ಮಹಾಭಾರತ ಕಥೆಗಳು: ಸತ್ಯವತಿಯನ್ನು ಮದುವೆ ಮಾಡಿಕೊಡಲು ತಂದೆ ದಶರಾಜ ಹಸ್ತಿನಾಪುರದ ಮಹಾರಾಜ ಶಂತನುವಿಗೆ ವಿಧಿಸಿದ ಷರತ್ತುಗಳೇನು?-indian mythology what is dasharaja condition to give daughter satyavati to shantanu maharaja mahabharata stories rsm ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಹಾಭಾರತ ಕಥೆಗಳು: ಸತ್ಯವತಿಯನ್ನು ಮದುವೆ ಮಾಡಿಕೊಡಲು ತಂದೆ ದಶರಾಜ ಹಸ್ತಿನಾಪುರದ ಮಹಾರಾಜ ಶಂತನುವಿಗೆ ವಿಧಿಸಿದ ಷರತ್ತುಗಳೇನು?

ಮಹಾಭಾರತ ಕಥೆಗಳು: ಸತ್ಯವತಿಯನ್ನು ಮದುವೆ ಮಾಡಿಕೊಡಲು ತಂದೆ ದಶರಾಜ ಹಸ್ತಿನಾಪುರದ ಮಹಾರಾಜ ಶಂತನುವಿಗೆ ವಿಧಿಸಿದ ಷರತ್ತುಗಳೇನು?

ಹಸ್ತಿನಾಪುರದ ರಾಜ ಶಂತನು ಮಹಾರಾಜ ಹಾಗೂ ಗಂಗೆಗೆ ಜನಿಸಿದ ಮಗ ಭೀಷ್ಮನ ಮೊದಲ ಹೆಸರು ದೇವವ್ರತ. 8 ಜನ ಪುತ್ರರಲ್ಲಿ ಕೊನೆಯ ಮಗ ದೇವವ್ರತನಿಗೆ ಶಂತನು ಪಟ್ಟಾಭಿಷೇಕ ಮಾಡುತ್ತಾನೆ. ಆದರೆ ತಾನು ಪ್ರೀತಿಸಿದ ಸತ್ಯವತಿಯನ್ನು ಮದುವೆ ಆಗಲು ಆಕೆಯ ತಂದೆ ವಿಧಿಸಿದ ಷರತ್ತು ಕೇಳಿ ಶಂತನು ಚಿಂತೆಗೆ ಒಳಗಾಗುತ್ತಾನೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಮಹಾಭಾರತ ಕಥೆಗಳು: ಸತ್ಯವತಿಯನ್ನು ಮದುವೆ ಮಾಡಿಕೊಡಲು ತಂದೆ ದಶರಾಜ ಹಸ್ತಿನಾಪುರದ ಮಹಾಾಜ ಶಂತನುವಿಗೆ ಹಾಕಿದ ಷರತ್ತುಗಳೇನು?
ಮಹಾಭಾರತ ಕಥೆಗಳು: ಸತ್ಯವತಿಯನ್ನು ಮದುವೆ ಮಾಡಿಕೊಡಲು ತಂದೆ ದಶರಾಜ ಹಸ್ತಿನಾಪುರದ ಮಹಾಾಜ ಶಂತನುವಿಗೆ ಹಾಕಿದ ಷರತ್ತುಗಳೇನು?

ಶಂತನು ಹಾಗೂ ಗಂಗೆಗೆ ಜನಿಸಿದ ಪುತ್ರ ಭೀಷ್ಮ. ಮೊದಲ ಹೆಸರು ದೇವವ್ರತ. ಭೀಷ್ಮನು ಸಕಲ ವಿದ್ಯಾಪಾರಂಗತನಾಗಿ ಪರಶುರಾಮ, ವಶಿಷ್ಟ, ಬೃಹಸ್ಪತಿ ಮತ್ತು ಸನತ್ ಕುಮಾರನಿಗೆ ಸಮನಾಗಿ ಬೆಳೆಯುತ್ತಾನೆ. ದೇವೇಂದ್ರನಿಗೆ ಸರಿ ಸಮಾನವಾಗಿ ಬೆಳೆದ ದೇವವ್ರತನನ್ನು ಕಂಡು ಶಂತನುವಿಗೆ ಅಪಾರ ಸಂತಸವಾಗುತ್ತದೆ. ಅವನನ್ನು ರಾಜ ವೈಭವದೊಂದಿಗೆ ಹಸ್ತಿನಾಪುರಕ್ಕೆ ಕರೆದೊಯ್ಯುತ್ತಾನೆ. ಗುರು ಹಿರಿಯರ ಅಪ್ಪಣೆ ಪಡೆದು ಸಂತೋಷದಿಂದ ಯುವರಾಜನನ್ನಾಗಿ ಪಟ್ಟಾಭಿಷೇಕವನ್ನು ಮಾಡುತ್ತಾನೆ.

ಸತ್ಯವತಿ ಸೌಂದರ್ಯಕ್ಕೆ ಮಾರುಹೋದ ಶಂತನು ಮಹಾರಾಜ

ದೇವವ್ರತ ಯುವರಾಜನ ಅಸಾಧಾರಣ ಪ್ರತಿಭೆ ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಶಂತನು ಸಹ ಹಿಂದಿನ ವಿಚಾರಗಳನ್ನು ಮರೆತು ಮಗನನ್ನು ನೋಡುತ್ತಾ ಸಂತೋಷ ಮತ್ತು ನೆಮ್ಮದಿಯಿಂದ ದಿನ ಕಳೆಯುತ್ತಿರುತ್ತಾನೆ. ದಿನನಿತ್ಯದ ಆಗು ಹೋಗುಗಳಿಗೆ ಮರಳಿದ್ದ ಶಂತನು ಎಲ್ಲರ ಮನಸ್ಸನ್ನು ಗೆಲ್ಲುತ್ತಾನೆ. ಶಂತನು ತನ್ನ ಮನಸ್ಸಿಗಾದ ಬೇಸರವನ್ನು ಕಳೆಯಲು ಪ್ರಕೃತಿಯನ್ನು ಆಸ್ವಾದಿಸಲು ಯಮುನಾ ನದಿಯ ಬಳಿ ಬರುತ್ತಾನೆ. ಆಗ ಆಕಸ್ಮಿಕವಾಗಿ ಸೌಂದರ್ಯವತಿಯೊಬ್ಬಳನ್ನು ಕಾಣುತ್ತಾನೆ. ಅವಳ ಅಂದ ಚಂದಕ್ಕೆ ಒಮ್ಮೆಲೇ ಮಾರು ಹೋಗುತ್ತಾನೆ. ಆ ತರುಣಿಯು ನದಿಯಲ್ಲಿ ದೋಣಿ ವಿಹಾರದಲ್ಲಿ ಮುಳುಗಿರುತ್ತಾಳೆ. ಅವಳನ್ನು ಕುರಿತು ನೀನು ಇಲ್ಲಿ ಏನು ಮಾಡುತ್ತಿರುವೆ. ನಿನ್ನ ತಂದೆ ತಾಯಿ ಯಾರು? ಎಂದು ಶಂತನು ಕೇಳುತ್ತಾನೆ. ಮೊದಲು ಮಾತನಾಡಲು ಹಿಂಜರಿದ ಯೋಜನ ಗಂಧಿಯು ಶಂತನು ಧರಿಸಿದ್ದ ವಸ್ತ್ರ ವೈಡೂರ್ಯಗಳನ್ನು ಕಂಡು ಇವನೊಬ್ಬ ಮಹಾರಾಜನಿರಬೇಕೆಂದು ಊಹಿಸಿ ಮಾತನಾಡಲು ಆರಂಭಿಸುತ್ತಾಳೆ.

ನಮಗೆ ಪರ ಪುರುಷನ ಜೊತೆ ಮಾತನಾಡುವ ಅಭ್ಯಾಸವಿಲ್ಲ. ಕಾರಣ ನಾನೊಬ್ಬ ವಿವಾಹವನ್ನು ಆಗ ಬಯಸುತ್ತಿರುವ ಹೆಣ್ಣು. ಆದರೆ ನೀನೊಬ್ಬ ರಾಜನೆಂಬ ಊಹೆ ನನ್ನಲ್ಲಿದೆ. ಆದ್ದರಿಂದ ನಿನ್ನ ನಡವಳಿಕೆಯು ಇತಿ ಮಿತಿಯಲ್ಲಿ ಇರುತ್ತದೆ ಎಂದು ನಂಬಿದ್ದೇನೆ. ಆದ್ದರಿಂದ ನಿನ್ನೊಡನೆ ಮಾತನಾಡುವೆ. ನನ್ನ ತಂದೆಯ ಹೆಸರು ದಾಶರಾಜ. ನಮ್ಮ ಮನೆಯು ಇದೇ ನದಿಯ ದಡದಲ್ಲಿದೆ. ಯಾವುದೇ ವಿಚಾರ ಮಾತನಾಡುವುದಿದ್ದರೂ ತಂದೆಯೊಂದಿಗೆ ಮಾತನಾಡು ಎಂದು ಹೇಳಿ ಶಂತನುವಿನ ಜೊತೆ ತನ್ನ ಮನೆಯ ಕಡೆ ನಡೆಯುತ್ತಾಳೆ.

ದಶರಾಜ ವಿಧಿಸಿದ ಷರತ್ತು ಏನು?

ಆಕೆಯ ತಂದೆಯನ್ನು ಭೇಟಿ ಮಾಡಿದ ಶಂತನು ತಾನು ಹಸ್ತಿನಾಪುರದ ಮಹಾರಾಜ ಎಂದು ಪರಿಚಯಿಸಿಕೊಳ್ಳುತ್ತಾನೆ. ನಿಮ್ಮ ಮಗಳ ಮೇಲೆ ನನಗೆ ಮನಸ್ಸಾಗಿದೆ. ಈ ಕಾರಣದಿಂದಾಗಿ ನಾನು ಅವಳನ್ನು ವಿವಾಹವಾಗಬೇಕೆಂದು ಬಯಸಿದ್ದೇನೆ. ಈ ವಿಚಾರವಾಗಿ ನಾನು ನಿಮ್ಮಿಂದ ಒಪ್ಪಿಗೆಯನ್ನು ನಿರೀಕ್ಷಿಸುತ್ತೇನೆ ಎನ್ನುತ್ತಾನೆ. ಶಂತನುವಿನ ಈ ಮಾತುಗಳು ದಶರಾಜನಿಗೆ ಸಂತಸವನ್ನು ಉಂಟು ಮಾಡಿದರೂ, ಮಗಳ ಮುಂದಿನ ಜೀವನದ ಬಗ್ಗೆ ಯೋಚನೆ ಉಂಟಾಗುತ್ತದೆ. ವಿವಾಹವಾದ ಬಳಿಕ ತನ್ನ ಮಗಳನ್ನು ಕಡೆಗಣಿಸಬಹುದು. ಈಕೆಯ ಉದರದಲ್ಲಿ ಜನಿಸಿದ ಮಕ್ಕಳಿಗೆ ನ್ಯಾಯವಾಗಿ ಸಲ್ಲಬೇಕಾದ ಹಕ್ಕುಗಳು ದೊರೆಯದೆ ಹೋಗಬಹುದೆಂದು ಚಿಂತೆಗೆ ಒಳಗಾಗುತ್ತಾನೆ.

ಅವನ ಮೌನವನ್ನು ನೋಡಿದ ಶಂತನು ನಿನ್ನ ಮನಸ್ಸಿನಲ್ಲಿರುವ ಯೋಚನೆ ಏನು? ಹೇಳುವೆಯಾದರೆ ಈಗಲೇ ಅದನ್ನು ಸರಿಪಡಿಸಲು ಬಯಸುತ್ತೇನೆ ಎಂದು ತಿಳಿಸುತ್ತಾನೆ. ದಶರಾಜನು ನೀನು ಚಂದ್ರ ವಂಶದಲ್ಲಿ ಹುಟ್ಟಿದ ರಾಜನಾಗಿರುವೆ. ನಿಮ್ಮ ವಂಶದಲ್ಲಿ ನ್ಯಾಯದ ಹಾದಿಯಲ್ಲಿ ನಡೆಯುವುದು ಸಹಜ ಎಂಬ ಮಾತು ಕೇಳಿದ್ದೇನೆ. ಪೂರ್ವಜರ ಧರ್ಮ ಕರ್ಮಗಳನ್ನು ಉಳಿಸುವಲ್ಲಿ ನಿರತರಾಗುವಿರಿ. ಗುರು ಹಿರಿಯರ ಅಣತಿಯ ಇಲ್ಲದೆ ನಿಮ್ಮಲ್ಲಿ ಯಾವುದೇ ಕೆಲಸ ನಡೆಯುವುದಿಲ್ಲ. ಒಬ್ಬ ತಂದೆಯಾಗಿ ನಿಮಗಿಂತಲೂ ಒಳ್ಳೆಯ ಪತಿಯನ್ನು ಹುಡುಕಲು ನನ್ನಿಂದ ಸಾಧ್ಯವೇ ಇಲ್ಲ. ಈ ವಿಚಾರದಲ್ಲಿ ನಾನು ಬಹಳ ಪುಣ್ಯವಂತ. ಆದರೆ ನನ್ನ ಮನಸ್ಸಿನಲ್ಲಿ ದೊಡ್ಡ ಯೋಚನೆ ಇದೆ. ವಿವಾಹವಾದ ನಂತರ ನನ್ನ ಮಗಳು ಮತ್ತು ಅವಳ ಮಕ್ಕಳನ್ನು ನೀನು ಕಡೆಗಣಿಸಬಹುದು ಎಂಬ ಸಂಶಯ ನನ್ನಲ್ಲಿ ಬೇರೂರಿದೆ ಎಂದು ಹೇಳುತ್ತಾನೆ.

ಇದನ್ನು ಕೇಳಿದ ಶಂತನು ನ್ಯಾಯ ನೀತಿ ಪಾಲನೆಯಲ್ಲಿ ನಾವೇ ಮೊದಲಿಗರು. ಆದ್ದರಿಂದ ನಿನ್ನ ಯೋಚನೆಗೆ ಬೆಲೆ ಇಲ್ಲ. ಚಿಂತೆ ಮರೆಯುವುದು ಒಳ್ಳೆಯದು. ನಿನ್ನ ಮನಸ್ಸಿನ ನಿರ್ಧಾರವಾದರೂ ಏನು ಎಂದು ಕೇಳುತ್ತಾನೆ. ಆಗ ದಾಶರಾಜನು ನನ್ನ ಮಗಳ ಉದರದಲ್ಲಿ ಜನಿಸಿದ ಮಗನನ್ನೇ ರಾಜನನ್ನಾಗಿ ಮಾಡುವುದಾದಲ್ಲಿ ಈ ಮದುವೆಗೆ ನಾನು ಒಪ್ಪುತ್ತೇನೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಶಂತನು ದೇವವ್ರತನ ಹೊರತಾಗಿ ಬೇರೆಯವರನ್ನು ರಾಜನನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ ಯೋಚನೆ ಮತ್ತು ನಿರಾಸೆಯಿಂದ ಅರಮನೆಗೆ ಮರಳುತ್ತಾನೆ.

ಮಹಾಭಾರತದ ಈ ಕಥೆ ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವುದು..

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

 

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.