ಕುಸ್ತಿ ಮುಂದೆ ನಾನು ಸೋತೆ, ನನ್ನ ಧೈರ್ಯ ಛಿದ್ರವಾಗಿದೆ; ಅನರ್ಹ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ವಿನೇಶ್ ಫೋಗಟ್
Aug 08, 2024 09:42 AM IST
ಕುಸ್ತಿ ಮುಂದೆ ನಾನು ಸೋತೆ; ಅನರ್ಹ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ವಿನೇಶ್ ಫೋಗಟ್
- ಪ್ಯಾರಿಸ್ ಒಲಿಂಪಿಕ್ಸ್ 2024ರ ಚಿನ್ನದ ಪದಕ ಪಂದ್ಯದಿಂದ ಅನರ್ಹಗೊಂಡ ಬೆನ್ನಲ್ಲೇ ಕುಸ್ತಿಪಟು ವಿನೇಶ್ ಫೋಗಟ್ ನಿವೃತ್ತಿ ಘೋಷಿಸಿದ್ದಾರೆ. ನನ್ನಲ್ಲಿ ಮುಂದೆ ಕುಸ್ತಿ ಆಡುವ ಶಕ್ತಿಯಿಲ್ಲ. ನನ್ನ ಧೈರ್ಯವೇ ಛಿದ್ರವಾಗಿದೆ ಎಂದು ಭಾವುಕ ಸಂದೇಶದೊಂದಿಗೆ ನಿವೃತ್ತಿ ಘೋಷಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಪಂದ್ಯದಿಂದ ಅನರ್ಹಗೊಂಡ ಭಾರತದ ಕುಸ್ತಿಪಟು ವಿನೇಶ್ ಫೋಗಟ್, ಗುರುವಾರ ನಿವೃತ್ತಿ ಘೋಷಿಸಿದ್ದಾರೆ. ಇನ್ನೇನು ಒಂದು ಪಂದ್ಯ ಗೆದ್ದು ಚಿನ್ನದ ಪದಕ ಕೊರಳಿಗೇರಿಸುತ್ತೇನೆ ಎಂಬ ಉತ್ಸಾಹದಲ್ಲಿದ್ದ ಹೆಣ್ಣುಹುಲಿ ವಿನೇಶ್‌ಗೆ, ಅನರ್ಹತೆಯ ನಿರ್ಧಾರದಿಂದ ಭಾರಿ ನಿರಾಶೆಯಾಗಿತ್ತು. ಕೇವಲ 100 ಗ್ರಾಮ್ ಹೆಚ್ಚುವರಿ ತೂಕ ಇರುವ ಕಾರಣಕ್ಕೆ ಅನರ್ಹಗೊಂಡ ನಿರ್ಧಾರವನ್ನು ಸಹಿಸಲು ಅವರಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಅದಾದ ಒಂದು ದಿನದೊಳಗೆ ಕುಸ್ತಿಗೆ ವಿದಾಯ ಹೇಳಿದ್ದಾರೆ. ನನ್ನಲ್ಲಿ ಮುಂದೆ ಕುಸ್ತಿ ಆಡುವ ಶಕ್ತಿ ಇಲ್ಲ. ಬಾಯ್ ಬಾಯ್ ರಸ್ಲಿಂಗ್ ಎಂದು ಭಾವನಾತ್ಮಕ ಸಂದೇಶದೊಂದಿಗೆ ವಿದಾಯ ಹೇಳಿ, ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ.
ವಿದಾಯ ಕುರಿತು ಎಕ್ಸ್ ಮೂಲಕ ತಿಳಿಸಿದ ಅವರು, “ನನ್ನ ಮುಂದೆ ಕುಸ್ತಿ ಗೆದ್ದಿತು, ಆದರೆ ನಾನು ಸೋತು ಹೋದೆ... ನಿಮ್ಮ ಕನಸುಗಳೊಂದಿಗೆ ನನ್ನ ಧೈರ್ಯವೂ ಛಿದ್ರ ಛಿದ್ರವಾಗಿದೆ. ನನ್ನಲ್ಲಿ ಈಗ ಹೆಚ್ಚಿನ ಶಕ್ತಿ ಇಲ್ಲ. ಗುಡ್ ಬೈ ಕುಸ್ತಿ. ನಿಮ್ಮೆಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ. ಕ್ಷಮಿಸಿ” ಎಂದು ಬರೆದುಕೊಂಡಿದ್ದಾರೆ.
ಭಾರತೀಯ ಕುಸ್ತಿ ಇತಿಹಾಸಲ್ಲಿ ವಿನೇಶ್ ಫೋಗಟ್ ಬಲಿಷ್ಠ ಕುಸ್ತಿಪಟುಗಳಲ್ಲಿ ಒಬ್ಬರು. ದಿಟ್ಟ ಹೋರಾಟಗಾರ್ತಿ. ಎದುರಾಳಿ ಎಷ್ಟೇ ಬಲಿಷ್ಠ ಕುಸ್ತಿಪಟುವಾದರೂ, ಧೈರ್ಯದಿಂದ ಎದುರಿಸಿ ಸೋಲಿಸುವ ಛಲ ಅವರದ್ದು. ಸೋಲನ್ನೇ ಕಾಣದ ಜಪಾನ್‌ನ ಬಲಿಷ್ಠ ಕುಸ್ತಿಪಟು ಯೂಯು ಸುಸಾಕಿ ಅವರನ್ನು ಸೋಲಿಸಿದಾಗ, ಇದು ನೂರಕ್ಕೆ ನೂರರಷ್ಟು ಸತ್ಯ ಎಂಬುದು ಎಲ್ಲರಿಗೂ ಅರ್ಥವಾಗಿದೆ.
ರಕ್ತದಲ್ಲೇ ಕುಸ್ತಿ
ಇವರ ರಕ್ತದಲ್ಲೇ ಕುಸ್ತಿಯ ಕಣವಿದೆ. ಏಕೆಂದರೆ ವಿನೇಶ್ ಕುಸ್ತಿ ಕುಟುಂಬದಿಂದ ಬಂದವರು. ಬಾಲ್ಯದಿಂದಲೇ ಕುಸ್ತಿಯತ್ತ ಒಲವು ತೋರಿ ಅದರಲ್ಲೇ ಒಲಿಂಪಿಕ್ಸ್‌ವರೆಗೂ ಪ್ರತಿನಿಧಿಸಿದವರು. ತಮ್ಮ ಸೋದರಸಂಬಂಧಿಗಳಾದ ಗೀತಾ ಫೋಗಟ್ ಮತ್ತು ಬಬಿತಾ ಕುಮಾರಿ ಅವರಂತೆಯೇ ಫೋಗಟ್ ಕುಸ್ತಿಯತ್ತ ಆಸಕ್ತಿ ಬೆಳೆಸಿಕೊಂಡರು. ಹೀಗಾಗಿ ಅವರನ್ನು ಚಿಕ್ಕಪ್ಪ ಮಹಾವೀರ್ ಸಿಂಗ್ ಫೋಗಟ್ ಚಿಕ್ಕ ವಯಸ್ಸಿನಲ್ಲಿಯೇ ಕುಸ್ತಿಗೆ ಪರಿಚಯಿಸಿದರು.
ಮೂರು ಒಲಿಂಪಿಕ್ಸ್‌ಗಳಲ್ಲಿ ಆಡಿರುವ ವಿನೇಶ್, ಮೂರು ಬಾರಿ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ವಿಶ್ವ ಚಾಂಪಿಯನ್‌ಪ್‌ನಲ್ಲಿ ಎರಡು ಕಂಚು ಮತ್ತು ಒಂದು ಬಾರಿ ಏಷ್ಯನ್ ಗೇಮ್ಸ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದರೊಂದಿಗೆ ಒಮ್ಮೆ ಏಷ್ಯನ್ ಚಾಂಪಿಯನ್ ಕೂಡಾ ಆಗಿದ್ದಾರೆ.
ಪದಕ ಬೇಟೆ ಆರಂಭ
2014ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ 48 ಕೆಜಿ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ವಿನೇಶ್ ಅವರ ಅಂತಾರಾಷ್ಟ್ರೀಯ ಪದಕಗಳ ಬೇಟೆ ಆರಂಭವಾಯ್ತು. 2016ರ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಫೋಗಟ್, ಕ್ವಾರ್ಟರ್ ಫೈನಲ್ ತಲುಪಿದರೂ ಪದಕ ಒಲಿಯಲಿಲ್ಲ. ಕಾರಣ, ಬಲ ಮೊಣಕಾಲಿಗೆ ಗಾಯಗೊಂಡು ಹೊರಬಿದ್ದರು. ಮತ್ತೆ ಹಠ ಹಿಡಿದು ಬಂಗಾರ ಗೆಲ್ಲುವ ಪಣತೊಟ್ಟ ವಿನೇಶ್, 2018ರ ಕಾಮನ್ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ ಬಂಗಾರ ಜಯಿಸಿದರು.
ಟೋಕಿಯೊ ಒಲಿಂಪಿಕ್ಸ್ ಸಮಯದಲ್ಲಿ ತಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ಉತ್ತಮ ಸ್ಥಿತಿಯಲ್ಲಿಲ್ಲ. ಅಲ್ಲದೆ ಆ ನಂತರ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ ಎಂದು ವಿನೇಶ್ ಬಹಿರಂಗಪಡಿಸಿದ್ದರು.
ಡಬ್ಲ್ಯುಎಫ್ಐ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಆರೋಪದ ವಿರುದ್ಧ ಕಟುವಾಗಿ ಪ್ರತಿಭಟಿಸಿದ್ದ ವಿನೇಶ್, ದೇಶಾದ್ಯಂತ ಸುದ್ದಿಯಾಗಿದ್ದರು. ಬಿಜೆಪಿ ಸರ್ಕಾರದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಒಲಿಂಪಿಕ್ಸ್ ಅನರ್ಹತೆಯ ಹಿಂದೆಯೂ ರಾಜಕೀಯ ಹಸ್ತಕ್ಷೇಪವಿದೆ ಎಂಬ ಗುಮಾನಿ ಎದ್ದಿದೆ. ಏನೇ ಇದ್ದರೂ, ಭಾರತ ಕಂಡ ಪ್ರತಿಭಾವಂತ ಕುಸ್ತಿಪಟುವೊಬ್ಬರು ಕುಸ್ತಿಕಣದಿಂದ ಹಿಂದೆ ಸರಿದಿದ್ದಾರೆ. ಪದಕ ಸುತ್ತಿನಿಂದ ಎದುರಾದ ಅನರ್ಹತೆ ಅವರಿಗೆ ಅತೀವ ನೋವು ತಂದಿರುವುದು ಸುಳ್ಳಲ್ಲ.