ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Chaturmas 2024: ಚಾತುರ್ಮಾಸ ವ್ರತ ಎಂದರೇನು, ಯಾವಾಗ ಆರಂಭವಾಗುತ್ತದೆ? ಈ ಸಮಯದಲ್ಲಿ ಅನುಸರಿಸಬೇಕಾದ ನಿಯಮಗಳೇನು?

Chaturmas 2024: ಚಾತುರ್ಮಾಸ ವ್ರತ ಎಂದರೇನು, ಯಾವಾಗ ಆರಂಭವಾಗುತ್ತದೆ? ಈ ಸಮಯದಲ್ಲಿ ಅನುಸರಿಸಬೇಕಾದ ನಿಯಮಗಳೇನು?

Chaturmas Vrata: ನಾಲ್ಕು ತಿಂಗಳು ಆಚರಿಸುವ ಚಾತುರ್ಮಾಸ ವ್ರತವು ಈ ಬಾರಿ ಜುಲೈ 17, ಬುಧವಾರದಿಂದ ಚಾತುರ್ಮಾಸ ಪ್ರಾರಂಭವಾಗುತ್ತದೆ. ಇದು ನವೆಂಬರ್ 12, ಮಂಗಳವಾರ ಕೊನೆಗೊಳ್ಳುತ್ತದೆ. ಚಾತುರ್ಮಾಸ ವ್ರತ ಎಂದರೇನು,ಈ ಸಮಯದಲ್ಲಿ ಅನುಸರಿಸಬೇಕಾದ ನಿಯಮಗಳೇನು? ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಚಾತುರ್ಮಾಸ ವ್ರತ
ಚಾತುರ್ಮಾಸ ವ್ರತ

ಹಿಂದೂಗಳು ಆಚರಿಸುವ ಆಚರಣೆಗಳಲ್ಲಿ ಚಾತುರ್ಮಾಸ ವ್ರತ ಕೂಡಾ ಒಂದು. ಚಾತುರ್ಮಾಸ ಎಂದರೆ ಹೆಸರೇ ಸೂಚಿಸುವಂತೆ ನಾಲ್ಕು ತಿಂಗಳು ಎಂದು ಅರ್ಥ. 2024 ರಲ್ಲಿ ಚಾತುರ್ಮಾಸ ಯಾವಾಗ ಆರಂಭವಾಗುತ್ತದೆ? ಎಂದು ಕೊನೆಗೊಳ್ಳುತ್ತದೆ. ಚಾತುರ್ಮಾಸದಲ್ಲಿ ಯಾವ ದೇವರನ್ನು ಪೂಜಿಸಲಾಗುತ್ತದೆ? ವಿಧಿ ವಿಧಾನಗಳೇನು ಎಂಬುದರ ಬಗ್ಗೆ ತಿಳಿಯೋಣ.

ವಿಷ್ಣು ಯೋಗನಿದ್ರೆಗೆ ಜಾರುವ ಸಮಯ

ಶಾಸ್ತ್ರಗಳ ಪ್ರಕಾರ ಮಹಾವಿಷ್ಣುವು ಯೋಗನಿದ್ರೆ ಮಾಡುವ ಸಮಯವನ್ನು ಚಾತುರ್ಮಾಸ ಎಂದು ಕರೆಯುತ್ತಾರೆ. ಶಯನ ಏಕಾದಶಿಯಂದು ಯೋಗನಿದ್ರೆಗೆ ಜಾರುವ ವಿಷ್ಣುವು ನಂತರ ಕಾರ್ತಿಕ ಮಾಸದ ಉದ್ದಾನ ಏಕಾದಶಿಯಂದು ಎದ್ದು ಗರುಡ ವಾಹನದ ಮೇಲೆ ಭಕ್ತರೆಲ್ಲರಿಗೂ ದರ್ಶನ ನೀಡುತ್ತಾನೆ ಎಂದು ನಂಬಿಕೆ ಇದೆ. ಅಂದರೆ ಆಷಾಢ, ಶ್ರಾವಣ, ಭಾದ್ರಪದ ಮತ್ತು ಆಶ್ವಯುಜ ಮಾಸಗಳ ನಡುವೆ ಬರುವ ನಾಲ್ಕು ಮಾಸಗಳನ್ನು ಚಾತುರ್ಮಾಸ ಎನ್ನುತ್ತಾರೆ.

2024ರ ಚಾತುರ್ಮಾಸ ಯಾವಾಗ?

ಈ ಬಾರಿ ಜುಲೈ 17, ಬುಧವಾರದಿಂದ ಚಾತುರ್ಮಾಸ ಪ್ರಾರಂಭವಾಗುತ್ತದೆ. ಇದು ನವೆಂಬರ್ 12, ಮಂಗಳವಾರ ಕೊನೆಗೊಳ್ಳುತ್ತದೆ. ಈ ಅವಧಿಯನ್ನು ಮುಖ್ಯವಾಗಿ ವಿಷ್ಣುವಿನ ಆರಾಧನೆಗೆ ಸಮರ್ಪಿಸಲಾಗಿದೆ. ಕೆಲವರು ಈ ಸಮಯದಲ್ಲಿ ಶಿವನನ್ನು ಆರಾಧಿಸಿ, 16 ಸೋಮವಾರ ವ್ರತ ಕೂಡಾ ಮಾಡುತ್ತಾರೆ. ಚಾತುರ್ಮಾಸದ ಸಮಯದಲ್ಲಿ ಶುಭ ಕಾರ್ಯಗಳನ್ನು ಹೊರತುಪಡಿಸಿ ಧಾರ್ಮಿಕ ಕಾರ್ಯಗಳನ್ನು ಮಾಡಬಹುದು. ಮದುವೆ, ಕೇಶ ಮುಂಡನ, ಗೃಹಪ್ರವೇಶದಂಥ ಕಾರ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಕೂದಲು ಅಥವಾ ಗಡ್ಡವನ್ನು ಕತ್ತರಿಸಬಾರದು. ಇದರೊಂದಿಗೆ ಚಾತುರ್ಮಾಸದಲ್ಲಿ ದೂರ ಪ್ರಯಾಣ ಮಾಡುವುದನ್ನು ತಪ್ಪಿಸಬೇಕು ಎಂದು ಶಾಸ್ತ್ರ ಹೇಳುತ್ತದೆ.

ಆಹಾರ ಸೇವನೆಗೂ ಇದೆ ನಿಮಯ

ಚಾತುರ್ಮಾಸದಲ್ಲಿ ಇಂಥದ್ದೇ ಆಹಾರ ಸೇವಿಸಬೇಕೆಂಬ ನಿಯಮವಿದೆ. ಚಾತುರ್ಮಾಸದಲ್ಲಿ ಆದಷ್ಟು ಸಾತ್ವಿಕ ಆಹಾರವನ್ನೇ ಸೇವಿಸಬೇಕು. ಈ ಸಮಯದಲ್ಲಿ, ಮಾಂಸ, ಮೀನು, ಮೊಟ್ಟೆ, ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ತಾಮಸಿಕ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಇದು ಆರೋಗ್ಯ ಮತ್ತು ಧಾರ್ಮಿಕ ದೃಷ್ಟಿಕೋನದಿಂದ ಉತ್ತಮವೆಂದು ಪರಿಗಣಿಸಲಾಗಿದೆ. ಅದರ ಬದಲಿಗೆ ಆದಷ್ಟು ಸಾತ್ವಿಕ ಆಹಾರವನ್ನೇ ಸೇವಿಸಬೇಕು.

ಈ ವಿಷಯಗಳನ್ನು ನೆನಪಿಡಿ

ಚಾತುರ್ಮಾಸದಲ್ಲಿ ಮದ್ಯಪಾನ, ಧೂಮಪಾನ ಸೇರಿದಂತೆ ಕೆಟ್ಟ ಚಟಗಳಿಂದ ದೂರವಿದ್ದಷ್ಟೂ ಒಳ್ಳೆಯದು. ಜನರ ಬಳಿ ಕಟುವಾಗಿ ಮಾತನಾಡುವುದು, ಸುಳ್ಳು ಹೇಳುವುದು, ಹೊಟ್ಟೆಕಿಚ್ಚು ಪಡುವುದು ಬೇಡ. ಪ್ರಾಣಿಗಳನ್ನು ಹಿಂಸಿಸಬೇಡಿ. ಅದರ ಬದಲಿಗೆ ನಿಮ್ಮ ಕೈಲಾದರೆ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ. ಅಥವಾ ಅನುಚಿತವಾದ ಮಾತುಗಳನ್ನಾಡಬೇಡಿ, ಇಲ್ಲವಾದಲ್ಲಿ ವಿಷ್ಣುವಿನ ಕೋಪಕ್ಕೆ ತುತ್ತಾಗಬಹುದು. ಚಾತುರ್ಮಾಸದಲ್ಲಿ ಧಾರ್ಮಿಕ ಗ್ರಂಥಗಳನ್ನು ಓದಿದರೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ನಿಮಗೆ ವಿಷ್ಣುವಿನ ಆಶೀರ್ವಾದ ದೊರೆಯುತ್ತದೆ. ಜೊತೆಗೆ ವಿಷ್ಣು ಸಹಸ್ರನಾಮ ಪಠಿಸಿದರೆ ನಿಮಗೆ ಶುಭ ಫಲಿತಾಂಶ ದೊರೆಯುತ್ತದೆ. ಚಾತುರ್ಮಾಸ ದೀಕ್ಷೆ ತೆಗೆದುಕೊಳ್ಳುವವರು ನೆಲದ ಮೇಲೆ ಮಲಗಬೇಕು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)