ಕಪ್ಪು ದಾರ ಕಟ್ಟಿಕೊಳ್ಳುವುದಾದರೂ ಏಕೆ? ಸಿಗುವ ಪ್ರಯೋಜನಗಳೇನು? ಅದರ ಹಿಂದಿರುವ ಬಲವಾದ ಕಾರಣ ಹೀಗಿದೆ
ಸಾಮಾನ್ಯವಾಗಿ ನಾವು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕಪ್ಪು ದಾರವನ್ನು ಕಟ್ಟಿಕೊಳ್ಳುವುದನ್ನು ನೋಡುತ್ತೇವೆ. ಭಾರತೀಯ ಸಂಸ್ಕೃತಿಯಲ್ಲಿ ಕಪ್ಪು ದಾರಕ್ಕೆ ಏಕೆ ಅಷ್ಟೊಂದು ಪ್ರಾಮುಖ್ಯತೆಯನ್ನು ನೀಡಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಪ್ಪು ದಾರಕ್ಕಿರುವ ಮಹತ್ವವೇನು ಎಂದು ತಿಳಿಯೋಣ. (ಬರಹ: ಅರ್ಚನಾ ವಿ. ಭಟ್)
ಸಾಮಾನ್ಯವಾಗಿ ಕೈಗೆ ಅಥವಾ ಕಾಲಿಗೆ ಕಟ್ಟುವ ಕಪ್ಪು ದಾರವು ಭಾರತೀಯ ಸಂಸ್ಕೃತಿಯಲ್ಲಿ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇದನ್ನು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಆಚರಣೆಗಳಲ್ಲಿ ಕಾಣಬಹುದಾಗಿದೆ. ಕಪ್ಪು ದಾರದ ಪ್ರಾಮುಖ್ಯತೆ ಬಹಳ ವಿಸ್ತಾರವಾಗಿದೆ. ಇದು ಭಕ್ತಿ, ಆಧ್ಯಾತ್ಮ, ರಕ್ಷಣೆ, ಸಕಾರಾತ್ಮಕ ಮತ್ತು ಪ್ರಶಾಂತತೆಯ ಮೌಲ್ಯಗಳನ್ನು ಒಳಗೊಂಡಿದೆ. ಕಪ್ಪು ದಾರವು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ, ಸಕಾರಾತ್ಮಕ ಕಂಪನಗಳನ್ನು ಆಕರ್ಷಿಸುತ್ತದೆ. ಅದನ್ನು ಧರಿಸುವುದರಿಂದ ಶಾಂತಿ ಮತ್ತು ನೆಮ್ಮದಿಯ ಭಾವ ತರುತ್ತದೆ ಎಂದು ನಂಬಲಾಗಿದೆ. ಸಾಮಾನ್ಯವಾಗಿ ಇದನ್ನು ನಾವು ಎಲ್ಲಾ ಸಂಸ್ಕೃತಿಗಳಲ್ಲೂ ಕಾಣಬಹುದಾಗಿದೆ. ಜ್ಯೋತಿಷ್ಯದ ದೃಷ್ಟಿಕೋನದಿಂದ ಹಲವು ಪ್ರಯೋಜನಗಳನ್ನು ಇದು ಹೊಂದಿದೆ. ವ್ಯಕ್ತಿಯು ಕಪ್ಪುದಾರವನ್ನು ಧರಿಸಿದರೆ ಅವನ ಜೀವನದಲ್ಲಿ ಧನಾತ್ಮಕ ಪರಿಣಾಮಗಳು ಉಂಟಾಗುತ್ತವೆ ಮತ್ತು ಭವಿಷ್ಯವು ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಚರ್ಮದ ಸಮಸ್ಯೆ, ಆರೋಗ್ಯ ಸಮಸ್ಯೆ ಎಲ್ಲಾ ಪರಿಹಾರಕ್ಕೂ ಬೇಕು ಈ ದೈವಿಕ ಗಿಡ; ಪೂಜೆಗೆ ಮಾತ್ರವಲ್ಲ, ಬಹೋಪಯೋಗಿ ಈ ತುಳಸಿ
ಕಪ್ಪು ದಾರವನ್ನು ಧರಿಸುವುದರ ಮಹತ್ವ
ನಕಾರಾತ್ಮಕ ಶಕ್ತಿಯ ವಿರುದ್ಧ ರಕ್ಷಣೆ ನೀಡುತ್ತದೆ
ಹಿಂದೂ ಸಂಪ್ರದಾಯದ ಪ್ರಕಾರ ಕಪ್ಪು ದಾರವನ್ನು ಧರಿಸುವುದರಿಂದ ದುಷ್ಟ ಶಕ್ತಿ ಮತ್ತು ಕೆಟ್ಟ ದೃಷ್ಟಿಯಿಂದ ರಕ್ಷಣೆ ಸಿಗುತ್ತದೆ ಎಂದು ನಂಬಲಾಗಿದೆ. ಅದು ವ್ಯಕ್ತಿಗೆ ಅವುಗಳಿಂದ ರಕ್ಷಣೆಯನ್ನು ನೀಡುತ್ತದೆ. ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ ಎಂದು ಹೇಳಲಾಗುತ್ತದೆ.
ಕೆಟ್ಟ ದೃಷ್ಟಿ ನಿವಾರಣೆ
ಕಪ್ಪು ದಾರವನ್ನು ಚಿಕ್ಕ ಮಕ್ಕಳ ಕೈಗೆ ಕಟ್ಟುವುದು ಅಥವಾ ಮನೆಯ ಮುಖ್ಯ ದ್ವಾರಕ್ಕೆ ಕಟ್ಟುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಏಕೆಂದರೆ ಹಾಗೆ ಕಟ್ಟುವುದರಿಂದ ಕೆಟ್ಟ ದೃಷ್ಟಿಯು ಹತ್ತಿರ ಸುಳಿಯುವುದಿಲ್ಲ ಎಂದು ನಂಬಲಾಗಿದೆ. ಜೊತೆಗೆ ಕೆಟ್ಟ ದೃಷ್ಟಿ ಹಾಗೂ ಋಣಾತ್ಮಕ ಶಕ್ತಿಯಿಂದ ರಕ್ಷಣೆ ಒದಗಿಸುತ್ತದೆ. ಜೊತೆಗೆ ರಕ್ಷಣೆ ನೀಡುವಂತಹ ವಾತಾವರಣವನ್ನು ಸೃಷ್ಟಿಸುತ್ತದೆ.
ಸಂಬಂಧಗಳನ್ನು ಬಲಪಡಿಸುತ್ತದೆ
ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ ಕಪ್ಪು ದಾರವು ಸಂಬಂಧಗಳನ್ನು ಬಲಪಡಿಸುತ್ತದೆ. ವ್ಯಕ್ತಿಗಳ ನಡುವಿನ ಬಂಧ ಗಟ್ಟಿಗೊಳಿಸುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ದೂರಮಾಡಿ ಸಂಬಂಧಗಳ ನಡುವೆ ಪ್ರೀತಿ, ವಾತ್ಸಲ್ಯ ನೆಲೆಸುವಂತೆ ಮಾಡುತ್ತದೆ.
ಇದನ್ನೂ ಓದಿ: ಶ್ರಾವಣ ಮಾಸ ಅತ್ಯಂತ ಮಂಗಳಕರ ಯಾಕೆ? ಶಿವನ ಪೂಜೆ, ಚಿನ್ನಾಭರಣ ಖರೀದಿಗೂ ಒಳ್ಳೆಯ ಸಮಯ, ವಿಶೇಷ ಹೀಗಿರುತ್ತೆ
ಕಪ್ಪು ದಾರಕ್ಕಿದೆ ವಿಶೇಷ ಪ್ರಾಮುಖ್ಯತೆ
ಭಾರತದ ವಿವಿಧ ಹಬ್ಬ ಹಾಗೂ ಸಂಪ್ರದಾಯಗಳಲ್ಲೂ ಕಪ್ಪು ದಾರಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಒಡಹುಟ್ಟಿದವರ ನಡುವಿನ ಸಂಬಂಧವನ್ನು ಬಲಪಡಿಸಲು ಇದನ್ನು ಕಟ್ಟಲಾಗುತ್ತದೆ. ವಾಸ್ತು ದೋಷಗಳನ್ನು ಸರಿಪಡಿಸಲು, ಮನೆಗೆ ಧನಾತ್ಮಕ ಶಕ್ತಿ ಆಕರ್ಷಿಸಲು, ಸಕಾರಾತ್ಮಕವಾಗಿ ಮನೆಯನ್ನು ಅಲಂಕರಿಸಲು ಕಪ್ಪು ದಾರವನ್ನು ಬಳಸಲಾಗುತ್ತದೆ.
ಆತ್ಮವಿಶ್ವಾಸ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ
ಕಪ್ಪು ದಾರವು ರಕ್ಷಣೆ ಮತ್ತು ಶಾಂತಿಯ ಪ್ರತೀಕವಾಗಿದೆ. ಇದು ವ್ಯಕ್ತಿಯ ಅಭಿವೃದ್ಧಿಗೆ ಬೆಂಬಲ ನೀಡುತ್ತದೆ ಎಂಬ ನಂಬಿಕೆಯಿದೆ. ಇದು ಆತ್ಮ ವಿಶ್ವಾಸವನ್ನು ಹೆಚ್ಚಿಸುವುದರಿಂದ ಎಲ್ಲಾ ಸವಾಲುಗಳನ್ನು ಸುಲಭವಾಗಿ ನಿಭಾಯಿಸಲು ಅನುವು ಮಾಡಿಕೊಡುತ್ತದೆ. ಕಪ್ಪು ದಾರವು ಆಂತರಿಕ ಶಕ್ತಿಯ ಮೇಲೆ ಆಳವಾದ ಪ್ರಭಾವ ಹೊಂದಿದೆ. ಇದು ಸ್ವಯಂ ನಿಯಂತ್ರಣ ಮತ್ತು ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ.
ಮಾನಸಿಕ ಮತ್ತು ದೈಹಿಕ ಆರೋಗ್ಯ ಹೆಚ್ಚಿಸುತ್ತದೆ
ಕಪ್ಪು ದಾರವನ್ನು ಕಟ್ಟಿಕೊಳ್ಳುವುದು ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯಿದೆ. ಇದರಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ. ಇದು ಭದ್ರತೆಯ ಭಾವವನ್ನು ನೀಡುತ್ತದೆ. ಅದರಿಂದ ದೈಹಿಕ ಆರೋಗ್ಯ ವೃದ್ಧಿಸುತ್ತದೆ. ಮನಸ್ಸು ಶಾಂತಿಯಿಂದಿದ್ದರೆ ದೇಹವು ಚೈತನ್ಯದಿಂದ ಕೂಡಿರುತ್ತದೆ. ಒಟ್ಟಾರೆಯಾಗಿ ಇದು ದೇಹ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.
ಇದು ಬಹಳ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯಗಳಲ್ಲೊಂದಾಗಿದೆ. ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದ ದಿನನಿತ್ಯದ ಅಡೆತಡೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಭಾರತೀಯ ಪರಂಪರೆಯ ಜೊತೆಗೆ ಆಳವಾದ ಸಂಬಂಧ ಹೊಂದಿರುವ ಕಪ್ಪು ದಾರವು ವ್ಯಕ್ತಿಯ ಜೀವನದ ಮೇಲೆ ಮಹತ್ವದ ಪ್ರಭಾವವನ್ನು ಬೀರುತ್ತದೆ ಎಂಬ ನಂಬಿಕೆಯಿದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.