Muhurat Trading 2024 date: ಈ ಬಾರಿ ದೀಪಾವಳಿ ಮುಹೂರ್ತ ಟ್ರೇಡಿಂಗ್ ಯಾವಾಗ? ಆ 1 ಗಂಟೆ ಅವಧಿಯ ಷೇರು ವ್ಯವಹಾರ ಮಂಗಳಕರ
Muhurat Trading 2024 date: ಈ ವರ್ಷ ದೀಪಾವಳಿ ಮುಹೂರ್ತ ಟ್ರೇಡಿಂಗ್ ನವೆಂಬರ್ 1ರಂದು ಸಂಜೆ 6.15 ಗಂಟೆಯಿಂದ ರಾತ್ರಿ 7.15 ಗಂಟೆಯವರೆಗೆ ಇರಲಿದೆ. ಈ ಅವಧಿಯು ಷೇರು ಖರೀದಿ-ಮಾರಾಟಕ್ಕೆ ಮಂಗಳಕರ, ಹೂಡಿಕೆದಾರರಿಗೆ ಮುಂದಿನ ದಿನಗಳಲ್ಲಿ ಸಂಪತ್ತು, ಅದೃಷ್ಟ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
Muhurat Trading 2024 date: ನವೆಂಬರ್ 1, 2024ರಂದು ಭಾರತೀಯ ಷೇರುಪೇಟೆ 1 ಗಂಟೆಗಳ ಕಾಲ ತೆರೆದಿರುತ್ತದೆ. ದೀಪಾವಳಿ ಹಬ್ಬದ ಸಂಭ್ರಮದ ಮುಹೂರ್ತ ಟ್ರೇಡಿಂಗ್‌ಗಾಗಿ ಸಂಜೆ 6.15 ಗಂಟೆಯಿಂದ 7.15 ಗಂಟೆಯವರೆಗೆ ಷೇರುಪೇಟೆ ತೆರೆದಿರಲಿದೆ. ಅವತ್ತು, ಭಾನುವಾರ ಆಗಿದ್ರೂ ಒಂದು ಗಂಟೆಗಳ ಕಾಲ ಷೇರು ವಹಿವಾಟು ನಡೆಸಬಹುದು. ಇದು ಭಾರತದ ಷೇರುಪೇಟೆಯ ಸಂಪ್ರದಾಯ. ಕೇವಲ ಒಂದೇ ಒಂದು ಗಂಟೆ ಷೇರುಪೇಟೆ ತೆರಿದಿರುತ್ತದೆ. ದೀಪಾವಳಿ ಸಮಯದಲ್ಲಿ ಟ್ರೇಡರ್‌ಗಳು ಮತ್ತು ಹೂಡಿಕೆದಾರರು ಈ ಒಂದು ಗಂಟೆಯಲ್ಲಿ ಸಾಂಕೇತಿಕವಾಗಿ ಟ್ರೇಡಿಂಗ್ ಮಾಡುತ್ತಾರೆ.
ಹೊಸ ಕಂಪನಿ ಆರಂಭಿಸಲು, ಹೊಸ ವ್ಯವಹಾರ ಆರಂಭಿಸಲು ಅಥವಾ ಹೂಡಿಕೆ ಮಾಡಲು ದೀಪಾವಳಿ ಶುಭ ಸಮಯ ಎಂದು ತಿಳಿಯಲಾಗಿದೆ. ದೀಪಾವಳಿ ಮುಹೂರ್ತ ಟ್ರೇಡಿಂಗ್ ಹೊಸ ಕಂಪನಿ ಆರಂಭಿಸಲು ಕೂಡ ಸೂಕ್ತ ಸಮಯ. ಈ ಸಮಯದಲ್ಲಿ ಷೇರು ಹೂಡಿಕೆ ಮಾಡುವುದು ಕೂಡ ಕಂಪನಿಯೊಂದರ ಪಾಲುದಾರರಾಗುವ ಅಂಶ. ಈ ಅವಧಿಯಲ್ಲಿ ಷೇರು ಖರೀದಿಸಿದರೆ ಉತ್ತಮ ಸಂಪತ್ತು, ಅದೃಷ್ಟ ಪ್ರಾಪ್ತಿಯಾಗುತ್ತದೆ ಎಂದು ಸಾಕಷ್ಟು ಜನರು ನಂಬುತ್ತಾರೆ. ದೀಪಾವಳಿ ಸಮಯದಲ್ಲಿ ಕೆಲವರು ಹೊಸ ಸ್ಟೇಟ್‌ಮೆಂಟ್ ಕೌಂಟ್ ತೆರೆಯುತ್ತಾರೆ. ಇದು ಲಕ್ಷ್ಮಿ ಪೂಜೆ ಸಮಯದಲ್ಲಿ ನಡೆಯುವ ಟ್ರೇಡಿಂಗ್.
ಷೇರುಪೇಟೆಯು ದೀಪಾವಳಿಯಂದು ಬಾಗಿಲು ಹಾಕಿರುತ್ತದೆ. ಆದರೆ, ಒಂದು ಗಂಟೆ ಮಾತ್ರ ತೆರೆಯುತ್ತದೆ. ಈ ಸಮಯದಲ್ಲಿ ಮಾಡಿದ ಟ್ರೇಡಿಂಗ್ ಅನ್ನು ಅದೇ ದಿನ ಸೆಟಲ್ ಮಾಡಲಾಗುತ್ತದೆ. ಈ ಒಂದು ಗಂಟೆಯ ಆರಂಭ ಮತ್ತು ಕೊನೆಯ್ಲಿ 15 ನಿಮಿಷ ಪ್ರಿ ಓಪನಿಂಗ್ ಮತ್ತು ಕ್ಲೋಸಿಂಗ್ ಅವಧಿಯೂ ಇರುತ್ತದೆ.
ಈ ದೀಪಾವಳಿ ಮುಹೂರ್ತ ಟ್ರೇಡಿಂಗ್‌ನ ಉದ್ದೇಶ ಏನೆಂಬ ಪ್ರಶ್ನೆ ಸಾಕಷ್ಟು ಜನರಲ್ಲಿ ಇರಬಹುದು. ದೀಪಾವಳಿ ಬಳಿಕದ ಹೂಡಿಕೆ ಒಳ್ಳೆಯದಾಗಲಿ ಎನ್ನುವ ನಂಬಿಕೆ ಇದರ ಹಿಂದೆ ಇದೆ. ಹೂಡಿಕೆದಾರರು ತಮ್ಮ ಹೂಡಿಕೆ ಪ್ರಯಾಣವನ್ನು ಸಕಾರಾತ್ಮಕವಾಗಿ ಆರಂಭಿಸಲಿ ಎಂದು ಶುಭ ದಿನದಂದು ವಿಶೇಷ ಸಮಯ ನೀಡಲಾಗುತ್ತದೆ. ಈಗಾಗಲೇ ಹೂಡಿಕೆ ಮಾಡಿದವರಿಗೂ ತಮ್ಮ ಪೋರ್ಟ್‌ಪೋಲಿಯೊಗೆ ಇನ್ನಷ್ಟು ಷೇರುಗಳನ್ನು ಸೇರಿಸಿಕೊಳ್ಳಲು ಒಳ್ಳೆಯ ಸಮಯವಾಗಿದೆ.
ಆದರೆ, ಈ ಅವಧಿಯಲ್ಲಿ ಹೂಡಿಕೆದಾರರು ತುಸು ಎಚ್ಚರಿಕೆ ವಹಿಸಬೇಕು. ಕೇವಲ ಒಂದೇ ಗಂಟೆಯ ಷೇರು ವಹಿವಾಟು ಇದಾಗಿರುವ ಕಾರಣ ಆ ಸಮಯದಲ್ಲಿ ಷೇರುಗಳ ದರದಲ್ಲಿ ಭಾರೀ ಏರುಪೇರು ಆಗುತ್ತಿರುತ್ತದೆ. ಮೊದಲೇ ಒಂದಿಷ್ಟು ಷೇರುಗಳ ದರಗಳ ಕುರಿತು ರಿಸರ್ಚ್ ಮಾಡಿಟ್ಟುಕೊಂಡರೆ ಆ ಸಮಯದಲ್ಲಿ (ಇರುವ ಕಡಿಮೆ ಅವಧಿಯಲ್ಲಿ) ಗೊಂದಲಕ್ಕೆ ಈಡಾಗುವುದು ತಪ್ಪುತ್ತದೆ.
ಮುಹೂರ್ತ ಟ್ರೇಡಿಂಗ್: FAQs
ದೀಪಾವಳಿ ಮುಹೂರ್ತ ಟ್ರೇಡಿಂಗ್ ಕುರಿತು ಸಾಕಷ್ಟು ಜನರಲ್ಲಿ ಇರುವ ಸಾಮಾನ್ಯ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ.
ಏನಿದು ಮುಹೂರ್ತ ಟ್ರೇಡಿಂಗ್?
ಪ್ರತಿವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ 1 ಗಂಟೆ ಷೇರು ವಹಿವಾಟು ನಡೆಸಲು ನೀಡುವ ವಿಶೇಷ ಸಮಯವಾಗಿದೆ. ದೀಪಾವಳಿಯಂದು ಒಂದು ಗಂಟೆ ಭಾರತೀಯ ಷೇರುಪೇಟೆ ತೆರೆದಿರುತ್ತದೆ. ಈ ಬಾರಿ ನವೆಂಬರ್ 1ರಂದು ಈ ಮುಹೂರ್ತ ಟ್ರೇಡಿಂಗ್ ಇರಲಿದೆ.
ಯಾವ ಷೇರುಪೇಟೆಗಳು ಭಾಗವಹಿಸುತ್ತವೆ?
ಇದು ಭಾರತೀಯರ ನಂಬಿಕೆ. ಭಾರತದ ಷೇರುಪೇಟೆಗಳು ಮಾತ್ರ ಭಾಗವಹಿಸುತ್ತವೆ. ಮುಂಬೈ ಷೇರುಪೇಟೆ (ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಐ)ಗಳು ಮಾತ್ರ ನವೆಂಬರ್ 1ರಂದ ಒಂದು ಗಂಟೆ ತೆರೆದಿರುತ್ತವೆ.
ಯಾರು ಮುಹೂರ್ತ ಟ್ರೇಡಿಂಗ್‌ನಲ್ಲಿ ಭಾಗವಹಿಸಬಹುದು?
ಟ್ರೇಡಿಂಗ್ ಅಕೌಂಟ್ ಇರುವ ಯಾರು ಬೇಕಾದರೂ ಈ ಅವಧಿಯಲ್ಲಿ ಷೇರು ವ್ಯವಹಾರ ನಡೆಸಬಹುದು.
ಮುಹೂರ್ತ ಟ್ರೇಡಿಂಗ್‌ನಲ್ಲಿ ಇಂಟ್ರಾಡೇ ಟ್ರೇಡಿಂಗ್ ಮಾಡಬಹುದೇ?
ಹೌದು, ಖಂಡಿತಾ ಮಾಡಬಹುದು. ಮುಹೂರ್ತ ಟ್ರೇಡಿಂಗ್‌ನಲ್ಲಿ ಇಂಟ್ರಾಡೇ ಕೂಡ ಮಾಡಬಹುದು. ಆ ಒಂದು ಗಂಟೆಯಲ್ಲಿ ಮಾರ್ಕೆಟ್ ಮುಕ್ತಾಯವಾಗುವ 15 ನಿಮಿಷ ಮೊದಲು ಇಂಟ್ರಾಡೇ ವ್ಯವಹಾರ ಮುಗಿಯುತ್ತದೆ.
ಮುಹೂರ್ತ ಟ್ರೇಡಿಂಗ್ ಮಾಡುವ ಮುನ್ನ ಪೂಜೆ ಮಾಡಬೇಕೆ?
ಪೂಜೆ ಪುನಸ್ಕಾರಗಳು ಅವರವರ ನಂಬಿಕೆ, ಆಚಾರ ವಿಚಾರಕ್ಕೆ ಬಿಟ್ಟ ವಿಷಯ. ಮುಹೂರ್ತ ಟ್ರೇಡಿಂಗ್‌ಗೆ ಮುನ್ನ ಪೂಜೆ ಮಾಡಬೇಕೆಂದು ಇಲ್ಲ. ಆದರೆ, ಸಾಕಷ್ಟು ಟ್ರೇಡರ್‌ಗಳು ಮತ್ತು ಹೂಡಿಕೆದಾರರು ಸಾಂಕೇತಿಕವಾಗಿ ದೇವರಿಗೆ ಮತ್ತು ಟ್ರೇಡಿಂಗ್ ಬುಕ್, ಈಕ್ವಿಪ್‌ಮೆಂಟ್‌ಗಳಿಗೆ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಿ ಮುಹೂರ್ತ ಟ್ರೇಡಿಂಗ್ ಆರಂಭಿಸುತ್ತಾರೆ.
ಡಿಸ್‌ಕ್ಲೈಮರ್: ಇದು ಮಾಹಿತಿಗಾಗಿ ನೀಡಿರುವ ಲೇಖನ. ಷೇರುಪೇಟೆ ಹೂಡಿಕೆಯು ಹಣಕಾಸಿನ ಅಪಾಯಗಳನ್ನು ಹೊಂದಿರುತ್ತದೆ. ಹೂಡಿಕೆದಾರರು ಸ್ವಂತ ವಿವೇಚನೆಯಿಂದ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಮುಹೂರ್ತ ಟ್ರೇಡಿಂಗ್ ಎನ್ನುವುದು ನಂಬಿಕೆಗೆ ಸಂಬಂಧಪಟ್ಟ ವಿಚಾರ. ಈ ದಿನ ಟ್ರೇಡಿಂಗ್ ಮಾಡಿದರೆ ಲಾಭವಾಗುತ್ತದೆ ಎನ್ನುವುದು ಕೂಡ ನಂಬಿಕೆಯ ವಿಚಾರವೆಂದು ತಿಳಿಯಬೇಕು.
ವಿಭಾಗ