Kannada Rajyotsava 2024: ಕರ್ನಾಟಕದಲ್ಲಿ ಸರ್ಕಾರಕ್ಕೆ ಅತಿ ಹೆಚ್ಚು ವರಮಾನ ತಂದು ಕೊಡುತ್ತಿರುವ 10 ದೇವಾಲಯಗಳಿವು
ಕನ್ನಡ ರಾಜ್ಯೋತ್ಸವ 2024: ಕರ್ನಾಟಕ ಸರ್ಕಾರದ ಅಧೀನದಲ್ಲಿ 34,000 ಕ್ಕೂ ಹೆಚ್ಚು ದೇವಾಲಯಗಳಿವೆ. ಈ ದೇವಾಲಯಗಳ ಪೈಕಿ ಯಾವ ದೇವಸ್ಥಾನದಿಂದ ಸರ್ಕಾರಕ್ಕೆ ಹೆಚ್ಚು ವರಮಾನ ಬರುತ್ತಿದೆ. ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಹೆಚ್ಚು ವರಮಾನ ಹೊಂದಿರುವ ದೇವಾಲಯಗಳ ಪೈಕಿ ಅಗ್ರ 10 ದೇವಾಲಯಗಳು ಮತ್ತು ಅವುಗಳಿಂದ ಬರುತ್ತಿರುವ ವರಮಾನದ ವಿವರವನ್ನು ಇಲ್ಲಿ ನೀಡಲಾಗಿದೆ.
ಧಾರ್ಮಿಕ ವಿಚಾರದಲ್ಲಿ ಭಾರತದಲ್ಲಿ ಕರ್ನಾಟಕಕ್ಕೆ ಪ್ರಮುಖ ಸ್ಥಾನವಿದೆ. ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ನೂರಾರು ದೇವಾಲಯಗಳು ಇಲ್ಲಿವೆ. ಲಕ್ಷಾಂತರ ಮಂದಿ ಭಕ್ತರು ರಾಜ್ಯದಲ್ಲಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಭಕ್ತರ ಭೇಟಿಯಿಂದ ಸಂಗ್ರಹವಾಗುವ ಕಾಣಿಕೆ ಸೇರಿದಂತೆ ವಿವಿಧ ಮೂಲಗಳಿಂದ ದೇವಾಲಯಗಳಿಗೆ ವಾರ್ಷಿಕವಾಗಿ ಕೋಟಿ ಕೋಟಿ ರೂಪಾಯಿ ಆದಾಯ ಬರುತ್ತದೆ. 2024ರ ಕನ್ನಡ ರಾಜ್ಯೋತ್ಸವ ನಿಮಿತ್ತ ಕರ್ನಾಟಕದಲ್ಲಿ ಅತಿ ಹೆಚ್ಚು ವರಮಾನವನ್ನು ಹೊಂದಿರುವ ಅಗ್ರ 10 ದೇವಾಲಯಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಪ್ರಮುಖವಾಗಿ ಕರ್ನಾಟಕ ಸರ್ಕಾರಕ್ಕೆ ಆದಾಯವನ್ನು ತಂದುಕೊಡುತ್ತಿರುವ ದೇವಾಲಯಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ವಾರ್ಷಿಕವಾಗಿ 25 ಲಕ್ಷಕ್ಕೂ ಅಧಿಕ ವರಮಾನವ ಹೊಂದಿರುವ ದೇವಾಲಯಗಳನ್ನು ಪ್ರವರ್ಗ ಎ, 5 ಲಕ್ಷದಿಂದ 25 ಲಕ್ಷ ರೂಪಾಯಿ ವರೆಗೆ ಆದಾಯವನ್ನು ತಂದು ಕೊಡುವ ದೇವಾಲಯಗಳನ್ನು ಪ್ರವರ್ಗ ಬಿ ಹಾಗೂ ಆದಾಯ 5 ಲಕ್ಷ ರೂಪಾಯಿಗಳನ್ನು ಮೀರದ ದೇವಾಲಯಗಳನ್ನು ಪ್ರವರ್ಗ ಸಿ ವರ್ಗವನ್ನಾಗಿ ಮಾಡಲಾಗಿದೆ.
ಕರ್ನಾಟಕದಲ್ಲಿ ಸುಮಾರು 1.80 ಲಕ್ಷ ದೇವಾಲಯಗಳಿವೆ. ಇವುಗಳ ಪೈಕಿ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ದೇವಾಲಯಗಳ ಸಂಖ್ಯೆ 34 ಸಾವಿರಕ್ಕೂ ಅಧಿಕ. ಒಂದು ಅಂದಾಜಿನ ಪ್ರಕಾರ ಬೆಂಗಳೂರಿನಲ್ಲಿ 1 ಸಾವಿರಕ್ಕೂ ಅಧಿಕ ದೇವಾಲಯಗಳಿವೆ. ಒಟ್ಟಾರೆಯಾಗಿ ರಾಜ್ಯದಲ್ಲಿ ದೇವಾಲಯಗಳು ಧಾರ್ಮಿಕ ವಿಚಾರಗಳು, ವಾಸ್ತುಶಿಲ್ಪದ ಶೈಲಿಗಳು ಹಾಗೂ ಇತಿಹಾಸ ಪ್ರಾಮುಖ್ಯದ ವಿಷಯಗಳಲ್ಲಿ ವಿಶಿಷ್ಟವಾಗಿವೆ.
ಕರ್ನಾಟಕದಲ್ಲಿರುವ ದೇವಾಲಯಗಳ ಪೈಕಿ 205ಕ್ಕೂ ಅಧಿಕ ದೇವಾಲಯಗಳು ವಾರ್ಷಿಕವಾಗಿ 25 ಲಕ್ಷ ರೂಪಾಯಿಗೂ ಅಧಿಕ ವರಮಾನವನ್ನು ಹೊಂದಿವೆ. ಈ ದೇವಾಲಯಗಳು ಪ್ರವರ್ಗ 'ಎ' ನಲ್ಲಿ ಬರುತ್ತವೆ. 193 ದೇವಾಲಯಗಳು 5 ಲಕ್ಷ ದಿಂದ 25 ಲಕ್ಷ ರೂಪಾಯಿಗಳ ವರೆಗೆ ಆದಾಯವನ್ನು ಗಳಿಸುತ್ತಿರುವ ದೇವಾಲಯಗಳಾಗಿವೆ. ಈ ದೇವಾಲಯಗಳು ಪ್ರವರ್ಗ 'ಬಿ'ನಲ್ಲಿವೆ. ಇನ್ನೂ ಪ್ರವರ್ಗ 'ಸಿ'ನಲ್ಲಿ ಸುಮಾರು 3 ಸಾವಿರಕ್ಕೂ ದೇವಾಲಯಗಳಿದ್ದು, ಇವು ವಾರ್ಷಿಕವಾಗಿ 5 ಲಕ್ಷ ರೂಪಾಯಿ ವರೆಗೆ ವರಮಾನವನ್ನು ಹೊಂದಿವೆ.
ಅತಿ ಹೆಚ್ಚು ವರಮಾನವನ್ನು ಹೊಂದಿರುವ ಅಗ್ರ 10 ದೇವಾಲಯಗಳು
1. ಕುಕ್ಕೆ ಸುಬ್ರಹ್ಮಣ್ಯ ದೇವಾಲಯ
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಕರ್ನಾಟಕದ ಪ್ರಮುಖ ದೇವಾಯಗಳಲ್ಲಿ ಒಂದಾಗಿದೆ. ಸರ್ಕಾರಕ್ಕೆ ಅತಿ ಹೆಚ್ಚು ವರಮಾನವನ್ನು ತಂದು ಕೊಡುತ್ತಿರುವ ದೇವಾಲಯಗಳಲ್ಲಿ ಅಗ್ರ ಸ್ಥಾನದಲ್ಲಿದೆ. 2023 ರಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಯಲಕ್ಕೆ 123.64 ಕೋಟಿ ರೂಪಾಯಿ ಆದಾಯ ಬಂದಿದೆ. ಹುಂಡಿ ಸಂಗ್ರಹದ ಹೊರತಾಗಿ ದೇವಸ್ಥಾನವು ಬ್ಯಾಂಕ್ ಠೇವಣಿ, ಸೇವೆಗಳು, ದೇವಾಲಯದ ಸಭಾಂಗಣಗಳಿಂದ ಬರುವ ಬಾಡಿಗೆ ಇತ್ಯಾದಿಗಳಿಂದ ದೊಡ್ಡ ಮೊತ್ತವನ್ನು ಗಳಿಸುತ್ತದೆ.
2. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ
ರಾಜ್ಯ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ತರುವ ದೇವಾಲಯಗಳಲ್ಲಿ ಕೊಲ್ಲೂರಿನ ಮೂಕಾಂಬಿಕಾ ದೇವಾಲಯ 2ನೇ ಸ್ಥಾನದಲ್ಲಿವೆ. 2023ರಲ್ಲಿ ವಾರ್ಷಿಕವಾಗಿ ಈ ದೇವಸ್ಥಾನಕ್ಕೆ 59.47 ಕೋಟಿ ರೂಪಾಯಿ ವರಮಾನ ಬಂದಿದೆ. ಇದರಲ್ಲಿ 33.32 ಕೋಟಿ ರೂಪಾಯಿ ವೆಚ್ಚವಾಗಿದೆ. ಉಡುಪಿ ಜಿಲ್ಲೆ ಬೈಯಂದೂರು ತಾಲೂಕಿನ ಕೊಲ್ಲೂರಿನಲ್ಲಿ ಮೂಕಾಂಬಿಕಾ ದೇವಾಲಯ ಇದೆ. ರಾಜ್ಯದಿಂದ ಮಾತ್ರವಲ್ಲದೆ, ಕೇರಳದಿಂದಲೂ ಇಲ್ಲಿಗೆ ನೂರಾರು ಮಂದಿ ಭಕ್ತರು ಆಗಮಿಸುತ್ತಾರೆ.
3. ಮೈಸೂರು ಚಾಮುಂಡೇಶ್ವರಿ ದೇವಸ್ಥಾನ
ನಾಡ ದೇವತೆ ಚಾಮುಂಡೇಶ್ವರಿ ಆದಾಯ ವಿಚಾರದಲ್ಲಿ ಮೂರನೇ ಸ್ಥಾನದಲ್ಲಿದ್ದಾಳೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಾಲಯದಲ್ಲಿ ದಸರಾ, ನವರಾತ್ರಿ ಹಾಗೂ ಆಷಾಢ ಸೇರಿದಂತೆ ವಿಶೇಷ ಪೂಜೆಗಳು ನಡೆಯುತ್ತವೆ. ಸಾವಿರಾರು ಭಕ್ತರು ದೇವಿಯ ದರ್ಶನಕ್ಕೆ ಬರುತ್ತಾರೆ. ಚಾಮುಂಡೇಶ್ವರಿ ದೇವಾಲಯದಲ್ಲಿ 2023ರಲ್ಲಿ ಹುಂಡಿ ಸೇರಿದಂತೆ ವಿವಿಧ ಮೂಲಗಳಿಂದ 52.40 ಕೋಟಿ ರೂಪಾಯಿ ಆದಾಯ ಬಂದಿದೆ.
4. ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನ
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನ ಅತಿ ಹೆಚ್ಚು ವರಮಾನದ ದೇವಾಲಯಗಳಲ್ಲಿ 4ನೇ ಸ್ಥಾನದಲ್ಲಿದೆ. 2023 ರಲ್ಲಿ ದೇವಾಲಯಕ್ಕೆ 36.48 ಕೋಟಿ ರೂಪಾಯಿ ಆದಾಯ ಬಂದಿದೆ. ಇಲ್ಲಿನ ಸಿದ್ದಲಿಂಗೇಶ್ವರನ ದರ್ಶನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
5. ಕಟೀಲು ದುರ್ಗಾ ಪರಮೇಶ್ವರಿ ದೇವಾಲಯ
ಕರ್ನಾಟಕದ ಕರಾವಳಿ ಭಾಗದ ಮತ್ತೊಂದು ದೇವಾಲಯ ಕಟೀಲು ದುರ್ಗಾ ಪಮರೇಶ್ವರಿ ದೇವಾಲಯ. ಅತಿ ಹೆಚ್ಚು ವರಮಾನದ ದೇವಾಲಯಗಳಲ್ಲಿ 5ನೇ ಸ್ಥಾನದಲ್ಲಿದೆ. 2023ರಲ್ಲಿ ಈ ದೇವಾಲಯದಲ್ಲಿ ವಾರ್ಷಿಕವಾಗಿ 32.10 ಕೋಟಿ ರೂಪಾಯಿ ಆದಾಯ ಬಂದಿದೆ. ಸೇವೆಗಳು, ಹುಂಡಿ ಸಂಗ್ರಹ ಹಾಗೂ ಇತರೆ ಮೂಲಗಳಿಂದ ಇಷ್ಟು ಮೊತ್ತದ ಆದಾಯ ಬಂದಿದೆ.
6. ಶ್ರೀಕಂಠೇಶ್ವರ ದೇವಾಲಯ, ನಂಜನಗೂಡು
ನಂಜನಗೂಡು ದೇವಾಲಯವನ್ನು ಶ್ರೀಕಂಠೇಶ್ವೇರ ದೇವಾಲಯ ಎಂದು ಕರೆಯಲಾಗುತ್ತದೆ. 2023ನೇ ಸಾಲಿನ ವರಮಾನದ ವಿಚಾರದಲ್ಲಿ ಈ ದೇವಾಲಯ 6ನೇ ಸ್ಥಾನದಲ್ಲಿದೆ. ವಾರ್ಷಿಕವಾಗಿ 2023ರಲ್ಲಿ ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ 26.71 ಕೋಟಿ ರೂಪಾಯಿ ಆದಾಯ ಬಂದಿದೆ. ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಶ್ರೀಕಂಠೇಶ್ವರ ದೇವಾಲಯ ಇದೆ.
7. ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ
ಉತ್ತರ ಕರ್ನಾಟಕ ಭಾಗದ ಜನರ ಆರಾಧ್ಯ ದೇವಿಯಾಗಿರುವ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ರಾಜ್ಯದ ಪವರ್‌ಫುಲ್ ದೇವಾಲಯಗಳಲ್ಲಿ ಒಂದಾಗಿದೆ. 2023ರಲ್ಲಿ ಅತಿ ಹೆಚ್ಚು ವರಮಾನ ಹೊಂದಿರುವ ದೇವಾಲಯಗಳಲ್ಲಿ 7ನೇ ಸ್ಥಾನದಲ್ಲಿದ್ದು, ಈ ಹಣಕಾಸಿನ ವರ್ಷದಲ್ಲಿ 22.52 ಕೋಟಿ ರೂಪಾಯಿ ವರಮಾನವನ್ನು ಗಳಿಸಿದೆ. ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ.
8. ದುರ್ಗಾ ಪರಮೇಶ್ವರಿ ದೇವಸ್ಥಾನ
ಉಡುಪಿ ಜಿಲ್ಲೆಯ ಮಂದಾರ್ತಿ ದುರ್ಗಾ ಪರಮೇಶ್ವರಿ ದೇವಾಲಯ ಜಿಲ್ಲೆಯ ಜನರ ಆರಾಧ್ಯ ದೈವವಾಗಿದ್ದಾಳೆ. ಇಲ್ಲಿಗೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. 2023ರಲ್ಲಿ ಈ ದೇವಸ್ಥಾನದಲ್ಲಿ 14.55 ಕೋಟಿ ರೂಪಾಯಿ ವರಮಾನ ಸಂಗ್ರಹವಾಗಿದೆ.
9. ಘಾಟಿ ಸುಬ್ರಹ್ಮಣ್ಯ ದೇವಸ್ಥಾನ, ದೊಡ್ಡಬಳ್ಳಾಪುರ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಎಸ್ ಎಸ್ ಘಾಟಿಯಲ್ಲಿರುವ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ರಾಜ್ಯದ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಸುಬ್ರಹ್ಮಣ್ಯ ಮತ್ತು ಲಕ್ಷ್ಮಿ ನರಸಿಂಹ ದೇವರನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಈ ದೇವಾಲಯಕ್ಕೆ 2023ರಲ್ಲಿ ವಾರ್ಷಿಕವಾಗಿ 12.25 ಕೋಟಿ ರೂಪಾಯಿ ಆದಾಯ ಬಂದಿದೆ.
10. ಬೆಂಗಳೂರು ಬನಶಂಕರಿ ದೇವಸ್ಥಾನ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಬನಶಂಕರಿ ದೇವಾಲಯ ಕೂಡ ಒಂದು. ಇಲ್ಲಿನ ಬನಶಂಕರಿ ದೇವಿಯ ದರ್ಶನಕ್ಕೆ ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. 2023ರಲ್ಲಿ ಈ ದೇವಾಲಯಕ್ಕೆ ವಾರ್ಷಿಕವಾಗಿ 11.51 ಕೋಟಿ ರೂಪಾಯಿ ವರಮಾನ ಬಂದಿದೆ.