ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ ದೇವಸ್ಥಾನದಲ್ಲಿ ಸರಪಳಿಗಳಿಂದ ಬಂಧಿತನಾಗಿರುವ ಭೈರವ ಸ್ವಾಮಿ; ಮಧ್ಯ ಪ್ರದೇಶದ ಕೇವ್ಡಾ ಸ್ವಾಮಿ ಮಂದಿರದ ವೈಶಿಷ್ಟ್ಯ

ಈ ದೇವಸ್ಥಾನದಲ್ಲಿ ಸರಪಳಿಗಳಿಂದ ಬಂಧಿತನಾಗಿರುವ ಭೈರವ ಸ್ವಾಮಿ; ಮಧ್ಯ ಪ್ರದೇಶದ ಕೇವ್ಡಾ ಸ್ವಾಮಿ ಮಂದಿರದ ವೈಶಿಷ್ಟ್ಯ

ಮಧ್ಯಪ್ರದೇಶದ ಆಗರ್‌ ಮಾಲವಾ ಜಿಲ್ಲೆಯಲ್ಲಿರುವ ಕೇವ್ಡಾ ಸ್ವಾಮಿ ದೇವಾಲಯವು ಬಹಳ ವಿಶೇಷವಾಗಿದೆ. ಇಲ್ಲಿ ಸುಮಾರು 600 ವರ್ಷಗಳಿಂದ ಭೈರವನನ್ನು ಪೂಜಿಸಲಾಗುತ್ತದೆ. ಸುಖ, ಶಾಂತಿಯನ್ನು ನೀಡಿ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕುವ ಭೈರವನನ್ನು ಸರಪಳಿಗಳಿಂದ ಬಂಧಿಸಲಾಗಿದೆ.

ಈ ದೇವಸ್ಥಾನದಲ್ಲಿ ಸರಪಳಿಗಳಿಂದ ಬಂಧಿತನಾಗಿರುವ ಭೈರವ ಸ್ವಾಮಿ; ಮಧ್ಯ ಪ್ರದೇಶದ ಕೇವ್ಡಾ ಸ್ವಾಮಿ ಮಂದಿರ ವೈಶಿಷ್ಟ್ಯ (ಸಾಂದರ್ಭಿಕ ಚಿತ್ರ)
ಈ ದೇವಸ್ಥಾನದಲ್ಲಿ ಸರಪಳಿಗಳಿಂದ ಬಂಧಿತನಾಗಿರುವ ಭೈರವ ಸ್ವಾಮಿ; ಮಧ್ಯ ಪ್ರದೇಶದ ಕೇವ್ಡಾ ಸ್ವಾಮಿ ಮಂದಿರ ವೈಶಿಷ್ಟ್ಯ (ಸಾಂದರ್ಭಿಕ ಚಿತ್ರ) (PC: Parth Joshi @parth_rkt)

ಸನಾತನ ಧರ್ಮದಲ್ಲಿ ಭೈರವನನ್ನು ತಂತ್ರ–ಮಂತ್ರಗಳ ದೇವರು ಎಂದು ನಂಬಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಭಗವಾನ್‌ ಭೈರವನ ಪೂಜೆ ಮಾಡುವುದರಿಂದ ಮಹಾದೇವನು ಪ್ರಸನ್ನನಾಗುತ್ತಾನೆ ಎಂದು ಹೇಳಲಾಗುತ್ತದೆ. ಕಾಲಾಷ್ಟಮಿಯ ದಿನದಂದು ಭೈರವನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದನ್ನು ಪ್ರತಿ ತಿಂಗಳು ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಆಚರಿಸಲಾಗುತ್ತದೆ. ಶುಭ ಸಂದರ್ಭಗಳಲ್ಲಿ ಭೈರವನ ಉಪಾಸನೆ ಮಾಡುವುದರಿಂದ ಮನದ ಆಸೆಗಳು ಸಿದ್ಧಿಸುತ್ತವೆ ಎಂದು ನಂಬಲಾಗಿದೆ.

ಮನೆಯಲ್ಲಿ ಸುಖ–ಶಾಂತಿ ವೃದ್ಧಿಸಲು ಭೈರವನ ವ್ರತವನ್ನು ಕೂಡಾ ಹಲವರು ಮಾಡುತ್ತಾರೆ. ಈ ದಿನ ಭೈರವನಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಭಾರತದಲ್ಲಿ ಭಗವಾನ್‌ ಭೈರವನಿಗೆ ಸಮರ್ಪಿತವಾದ ಒಂದು ವಿಶೇಷ ಮಂದಿರವಿದೆ. ಅಲ್ಲಿ ಭೈರವನ ಮೂರ್ತಿಯನ್ನು ಸರಪಳಿಗಳಿಂದ ಬಂಧಿಸಲಾಗಿದೆ. ಆ ದೇವಾಲಯ ಎಲ್ಲಿದೆ? ಆ ರೀತಿ ಭೈರವನ ಮೂರ್ತಿಯನ್ನು ಬಂಧಿಸಲು ಕಾರಣವೇನು? ತಿಳಿಯಲು ಮುಂದೆ ಓದಿ.

ಎಲ್ಲಿದೆ ಕೇವ್ಡಾ ಸ್ವಾಮಿ ಮಂದಿರ?

ಮಧ್ಯ ಪ್ರದೇಶದ ಆಗರ್‌ ಮಾಲವಾ ಜಿಲ್ಲೆಯಲ್ಲಿ ಕೇವ್ಡಾ ಸ್ವಾಮಿ ಮಂದಿರವಿದೆ. ಈ ದೇವಸ್ಥಾನದಲ್ಲಿ ಭಗವಾನ್‌ ಭೈರವನ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಇಲ್ಲಿ ಸುಮಾರು 600 ವರ್ಷಗಳಿಂದ ಕೇವಡಾ ಸ್ವಾಮಿಯಾಗಿ ನೆಲೆಸಿರುವ ಭೈರವನನ್ನು ಪೂಜಿಸಲಾಗುತ್ತದೆ. ಇಲ್ಲಿಗೆ ಬರುವ ಭಕ್ತಾದಿಗಳು ಬಹಳ ಶ್ರದ್ಧೆಯಿಂದ ಸ್ವಾಮಿಯನ್ನು ಪೂಜಿಸುತ್ತಾರೆ. ಹಾಗೆ ಮಾಡುವುದರಿಂದ ಜೀವನದಲ್ಲಿ ಸುಖ–ಶಾಂತಿ ನೆಲೆಸುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿರುವ ಋಣಾತ್ಮಕ ಶಕ್ತಿಗಳು ದೂರವಾಗುತ್ತದೆ ಜೊತೆಗೆ ಶತ್ರುಗಳಿಂದಲೂ ವಿಜಯ ಸಾಧಿಸಬಹುದಾಗಿದೆ.

ಭೈರವನನ್ನು ಸರಪಳಿಗಳಿಂದ ಬಂಧಿಸಿರುವುದೇಕೆ?

ಕೇವ್ಡಾ ಸ್ವಾಮಿ ಮಂದಿರದಲ್ಲಿ ಭಗವಾನ್‌ ಭೈರವನ ಪ್ರತಿಮೆಯನ್ನು ಸರಪಳಿಗಳಿಂದ ಬಂಧಿಸಿಲಾಗಿದೆ. ಭಗವಾನ್‌ ಭೈರವನು ತನ್ನ ಮಂದಿರವನ್ನು ಬಿಟ್ಟು ಮಕ್ಕಳ ಜೊತೆ ಆಟವಾಡಲು ಹೋಗುತ್ತಿದ್ದನಂತೆ. ಬಹಳಷ್ಟು ಸಮಯದವರೆಗೆ ಆಟವಾಡಿದ ನಂತರ ಭೈರವನು ಮಕ್ಕಳನ್ನು ಬಾವಿಯಲ್ಲಿ ಎಸೆಯುತ್ತಿದ್ದನು ಎಂಬ ಕಥೆ ಇಲ್ಲಿ ಜನಜನಿತವಾಗಿದೆ. ಇದೇ ಕಾರಣದಿಂದ ಕೇವ್ಡಾ ಸ್ವಾಮಿ ಮಂದಿರದಲ್ಲಿ ಸ್ಥಾಪಿಸಲಾಗಿರುವ ಭೈರವನ ಮೂರ್ತಿಗೆ ಸರಪಳಿಗಳಿಂದ ಬಂಧಿಸಲಾಗಿದೆ.

ಈ ದೇವಸ್ಥಾನದ ವೈಶಿಷ್ಟ್ಯಗಳು

* ಪ್ರತಿ ವರ್ಷ ಭೈರವ ಪೂರ್ಣಿಮೆ ಅಥವಾ ಅಷ್ಟಮಿಯ ದಿನದಂದು ದೇವಸ್ಥಾನದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಆ ದೇವಸ್ಥಾನದಲ್ಲಿ ದಾಲ್‌ ಬಾಟಿಯನ್ನು ನೈವೇದ್ಯ ಮಾಡಲಾಗುತ್ತದೆ.

* ದೇವಾಲಯದ ಬಳಿ ಕೇವ್ಡಾ ಅಂದರೆ ಕೇದಿಗೆ ಹೂವಿನ ಗಿಡಗಳಿರುವುದರಿಂದ ಅದರ ಪರಿಮಳ ಪೂರ್ತಿ ದೇವಸ್ಥಾನದಲ್ಲಿ ತುಂಬಿರುತ್ತದೆ. ಅದೇ ಕಾರಣದಿಂದ ಅದನ್ನು ಕೇವ್ಡಾ ಸ್ವಾಮಿ ದೇವಸ್ಥಾನ ಎಂದು ಕರೆಯಲಾಗುತ್ತದೆ.

* ಇಲ್ಲಿ ಪೂಜಿಸಲಾಗುವ ಭೈರವ ಮೂರ್ತಿಯನ್ನು ಸರಪಳಿಗಳಿಂದ ಬಂಧಿಸಲಾಗಿದೆ.

* ಆಗರ್‌ ಮಾಲಾವ್‌ನ ದೇವಸ್ಥಾನದ ಬಳಿ ಅತ್ಯಂತ ದೊಡ್ಡ ಬಾವಿಯಿದೆ.