾನದ ಹುಲ್ಲು ನನ್ನನ್ನು ಕೊಂದಿತು ಎಂದು ಹೇಳಿದರು.
ಸೋಮವಾರ ನಡೆದ ವಿಂಬಲ್ಡನ್ (Wimbledon) ಟೆನ್ನಿಸ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಆಡುವಾಗ ಐದು ಬಾರಿಯ ಚಾಂಪಿಯನ್ ವೀನಸ್ ವಿಲಿಯಮ್ಸ್ (Venus Williams) ಗಾಯಕ್ಕೆ ತುತ್ತಾದರು. ಉಕ್ರೇನ್ ಎದುರಾಳಿ ಎಲಿನಾ ಸ್ವಿಟೋಲಿನಾ (Elina Svitolina) ವಿರುದ್ಧ ಆಡುವಾಗ ಕಾಲು ಜಾರಿ ಸ್ಲಿಪ್ ಆದ ಅಮೆರಿಕ ಆಟಗಾರ್ತಿ, ಕೆಲಕಾಲ ಅಭಿಮಾನಿಗಳು ಆಘಾತಕ್ಕೊಳಗಾಗುವಂತೆ ಮಾಡಿದರು.
ಪಂದ್ಯದಲ್ಲಿ ಅಂತಿಮವಾಗಿ 6-4, 6-3 ಅಂತರದ ಸೋತ ಐದು ಬಾರಿಯ ಚಾಂಪಿಯನ್ ವೀನಸ್ ವಿಲಿಯಮ್ಸ್, ಗಾಯದ ನಡುವೆಯೂ ಹೋರಾಡಿ ಪೈಪೋಟಿ ನೀಡಿದರು. ನೆಟ್ ಬಳಿ ಚೆಂಡನ್ನು ಹೊಡೆಯಲು ಓಡಿದಾಗ ಮೈದಾನದ ಹುಲ್ಲು ಜಾರಿ ಬಿದ್ದರು. ಪಂದ್ಯದ ಬಳಿಕ ಮಾತನಾಡಿದ ಅವರು, ಇದು ದುರದೃಷ್ಟಕರ ಎಂದು ಹೇಳಿದರು.
2019ರ ಆವೃತ್ತಿಯಲ್ಲಿ ಸೆಮಿಫೈನಲ್ ತಲುಪಿದ್ದ ಅಮೆರಿಕ ಆಟಗಾರ್ತಿ, ಮೊದಲ ಎರಡು ಗೇಮ್‌ಗಳನ್ನು ಗೆದ್ದು ಉಕ್ರೇನ್ ಎದುರಾಳಿಯ ವಿರುದ್ಧ ಪ್ರಬಲ ಪ್ರದರ್ಶನ ನೀಡಿದರು. ಆದರೆ 43 ವರ್ಷ ವಯಸ್ಸಿನ ಆಟಗಾರ್ತಿ ಟೆನ್ನಿಸ್ ಕೋರ್ಟ್ ಮಧ್ಯಭಾಗದಲ್ಲಿ ಹುಲ್ಲಿನಿಂದಾಗಿ ಜಾರಿಬಿದ್ದರು. ಈ ವೇಳೆ ಮೊಣಕಾಲು ಹಿಡಿದುಕೊಂಡಂತಾಗಿ ಕೆಲಕಾಲ ಇಂಜುರಿ ವಿರಾಮ ತೆಗೆದುಕೊಂಡರು. ವಿಶ್ರಾಂತಿ ಬಳಿಕ ಮತ್ತೆ ಆಟ ಮುಂದುವರೆಸಿದರು.
ಪಂದ್ಯದ ಬಳಿಕ ಮಾತನಾಡಿದ ಅವರು, ಮೈದಾನದ ಹುಲ್ಲು ನನ್ನನ್ನು ಕೊಂದಿತು ಎಂದು ಹೇಳಿದರು. ವಿಲಿಯಮ್ಸ್ ಆಕ್ರಮಣಕಾರಿ ಆಟಕ್ಕೆ ಮುನ್ನುಗ್ಗಿದರು. ಆದರೆ ಪ್ರಬಲ ಪ್ರದರ್ಶನ ಮುಂದುವರೆಸಿದ ಉಕ್ರೇನ್ ಆಟಗಾರ್ತಿ ಐದನೇ ಗೇಮ್‌ನಲ್ಲಿಯೂ ಗೆದ್ದರು. ಅಂತಿಮವಾಗಿ ಸ್ವಿಟೋಲಿನಾ ಆರಂಭಿಕ ಸೆಟ್ ಅನ್ನು 6-4 ರಿಂದ ವಶಪಡಿಸಿಕೊಂಡರು.
ಎರಡನೇ ಸೆಟ್‌ನನಲ್ಲಿ ಅಮೆರಿಕದ ಆಟಗಾರ್ತಿ ಮುಂದೆ ದೊಡ್ಡ ಸವಾಲು ಇತ್ತು. ವಿಶ್ವದ ಮಾಜಿ ಮೂರನೇ ಶ್ರೇಯಾಂಕಿತೆ ಸ್ವಿಟೋಲಿನಾ 4-1ರ ಮುನ್ನಡೆ ಕಾಯ್ದುಕೊಂಡರು. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ 28 ವರ್ಷ ವಯಸ್ಸಿನ ಸ್ವಿಟೋಲಿನಾ, ಮತ್ತೆ ಹೋರಾಟ ಮುಂದುವರೆಸಿದರು. ಪ್ರಸ್ತುತ 76ನೇ ಶ್ರೇಯಾಂಕಿತ ಆಟಗಾರ್ತಿ ಅಂತಿಮವಾಗಿ 6-3ರಿಂದ ಸೆಟ್ ವಶಪಡಿಸಿಕೊಂಡರು.
“ಇದು ನನ್ನ ಪಾಲಿಗೆ ದುರಾದೃಷ್ಟಕರವಾಗಿತ್ತು. ನಾನು ಪಂದ್ಯವನ್ನುಉತ್ತಮವಾಗಿ ಪ್ರಾರಂಭಿಸಿದೆ. ಹುಲ್ಲು ಜಾರುತ್ತಿತ್ತು. ನನ್ನನ್ನು ಹುಲ್ಕು ಕೊಂದಿತು. ಸದ್ಯ ಇದು ಮೋಜಿನ ಸಂಗತಿಯಲ್ಲ. ಈ ಪಂದ್ಯಾವಳಿಯಲ್ಲಿ ನಾನು ಉತ್ತಮ ಫಾರ್ಮ್‌ನಲ್ಲಿದ್ದೇನೆ. ಅಲ್ಲದೆ ಈ ಪಂದ್ಯದಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದೇನೆ ಎಂದು ನನಗೆ ಅನಿಸಿತು. ಈ ಸಮಯದಲ್ಲಿ ಇದು ತುಂಬಾ ಆಘಾತಕಾರಿಯಾಗಿದೆ. ಆದರೆ ಇದು ಕ್ರೀಡೆ. ಎಲ್ಲವನ್ನೂ ಸ್ವೀಕರಿಸೇಕು” ಎಂದು ಅಮೆರಿಕ ಆಟಗಾರ್ತಿ ಹೇಳಿದ್ದಾರೆ.