ಧನಸ್ಸು, ಮಕರ, ಕುಂಭ, ಮೀನ; ಯಾವ ರಾಶಿಯವರಿಗೆ ವಿರೋಧಿಗಳು ಹೆಚ್ಚು, ವೈರಿಗಳ ಕಾಟದಿಂದ ಮುಕ್ತಿ ಹೊಂದಲು ಪರಿಹಾರವೇನು?
ಜೀವನದಲ್ಲಿ ಪ್ರತಿಯೊಬ್ಬರನ್ನೂ ಮೆಚ್ಚಿಸುವುದು ಅಸಾಧ್ಯದ ಮಾತು. ಹತ್ತು ಜನರಲ್ಲಿ 9 ಮಂದಿ ನಮ್ಮನ್ನು ಮೆಚ್ಚಿದರೆ, ಒಬ್ಬರಾದರೂ ನಮ್ಮನ್ನು, ನಮ್ಮ ಕೆಲಸವನ್ನು ವಿರೋಧಿಸುತ್ತಾರೆ. ಕೆಲವೊಮ್ಮೆ ಇವರು ನಮಗೆ ತೊಂದರೆ ನೀಡುವುದೂ ಉಂಟು. ರಾಶಿಚಕ್ರದ ಪ್ರಕಾರ ಯಾವ ರಾಶಿಯರಿಗೆ ಶತ್ರುಗಳು ಹೆಚ್ಚು ಅದಕ್ಕೆ ಪರಿಹಾರವೇನು ನೋಡೋಣ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಶತ್ರುಗಳಿಂದ ಏನಾದರೂ ಸಮಸ್ಯೆ ಆಗುವುದಾ? ಹೌದು ಎಂದಾದಲ್ಲಿ ವೈರಿಗಳಿಂದ ಆಗುವ ತೊಂದರೆಗಳಿಂದ ಪಾರಾಗಲು ಏನು ಪರಿಹಾರ ಕೈಗೊಳ್ಳಬೇಕು? ಇಲ್ಲಿದೆ ಮಾಹಿತಿ.
ಧನಸ್ಸು ರಾಶಿ
ಧನಸ್ಸು ರಾಶಿ ಅಥವಾ ಧನುರ್ ಲಗ್ನದಲ್ಲಿ ಜನಿಸಿದವರಿಗೆ ತಾಳ್ಮೆ ಹೆಚ್ಚು. ಆದರೆ ಇವರ ಮನಸ್ಸಿಗೆ ಬೇಸರವಾದ ತಕ್ಷಣ ಕೋಪವು ಹೆಚ್ಚುತ್ತದೆ. ಈ ಕಾರಣದಿಂದಾಗಿ ಇವರಿಗೆ ವಿರೋಧಿಗಳು ಹೆಚ್ಚಾಗಿರುತ್ತಾರೆ. ಆದರೆ ಅವರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಸಾಮಾನ್ಯವಾಗಿ ಇವರಿಗೆ ಹಣಕಾಸಿನ ವಿಚಾರದಲ್ಲಿ ವಿರೋಧಿಗಳು ಉಂಟಾಗುತ್ತಾರೆ. ಖರ್ಚು ವೆಚ್ಚಗಳು ಹೆಚ್ಚಾದಾಗ ಕುಟುಂಬದಲ್ಲೇ ವಿರೋಧಿಗಳು ಉದ್ಭವಿಸಬಹುದು. ಆದ್ದರಿಂದ ಎಚ್ಚರಿಕೆಯಿಂದ ಇರಬೇಕು. ಇವರಿಗೆ ತಂದೆಯ ಸಂಬಂಧದಲ್ಲಿ ಉತ್ತಮ ಜನರ ಸಖ್ಯ ದೊರೆಯುವುದಿಲ್ಲ. ನಿಮ್ಮ ಸ್ಥಿರವಲ್ಲದ ಮನಸ್ಥಿತಿಯು ಕೆಲವರಲ್ಲಿ ಬೇಸರ ಉಂಟುಮಾಡುತ್ತದೆ. ಇವರೇ ವಿರೋಧಿಗಳಾಗಿ ಬದಲಾಗುತ್ತಾರೆ.
ಪರಿಹಾರ: ಪ್ರತಿದಿನ ವಿಷ್ಣುವಿಗೆ ಸಂಬಂಧಪಟ್ಟ ಮಂತ್ರಗಳನ್ನು ಪಠಿಸುವುದರಿಂದ ವಿರೋಧಿಗಳು ನಿಮಗೆ ಸೋಲುತ್ತಾರೆ. ಶ್ರೀ ಸೂರ್ಯನ ಪೂಜೆಯಿಂದ ನಿಮ್ಮ ಆತ್ಮವಿಶ್ವಾಸವು ಹೆಚ್ಚುತ್ತದೆ. ಪ್ರತಿ ಗುರುವಾರ ಗುರುಗಳ ದೇವಾಲಯಕ್ಕೆ ಭೇಟಿ ನೀಡುವುದರಿಂದ ಹಣಕಾಸಿನ ತೊಂದರೆಇರುವುದಿಲ್ಲ. ಹೀಗೆ ಮಾಡಿದರೆ ವಿರೋಧಿಗಳು ಇವರಿಗೆ ಸೋಲುತ್ತಾರೆ. ಧಾರ್ಮಿಕ ಕೇಂದ್ರಕ್ಕೆ ನೀಲಿ ಬಣ್ಣದ ವಸ್ತ್ರವನ್ನು ನೀಡುವುದು ಒಳ್ಳೆಯದು.
ಮಕರ ರಾಶಿ
ಮಕರ ರಾಶಿ ಅಥವಾ ಮಕರ ಲಗ್ನದಲ್ಲಿ ಜನಿಸಿದವರು ತಮ್ಮ ದುಡುಕಿನ ಮಾತುಕತೆಯಿಂದ ಜನರ ವಿರೋಧ ಕಟ್ಟಿಕೊಳ್ಳುತ್ತಾರೆ. ಸಾಮಾನ್ಯವಾಗಿ ಇವರು ಬೇರೊಬ್ಬರ ಅಧೀನದಲ್ಲಿ ಕೆಲಸ ನಿರ್ವಹಿಸುತ್ತಾರೆ. ಇಂತಹ ಸಂದರ್ಭದಲ್ಲಿ ಇವರ ಹಿರಿಯ ಅಧಿಕಾರಿಗಳು ಬೇರೆಯವರ ಚಾಡಿ ಮಾತುಗಳನ್ನು ಕೇಳಿ ಇವರ ಮೇಲೆ ವೈರತ್ವ ಬೆಳೆಸಿಕೊಳ್ಳುತ್ತಾರೆ. ಒಂದು ವೇಳೆ ಇವರೇ ಅಧಿಕಾರಿಗಳಾದಲ್ಲಿ ತಮ್ಮ ಅಧೀನದಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಭಾವನೆಗಳಿಗೆ ಬೆಲೆ ನೀಡುವುದಿಲ್ಲ. ಇದರಿಂದ ಇವರ ಸಹೋದ್ಯೋಗಿಗಳೇ ಇವರ ವಿರೋಧಿಗಳಾಗುತ್ತಾರೆ. ಮೊದಲಿಗೆ ಇವರು ತಮ್ಮ ಮಾತಿನ ಧಾಟಿಯನ್ನು ಬದಲಿಸಿಕೊಳ್ಳಬೇಕು. ದುದುಕುತನದಿಂದ ಮಾಡುವ ತಪ್ಪಿನಿಂದ ಇವರು ತೊಂದರೆಗೆ ಒಳಗಾಗುತ್ತಾರೆ. ಇವರ ಒಳ್ಳೆಯ ಮನಸ್ಸಿಗೆ ತಕ್ಕಂತ ಜನರು ಸಿಗುವುದು ಕಷ್ಟ. ಹೊಂದಿಕೊಂಡು ಬಾಳುವುದೊಂದೇ ಇವರಿಗಿರುವ ಏಕೈಕ ದಾರಿ. ಇವರ ತಾಯಿಯ ಆಶೀರ್ವಾದವು ಇವರನ್ನು ಸದಾ ಕಾಲ ಕಾಪಾಡುತ್ತದೆ. ಇವರಿಗೆ ಪುರುಷರಿಗಿಂತ ಸ್ತ್ರೀಯರೇ ವಿರೋಧಿಗಳಾಗುತ್ತಾರೆ.
ಪರಿಹಾರ: ಮಂಜುನಾಥ ಸ್ವಾಮಿಯ ಪೂಜೆ ಮಾಡಿದಷ್ಟು ಇವರಿಗೆ ಒಳ್ಳೆಯದಾಗುತ್ತದೆ. ವಿರೋಧಿಗಳ ಕಾಟ ಕಡಿಮೆಯಾಗುತ್ತದೆ. ಇವರ ಕುಲದೇವರ ಆರಾಧನೆಯಿಂದ ವಿರೋಧಿಗಳ ಜೊತೆ ಸ್ನೇಹವೂ ಬೆಳೆಯುತ್ತದೆ. ಸಾಧ್ಯವಾದಷ್ಟು ಇವರು ಹಸಿರು ಮತ್ತು ಹಾಲಿನ ಬಣ್ಣ ಬಳಸಬಾರದು. ಧಾರ್ಮಿಕ ಕೇಂದ್ರಕ್ಕೆ ಹಾಲು. ಅಕ್ಕಿ, ಬೆಲ್ಲ ಹಾಗೂ ಬೇಳೆಯನ್ನು ನೀಡುವುದರಿಂದ ವಿರೋಧಿಗಳ ತೊಂದರೆಯಿಂದ ಪಾರಾಗಬಹುದು.
ಕುಂಭ ರಾಶಿ
ಸಾಮಾನ್ಯವಾಗಿ ಕುಂಭ ಲಗ್ನ ಅಥವಾ ಕುಂಭ ರಾಶಿಯಲ್ಲಿ ಜನಿಸಿದವರು ಮೌನಿಗಳಾಗಿರುತ್ತಾರೆ. ತಮ್ಮ ಮನದಲ್ಲಿರುವ ವಿಚಾರವನ್ನು ಸುಲಭವಾಗಿ ಯಾರಲ್ಲಿಯೂ ಹೇಳಿಕೊಳ್ಳುವುದಿಲ್ಲ. ಬುದ್ಧಿವಂತರಾದರೂ ಸಮಯ ಬಂದಾಗ ತಟಸ್ಥರಾಗುವಿರಿ. ಈ ಕಾರಣದಿಂದ ಸುಳ್ಳು ಹೇಳಿಯಾದರೂ ಇವರಿಂದ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುವ ಜನರು ಸುತ್ತಮುತ್ತಲಿರುತ್ತಾರೆ. ಕೇವಲ ಎಚ್ಚರಿಕೆಯಿಂದ ಇರುವುದೊಂದೇ ಇವರ ಪಾಲಿಗೆ ಇರುವ ಮಾರ್ಗ. ಇವರ ಬಂಧು ಬಳಗದವರು ಸಹ ಇವರಿಂದ ಸಹಾಯ ಪಡೆದರು ಇವರನ್ನೇ ದೂಷಿಸುತ್ತಾರೆ. ಒಟ್ಟಾರೆ ಕುಂಭ ರಾಶಿಯಲ್ಲಿ ಅಥವಾ ಕುಂಭ ಲಗ್ನದಲ್ಲಿ ಜನಿಸಿದವರಿಗೆ ಬಂಧು ಬಳಗದವರೇ ವಿರೋಧಿಗಳಾಗುತ್ತಾರೆ. ಇವರ ಒಂದು ಅದೃಷ್ಟವೆಂದರೆ ಇವರ ಜೊತೆ ಕೆಲಸ ನಿರ್ವಹಿಸುವವರು ಮತ್ತು ಇವರ ಸ್ನೇಹಿತರಿಂದ ಬಹಳ ಪ್ರೋತ್ಸಾಹ ಬೆಂಬಲ ದೊರೆಯುತ್ತದೆ. ಆದರೂ ವಿರೋಧಿಗಳಿಂದ ಇವರಿಗಾಗುವ ನಷ್ಟವೇ ಅಪಾರ. ಆದ್ದರಿಂದ ಮೊದಲು ಇವರು ಯಾರನ್ನೂ ಸುಲಭವಾಗಿ ನಂಬಬಾರದು.
ಪರಿಹಾರ: ಶ್ರೀ ಸುದರ್ಶನ ಪೂಜೆ ಅಥವಾ ಸುದರ್ಶನ ಮಂತ್ರದ ಜಪ ಮಾಡುವುದರಿಂದ ವಿರೋಧಿಗಳು ಶಕ್ತಿಹೀನರಾಗುತ್ತಾರೆ. ತಮ್ಮ ಹಿರಿಯ ಅಧಿಕಾರಿಗಳ ಬಗ್ಗೆ ತಪ್ಪು ಮಾತನಾಡದೆ ಇರುವುದು ಒಳ್ಳೆಯದು. ವಯೋವೃದ್ಧರಿಗೆ ಸಹಾಯ ಮಾಡುವುದರಿಂದ ಮತ್ತು ಧಾರ್ಮಿಕ ಕೇಂದ್ರಕ್ಕೆ ಕೆಂಪು ಬಟ್ಟೆ ದಾನ ನೀಡುವುದರಿಂದ ವಿರೋಧಿಗಳ ಪ್ರಾಬಲ್ಯತೆ ಕಡಿಮೆಯಾಗುತ್ತದೆ. ತಂದೆಯವರ ಆಶೀರ್ವಾದ ಇವರಿಗೆ ಬಹು ಮುಖ್ಯವಾಗುತ್ತದೆ.
ಮೀನ ರಾಶಿ
ಮೀನ ಲಗ್ನ ಅಥವಾ ಮೀನ ರಾಶಿಯವರು ಸದಾ ಕಾಲ ತಮ್ಮ ಬಗ್ಗೆ ಯೋಚನೆ ಮಾಡುತ್ತಾರೆ. ಪ್ರತಿಯೊಂದು ಸಮಯದಲ್ಲಿಯೂ ತಮ್ಮ ಮಾತಿಗೆ ಪ್ರಾಶಸ್ತ್ಯ ಕೊಡಬೇಕೆಂದು ಬಯಸುತ್ತಾರೆ. ಒಂದು ವೇಳೆ ಇದು ಸಾಧ್ಯವಾಗದೆ ಹೋದಲ್ಲಿ ಬಹಳ ನಿರಾಸೆಗೆ ಒಳಗಾಗುತ್ತಾರೆ. ನಂತರ ನಿರಾಸೆ ಕೋಪವಾಗಿ ಪರಿವರ್ತನೆ ಯಾಗುತ್ತದೆ. ಈ ಕಾರಣದಿಂದ ಇವರಿಗೆ ವೈರಿಗಳು ಹೆಚ್ಚಾಗಿರುತ್ತಾರೆ. ಕುಟುಂಬದಲ್ಲಿನ ಸದಸ್ಯರೇ ಇವರ ಮೊದಲ ವಿರೋಧಿಗಳು. ಬಂಧು ಬಳಗದವರು ಎದುರಲ್ಲಿ ಇವರ ಬಗ್ಗೆ ಒಳ್ಳೆಯ ಮಾತು ಆಡಿದರೂ ಬೆನ್ನ ಹಿಂದೆ ಇವರಿಗೆ ತೊಂದರೆ ನೀಡಲು ಸಮಯ ಕಾಯುತ್ತಾರೆ. ಪ್ರತ್ಯಕ್ಷವಾಗಿ ಅಲ್ಲದೆ ಹೋದರೂ ಪರೋಕ್ಷವಾಗಿ ಇವರ ಮನಸ್ಸಿಗೆ ನೋವನ್ನು ಉಂಟು ಮಾಡುತ್ತಾರೆ. ಇವರಲ್ಲಿನ ಅಪಾರವಾದ ಜ್ಞಾನ ಸಂಪತ್ತನ್ನು ಸರಿಯಾಗಿ ಬಳಸಿಕೊಳ್ಳುವುದಿಲ್ಲ. ಆ ವೇಳೆಯಲ್ಲಿ ಕಟು ಟೀಕೆಗೆ ಒಳಗಾಗುತ್ತಾರೆ. ಅತಿಯಾಗಿ ಯೋಚನೆ ಮಾಡುವುದು ಕೂಡಾ ಇವರನ್ನು ಶತ್ರುವಾಗಿ ಕಾಡುತ್ತದೆ.
ಪರಿಹಾರ: ವಿಷ್ಣು ಸಹಸ್ರನಾಮ ಕೇಳುವುದರಿಂದ ವಿರೋಧಿಗಳ ಮನಸ್ಸು ಬದಲಾಗುತ್ತದೆ. ಪ್ರತಿ ಹುಣ್ಣಿಮೆ ದಿನ ಶ್ರೀ ಸತ್ಯನಾರಾಯಣ ಪೂಜೆ ಮಾಡಿದರೆ ವಿರೋಧಿಗಳೊಂದಿಗೆ ಸ್ನೇಹ ಉಂಟಾಗುತ್ತದೆ. ಹಸಿರು ಮತ್ತು ನೀಲಿ ಬಟ್ಟೆಗಳನ್ನು ದಾನ ನೀಡಿದಲ್ಲಿ ಶುಭಫಲ ದೊರೆಯುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).