ಯಾವ ರಾಶಿಯವರಿಗೆ ವಿರೋಧಿಗಳು ಹೆಚ್ಚು? ಶತ್ರುಗಳನ್ನು ಗೆಲ್ಲಲು ಜ್ಯೋತಿಷ್ಯಶಾಸ್ತ್ರದಲ್ಲಿ ಏನು ಪರಿಹಾರಗಳಿವೆ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಯಾವ ರಾಶಿಯವರಿಗೆ ವಿರೋಧಿಗಳು ಹೆಚ್ಚು? ಶತ್ರುಗಳನ್ನು ಗೆಲ್ಲಲು ಜ್ಯೋತಿಷ್ಯಶಾಸ್ತ್ರದಲ್ಲಿ ಏನು ಪರಿಹಾರಗಳಿವೆ?

ಯಾವ ರಾಶಿಯವರಿಗೆ ವಿರೋಧಿಗಳು ಹೆಚ್ಚು? ಶತ್ರುಗಳನ್ನು ಗೆಲ್ಲಲು ಜ್ಯೋತಿಷ್ಯಶಾಸ್ತ್ರದಲ್ಲಿ ಏನು ಪರಿಹಾರಗಳಿವೆ?

ಜೀವನದಲ್ಲಿ ನಮ್ಮ ವರ್ತನೆಯಿಂದ ಪ್ರತಿಯೊಬ್ಬರನ್ನೂ ಮೆಚ್ಚಿಸುವುದು ಅಸಾಧ್ಯದ ಮಾತು. 10 ಜನರಲ್ಲಿ ಒಂಭತ್ತು ಮಂದಿ ನಮ್ಮನ್ನು ಮೆಚ್ಚಿದರೆ, ಒಬ್ಬರಾದರೂ ನಮ್ಮನ್ನು, ನಮ್ಮ ಕೆಲಸ, ಮಾತುಗಳನ್ನು ವಿರೋಧಿಸುತ್ತಾರೆ. ಕೆಲವೊಮ್ಮೆ ಇವರು ನಮಗೆ ತೊಂದರೆ ನೀಡುವುದೂ ಉಂಟು. ರಾಶಿಚಕ್ರದ ಪ್ರಕಾರ ಯಾವ ರಾಶಿಯರಿಗೆ ಶತ್ರುಗಳು ಹೆಚ್ಚು ಅದಕ್ಕೆ ಪರಿಹಾರವೇನು ನೋಡೋಣ.

ಯಾವ ರಾಶಿಯವರಿಗೆ ವಿರೋಧಿಗಳು ಹೆಚ್ಚು? ಶತ್ರುಗಳನ್ನು ಗೆಲ್ಲಲು ಜ್ಯೋತಿಷ್ಯಶಾಸ್ತ್ರದಲ್ಲಿ ಏನು ಪರಿಹಾರಗಳಿವೆ?
ಯಾವ ರಾಶಿಯವರಿಗೆ ವಿರೋಧಿಗಳು ಹೆಚ್ಚು? ಶತ್ರುಗಳನ್ನು ಗೆಲ್ಲಲು ಜ್ಯೋತಿಷ್ಯಶಾಸ್ತ್ರದಲ್ಲಿ ಏನು ಪರಿಹಾರಗಳಿವೆ?

ಎಷ್ಟೇ ಒಳ್ಳೆತನ ಇದ್ದರೂ ಅವರನ್ನು ವಿರೋಧಿಸುವ ಒಬ್ಬರಾದರೂ ಪ್ರಪಂಚದಲ್ಲಿ ಇದ್ದೇ ಇರುತ್ತಾರೆ. ಕೆಲವೊಮ್ಮೆ ಇವರಿಗೆ ಶತ್ರುಗಳು ಎಂಬ ಋಣಾತ್ಮಕ ಪದ ಬಳಸಲಾಗುತ್ತದೆ. ಆದರೆ ಕಲ್ಲಲ್ಲಿ ಹೊಡೆಯುವವರಿಗೆ ಹೂವಿನಿಂದ ಹೊಡೆ ಎಂಬ ಮಾತು ಇದೆ. ಆದ್ದರಿಂದ ಆದ್ದರಿಂದ ಜೀವನದಲ್ಲಿ ಎದುರಾಗುವ ಯಾವುದೇ ಹಿನ್ನೆಡೆಯಲ್ಲಿ ಬೇರೆಯವರನ್ನು ಗುರಿ ಮಾಡದೆ ನಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವುದು ಬಹು ಮುಖ್ಯ. ಈ ವಿಚಾರವನ್ನು ಲಗ್ನ ಮತ್ತು ರಾಶಿಗಳಿಂದ ತಿಳಿಯಬಹುದು. ಜ್ಯೋತಿಷ್ಯದ ಶಾಸ್ತ್ರಗಳ ಪ್ರಕಾರ ರಾಶಿಗಿಂತಲೂ ಲಗ್ನವೇ ಮುಖ್ಯವಾಗುತ್ತದೆ.

ಮೇಷ ರಾಶಿ

ಮೇಷ ರಾಶಿಯವರು ಸಾಮಾನ್ಯವಾಗಿ ಕ್ರಿಯಾಶೀಲ ಗುಣವನ್ನು ಹೊಂದಿರುತ್ತಾರೆ. ಇವರಿಗೆ ಮುಂಗೋಪವಿರುತ್ತದೆ. ಸಾಮಾನ್ಯವಾಗಿ ಇವರಿಗೆ ಶತ್ರುಗಳು ಕಡಿಮೆ. ಯಾರೊಂದಿಗೂ ವಿವಾದಕ್ಕೆ ಆಸ್ಪದ ಕೊಡದ ಇವರು ಬುದ್ಧಿವಂತಿಕೆಯ ಮಾತಿನಿಂದ ವಿರೋಧಿಗಳನ್ನು ಸರಿ ದಾರಿಗೆ ತರುತ್ತಾರೆ. ಒಂದು ವೇಳೆ ವಿರೋಧಿಗಳು ಅಧಿಕವಾದಲ್ಲಿ ಹತ್ತು ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಮಡಿಲು ತುಂಬುವ ಪದಾರ್ಥಗಳನ್ನು ನೀಡಬೇಕು. ಬೆಳ್ಳಿ ಲೋಟದಲ್ಲಿ ನೀರು ಅಥವಾ ಹಾಲನ್ನು ಕುಡಿಯಬೇಕು. ಮುಖ್ಯವಾಗಿ ತಾಯಿಯವರ ಮನಸ್ಸನ್ನು ನೋಯಿಸಬಾರದು. ಇದರಿಂದ ಮೇಷ ರಾಶಿಯವರಿಗೆ ವಿರೋಧಿಗಳಿದ್ದರೂ ಅವರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಶತ್ರುತ್ವವನ್ನು ಮರೆತು ಮಿತ್ರರಾಗಿ ಬದಲಾಗುತ್ತಾರೆ.

ವೃಷಭ ರಾಶಿ

ವೃಷಭ ರಾಶಿಯವರು ಯಾವುದೇ ಬದಲಾವಣೆಯನ್ನು ಅರಗಿಸಿಕೊಳ್ಳುವುದಿಲ್ಲ. ತಮ್ಮ ಸುಖ-ಶಾಂತಿಗೆ ಅಡ್ಡಿಯಾಗುವ ಸನ್ನಿವೇಶ ಎದುರಾದಲ್ಲಿ ಸಹನೆಯನ್ನು ಕಳೆದುಕೊಳ್ಳುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಅತಿ ಕಠೋರವಾದಂತಹ ಮಾತುಗಳನ್ನು ಆಡುತ್ತಾರೆ. ಆದರೆ ಇವರಲ್ಲಿನ ಸಿಡುಕುತನ ಬಹುಕಾಲ ನಿಲ್ಲುವುದಿಲ್ಲ. ವಿರೋಧಿಗಳಲ್ಲಿರುವ ತಪ್ಪು ಅಭಿಪ್ರಾಯವನ್ನು ಪರಿಹರಿಸುತ್ತಾರೆ. ಆದರೆ ಇವರಲ್ಲಿ ಕ್ಷಮಾಗುಣ ಇರುವುದಿಲ್ಲ. ಸಾಮಾನ್ಯವಾಗಿ ಈ ರಾಶಿಯವರು ಹಣಕಾಸಿನ ವಿಚಾರದಿಂದ ವಿರೋಧ ಎದುರಿಸಬೇಕಾಗುತ್ತದೆ. ಇವರ ಜೀವನದಲ್ಲಿಯೂ ಸಹ ಇವರ ವಿರೋಧಿಗಳು ಸ್ನೇಹಿತರಾಗಿ ಮಾರ್ಪಡುತ್ತಾರೆ. ಒಂದು ವೇಳೆ ಸ್ನೇಹಿತರಾಗದೆ ಹೋದರೂ ಅವರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಈ ರಾಶಿ ಅಥವಾ ಲಗ್ನದಲ್ಲಿ ಜನಿಸಿದವರಿಗೆ ಭೂ ವಿವಾದದಿಂದ ಶತ್ರುತ್ವ ಉಂಟಾಗುತ್ತದೆ. ತಂದೆಯ ಆಶೀರ್ವಾದ ಇವರಿಗೆ ಉತ್ತಮ ಫಲವನ್ನು ನೀಡುತ್ತದೆ. ಧಾರ್ಮಿಕ ಕೇಂದ್ರಕ್ಕೆ ಕೆಂಪು ಬಟ್ಟೆಯನ್ನು ನೀಡುವುದರಿಂದ ವಿರೋಧಿಗಳ ಮನಸ್ಸು ಬದಲಾಗುತ್ತದೆ. ಬಡ ರೋಗಿಗಳಿಗೆ ಹಣದ ಸಹಾಯ ಮಾಡುವುದರಿಂದ ಇವರು ಶುಭಫಲಗಳನ್ನು ಪಡೆಯುತ್ತಾರೆ.

ಮಿಥುನ ರಾಶಿ

ಈ ರಾಶಿಯವರು ಕಾರ್ಯ ವಿಧಾನದಿಂದ ವಿರೋಧಿಗಳನ್ನು ಹೆಚ್ಚಿಸಿಕೊಳ್ಳುತ್ತಾರೆ. ಕೆಲಸ ಕಾರ್ಯಗಳ ಮಧ್ಯಸ್ಥಿಕೆಯಲ್ಲಿ ತೊಂದರೆಯೂ ಉಂಟಾಗುತ್ತದೆ. ತಾಯಿಯ ಆಸ್ತಿಯ ವಿಚಾರದಲ್ಲಿಯೂ ಸಂಬಂಧಿತರಿಂದಲೇ ವಿರೋಧ ಎದುರಿಸುತ್ತಾರೆ. ಮಿಥುನ ರಾಶಿಯಲ್ಲಿ ಜನಿಸಿದವರಿಗೆ ಸ್ಥಿರವಾದ ಚಿಂತನೆ ಇರುವುದಿಲ್ಲ ಎನ್ನುವುದು ಒಂದು ಪ್ರಮುಖ ವಿಚಾರ. ಇವರು ಸಾಮಾನ್ಯವಾಗಿ ಯಾರ ಬಗ್ಗೆಯೂ ನಿರ್ದಿಷ್ಟವಾದ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಇದೇ ರೀತಿ ಇವರ ವಿರೋಧಿಗಳು ಸಹ ದೀರ್ಘಕಾಲ ಶತ್ರುತ್ವವನ್ನು ಸಾಧಿಸುವುದಿಲ್ಲ. ಒಳ್ಳೆಯ ಸಮಯ ಬಂದಾಗ ಗುರುಗಳ ಮಧ್ಯಸ್ಥಿಕೆಯಿಂದ ಪ್ರೀತಿ ವಿಶ್ವಾಸ ಮರುಕಳಿಸುತ್ತದೆ. ಧಾರ್ಮಿಕ ಕೇಂದ್ರಕ್ಕೆ ಹಳದಿ ಅಥವಾ ಕೇಸರಿ ಬಟ್ಟೆಯನ್ನು ನೀಡುವುದರಿಂದ ಶುಭ ಫಲಗಳನ್ನು ಪಡೆಯಬಹುದು. ಸೋದರ ಮಾವನ ಮಧ್ಯಸ್ಥಿಕೆಯಿಂದ ವಿರೋಧಿಗಳು ಸೋಲನ್ನು ಒಪ್ಪಿಕೊಳ್ಳುತ್ತಾರೆ.

ಕಟಕ ರಾಶಿ

ಕಟಕ ರಾಶಿಯವರ ಮನಸ್ಸು ಹರಿವ ನೀರಿನಂತೆ. ಇವರು ಒಂದೇ ರೀತಿಯ ಜೀವನವನ್ನು ಇಷ್ಟಪಡುವುದಿಲ್ಲ. ಸದಾಕಾಲ ಉತ್ತಮ ಬದಲಾವಣೆಗಳನ್ನು ನಿರೀಕ್ಷಿಸುತ್ತಾರೆ.ಇವರ ಹಾವಭಾವದಲ್ಲಿ ಪ್ರೀತಿ ವಿಶ್ವಾಸ ಕಂಡುಬರುತ್ತದೆ. ಆದರೆ ಇವರ ಮನಸ್ಸಿನಲ್ಲಿ ದ್ವೇಷದ ಭಾವನೆ ಇರುತ್ತದೆ. ಸಮಯ ಬಂದಾಗ ಸಿಡುಕಿನಿಂದ ಉದ್ವೇಗದಿಂದ ಮಾತುಗಳನ್ನು ಆಡುತ್ತಾರೆ. ಸುಲಭವಾಗಿ ಇವರ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ. ಇವರ ವಿರೋಧಿಗಳು ಕೆಲಸ ಕಾರ್ಯಗಳಲ್ಲಿ ಅತಿ ನಿಧಾನತೆಯನ್ನು ತೋರುತ್ತಾರೆ. ಇಂತಹ ರೀತಿ ನೀತಿಯನ್ನು ಕಟಕ ರಾಶಿಯವರು ವಿರೋಧಿಸುತ್ತಾರೆ. ಆದ್ದರಿಂದ ಸಾಮಾನ್ಯವಾಗಿ ಇವರಿಗೆ ಉದ್ಯೋಗ ಕ್ಷೇತ್ರದಲ್ಲಿ ವಿರೋಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಆದರೆ ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಪ್ರೀತಿ ವಿಶ್ವಾಸ ಗೌರವದಿಂದ ನಡೆಸಿಕೊಂಡರೆ ವಿರೋಧಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಇದರೊಂದಿಗೆ ಆಂಜನೇಯ ಸ್ವಾಮಿಯ ಪೂಜೆಯಿಂದ ಶುಭಫಲಗಳು ದೊರೆಯುತ್ತವೆ. ಹೆಣ್ಣು ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡುವುದರಿಂದ ಧನಾತ್ಮಕ ಫಲಗಳನ್ನು ಪಡೆಯಬಹುದು.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.