ಕನ್ನಡ ರಾಜ್ಯೋತ್ಸವ 2024: ಜೈ ಹನುಮಾನ್; ಕರ್ನಾಟಕದ 10 ಪ್ರಸಿದ್ಧ ಆಂಜನೇಯ ದೇವಾಲಯಗಳ ಚಿತ್ರಣ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕನ್ನಡ ರಾಜ್ಯೋತ್ಸವ 2024: ಜೈ ಹನುಮಾನ್; ಕರ್ನಾಟಕದ 10 ಪ್ರಸಿದ್ಧ ಆಂಜನೇಯ ದೇವಾಲಯಗಳ ಚಿತ್ರಣ ಇಲ್ಲಿದೆ

ಕನ್ನಡ ರಾಜ್ಯೋತ್ಸವ 2024: ಜೈ ಹನುಮಾನ್; ಕರ್ನಾಟಕದ 10 ಪ್ರಸಿದ್ಧ ಆಂಜನೇಯ ದೇವಾಲಯಗಳ ಚಿತ್ರಣ ಇಲ್ಲಿದೆ

ಕನ್ನಡ ರಾಜ್ಯೋತ್ಸವ 2024: ದೇವಾಲಯಗಳಿಗೆ ಹೆಸರುವಾಸಿಯಾಗಿರುವ ಕರ್ನಾಟಕದಲ್ಲಿ ಹಲವಾರು ಪ್ರಸಿದ್ಧ ಆಂಜನೇಯ ದೇವಾಲಯಗಳಿವೆ. ಕರುನಾಡಿನ ಅಗ್ರ 10 ಪ್ರಸಿದ್ಧ ಹನುಮ ದೇವಾಲಯಗಳು ಹಾಗೂ ಅವುಗಳ ಮಹತ್ವವನ್ನು ಇಲ್ಲಿ ನೀಡಲಾಗಿದೆ.

ಕರ್ನಾಟಕದ ಪ್ರಸಿದ್ಧ ಆಂಜನೇಯ ದೇವಾಲಯಗಳನ್ನು ಇಲ್ಲಿ ನೀಡಲಾಗಿದೆ.
ಕರ್ನಾಟಕದ ಪ್ರಸಿದ್ಧ ಆಂಜನೇಯ ದೇವಾಲಯಗಳನ್ನು ಇಲ್ಲಿ ನೀಡಲಾಗಿದೆ.

ಕರ್ನಾಟಕದಲ್ಲಿ ಪ್ರಮುಖ ದೇವಾಲಯಗಳಲ್ಲಿ ಶ್ರೀರಾಮನ ಬಂಟ ಹನುಮಂತನಿಗೆ ವಿಶೇಷ ಸ್ಥಾನವಿದೆ. ರಾಮಾಯಣದ ಪ್ರಮುಖ ಪಾತ್ರಧಾರಿಯೂ ಆಗಿರುವ ಆಂಜನೇಯನಿಗೆ ರಾಜ್ಯದಲ್ಲಿ ಹಲವಾರು ದೇವಾಲಯಗಳನ್ನು ಕಟ್ಟಿಸಿ ಪೂಜಿಸಲಾಗುತ್ತಿದೆ. 2024ರ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ವಾನರ ದೇವರಿಗೆ ಕರ್ನಾಟಕದಲ್ಲಿರುವ ಪ್ರಮುಖ 10 ದೇವಾಲಯಗಳು, ಅವುಗಳ ಮಹತ್ವ ಹಾಗೂ ಇತಿಹಾಸವನ್ನು ಇಲ್ಲಿ ನೀಡಲಾಗಿದೆ.

ಕರ್ನಾಟಕದಲ್ಲಿರುವ ಪ್ರಮುಖ 10 ಆಂಜನೇಯ ದೇವಾಲಯಗಳು

ಯಲಗೂರೇಶ್ವರ ದೇವಸ್ಥಾನ

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಯಲಗೂರಿಯಲ್ಲಿರುವ ಈ ದೇವಾಲಯವನ್ನು ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ಇಲ್ಲಿನ ಹನುಮಂತನನ್ನು ಮಾತನಾಡುವ ಹನುಮಂತ ಹಾಗೂ ಯಲಗೂರು ಹನುಮಂತ ಎಂದು ಕರೆಯಲಾಗುತ್ತದೆ. ದೇವಾಲಯದ ಮತ್ತೊಂದು ವಿಶೇಷವೆಂದರೆ ಹನುಮಂತನ ವಿಗ್ರಹವು ತಾನಾಗಿಯೇ ಹೊರಹೊಮ್ಮಿದೆ ಎಂದು ಹೇಳಲಾಗುತ್ತದೆ. ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲೂ ಯಲಗೂರೇಶ್ವರ ದೇವಸ್ಥಾನ ಕೂಡ ಒಂದಾಗಿದೆ.

ಆಂಜನೇಯಸ್ವಾಮಿ ದೇವಸ್ಥಾನ, ಮುಳಬಾಗಿಲು

ಈ ದೇವಾಲಯವು ವೀರಾಂಜನೇಯ ಅಂತಲೇ ಪ್ರಸಿದ್ಧವಾಗಿದೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನಲ್ಲಿರುವ ಈ ದೇವಾಲಯ 5 ಸಾವಿರ ವರ್ಷಗಳ ಹಳೆಯದು ಎಂದು ಹೇಳಲಾಗುತ್ತದೆ. ಮಹಾಭಾರತದ ಯುದ್ಧದ ಸಮಯದಲ್ಲಿ ಪಾಂಡವರಲ್ಲಿ ಒಬ್ಬರಾದ ಅರ್ಜುನನು ಇಲ್ಲಿನ ಹನುಮಂತನನ್ನು ಪೂಜಿಸಲು ವಿಗ್ರಹವನ್ನು ಸ್ಥಾಪಿಸಲಾಗಿದೆ. ಯುದ್ಧದ ನಂತರ ತೀರ್ಥಯಾತ್ರೆಗೆ ಹೋಗುವಾಗ ಅರ್ಜುನನು ಇಲ್ಲಿ ಧ್ವಜವನ್ನು ಸ್ಥಾಪಿಸಿದನು ಎಂದು ಕೆಲವೊಂದು ಪುರಾಣಗಳು ಹೇಳುತ್ತವೆ. ನೂರಾರು ಭಕ್ತರು ಇಲ್ಲಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ.

ಕೊರವರೇಶ ದೇವಸ್ಥಾನ

ವಿಜಯಪುರ ಜಿಲ್ಲೆಯ ಒಂದು ಸಣ್ಣ ಹಳ್ಳಿಯಾದ ಕೊರವರದಲ್ಲಿ ಕೊರವರೇಶ ದೇವಸ್ಥಾನವಿದೆ. ಆಂಜನೇಯ ಮೂರ್ತಿಗೆ ಇಲ್ಲಿ ಕೊರವರೇಶ ಎಂದು ಕರೆಯುತ್ತಾರೆ. ಈ ದೇವಾಲಯದಲ್ಲಿ ಚೈತ್ರಮಾಸದಲ್ಲಿ ಪ್ರತಿಪದದಿಂದ ಆರಂಭಗೊಂಡು ಹನುಮ ಜಯಂತಿವರೆಗೆ ಅದ್ಧೂರಿ ಆಚರಣೆಗಳನ್ನು ಮಾಡಲಾಗುತ್ತದೆ. 1535 ರಲ್ಲಿ ಕೊರವರೇಶ ದೇವರು 1008 ಶ್ರೀ ವಾದಿರಾಜ ತೀರ್ಥರಿಗೆ ದೇವಾಲಯವನ್ನು ನಿರ್ಮಿಸಲು ಸೂಚಿಸಿದ್ದರು ಎಂಬ ದಂತಕಥೆಯಿದೆ. ಪ್ರತಿ ವರ್ಷ ಹನುಮ ಜಯಂತಿಗೆ ಇಲ್ಲಿ ಸಾವಿರಾರು ಭಕ್ತರು ಸೇರುತ್ತಾರೆ.

ತುಳಸಿಗೇರಿ ಹನುಮಾನ್ ದೇವಸ್ಥಾನ

ಬಾಗಲಕೋಟೆ ಜಿಲ್ಲೆ ತುಳಸಿಗೇರಿ ಗ್ರಾಮದಲ್ಲಿರುವ ಹನುಮಾನ್ ದೇವಸ್ಥಾನ ಕೂಡ ಕರ್ನಾಟಕದ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಇದು 11ನೇ ಶತಮಾನದ ದೇವಾಲಯ ಅನ್ನೋದು ವಿಶೇಷ. ಅತ್ಯುತ್ತಮ ವಾಸ್ತುಶಿಲ್ಪವನ್ನು ಹೊಂದಿದ್ದು, ಹನುಮನ ಪ್ರತಿಮೆಯನ್ನು ತಿರುಪತಿಯ ವೆಂಕಟೇಶ್ವರನನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಇಲ್ಲಿನ ಭಕ್ತರ ನಂಬಿಕೆಯ ಮಾತು. ಶನಿವಾರಗಳಂದು ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತಲೇ ಇರುತ್ತವೆ.

ಕಾಂತೇಶ ಹನುಮ ದೇವಸ್ಥಾನ

ನೀವೇನಾದರೂ ಅತ್ಯಂತ ಪ್ರಕಾಶಮಾನವಾಗಿ ಕಾಣುವ ಹನುಮಂತನನ್ನು ನೋಡಬೇಕೆಂದರೆ ಕಾಂತೇಶ ಹನುಮ ದೇವಸ್ಥಾನಕ್ಕೆ ಭೇಟಿ ನೀಡಬೇಕು. ಇಲ್ಲಿ ಹನುಮಂತನನ್ನು ಕಾಂತೇಶ ಎಂದು ಕರೆಯಲಾಗುತ್ತದೆ. ಹನುಮಂತನು ಸೂರ್ಯನನ್ನು ಹಣ್ಣು ಎಂದು ತಪ್ಪಾಗಿ ಭಾವಿಸಿ ಅದನ್ನು ತಿನ್ನಲು ಪ್ರಯತ್ನಿಸಿದ ಕಥೆ ಸಾಕಷ್ಟು ಕೇಳಿರುತ್ತಾರೆ. ಈ ಪ್ರಸಂಗ ನಡೆದ ಸಂದರ್ಭದಲ್ಲಿ ಹನುಮಂತನು ಇದೇ ಊರಿನಲ್ಲಿದ್ದ ಎಂದು ಪುರಾಣಗಳು ಹೇಳುತ್ತವೆ. ಕಾಂತೇಶ ಹನುಮ ದೇವಸ್ಥಾನ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಎಂಬ ಹಳ್ಳಿಯಲ್ಲಿದೆ.

ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನ

ಮಂಡ್ಯ ಜಿಲ್ಲೆ ಮದ್ದೂರಿನ ಶಿಮ್ಸಾ ನದಿ ದಡದಲ್ಲಿರುವ ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನವು ಈ ಪ್ರದೇಶದ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಶಾಂತ ಮತ್ತು ಹಸಿರು ಪರಿಸರದಲ್ಲಿ ನೆಲೆಗೊಂಡಿರುವ ಆಂಜನೇಯನನ್ನು ಸುಮಾರು 600 ವರ್,ಗಳ ಹಿಂದೆ ಶ್ರೀಪಾದರಾಜರು ಮತ್ತು ಶ್ರೀ ವ್ಯಾಸರಾಜರು ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ. ಇಲ್ಲಿ ನಿತ್ಯ ಪೂಜೆಗಳು ನಡೆಯುತ್ತವೆ.

ಭ್ರಾಂತೇಶ ದೇವಸ್ಥಾನ

ಭ್ರಾಂತೇಶ ದೇವಾಲಯವು ಶಿಕಾರಿಪುರ ಪಟ್ಟಣದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಈ ದೇವಾಲಯವನ್ನು ಹುಚ್ಚರಾಯಸ್ವಾಮಿ ದೇವಾಲಯ ಅಂತಲೂ ಕರೆಯುತ್ತಾರೆ. ಹನುಮ ಜಯಂತಿಯನ್ನು ಇಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ರಥೋತ್ಸವ ಕೂಡ ನಡೆಯುತ್ತದೆ. ಈ ಉತ್ಸವದ ಸಮಯದಲ್ಲಿ ಲಕ್ಷಾಂತರ ಮಂದಿ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಶಾಂತೇಶ ದೇವಾಸ್ಥಾನ

ಮಾಧ್ವ ತತ್ವದ ಮೌಲ್ಯಗಳನ್ನು ಹರಡಲು ಈ ದೇವಾಲಯದಲ್ಲಿರುವ ಹನುಮಂತನ ವಿಗ್ರಹದ ತಲೆಯ ಮೇಲೆ ಸಾಲಿಗ್ರಾಮವನ್ನು ಹೊಂದಿದೆ ಎಂದು ನಂಬಲಾಗಿದೆ. ಈ ವಿಶಿಷ್ಟ ದೇವಾಲಯದ ರಚನೆಯು ಭಕ್ತರ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಹಾವೇರಿ ಜಿಲ್ಲೆಯ ಸಾತೇನಹಳ್ಳಿಯಲ್ಲಿ ಶಾಂತೇಶ ದೇವಾಸ್ಥಾನವಿದೆ.

ಯಂತ್ರೋಧಾರಕ ಹನುಮಂತ ದೇವಸ್ಥಾನ

ಹಂಪಿಯ ಐತಿಹಾಸಿಕ ಸ್ಥಳದಲ್ಲಿರುವ ಯಂತ್ರೋಧಾರಕ ಹನುಮಂತ ದೇವಸ್ಥಾನ ಕೂಡ ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದ್ದು, ಈ ದೇವಾಲಯವು ಒಂದು ಗುಹೆಯೊಳಗೆ ಬೆಟ್ಟದ ತುದಿಯಲ್ಲಿದೆ. 500 ವರ್ಷಗಳ ಹಳೆಯದು ಎಂದು ಪರಿಗಣಿಸಲಾಗಿದ್ದು, ದೇವಾಲಯದಲ್ಲಿನ ವಿಗ್ರಹವು ದ್ವೈತ ತತ್ವಜ್ಞಾನಿಗಳಲ್ಲಿ ಒಂದಾಗಿದೆ. ಶ್ರೀರಾಮ ಮತ್ತು ಹನುಮಂತ ಮೊದಲ ಬಾರಿ ಭೇಟಿ ನೀಡಿದ ಸ್ಥಳವಿದು ಎಂದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.

ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅನೇಕ ಹನುಮಂತನಿಗೆ ಸಂಬಂಧಿಸಿದ ಹಲವಾರು ದೇವಾಲಯಗಳಿವೆ. ಅದರಲ್ಲಿ ಗಾಳಿ ಆಂಜನೇಯ ಸ್ವಾಮಿ ದೇವಾಲಯ ಕೂಡ ಪ್ರಸಿದ್ಧವಾಗಿದೆ. ಇಲ್ಲಿರುವ ಹನುಮಾನ್ ಪ್ರತಿಮೆಯನ್ನು ಹಿಂದೂ ಸಂತ ಶ್ರೀ ವ್ಯಾಸ ರಾಜರು ಸ್ಥಾಪಿಸಿದ್ದಾರೆ. ಹನುಮಂತನು ವಾಯುದೇವರ ಪುತ್ರನಾಗಿರುವುದರಿಂದ ಇಲ್ಲಿನ ವಿಗ್ರಹಕ್ಕೆ ಗಾಳಿ ಆಂಜನೇಯ ಎಂದು ನಾಮಕರಣ ಮಾಡಲಾಗಿದೆ. ಈ ದೇವಾಲಯದ ನಗರದ ಬ್ಯಾಟರಾಯನಪುರದಲ್ಲಿದ್ದು, ದೇವಾಲಯವನ್ನು 1425 ರಲ್ಲಿ ನಿರ್ಮಿಸಲಾಗಿದ್ದು ಸುಮಾರು 600 ವರ್ಷಗಳ ಇತಿಹಾಸವನ್ನು ಹೊಂದಿದೆ.

ಗಮನಿಸಿ: ಕರ್ನಾಟಕದಲ್ಲಿ ಇನ್ನೂ ಹಲವಾರು ಪ್ರಸಿದ್ಧ ಆಂಜನೇಯ ಸ್ವಾಮಿ ದೇವಸ್ಥಾನಗಳಿವೆ. ಆದರೆ ಇಲ್ಲಿ ಕೆಲವೊಂದು ದೇವಾಲಯಗಳ ಬಗ್ಗೆ ಮಾತ್ರ ಮಾಹಿತಿಯನ್ನು ನೀಡಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.