ತುಲಾ ರಾಶಿ ದೀಪಾವಳಿ ಭವಿಷ್ಯ: ಹಣಕಾಸಿನ ಕೊರತೆ ನೀಗಿಸಲು ವ್ಯಾಪಾರ ಆರಂಭಿಸುತ್ತೀರಿ, ಜವಾಬ್ದಾರಿಯುತ ಉದ್ಯೋಗದಲ್ಲಿ ಒತ್ತಡ ಇರುತ್ತೆ
Deepavali Libra Horoscope 2024: ದೀಪಾವಳಿಯನ್ನು ಹಲವರು ಹಣಕಾಸು ವರ್ಷದ ಆರಂಭ ಎಂದೇ ಪರಿಗಣಿಸುತ್ತಾರೆ. ಉದ್ಯೋಗ, ಹಣಕಾಸು, ವ್ಯಾಪಾರಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ದೀಪಾವಳಿ ಪ್ರಯುಕ್ತ ವೈದಿಕ ಜ್ಯೋತಿಷ್ಯದ ರೀತಿಯಲ್ಲಿ ಲೆಕ್ಕ ಹಾಕಿ ತುಲಾ ರಾಶಿಯ ದೀಪಾವಳಿ ವರ್ಷ ಭವಿಷ್ಯ ಇಲ್ಲಿದೆ. (ಬರಹ: ಎಚ್.ಸತೀಶ್)
Deepavali Libra Horoscope 2024: ದೀಪಾವಳಿ ಅಮಾವಾಸ್ಯೆಯಂದು ಲಕ್ಷ್ಮೀಪೂಜೆ ಮಾಡುವ ಸಂಪ್ರದಾಯ ಕರ್ನಾಟಕದಲ್ಲಿದೆ. ಎಷ್ಟೋ ಅಂಗಡಿಗಳ ಮಾಲೀಕರು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ದೀಪಾವಳಿಯಿಂದ ದೀಪಾವಳಿಗೆ ಲಾಭ ನಷ್ಟಗಳ ಲೆಕ್ಕಾಚಾರ ಹಾಕುತ್ತಾರೆ. ತುಲಾ ರಾಶಿಯವರಿಗೆ ದೀಪಾವಳಿ ವರ್ಷ ಭವಿಷ್ಯದ ಫಲಾಫಲಗಳು ಹೇಗಿದೆ ಎನ್ನುವ ವಿವರ ಇಲ್ಲಿದೆ.
ತುಲಾ ರಾಶಿಯವರ ದೀಪಾವಳಿ ಭವಿಷ್ಯದಲ್ಲಿ ಅಭಿನಯ ಬಲ್ಲ ಕಲಾವಿದರಿಗೆ ಉನ್ನತಮಟ್ಟದ ಅವಕಾಶಗಳು ದೊರೆಯುತ್ತವೆ. ಚಿತ್ರಕಲೆಯಲ್ಲಿ ಉತ್ತಮ ಯಶಸ್ಸು ಗಳಿಸುವಿರಿ. ಸ್ವಂತ ಉದ್ದಿಮೆ ಇರುವವರು ಉತ್ತಮ ಆದಾಯವನ್ನು ಗಳಿಸುತ್ತಾರೆ. ನಿಮ್ಮ ಕೆಲಸ ನಿರ್ವಹಿಸುವ ರೀತಿ ನೀತಿ ಎಲ್ಲರ ಗಮನ ಸೆಳೆಯುತ್ತದೆ. ಸ್ವಂತ ಕೆಲಸ ಕಾರ್ಯಗಳು ಬೇರೆಯವರನ್ನು ಅವಲಂಬಿಸುವುದಿಲ್ಲ. ವಿಶ್ರಾಂತಿ ಇಲ್ಲದ ದುಡಿಮೆ ನಿಮ್ಮದಾಗುತ್ತದೆ. ಆತುರದಿಂದ ಕೆಲಸ ಕಾರ್ಯಗಳನ್ನು ಸಾಧಿಸುವಿರಿ. ಎದುರಾಗುವ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಾಯ ಸಹಕಾರ ದೊರೆಯುತ್ತದೆ. ಅನಿವಾರ್ಯವಾಗಿ ಉದ್ಯೋಗವನ್ನು ಬದಲಾಯಿಸಿಬೇಕಾಗುತ್ತದೆ. ಕುಟುಂಬದ ಹಿರಿಯರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಫಲರಾಗುವಿರಿ.
ಮನಸ್ಸಿನಲ್ಲಿ ಯಾವುದೇ ಭಯ ಇರುವುದಿಲ್ಲ. ಕಡಿಮೆ ಅವಧಿಯಲ್ಲಿ ದೊಡ್ಡ ಪ್ರಮಾಣದ ಕೆಲಸ ಒಂದನ್ನು ಮಾಡಬೇಕಾಗುತ್ತದೆ. ನಿಮ್ಮ ಒಳ್ಳೆಯ ಗುಣ ನಡತೆಯನ್ನು ಎಲ್ಲರೂ ಮೆಚ್ಚುತ್ತಾರೆ. ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನ ಮಾನವು ದೊರೆಯುತ್ತದೆ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ವಿರೋಧಿಗಳ ವಿರುದ್ಧ ಸುಲಭವಾಗಿ ಜಯಗಳಿಸುವಿರಿ. ಹಣಕಾಸಿನ ತೊಂದರೆ ಇರುವುದಿಲ್ಲ. ಆದರೆ ಬೇರೆಯವರಿಂದ ಪಡೆದ ಹಣವನ್ನು ಹಿಂತಿರುಗಿಸಬೇಕಾಗುತ್ತದೆ. ಹಣದ ಕೊರತೆಯಿಂದ ಮನಸ್ಸಿನ ನೆಮ್ಮದಿ ಹಾಳಾಗುತ್ತದೆ. ಅತಿಯಾದ ಆತುರದಿಂದ ತಪ್ಪಾದ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಕುಟುಂಬದ ಜವಾಬ್ದಾರಿಯು ಸಂಪೂರ್ಣ ನಿಮ್ಮದಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಅನಾವಶ್ಯಕ ವಾದಗಳನ್ನು ಕಡಿಮೆ ಮಾಡುವುದು ಒಳ್ಳೆಯದು. ಭೂಮಿಗೆ ಸಂಬಂಧಿಸಿದ ವ್ಯವಹಾರ ಒಂದರಲ್ಲಿ ಹಿನ್ನೆಡೆ ಉಂಟಾಗುವ ಸಾಧ್ಯತೆ ಇದೆ.
ಆತ್ಮೀಯರ ಸಹಾಯದಿಂದ ಮದುವೆ ನಿಶ್ಚಯವಾಗುತ್ತೆ
ಸದೃಢತೆಯನ್ನು ಪಡೆಯಲು ದೈಹಿಕ ವ್ಯಾಯಾಮವನ್ನು ಅನುಸರಿವಿರಿ. ಯಾವುದೇ ವಿಚಾರವಾದರೂ ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳದೆ ಆತ್ಮೀಯರ ಸಲಹೆ ಕೇಳುವಿರಿ. ಕುಟುಂಬದ ಸದಸ್ಯರಿಗೆ ಹಣದ ಸಹಾಯ ಮಾಡುವಿರಿ. ಆತ್ಮೀಯರ ಸಹಾಯದಿಂದ ವಿವಾಹ ನಿಶ್ಚಯವಾಗುತ್ತದೆ. ಹಣಕಾಸಿನ ಕೊರತೆ ನೀಗಿಸಲು ಸಣ್ಣ ಬಂಡವಾಳದ ವ್ಯಾಪಾರವನ್ನು ಆರಂಭಿಸುವಿರಿ. ಉದ್ಯೋಗದಲ್ಲಿ ಜವಾಬ್ದಾರಿಯುತ ಒತ್ತಡ ಇರುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಪ್ರಥಮ ಆದ್ಯತೆಯನ್ನು ನೀಡುತ್ತಾರೆ. ಸೋದರನಿಗೆ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯಲಿದೆ. ಪಶುಸಂಗೋಪನೆಯಲ್ಲಿ ಆಸಕ್ತಿ ಮೂಡುತ್ತದೆ.
ಕುಟುಂಬದಲ್ಲಿನ ಆಗುಹೋಗುಗಳು ಬೇಸರಕ್ಕೆ ಕಾರಣವಾಗುತ್ತದೆ. ನಿಮ್ಮ ಆತುರದ ವ್ಯಕ್ತಿತ್ವ ಬೇರೆಯವರಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ. ಭವಿಷ್ಯದ ಜೀವನಕ್ಕಾಗಿ ಹಣ ಉಳಿಸುವ ಬಗ್ಗೆ ಯೋಜನೆ ರೂಪಿಸುವಿರಿ. ಬೇಸರದ ವಾತಾವರಣದಲ್ಲಿ ಸಂತಸ ಮೂಡಿಸಲು ಪ್ರಯತ್ನಿಸುವಿರಿ. ಪಾಲುಗಾರಿಕೆಯ ವ್ಯವಹಾರದಲ್ಲಿ ಕಾನೂನಿನ ತೊಡಕೊಂದು ಎದುರಾಗುವ ಸಾಧ್ಯತೆ ಇದೆ. ವಯೋವೃದ್ದರು ಹುಮ್ಮಸ್ಸಿನಿಂದ ಕೆಲಸ ನಿರ್ವಹಿಸಿ ಎಲ್ಲರ ಮನಸ್ಸನ್ನು ಸೆಳೆಯುತ್ತಾರೆ. ಕುಲದ ಹಿರಿಯರ ಜೊತೆಯಲ್ಲಿ ಸಮಯ ಕಳೆಯುವ ಅವಕಾಶ ದೊರೆಯುತ್ತದೆ. ಕ್ರಮೇಣವಾಗಿ ಕುಟುಂಬದಲ್ಲಿ ನೆಮ್ಮದಿ ನೆಲೆಸುತ್ತದೆ.
ಪಾಲುಗಾರಿಕೆಯ ವ್ಯಾಪಾರವನ್ನು ನಂಬಿ ಹಣದ ವ್ಯವಹಾರ ಮಾಡುವುದಿಲ್ಲ
ಲೋಹದ ವಸ್ತುವಿನೊಂದಿಗೆ ಕೆಲಸ ನಿರ್ವಹಿಸುವ ವೇಳೆ ಎಚ್ಚರಿಕೆ ಇರಲಿ. ಮಕ್ಕಳ ಟೀಕೆಗಳ ನಡುವೆಯೂ ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸುವಿರಿ. ಉದ್ಯೋಗದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ ಎಚ್ಚರಿಕೆ ಇರಲಿ. ಪಾಲುಗಾರಿಕೆಯ ವ್ಯಾಪಾರವನ್ನು ನಂಬಿ ಹಣದ ವ್ಯವಹಾರ ಮಾಡುವುದಿಲ್ಲ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವರು. ಮುಖ್ಯವಾದ ಕೆಲಸವೊಂದು ಮುಂದೂಡಲ್ಪಡುತ್ತದೆ. ಸೋದರ ಮಾವನೊಂದಿಗೆ ಆಸ್ತಿಯ ವಿಚಾರದಲ್ಲಿ ವಿವಾದ ಉಂಟಾಗುವ ಸಾಧ್ಯತೆ ಇದೆ. ಧಾರ್ಮಿಕ ಕೇಂದ್ರದ ನವೀಕರಣದ ಕೆಲಸದಲ್ಲಿ ಪಾಲ್ಗೊಳ್ಳುವಿರಿ.
ಬಹುಜನರ ಆದೇಶವನ್ನು ಸಂಯಮದಿಂದ ಸ್ವೀಕರಿಸುವಿರಿ. ಕುಟುಂಬದಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವಿರಿ. ಸತತ ಪ್ರಯತ್ನದಿಂದ ಉದ್ಯೋಗದಲ್ಲಿ ನಿಮ್ಮ ಇಚ್ಛೆಗೆ ತಕ್ಕಂತೆ ಬದಲಾವಣೆಗಳನ್ನು ಪಡೆಯುವಿರಿ. ಅಶಕ್ತರ ವಿವಾಹಕ್ಕೆ ಸಹಾಯ ಮಾಡುವಿರಿ. ತಡವಾಗಿ ನಿರೀಕ್ಷಿತ ಅವಕಾಶವೊಂದು ದೊರೆಯುತ್ತದೆ. ಮಹಿಳಾ ಉದ್ಯಮಿಗಳು ಸೋಲನ್ನು ಲಘುವಾಗಿ ಪರಿಗಣಿಸುವ ಕಾರಣ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ.
ದೀಪಾವಳಿ 2024: ನಿಮಗೆ ತಿಳಿದರಬೇಕಾದ ವಿವರಗಳಿವು
ಕ್ರೋಧಿನಾಮ ಸಂವತ್ಸರದ ದೀಪಾವಳಿ ಅಮಾವಾಸ್ಯೆಯ ಲಕ್ಷ್ಮೀಪೂಜೆ ಮುಹೂರ್ತವು ನವೆಂಬರ್ 1 ರಂದು ಬಂದಿದೆ. ಇದೇ ಅಕ್ಟೋಬರ್ 31 ರ ನರಕ ಚತುರ್ದಶಿಯಿಂದ ದೀಪಾವಳಿ ಆಚರಣೆ ಮನೆಗಳಲ್ಲಿ ಆರಂಭವಾಗುತ್ತವೆ. ಮುಂದಿನ ವರ್ಷದ ದೀಪಾವಳಿ ಅಮಾವಾಸ್ಯೆಯವರೆಗೆ ಅಂದರೆ ವಿಶ್ವಾವಸುನಾಮ ಸಂವತ್ಸರದ ದೀಪಾವಳಿ ಅಮಾವಾಸ್ಯೆಯು 2025ರ ಅಕ್ಟೋಬರ್ 20 ಕ್ಕೆ ಬಂದಿದೆ. 2024 ರ ದೀಪಾವಳಿಯಿಂದ 2025 ರ ದೀಪಾವಳಿಯವರೆಗಿನ ಅವಧಿಯಲ್ಲಿ ಮೇಷ ರಾಶಿಯವರ ಸಾಂಸಾರಿಕ, ಔದ್ಯೋಗಿಕ, ವ್ಯಾವಹಾರಿಕ ಬದುಕಿನ ಮೇಲೆ ಗ್ರಹಗತಿಗಳ ಪ್ರಭಾವ ಹೇಗಿರಬಹುದು ಎನ್ನುವ ಇಣುಕು ನೋಟವನ್ನು ಈ ಬರಹದ ಮೂಲಕ ತಿಳಿದುಕೊಂಡಿರಿ. ದ್ವಾದಶ ರಾಶಿಗಳ ದೀಪಾವಳಿ ವರ್ಷ ಭವಿಷ್ಯ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಲಭ್ಯ.
ತುಲಾ ರಾಶಿಯವರ ಗುಣಲಕ್ಷಣಗಳು
ಈ ರಾಶಿಯಲ್ಲಿ ಜನಿಸಿರುವ ಮಹಿಳೆಯರು ವಿಶೇಷವಾದ ಜನಾಕರ್ಷಣ ಶಕ್ತಿಯನ್ನು ಹೊಂದಿರುತ್ತಾರೆ. ಸಣ್ಣ ಪುಟ್ಟ ಕೆಲಸವಾದರೂ ಇವರ ಸಮರ್ಪಣಾ ಮನೋಭಾವ ವಿಶೇಷವಾಗಿರುತ್ತದೆ. ಯಾರೊಂದಿಗೂ ಸುಲಭವಾಗಿ ರಾಜಿ ಮಾಡಿಕೊಳ್ಳುವುದಿಲ್ಲ. ಸದ್ಭಾವನೆ ಇರುವ ಜನರೊಂದಿಗೆ ಸ್ನೇಹ ಬೆಳೆಸುತ್ತಾರೆ. ಮನಸ್ಸಿಗೆ ಸರಿ ಹೊಂದದವರನ್ನು ತಿರಸ್ಕರಿಸುತ್ತಾರೆ. ಸದಾಕಾಲ ವಿಶೇಷವಾದ ಪ್ರೀತಿಗಾಗಿ ಹಾತೊರೆಯುತ್ತಾರೆ. ಶಾಂತಿ, ಸಹನೆಯಿಂದ ಕೈ ಹಿಡಿದ ಕೆಲಸ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸುತ್ತಾರೆ. ಯಾರಿಗೂ ಮೋಸ ಮಾಡದ ವ್ಯಕ್ತಿತ್ವ ಇವರದ್ದು.
ಪುರುಷರು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಕೇಂದ್ರ ಬಿಂದುವಾಗಿರುತ್ತಾರೆ. ಈ ರಾಶಿಯವರು ಬುದ್ಧಿವಂತರು. ಪತ್ನಿಯನ್ನು ಅತಿಯಾಗಿ ಪ್ರೀತಿಸುತ್ತಾರೆ. ದಯಾಳುಗಳು. ಆದರೆ ಅತಿಯಾದ ಆತುರದ ಸ್ವಭಾವವಿರುತ್ತದೆ. ಬೇರೆಯವರ ಅಭಿಪ್ರಾಯವನ್ನು ಕೇಳುತ್ತಾರೆ, ಆದರೆ ಪಾಲಿಸುವುದಿಲ್ಲ. ಐಷಾರಾಮಿ ಜೀವನಕ್ಕೆ ಮಾರುಹೋಗುತ್ತಾರೆ. ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಜ್ಞಾನ ಇರುತ್ತದೆ. ಪರಿಚಯ ಇರುವವರ ಜೊತೆ ವಿವಾಹವಾಗುತ್ತಾರೆ.
ತುಲಾ ರಾಶಿಯವರ ಶುಭ ದಿನಾಂಕರ, ವಾರ, ಬಣ್ಣ
ತುಲಾ ರಾಶಿಯ ಅಧಿಪತಿ: ಶುಕ್ರ, ತುಲಾ ರಾಶಿಯವರಿಗೆ ಶುಭ ದಿನಾಂಕಗಳು: 1,2,4,7,10,28,22,17,26, ತುಲಾ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಸೋಮವಾರ,ಮಂಗಳವಾರ,ಬುಧವಾರ ಮತ್ತು ಶನಿವಾರ, ತುಲಾ ರಾಶಿಯವರಿಗೆ ಶುಭ ವರ್ಣ: ಕಿತ್ತಳೆ, ಬಿಳಿ ಮತ್ತು ಕೆಂಪು, ತುಲಾ ರಾಶಿಯವರಿಗೆ ಅಶುಭ ವರ್ಣ: ನೀಲಿ, ಹಸಿರು ಮತ್ತು ಹಳದಿ, ತುಲಾ ರಾಶಿಯವರಿಗೆ ಶುಭ ದಿಕ್ಕು: ದಕ್ಷಿಣ ಮತ್ತು ಪಶ್ಚಿಮ, ತುಲಾ ರಾಶಿಯವರಿಗೆ ಶುಭ ತಿಂಗಳು: ಆಗಸ್ಟ್ 15ರಿಂದ ಸೆಪ್ಟಂಬರ್ 14, ತುಲಾ ರಾಶಿಯವರಿಗೆ ಶುಭ ಹರಳು: ಹಸಿರುಪಚ್ಚೆ, ಝೆರ್ಕೋನ್ ಮತ್ತು ನೀಲಮಣಿ, ತುಲಾ ರಾಶಿಯವರಿಗೆ ಶುಭ ರಾಶಿ: ಮಕರ, ಕುಂಭ ಮತ್ತು ಮಿಥುನ, ತುಲಾ ರಾಶಿಯವರಿಗೆ ಅಶುಭ ರಾಶಿ: ವೃಷಭ, ಮೇಷ ಮತ್ತು ಸಿಂಹ
ತುಲಾ ರಾಶಿಯವರಿಗೆ ಪರಿಹಾರಗಳು
1)ವಿಷ್ಣು ಸಹಸ್ರನಾಮ: ಪ್ರತಿದಿನ ಶ್ರೀ ವಿಷ್ಣು ಸಹಸ್ರನಾಮ ಪಠಿಸುವುದರಿಂದ ಅಥವಾ ಕೇಳುವುದರಿಂದ ಕೈಹಿಡಿದ ಕೆಲಸ-ಕಾರ್ಯಗಳು ಯಶಸ್ವಿಯಾಗಲಿದೆ.
2)ಈ ದಾನಗಳು ಶುಭ ಫಲ:ಕೆಂಪು ಬಟ್ಟೆ ಮತ್ತು ತೊಗರಿಬೇಳೆ ದಾನ ನೀಡುವುದರಿಂದ ವಿರೋಧಿಗಳು ಕಡಿಮೆ ಆಗಲಿದ್ದಾರೆ.
3) ದೇವಸ್ಥಾನ ಮತ್ತು ದೇವರ ಪೂಜೆ:ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ ಮಾಡುವುದರಿಂದ ಭೂವಿವಾದಗಳು ದೂರವಾಗಲಿದೆ. ಶ್ರೀ ಶನೇಶ್ವರನ ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ನೀಡುವುದರಿಂದ ವಿದ್ಯಾಭ್ಯಾಸ ಮತ್ತು ಆರೋಗ್ಯದಲ್ಲಿ ಪ್ರಗತಿ ದೊರೆಯುತ್ತದೆ.
4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ:ಹಸಿರು ಮತ್ತು ನೀಲಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ಶಾಸ್ತ್ರ, ಸಂಪ್ರದಾಯ ಮತ್ತು ಪ್ರಚಲಿತದಲ್ಲಿರುವ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಮಾಹಿತಿ ಪ್ರಕಟಿಸಲಾಗಿದೆ. ಇದನ್ನು ನಂಬಿ, ಅನುಸರಿಸುವ ಮೊದಲು ನಿಮ್ಮ ಕುಲಗುರುಗಳು ಅಥವಾ ಪ್ರಾಜ್ಞರೊಂದಿಗೆ ಪರಾಮರ್ಶೆ ಮಾಡಿಕೊಳ್ಳಬೇಕು.
(ಈ ಬರಹವು ಮೊದಲ ಬಾರಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಪ್ರಕಟವಾಗಿದೆ. ದೀಪಾವಳಿ ಹಬ್ಬದ ಸಮಗ್ರಹ ಮಾಹಿತಿ, ಜ್ಯೋತಿಷ್ಯ, ಅಧ್ಯಾತ್ಮ ಕುರಿತ ಮತ್ತಷ್ಟು ವಿಚಾರಗಳನ್ನು ತಿಳಿಯಲು kannada.hindustantimes.com ವೆಬ್‌ಸೈಟ್‌ಗೆ ಭೇಟಿ ನೀಡಿ)
ವಿಭಾಗ