ಮೇಷ ರಾಶಿ ದೀಪಾವಳಿ ಭವಿಷ್ಯ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭ, ಉದ್ಯೋಗಿಗಳಿಗೆ ಹೊಸ ಸವಾಲಿನೊಂದಿಗೆ ಬಡ್ತಿ ಸಾಧ್ಯತೆ; ಹೊಸ ಹೊಣೆಗೆ ಸನ್ನದ್ಧರಾಗಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೇಷ ರಾಶಿ ದೀಪಾವಳಿ ಭವಿಷ್ಯ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭ, ಉದ್ಯೋಗಿಗಳಿಗೆ ಹೊಸ ಸವಾಲಿನೊಂದಿಗೆ ಬಡ್ತಿ ಸಾಧ್ಯತೆ; ಹೊಸ ಹೊಣೆಗೆ ಸನ್ನದ್ಧರಾಗಿ

ಮೇಷ ರಾಶಿ ದೀಪಾವಳಿ ಭವಿಷ್ಯ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭ, ಉದ್ಯೋಗಿಗಳಿಗೆ ಹೊಸ ಸವಾಲಿನೊಂದಿಗೆ ಬಡ್ತಿ ಸಾಧ್ಯತೆ; ಹೊಸ ಹೊಣೆಗೆ ಸನ್ನದ್ಧರಾಗಿ

Deepavali Aries Horoscope 2024: ದೀಪಾವಳಿಯನ್ನು ಹಲವರು ಹಣಕಾಸು ವರ್ಷದ ಆರಂಭ ಎಂದೇ ಪರಿಗಣಿಸುತ್ತಾರೆ. ಉದ್ಯೋಗ, ಹಣಕಾಸು, ವ್ಯಾಪಾರಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ದೀಪಾವಳಿ ಪ್ರಯುಕ್ತ ವೈದಿಕ ಜ್ಯೋತಿಷ್ಯದ ರೀತಿಯಲ್ಲಿ ಲೆಕ್ಕ ಹಾಕಿ ಮೇಷ ರಾಶಿಯ ದೀಪಾವಳಿ ವರ್ಷ ಭವಿಷ್ಯ ಇಲ್ಲಿದೆ. (ಬರಹ: ಎಚ್‌.ಸತೀಶ್)

ಮೇಷ ರಾಶಿಯವರ ದೀಪಾವಳಿ ವರ್ಷ ಭವಿಷ್ಯ ಇಲ್ಲಿದೆ.
ಮೇಷ ರಾಶಿಯವರ ದೀಪಾವಳಿ ವರ್ಷ ಭವಿಷ್ಯ ಇಲ್ಲಿದೆ.

Deepavali Aries Horoscope 2024: ದೀಪಾವಳಿ ಅಮಾವಾಸ್ಯೆಯಂದು ಲಕ್ಷ್ಮೀಪೂಜೆ ಮಾಡುವ ಸಂಪ್ರದಾಯ ಕರ್ನಾಟಕದಲ್ಲಿದೆ. ಎಷ್ಟೋ ಅಂಗಡಿಗಳ ಮಾಲೀಕರು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ದೀಪಾವಳಿಯಿಂದ ದೀಪಾವಳಿಗೆ ಲಾಭ ನಷ್ಟಗಳ ಲೆಕ್ಕಾಚಾರ ಹಾಕುತ್ತಾರೆ. ಮೇಷ ರಾಶಿಯವರಿಗೆ ದೀಪಾವಳಿ ವರ್ಷ ಭವಿಷ್ಯದ ಫಲಾಫಲಗಳು ಹೇಗಿದೆ ಎನ್ನುವ ವಿವರ ಇಲ್ಲಿದೆ.

ಈ ದೀಪಾವಳಿಯ ನಂತರ ಮೇಷ ರಾಶಿಯವರು ಉದ್ಯೋಗದಲ್ಲಿ ಯಶಸ್ಸು ಗಳಿಸಲು ಹೊಸ ಯೋಜನೆಗಳನ್ನು ರೂಪಿಸುತ್ತಾರೆ. ಕೆಲ ವಿಚಾರಗಳು ಸಣ್ಣಮಟ್ಟದ್ದೇ ಆಗಿದ್ದರೂ ಹೆಚ್ಚಿನ ಆಸಕ್ತಿಯಿಂದ ಕೆಲಸ ನಿರ್ವಹಿಸುತ್ತಾರೆ. ಸಹೋದ್ಯೋಗಿಗಳ ಸಹಕಾರವೂ ಸಿಗುತ್ತದೆ. ಹಿರಿಯ ಅಧಿಕಾರಿಗಳು ನಿಮಗೆ ಸವಾಲು ಎನಿಸುವ ಜವಾಬ್ದಾರಿಯನ್ನು ನೀಡುತ್ತಾರೆ. ಜವಾಬ್ದಾರಿ ನಿರ್ವಹಿಸಲು ನೀವು ಬಹುತೇಕ ಸಮಯವನ್ನು ವ್ಯಯಿಸಬೇಕಾಗುತ್ತದೆ. ಕೆಲಸದ ಒತ್ತಡದಿಂದಾಗಿ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಸದಾಕಾಲ ಉದ್ಯೋಗದ ಬಗ್ಗೆ ಚಿಂತಿಸುವ ಕಾರಣ ಮನೆಯಲ್ಲಿ ಬೇಸರದ ವಾತಾವರಣ ಉಂಟಾಗುತ್ತದೆ. ಉದ್ಯೋಗದಲ್ಲಿ ನಿರೀಕ್ಷಿತ ಯಶಸ್ಸನ್ನು ಗಳಿಸುವಿರಿ.

ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಶುಭಕಾಲ ಇದು. ತುಸು ಪ್ರಯತ್ನಪಟ್ಟಲ್ಲಿ ವಿದೇಶದಲ್ಲಿಯೂ ಉದ್ಯೋಗ ದೊರೆಯುತ್ತದೆ. ನಿಮ್ಮ ಆತ್ಮೀಯರು ಸಮಸ್ಯೆಗೆ ಸಿಲುಕಿದಲ್ಲಿ ಸಹಾಯಕ್ಕೆ ಮುಂದಾಗುವಿರಿ. ಸಮಾಜದಲ್ಲಿ ಗೌರವಯುತ ಸ್ಥಾನಮಾನ ದೊರೆಯುತ್ತದೆ. ನಿಮ್ಮೊಂದಿಗೆ ಪಾಲುದಾರಿಕೆಯ ವ್ಯಾಪಾರ ಆರಂಭಿಸಲು ನಿಮ್ಮ ಆಪ್ತರು ಇಚ್ಛಿಸುತ್ತಾರೆ. ಆತುರದಲ್ಲಿ ನೀವು ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳುವುದಿಲ್ಲ. ಉದ್ಯೋಗಿಗಳು ಉದ್ಯೋಗ ಬದಲಿಸಲು ಮನಸ್ಸು ಮಾಡಿದರೂ ಅದು ಸಾಧ್ಯವಾಗುವುದಿಲ್ಲ.

ಜವಾಬ್ದಾರಿಯನ್ನು ಸ್ವತಂತ್ರವಾಗಿ ನಿರ್ವಹಿಸುತ್ತೀರಿ

ಹಣಕಾಸಿನ ವ್ಯವಹಾರದಲ್ಲಿ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ನಿಮ್ಮ ಕೆಲಸ ಕಾರ್ಯಗಳು ಹಲವರಿಗೆ ಸ್ಪೂರ್ತಿಯ ಸೆಲೆಯಾಗುತ್ತವೆ. ಬಿಡುವಿನ ವೇಳೆಯಲ್ಲಿ ಸಣ್ಣಪುಟ್ಟ ವ್ಯಾಪಾರವನ್ನು ಆರಂಭಿಸುವಿರಿ. ಉದ್ಯೋಗದಲ್ಲಿ ಅನಿರೀಕ್ಷಿತವಾಗಿ ಬಡ್ತಿ ದೊರೆಯುತ್ತದೆ. ನಿಮ್ಮಲ್ಲಿನ ನಾಯಕತ್ವದ ಗುಣ ಹೊಸ ಅವಕಾಶಗಳನ್ನು ದೊರಕಿಸಿಕೊಡುತ್ತವೆ. ನಿಮ್ಮ ಸಹಾಯದಿಂದ ಆತ್ಮೀಯರೊಬ್ಬರು ತಮ್ಮ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಸುತ್ತಾರೆ. ಕುಟುಂಬದ ಆಗುಹೋಗುಗಳಲ್ಲಿ ನಿಮ್ಮ ಪಾತ್ರವು ಅತಿಮುಖ್ಯವಾಗುತ್ತದೆ. ನಿಮ್ಮ ಪಾಲಿನ ಜವಾಬ್ದಾರಿಗಳನ್ನು ಸ್ವತಂತ್ರವಾಗಿ ನಿರ್ವಹಿಸುವಿರಿ. ಸೋಲೆಂಬುದು ನಿಮ್ಮಿಂದ ದೂರ ಉಳಿಯುತ್ತದೆ. ಕುಟುಂಬದ ಮನೆಮಂದಿ ಹಣಕಾಸಿನ ವಿಚಾರದಲ್ಲಿ ನಿಮ್ಮನ್ನು ಅವಲಂಬಿಸುತ್ತಾರೆ.

ಕಲಾವಿದರು ತಮ್ಮ ಪ್ರತಿಭೆಗೆ ತಕ್ಕ ಅವಕಾಶಗಳನ್ನು ಪಡೆಯುತ್ತಾರೆ. ನಿಮ್ಮ ವಿರೋಧಿಗಳು ನಿಮ್ಮನ್ನು ಎದುರಿಸಲು ಸಾಧ್ಯವಾಗದೆ ಸೋಲುತ್ತಾರೆ. ನಿಮ್ಮಲ್ಲಿರುವ ಕ್ಷಮಾಗುಣವು ಎಲ್ಲರ ಪ್ರಶಂಸೆಗೆ ಗುರಿಯಾಗುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ. ಅನಿರೀಕ್ಷಿತ ಧನಲಾಭವು ಹೊಸ ಆಸೆ ಆಕಾಂಕ್ಷೆಗಳಿಗೆ ದಾರಿಯಾಗುತ್ತದೆ. ಷೇರುಗಳಲ್ಲಿ ಹೂಡಿದ ಹಣವು ಉತ್ತಮ ಆದಾಯವನ್ನು ನೀಡಲಿದೆ. ಸಮಾಜ ಸೇವೆ ಮಾಡುವಿರಿ. ಬಹುದಿನದಿಂದ ಬಾಕಿ ಉಳಿದ ಕಾನೂನು ಪ್ರಕ್ರಿಯೆಯಲ್ಲಿ ಜಯವನ್ನು ಗಳಿಸುವಿರಿ. ಅನಾವಶ್ಯಕ ಖರ್ಚು ವೆಚ್ಚಗಳನ್ನು ನಿಯಂತ್ರಿಸಲು ಸಫಲರಾಗುತ್ತೀರಿ.

ಮುಂದಿನ ದೀಪಾವಳಿ ಒಳಗೆ ಅವಿವಾಹಿತರಿಗೆ ಸಿಹಿ ಸುದ್ದಿ

ಬಹುಕಾಲದಿಂದ ಮದುವೆಯಾಗುವ ಆಸೆಯಿಟ್ಟುಕೊಂಡಿದ್ದವರಿಗೆ ಇದು ಶುಭಕಾಲ. ಮುಂದಿನ ದೀಪಾವಳಿಯ ಒಳಗೆ ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ. ಮಾತಿನ ಬಲದಿಂದ ದಾಂಪತ್ಯದಲ್ಲಿನ ಮನಸ್ತಾಪವು ಕೊನೆಗೊಳ್ಳುತ್ತದೆ. ಪಾಲುಗಾರಿಕೆಯ ಹಣಕಾಸಿನ ವ್ಯವಹಾರದಿಂದ ದೂರ ಉಳಿಯುವಿರಿ. ನಿಮ್ಮ ತಂದೆಯವರಿಗೆ ಸಲ್ಲಬೇಕಾದ ಪಿತ್ರಾರ್ಜಿತ ಆಸ್ತಿಯ ಪಾಲು ನಿಮ್ಮ ಕೈಸೇರುತ್ತದೆ. ತಂದೆ ತಾಯಿಯ ಜೊತೆಯಲ್ಲಿ ಯಾತ್ರಾಸ್ಥಳಕ್ಕೆ ಹೋಗುತ್ತೀರಿ. ಅದೃಷ್ಟ ಚೆನ್ನಾಗಿರುವ ಕಾರಣ ಆರ್ಥಿಕ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ನಿಮಗೆ ಸೇರಿದ ಬೆಲೆಬಾಳುವ ವಸ್ತುವೊಂದು ಪರರ ಕೈಸೇರುವ ಸಾಧ್ಯತೆ ಇದೆ, ಇದರ ಬಗ್ಗೆ ಎಚ್ಚರಿಕೆ ಇರಲಿ. ಸುಲಭವಾಗಿ ಯಾರನ್ನೂ ನೀವು ನಂಬುವುದಿಲ್ಲ. ಕೋಪ ಬೇಗನೆ ಬಂದರೂ ಬಹುಕಾಲ ನಿಲ್ಲದು. ಸಂಗಾತಿಯೊಂದಿಗೆ ಸಹ ಉತ್ತಮ ಸ್ನೇಹಿತರಂತೆ ವರ್ತಿಸುವಿರಿ. ಉತ್ತಮ ಆರೋಗ್ಯವನ್ನು ಉಳಿಸಿಕೊಳ್ಳುವಿರಿ. ಆತ್ಮವಿಶ್ವಾಸದಿಂದ ಮುಂದುವರೆದಲ್ಲಿ ಕಷ್ಟಕರ ಕೆಲಸವೊಂದು ಸಿದ್ಧಿಸುವುದು.

ಬದಲಾವಣೆಗಳನ್ನು ಧೈರ್ಯವಾಗಿ ಸ್ವೀಕರಿಸಿ

ವಿದ್ಯಾರ್ಥಿಗಳು ಆತಂಕದಿಂದ ಹೊರಬಂದು ಕಲಿಕೆಯಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ವಿದ್ಯಾರ್ಥಿ ದೆಸೆಯಲ್ಲಿಯೇ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಕುಟುಂಬದಲ್ಲಿನ ಹೆಣ್ಣುಮಕ್ಕಳಿಂದ ಸಕಾರಾತ್ಮಕ ಬದಲಾವಣೆಗಳು ಉಂಟಾಗಲಿವೆ. ತಮ್ಮ ನಾಯಕತ್ವದ ಗುಣದಿಂದ ವಿದ್ಯಾರ್ಥಿಗಳು ಗುರು ಹಿರಿಯರ ಪ್ರಶಂಸೆಗೆ ಪಾತ್ರರಾಗುತ್ತಾರೆ. ಸ್ತ್ರೀಯರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಸೋಲಿನ ಭಯದಲ್ಲಿ ಕೆಲವೊಮ್ಮೆ ಸಹನೆ ಕಳೆದುಕೊಂಡು ಉಗ್ರವಾಗಿ ವರ್ತಿಸುವಿರಿ. ಜೀವನದಲ್ಲಿ ಎದುರಾಗುವ ಬದಲಾವಣೆಗಳನ್ನು ಸ್ವೀಕರಿಸಲೇಬೇಕಾದ ಅನಿವಾರ್ಯ ಉಂಟಾಗುತ್ತದೆ. ಕುಟುಂಬದವರ ಕ್ಷೇಮಕ್ಕಾಗಿ ನಿಮ್ಮ ಆಸೆ ಆಕಾಂಕ್ಷೆಗಳನ್ನು ದೂರ ಮಾಡುವಿರಿ. ಮಕ್ಕಳ ಜೀವನವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹಣಕಾಸಿನ ಯೋಜನೆಗಳನ್ನು ರೂಪಿಸುವಿರಿ. ಜಗಳ ಕದನಗಳಿಗೆ ಒಳಗಾಗದೆ ಬುದ್ಧಿವಂತಿಯಿಂದ ದಿನನಿತ್ಯದ ಸಮಸ್ಯೆಗಳನ್ನು ಬಗೆಹರಿಸುವಿರಿ.

ದೀಪಾವಳಿ 2024: ನಿಮಗೆ ತಿಳಿದಿರಬೇಕಾದ ವಿವರಗಳಿವು

ಕ್ರೋಧಿನಾಮ ಸಂವತ್ಸರದ ದೀಪಾವಳಿ ಅಮಾವಾಸ್ಯೆಯ ಲಕ್ಷ್ಮೀಪೂಜೆ ಮುಹೂರ್ತವು ನವೆಂಬರ್ 1 ರಂದು ಬಂದಿದೆ. ಇದೇ ಅಕ್ಟೋಬರ್ 31 ರ ನರಕ ಚತುರ್ದಶಿಯಿಂದ ದೀಪಾವಳಿ ಆಚರಣೆ ಮನೆಗಳಲ್ಲಿ ಆರಂಭವಾಗುತ್ತವೆ. ಮುಂದಿನ ವರ್ಷದ ದೀಪಾವಳಿ ಅಮಾವಾಸ್ಯೆಯವರೆಗೆ ಅಂದರೆ ವಿಶ್ವಾವಸುನಾಮ ಸಂವತ್ಸರದ ದೀಪಾವಳಿ ಅಮಾವಾಸ್ಯೆಯು 2025ರ ಅಕ್ಟೋಬರ್ 20 ಕ್ಕೆ ಬಂದಿದೆ. 2024 ರ ದೀಪಾವಳಿಯಿಂದ 2025 ರ ದೀಪಾವಳಿಯವರೆಗಿನ ಅವಧಿಯಲ್ಲಿ ಮೇಷ ರಾಶಿಯವರ ಸಾಂಸಾರಿಕ, ಔದ್ಯೋಗಿಕ, ವ್ಯಾವಹಾರಿಕ ಬದುಕಿನ ಮೇಲೆ ಗ್ರಹಗತಿಗಳ ಪ್ರಭಾವ ಹೇಗಿರಬಹುದು ಎನ್ನುವ ಇಣುಕು ನೋಟವನ್ನು ಈ ಬರಹದ ಮೂಲಕ ತಿಳಿದುಕೊಂಡಿರಿ. ದ್ವಾದಶ ರಾಶಿಗಳ ದೀಪಾವಳಿ ವರ್ಷ ಭವಿಷ್ಯ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಲಭ್ಯ.

ಮೇಷ ರಾಶಿಯವರ ಗುಣಲಕ್ಷಣಗಳು

ಮೇಷ ರಾಶಿಯ ಮಹಿಳೆಯರಿಗೆ ಸಾಮಾನ್ಯವಾಗಿ ವಿಶೇಷ ಜನಾಕರ್ಷಕ ಶಕ್ತಿ ಇರುತ್ತದೆ. ಜೀವನದಲ್ಲಿ ಎದುರಾಗುವ ಯಾವುದೇ ಸವಾಲುಗಳನ್ನು ಗೆಲ್ಲುವುದಲ್ಲದೆ ತಮ್ಮ ಇಚ್ಛೆಯಂತೆ ನಿರೀಕ್ಷಿತ ಗುರಿಯನ್ನು ತಲುಪುತ್ತಾರೆ. ನಾಯಕತ್ವದ ಗುಣ ಇರುತ್ತದೆ, ಆದರೆ ಕೋಪ ಬೇಗನೆ ಬರುತ್ತದೆ. ಮನದಲ್ಲಿ ಆತಂಕದ ಭಾವನೆ ಮನೆ ಮಾಡಿರುತ್ತದೆ. ಕೈಹಿಡಿದ ಕೆಲಸ ಕಾರ್ಯಗಳನ್ನು ಪೂರೈಸುವವರೆಗೂ ಮನಸ್ಸನ್ನು ಬದಲಿಸುವುದಿಲ್ಲ. ನಿರಾಸೆಯನ್ನು ತಡೆದುಕೊಳ್ಳಲಾಗದೆ ಬೇಗನೆ ಕೋಪಕ್ಕೆ ಒಳಗಾಗುತ್ತಾರೆ.

ಮೇಷ ರಾಶಿಯಲ್ಲಿ ಜನಿಸಿದ ಪುರುಷರು ಸದಾ ಉತ್ಸಾಹದಿಂದ ಕೂಡಿರುತ್ತಾರೆ. ಸಮಯ ವ್ಯರ್ಥ ಮಾಡದೆ ಯಾವುದಾದರೊಂದು ಚಟುವಟಿಕೆಗಳಲ್ಲಿ ಮುಳುಗುತ್ತಾರೆ. ಇವರಲ್ಲಿರುವ ಆಚಲ ವಿಶ್ವಾಸ ಮತ್ತು ಧೈರ್ಯದ ಗುಣವು ಕಷ್ಟ ಕಾಲದಲ್ಲಿ ಸಹಾಯಕವಾಗುತ್ತದೆ. ಒಳ್ಳೆಯ ಕ್ರೀಡಾಮನೋಭಾವ ಇರುವ ಕಾರಣ ಗೆದ್ದರೆ ಬೆನ್ನು ತಟ್ಟಿಕೊಳ್ಳುವುದು ಇಲ್ಲ. ಸೋತರೆ ಕೊರಗುವುದೂ ಇಲ್ಲ. ಸಮಾಜದಲ್ಲಿ ಗೌರವದ ಸ್ಥಾನಮಾನ ಗಳಿಸುತ್ತಾರೆ. ಗೌರವ ಕಡಿಮೆ ಆಗುವ ಯಾವುದೇ ಕೆಲಸ ಮಾಡುವುದಿಲ್ಲ.

ಮೇಷ ರಾಶಿಗೆ ಶುಭ ದಿನಾಂಕ, ವಾರ, ಬಣ್ಣ

ಮೇಷ ರಾಶಿಯಲ್ಲಿ ಜನಿಸಿದವರು ನೆನಪಿಟ್ಟುಕೊಳ್ಳಬೇಕಾದ ವಿಚಾರಗಳು ಇವು. ಶುಭ ದಿನಾಂಕಗಳು: 1, 2, 3, 12, 13, 29, 31. ಶುಭ ವಾರಗಳು: ಭಾನುವಾರ, ಸೋಮವಾರ, ಮಂಗಳವಾರ ಮತ್ತು ಗುರುವಾರ. ಶುಭ ವರ್ಣ: ಬಿಳಿ ಮತ್ತು ಕೆಂಪು. ಅಶುಭ ವರ್ಣ: ಕಪ್ಪು ಮತ್ತು ಹಸಿರು. ಶುಭ ದಿಕ್ಕು: ಪೂರ್ವ, ಉತ್ತರ ಮತ್ತು ಈಶಾನ್ಯ. ಶುಭ ತಿಂಗಳು: ಜುಲೈ 15ರಿಂದ ಸೆ 15 ಮತ್ತು ಡಿಸೆಂಬರ್ 15ರಿಂದ ಜನವರಿ 14. ಶುಭ ಹರಳು: ಹವಳ, ಮಾಣಿಕ್ಯ ಮತ್ತು ಕನಕ ಪುಷ್ಯರಾಗ. ಶುಭ ರಾಶಿ: ಕಟಕ, ಸಿಂಹ, ವೃಶ್ಚಿಕ ಮತ್ತು ಧನಸ್ಸು. ಅಶುಭ ರಾಶಿ: ಮಿಥುನ, ಕನ್ಯಾ ಮತ್ತು ಕುಂಭ.

ಮೇಷ ರಾಶಿಗೆ ಪರಿಹಾರಗಳು

1) ಪ್ರತಿದಿನ ಶ್ರೀ ಆದಿತ್ಯಹೃದಯ ಪಠಿಸುವುದರಿಂದ ಅಥವಾ ಕೇಳುವುದರಿಂದ ಆತ್ಮಶಕ್ತಿಯು ಹೆಚ್ಚುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.
2) ಕಪ್ಪುಬಣ್ಣದ ಬಟ್ಟೆ ಮತ್ತು ಉದ್ದಿನಬೇಳೆಯನ್ನು ದಾನ ನೀಡುವುದರಿಂದ ಖರ್ಚು ವೆಚ್ಚಗಳು ಕಡಿಮೆ ಆಗಲಿವೆ.
3) ಕೆಂಪು ಹೂಬಿಡುವ (ಗುಲಾಬಿ ಗಿಡವಲ್ಲ) ಗಿಡವನ್ನು ಪೂರ್ವ ದಿಕ್ಕಿನಲ್ಲಿ ಇಟ್ಟು, 12 ಬಾರಿ ನೀರನ್ನು ಹಾಕಿದಲ್ಲಿ ಎಲ್ಲ ಸಮಸ್ಯೆಗಳು ದೂರವಾಗುತ್ತವೆ.
4) ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ವಿಭೂತಿ ಅಭಿಷೇಕ ಮಾಡಿಸುವುದು ಕ್ಷೇಮ. ಮನೆಯಲ್ಲೂ ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡಬಹುದು.
5) ಮನೆಯ ಮುಂಬಾಗಿಲಿಗೆ ದುರ್ಗಾದೇವಾಲಯದ ಕುಂಕುಮವನ್ನು ಇಡುವುದರಿಂದ ಋಣಾತ್ಮಕ ಶಕ್ತಿಯು ಕಡಿಮೆ ಆಗಲಿವೆ.
6) ಬಿಳಿ, ಕೆಂಪು ಮತ್ತು ಕೇಸರಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು.

(ಈ ಬರಹವು ಮೊದಲ ಬಾರಿಗೆ 'ಹಿಂದೂಸ್ತಾನ್‌ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಪ್ರಕಟವಾಗಿದೆ. ದೀಪಾವಳಿ ಹಬ್ಬದ ಸಮಗ್ರ ಮಾಹಿತಿ, ಜ್ಯೋತಿಷ್ಯ, ಅಧ್ಯಾತ್ಮ ಕುರಿತ ಮತ್ತಷ್ಟು ವಿಚಾರಗಳನ್ನು ತಿಳಿಯಲು kannada.hindustantimes.com ವೆಬ್‌ಸೈಟ್‌ಗೆ ಭೇಟಿ ನೀಡಿ)

ಬೆಂಗಳೂರಿನ ಜ್ಯೋತಿಷಿ ಎಚ್ ಸತೀಶ್. ಸಂಪರ್ಕ ಸಂಖ್ಯೆ: 85468 65832, ಇಮೇಲ್: sathishaapr23@gmail.com
ಬೆಂಗಳೂರಿನ ಜ್ಯೋತಿಷಿ ಎಚ್ ಸತೀಶ್. ಸಂಪರ್ಕ ಸಂಖ್ಯೆ: 85468 65832, ಇಮೇಲ್: sathishaapr23@gmail.com
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.