ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಬೆರಳುಗಳಲ್ಲಿದೆ ನಮ್ಮ ಜೀವನದ ಸಾರಾಂಶ; ಉಂಗುರದ ಬೆರಳಿಗೆ ಸಂಬಂಧಿಸಿದಂತೆ ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಿರುವುದೇನು? ಇಲ್ಲಿದೆ ಮಾಹಿತಿ

ಬೆರಳುಗಳಲ್ಲಿದೆ ನಮ್ಮ ಜೀವನದ ಸಾರಾಂಶ; ಉಂಗುರದ ಬೆರಳಿಗೆ ಸಂಬಂಧಿಸಿದಂತೆ ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಿರುವುದೇನು? ಇಲ್ಲಿದೆ ಮಾಹಿತಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಕೈ ಬೆರಳುಗಳು ಪ್ರತ್ಯೇಕವಾದ ಗ್ರಹಗಳಿಂದ ಸೂಚಿಸಲ್ಪಡುತ್ತದೆ. ಪ್ರತಿಯೊಂದು ಬೆರಳುಗಳು ಒಂದೊಂದು ಗ್ರಹದ ಪ್ರಭಾವಕ್ಕೆ ಒಳಗಾಗುತ್ತದೆ. ಉಂಗುರದ ಬೆರಳಿನ ಮಹತ್ವ ಏನು? ಈ ಬೆರಳಿಗೆ ಇರುವ ಬೇರೆ ಹೆಸರುಗಳೇನು? ಇಲ್ಲಿದೆ ಮಾಹಿತಿ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಬೆರಳುಗಳಲ್ಲಿದೆ ನಮ್ಮ ಜೀವನದ ಸಾರಾಂಶ; ಉಂಗುರದ ಬೆರಳಿಗೆ ಸಂಬಂಧಿಸಿದಂತೆ ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಿರುವುದೇನು? ಇಲ್ಲಿದೆ ಮಾಹಿತಿ
ಬೆರಳುಗಳಲ್ಲಿದೆ ನಮ್ಮ ಜೀವನದ ಸಾರಾಂಶ; ಉಂಗುರದ ಬೆರಳಿಗೆ ಸಂಬಂಧಿಸಿದಂತೆ ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಿರುವುದೇನು? ಇಲ್ಲಿದೆ ಮಾಹಿತಿ (PC: Unsplash)

ಉಂಗುರದ ಬೆರಳನ್ನು ರವಿ ಬೆರಳು ಅಥವಾ ಪವಿತ್ರದ ಬೆರಳು ಎಂದು ಕರೆಯುತ್ತೇವೆ. ಈ ಬೆರಳು ನಮ್ಮ ಜೀವನದ ರೂಪುರೇಷೆಗಳನ್ನು ತಿಳಿಸುತ್ತದೆ. ಗುರುವಿನ ಬೆರಳು ನಮ್ಮಲ್ಲಿರುವ ವಿದ್ಯೆ ಅಥವಾ ಜ್ಞಾನವನ್ನು ತೋರಿಸಿದರೆ, ಪವಿತ್ರದ ಬೆರಳು ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಕಾರಣವಾಗುತ್ತದೆ, ಈ ಕಾರಣಗಳಿಂದಲೇ ಬೆರಳುಗಳಿಂದ ಮಾಡಬಹುದಾದ ಮುದ್ರೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ.

ಪವಿತ್ರದ ಬೆರಳಿನ ಹಿಂಭಾಗದಲ್ಲಿ ರೇಖೆಗಳು ಇರುತ್ತವೆ ಈ ರೇಖೆಗಳು ಚೆನ್ನಾಗಿ ಕಾಣುವಂತಿದ್ದರೆ ಜೀವನದಲ್ಲಿ ಬಹುತೇಕ ಶುಭಫಲಗಳು ಹೆಚ್ಚುತ್ತವೆ. ಮುಂಭಾಗದಲ್ಲಿ ಇರುವ ಗೆರೆಗಳು ಗಾಢವಾಗಿದ್ದಲ್ಲಿ ಎದುರಾಗುವ ಅವಕಾಶಗಳನ್ನು ಸಿದ್ಧಿಸಿಕೊಳ್ಳುವ ಮನಸ್ಸಿರುತ್ತದೆ. ಇವರು ಬಹಳ ಧೈರ್ಯವಂತರು. ಎದುರಾಗುವ ಕಷ್ಟಗಳನ್ನು ಲೆಕ್ಕಿಸದೆ ತಮ್ಮ ಕೆಲಸ ಕಾರ್ಯಗಳು ಸಾಧಿಸಿಕೊಳ್ಳುವ ಸ್ವಭಾವದವರು. 

ಧಾರ್ಮಿಕತೆಯಲ್ಲಿ ಆಸಕ್ತಿ ಹೊಂದಿರುವ ಜನರು

ಇವರಲ್ಲಿ ಧಾರ್ಮಿಕ ಮನೋಭಾವನೆ ಹೆಚ್ಚಾಗಿರುತ್ತದೆ ದೇವರ ಮೇಲೆ ಹೆಚ್ಚಿನ ಭಾರ ಹಾಕದೆ ತಮ್ಮ ಕರ್ತವ್ಯವನ್ನು ಪಾಲಿಸುವಲ್ಲಿ ನಿರತರಾಗುತ್ತಾರೆ. ತಂದೆ ಅಥವಾ ಕುಟುಂಬದ ಹಿರಿಯ ವ್ಯಕ್ತಿಗಳ ಮೇಲೆ ಗೌರವ ಮತ್ತು ಪ್ರೀತಿ ವಿಶ್ವಾಸ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ. ಬೆರಳಿನ ತುದಿಯಲ್ಲಿ ಚಕ್ರದ ಆಕಾರ ಕಾಣುತ್ತಿದ್ದಲ್ಲಿ ಓಡಾಟದಿಂದ ಹೆಚ್ಚಿನ ಹಣ ಗಳಿಸುತ್ತಾರೆ. ಒಂದು ಕ್ಷಣ ಇರುವ ಮನಸ್ಥಿತಿ ಮತ್ತೆ ಇರುವುದಿಲ್ಲ. ಸದಾಕಾಲ ಕ್ರಿಯಾಶೀಲತೆಯಿಂದ ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಇವರಿಗೆ ರಾಜಕೀಯದಲ್ಲಿ ಆಸಕ್ತಿ ಇದ್ದರೆ ಉತ್ತಮ ಅವಕಾಶವನ್ನು ತಾನಾಗಿಯೇ ಬರುತ್ತದೆ.

ತಾವಿರುವ ಮನೆಯನ್ನು ಪದೇಪದೇ ನವೀಕರಿಸುವುದು ಇವರ ಹವ್ಯಾಸವಾಗುತ್ತದೆ. ವಾಹನಗಳನ್ನು ಸಹ ಒಂದಿಷ್ಟು ಅವಧಿಯ ನಂತರ ಬದಲಾಯಿಸುವುದು ಇವರಿಗೆ ಖುಷಿ ಕೊಡುವ ವಿಚಾರ. ಒಟ್ಟಾರೆ ಜೀವನದಲ್ಲಿ ಸದಾ ಹೊಸತನವನ್ನು ಎದುರು ನೋಡುತ್ತಾರೆ. ಕೇವಲ ಬಾಹ್ಯ ಸೌಂದರ್ಯವನ್ನು ಮೆಚ್ಚುವುದಲ್ಲದೆ ಜನರ ಆತ್ಮಾವಲೋಕನವನ್ನು ಮಾಡಿ ಅವರ ಜೊತೆ ಸ್ನೇಹ ಸಂಬಂಧ ಬೆಳೆಸುತ್ತಾರೆ. ಇವರ ಮನಸ್ಸನ್ನು ಗೆಲ್ಲುವುದು ಸುಲಭದ ಮಾತಲ್ಲ. ಮೊದಲು ಜನರಿಂದ ಗೌರವವನ್ನು ನಿರೀಕ್ಷಿಸುತ್ತಾರೆ. ಆನಂತರ ಅವರನ್ನು ಗೌರವಿಸುತ್ತಾರೆ. ಇದರಿಂದಾಗಿ ಇವರಿಗೆ ಸಮಾಜದಲ್ಲಿನ ನಾಯಕತ್ವ ದೊರೆಯುತ್ತದೆ.

ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ

ಕುಟುಂಬದ ಜವಾಬ್ದಾರಿಯನ್ನು ತಾವಾಗಿಯೇ ಒಪ್ಪಿಕೊಳ್ಳುತ್ತಾರೆ. ಯಾರನ್ನೂ ಅವಲಂಬಿಸದೆ ಸ್ವತಂತ್ರವಾಗಿ ಜೀವನ ನಡೆಸಲು ಬಯಸಿದರೂ ಅದು ಸಾಧ್ಯವಾಗುವುದಿಲ್ಲ. ನೆರೆಹೊರೆಯವರು ಅಥವಾ ಸೋದರ ಸೋದರಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು ಇವರಿಗೆ ಬಲು ಸುಲಭ. ಪ್ರತಿಯೊಬ್ಬರನ್ನು ಗೌರವಿಸುವ ದೊಡ್ಡ ಮನಸು ಇವರದ್ದಾಗಿರುತ್ತದೆ. ಆದರೆ ಇವರಿಗೆ ಗೌರವಕ್ಕೆ ಹಾನಿ ಮಾಡುವ ಯಾವುದೇ ಘಟನೆಗಳನ್ನು ಸಹಿಸುವುದಿಲ್ಲ. ಇವರದ್ದು ನೇರವಾದ ನಡೆ-ನುಡಿ. ಈ ಕಾರಣದಿಂದ ಶತ್ರುಗಳು ಹೆಚ್ಚಾಗಿರುತ್ತಾರೆ. 

ಅಪಾಯವನ್ನು ಗ್ರಹಿಸಿದರೆ ಅದರಿಂದ ಪಾರಾಗಲು ಉಪಾಯ ಮಾಡುವವರಲ್ಲಿ ಇವರೇ ಮೊದಲಿಗರು. ಪ್ರೀತಿ ವಿಶ್ವಾಸದ ವಿಚಾರದಲ್ಲಿ ಸೋಲುವುದಿಲ್ಲ. ಎಲ್ಲರನ್ನೂ ತಮ್ಮ ಸ್ನೇಹಿತರು ಅಥವಾ ಆಪ್ತರೆಂದು ಒಪ್ಪಿಕೊಳ್ಳುವುದಿಲ್ಲ. ಇವರ ಕಾರ್ಯದಕ್ಷತೆಗೆ ವಿರೋಧಿಗಳೇ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇವರಲ್ಲಿರುವ ಒಂದು ಋಣಾತ್ಮಕ ಗುಣವೆಂದರೆ ಸುಲಭವಾಗಿ ಯಾರನ್ನು ನಂಬುವುದಿಲ್ಲ. ಇದರಿಂದಾಗಿ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ.

ನಂಬಿದವರಿಗೆ ಮೋಸ ಮಾಡದ ವ್ಯಕ್ತಿತ್ವ

ಜೀವನವನ್ನು ಒಂದು ನಿರ್ದಿಷ್ಟವಾದ ಪಥದಲ್ಲಿ ನಡೆಸಿಕೊಂಡು ಹೋಗುವುದರಲ್ಲಿ ಯಶಸ್ವಿಯಾಗುತ್ತಾರೆ. ಇವರಲ್ಲಿರುವ ವಿಶೇಷ ಪ್ರತಿಭೆಗೆ ತಕ್ಕ ವೇದಿಕೆ ದೊರೆಯುವುದಿಲ್ಲ. ಆದರೂ ಜನಪ್ರಿಯತೆಗೆ ಕೊರತೆ ಇರುವುದಿಲ್ಲ . ಸಂಸಾರದಲ್ಲಿ ಸದಾಕಾಲ ಸಂತೋಷದ ವಾತಾವರಣ ಇರುತ್ತದೆ. ಹಾದಿ ತಪ್ಪಿದವರ ಜೀವನವನ್ನು ಸರಿದಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇವರನ್ನು ನಂಬಿದವರಿಗೆ ಎಂದಿಗೂ ಮೋಸ ಮಾಡುವುದಿಲ್ಲ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.