ಪ್ಯಾರಿಸ್ ಒಲಿಂಪಿಕ್ಸ್: ನೀರಜ್ ಚೋಪ್ರಾ ಚಿನ್ನದ ಪದಕ ಪಂದ್ಯ, ಕಂಚಿಗಾಗಿ ಹಾಕಿ ತಂಡ ಕಣಕ್ಕೆ; ಆಗಸ್ಟ್ 8ರಂದು ಭಾರತದ ವೇಳಾಪಟ್ಟಿ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಗುರುವಾರ ಭಾರತಕ್ಕೆ ಎರಡು ಪದಕ ಗೆಲ್ಲುವ ಅವಕಾಶಗಳಿವೆ. ನೀರಜ್ ಚೋಪ್ರಾ ಸತತ ಎರಡನೇ ಒಲಿಂಪಿಕ್ಸ್ ಚಿನ್ನದತ್ತ ಗುರಿ ಇಟ್ಟುಕೊಂಡಿದ್ದಾರೆ. ಇದೇ ವೇಳೆ ಪುರುಷರ ಹಾಕಿ ತಂಡವು ಕಂಚಿನ ಪದಕ ಪಂದ್ಯದಲ್ಲಿ ಆಡುತ್ತಿದೆ.
ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ (Paris Olympics 2024) ಆಗಸ್ಟ್ 7ರ ಬುಧವಾರ ಭಾರತಕ್ಕೆ ಭಾರಿ ನಿರಾಶೆಯಾಯ್ತು. ಚಿನ್ನಕ್ಕೆ ಕೊರಳೊಡ್ಡಲು ಒಂದೇ ಹೆಜ್ಜೆ ಹಿಂದಿದ್ದ ವಿನೇಶ್ ಫೋಗಟ್, ಅನರ್ಹರಾದರು. ಇದರ ನಡುವೆ ಆಗಸ್ಟ್ 8ರ ಗುರುವಾರ ಭಾರತಕ್ಕೆ ಎರಡು ಪದಕ ಗೆಲ್ಲುವ ಅವಕಾಶವಿದೆ. ಹಾಲಿ ವಿಶ್ವ ಮತ್ತು ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಅವರು ಜಾವೆಲಿನ್ ಥ್ರೋ ಫೈನಲ್ ಪಂದ್ಯದಲ್ಲಿ ಭಾಗವಹಿಸುತ್ತಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ನಿರ್ಮಿಸಿದ್ದ ಚಿನ್ನದ ಹುಡುಗ, ಮತ್ತೊಮ್ಮೆ ಬಂಗಾರ ಸಾಧನೆ ಮಾಡುವ ನಿರೀಕ್ಷೆ ಹೊಂದಿದ್ದಾರೆ. ಅರ್ಹತಾ ಸುತ್ತಿನಲ್ಲೇ ತಮ್ಮ ಮೊದಲ ಒಂದು ಎಸೆತದಲ್ಲೇ 89.34 ಮೀಟರ್ ದೂರಕ್ಕೆ ಬರ್ಜಿ ಎಸೆದು ಫೈನಲ್‌ಗೆ ಅರ್ಹತೆ ಪಡೆದ ನೀರಜ್, ಇಂದು ತಡರಾತ್ರಿ ಫೈನಲ್‌ನಲ್ಲಿ ಅಖಾಡಕ್ಕೆ ಇಳಿಯುತ್ತಿದ್ದಾರೆ.
ಅರ್ಹತಾ ಸುತ್ತಿನಲ್ಲಿ ನೀರಜ್ ಅವರದ್ದೇ ಅತ್ಯುತ್ತಮ ಎಸೆತವಾಗಿತ್ತು. ಇವರಿಗೆ ಫೈನಲ್‌ನಲ್ಲಿ ಅರ್ಷದ್ ನದೀಮ್, ಆಂಡರ್ಸನ್ ಪೀಟರ್ಸ್ ಮತ್ತು ಜಾಕುಬ್ ವಡ್ಲೆಜ್ ಅವರಂಥಾ ಪ್ರಬಲ ಸ್ಪರ್ಧಿಗಳು ಕಠಿಣ ಪೈಪೋಟಿ ನೀಡುವ ಸಾಧ್ಯತೆ ಇದೆ. ಇದೇ ವೇಳೆ ಇಂದು ಹಾಕಿ ಸೆಮಿಫೈನಲ್ ಪಂದ್ಯ ನಡೆಯುತ್ತಿದೆ. ಬಂಗಾರ ಅಥವಾ ಬೆಳ್ಳಿ ಪದಕ ಗೆಲ್ಲುವ ಅವಕಾಶ ಕಳೆದುಕೊಂಡಿರುವ ಭಾರತ ತಂಡ, ಕಂಚಿನ ಪದಕ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಕಣಕ್ಕಿಳಿಯುತ್ತಿದೆ. ಕಳೆದ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿಯೂ ಭಾರತ ಕಂಚು ಗೆದ್ದಿತ್ತು. ಮತ್ತೊಂದೆಡೆ ಅಮನ್ ಸೆಹ್ರಾವತ್ ಮತ್ತು ಅಂಶು ಮಲಿಕ್ ಕುಸ್ತಿಯಲ್ಲಿ ಅಭಿಯಾನ ಆರಂಭಿಸುತ್ತಿದ್ದಾರೆ.
ಆಗಸ್ಟ್ 8ರ ಗುರುವಾರ ಒಲಿಂಪಿಕ್ಸ್‌ನಲ್ಲಿ ಭಾರತದ ವೇಳಾಪಟ್ಟಿ
ಮಧ್ಯಾಹ್ನ 12:30 : ಗಾಲ್ಫ್ - ಮಹಿಳೆಯರ ವೈಯಕ್ತಿಕ ಸ್ಟ್ರೋಕ್‌ನಲ್ಲಿ ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್ 2ನೇ ಸುತ್ತು.
ಮಧ್ಯಾಹ್ನ 2:05 : ಅಥ್ಲೆಟಿಕ್ಸ್ - ಮಹಿಳೆಯರ 100 ಮೀಟರ್ ಹರ್ಡಲ್ಸ್ ರಿಪಿಚೇಜ್ ಸುತ್ತಿನಲ್ಲಿ ಜ್ಯೋತಿ ಯರ್ರಾಜಿ.
ಮಧ್ಯಾಹ್ನ 2:30 : ಕುಸ್ತಿ - ಪುರುಷರ 57 ಕೆಜಿ ವಿಭಾಗದ 16ರ ಸುತ್ತಿನಲ್ಲಿ ಭಾರತದ ಅಮನ್ ಸೆಹ್ರಾವತ್ ಉತ್ತರ ಮೆಸಿಡೋನಿಯಾದ ವ್ಲಾಡಿಮಿರ್ ಎಗೊರೊವ್ ವಿರುದ್ಧ ಸೆಣಸಲಿದ್ದಾರೆ.
ಮಧ್ಯಾಹ್ನ 2:30 : ಕುಸ್ತಿ - ಮಹಿಳೆಯರ 57 ಕೆಜಿ ವಿಭಾಗದ 16ರ ಸುತ್ತಿನಲ್ಲಿ ಅಮೆರಿಕದ ಹೆಲೆನ್ ಮರೂಲಿಸ್ ವಿರುದ್ಧ ಅಂಶು ಮಲಿಕ್.
ಸಂಜೆ 5:30 : ಹಾಕಿ - ಪುರುಷರ ಹಾಕಿ ಕಂಚಿನ ಪದಕದ ಪಂದ್ಯ. ಭಾರತ vs ಸ್ಪೇನ್. (ಸೆಮಿಫೈನಲ್‌ನಲ್ಲಿ ಸೋತಿರುವವ ತಂಡಗಳು)
ರಾತ್ರಿ 11:55: ಅಥ್ಲೆಟಿಕ್ಸ್ - ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್ ಚೋಪ್ರಾ. ಪದಕ ಸುತ್ತು.
ಬುಧವಾರ ದಿನ ಭಾರತಕ್ಕೆ ಭಾರಿ ನಿರಾಶೆಯಾಯ್ತು. ವಿನೇಶ್ ಫೋಗತ್ ಪದಕ ಸುತ್ತಿಗೂ ಮುನ್ನ ಅನರ್ಹರಾದರೆ, ಆಂಟಿಮ್ ಪಂಗಲ್ ಕೂಡಾ 16ರ ಸುತ್ತಿನಲ್ಲಿ ಸೋತು ಹೊರಬಿದ್ದರು. ಉಳಿದಂತೆ ಅಥ್ಲೆಟಿಕ್ಸ್‌ನಲ್ಲೂ ಭಾರತಕ್ಕೆ ಖುಷಿ ಸುದ್ದಿ ಸಿಗಲಿಲ್ಲ.
ಇನ್ನಷ್ಟು ಒಲಿಂಪಿಕ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ವಿನೇಶ್ ಫೋಗಟ್ ಅನರ್ಹ, ಆಂಟಿಮ್ ಪಂಗಲ್ಗೆ ಸೋಲು; ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇಂದು ಭಾರತಕ್ಕೆ ಸಂಪೂರ್ಣ ನಿರಾಶೆ