Kannada Rajyotsava 2024: ಕುರುಡುಮಲೆಯಿಂದ ಸೌತಡ್ಕದವರಿಗೆ; ಕರ್ನಾಟಕದ 10 ಪ್ರಸಿದ್ಧ ಗಣಪತಿ ದೇವಾಯಲಗಳಿವು
ಧಾರ್ಮಿಕ ಕ್ಷೇತ್ರಗಳಿಗೆ ಹೆಸರುವಾಸಿಯಾಗಿರುವ ಕರ್ನಾಟಕದಲ್ಲಿ ಸಾಕಷ್ಟು ಗಣಪತಿ ದೇವಾಲಯಗಳಿವೆ. ಈ ಪೈಕಿ ವಿವಿಧ ಕಾರಣಗಳಿಂದ ಪ್ರಸಿದ್ಧವಾಗಿರುವ ಅಗ್ರ 10 ಗಣಪತಿ ದೇವಾಲಯಗಳ ಕುರಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಹಿಂದೂ ಧಾರ್ಮಿಕ ಸಂಪ್ರದಾಯದ ಪ್ರಕಾರ, ಯಾವುದೇ ರೀತಿಯ ಶುಭ ಸಮಾರಂಭಗಳನ್ನು ಆರಂಭಿಸುವ ಮುನ್ನ ವಿಘ್ನನಿವಾರಕ ವಿನಾಯಕನನ್ನು ಪೂಜಿಸಲಾಗುತ್ತದೆ. ಗಣಪತಿಯನ್ನು ಮೊದಲ ಪೂಜಿತ ದೇವರು. 2024ರ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕರ್ನಾಟಕ ತುಂಬಾ ಪ್ರಸಿದ್ಧವಾದ 10 ಗಣಪತಿ ದೇವಾಲಯಗಳ ಬಗ್ಗೆ ತಿಳಿಯೋಣ. ಬೆಂಗಳೂರಿನ ಬಸವನಗುಡಿಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನ, ಕೋಲಾರ ಜಿಲ್ಲೆ ಮುಳಬಾಗಿಲುನಲ್ಲಿರುವ ಕುರುಡುಮಲೆ ಗಣೇಶ ದೇವಸ್ಥಾನ, ಆನೆಗುಡ್ಡದ ವಿನಾಯಕ ದೇವಸ್ಥಾನ ಹೀಗೆ ಹಲವು ಗಣಪತಿ ದೇವಾಲಯಗಳು ಕರ್ನಾಟಕದಲ್ಲಿವೆ. ವಿವಿಧ ಕಾರಣಗಳಿಗೆ ಪ್ರಸಿದ್ಧಿಯನ್ನು ಪಡೆದಿರುವ ಕರ್ನಾಟಕ ಗಣಪತಿ ದೇವಾಲಯಗಳ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.
1. ದೊಡ್ಡ ಗಣಪತಿ ದೇವಸ್ಥಾನ, ಬಸವನಗುಡಿ, ಬೆಂಗಳೂರು
ಬೆಂಗಳೂರಿನ ಬಸವನಗುಡಿಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನ ಪ್ರಸಿದ್ಧ ದೇವಾಲಯಗಳಲ್ಲೊಂದು. 18 ಅಡಿ ಎತ್ತರ ಮತ್ತು 16 ಅಡಿ ಅಗಲ ಇರುವ ಏಕಶಿಲೆಯ ಗಣೇಶನ ಪ್ರತಿಮೆ ಇಲ್ಲಿದೆ. 1971 ರಲ್ಲಿ ದೊಡ್ಡ ಗಣಪತಿ ದೇವಾಲಯವನ್ನು ನಿರ್ಮಿಸಲಾಗಿದೆ. ಇಲ್ಲಿನ ದೇವರನ್ನು ಶಕ್ತಿ ಗಣಪತಿ ಅಥವಾ ಸತ್ಯ ಗಣಪತಿ ಎಂದೂ ಕರೆಯುತ್ತಾರೆ. ಕೆಲವೊಂದು ಅದ್ಭುತ ಕಾರ್ಯಗಳಿಂದ ದೇವಾಲಯ ಜನಪ್ರಿಯವಾಗಿದೆ.
2. ಕುರುಡುಮಲೆ ಗಣೇಶ ದೇವಸ್ಥಾನ, ಕೋಲಾರ
ಕೋಲಾರ ಜಿಲ್ಲೆಯ ಮುಳಬಾಗಿಲುನಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಕುರುಡುಮಲೆ ಗ್ರಾಮದ ಗಣಪತಿ ದೇವಾಲಯ ದಕ್ಷಿಣ ಭಾರತದಾದ್ಯಂತ ಸಾವಿರಾರು ಭಕ್ತರನ್ನು ಹೊಂದಿರುವ ಜನಪ್ರಿಯ ದೇವಾಲಯವಾಗಿದೆ. ಸುಮಾರು 650 ವರ್ಷಗಳ ಇತಿಹಾಸದಷ್ಟು ಹಳೆಯಾದಾದ ದೇವಾಲಯ ಎಂದು ಹೇಳಲಾಗುತ್ತದೆ. ಈ ಗಣಪತಿಯ ವಿಗ್ರಹವು ಸತ್ಯಯುಗ (ಕೃತಯುಗ), ತ್ರೇತಾ ಯುಗ, ದ್ವಾಪರ ಯುಗ ಹಾಗೂ ಕಲಿ ಯುಗದಿಂದಲೂ ಭೂಮಿಯ ಮೇಲಿದೆ ಎಂದು ಹೇಳಲಾಗುತ್ತದೆ. ಇಲ್ಲಿನ ಗಣಪತಿ ಮೂರ್ತಿಯು 12 ಅಡಿ ಎತ್ತರ ಹಾಗೂ 6 ರಿಂದ 7 ಅಡಿ ಅಗಲವಿದೆ. ಸಾಲಿಗ್ರಾಮ ಕಲ್ಲಿನಿಂದ ವಿಗ್ರಹವನ್ನು ನಿರ್ಮಿಸಲಾಗಿದೆ. ರಾಜಕೀಯ ಪಕ್ಷಗಳ ನೆಚ್ಟಿನ ದೇವಾಲಯವೂ ಇದಾಗಿದೆ.
3. ಆನೆಗುಡ್ಡ ವಿನಾಯ ದೇವಸ್ಥಾನ, ಕುಂದಾಪುರ
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿರುವ ಆನೆಗುಡ್ಡ ವಿನಾಯಕ ದೇವಸ್ಥಾನ ಅತ್ಯಂತ ಪುರಾನತವಾಗಿದ್ದು, ಸಾವಿರಾರು ಮಂದಿ ಭಕ್ತರನ್ನು ಹೊಂದಿರುವ ದೇವಾಲಯವಾಗಿದೆ. ಈ ದೇವಾಲಯವನ್ನು ಕೃತಯುಗದಲ್ಲಿ ಹರಿಹರ ಕ್ಷೇತ್ರವೆಂದೂ, ತ್ರೇತಾಯುಗದಲ್ಲಿ ಮಧುಕಾನನವೆಂದೂ, ದ್ವಾಪರ ಯುಗದಲ್ಲಿ ಗೌತಮ ಕ್ಷೇತ್ರವೆಂದರೂ ಹಾಗೂ ಕಲಿಯುಗದಲ್ಲಿ ಕುಂಭಾಸಿ ಎಂದೂ ಕರೆಯುತ್ತಾರೆ.
4. ಶರವು ಮಹಾಗಣತಿ ದೇವಸ್ಥಾನ
ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿರುವ ಶರವು ಮಹಾಗಣಪತಿ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹಂಪನಕಟ್ಟೆಯಲ್ಲಿದೆ. ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಈ ದೇವಾಲಯಕ್ಕೆ ಒಂದು ಕಥೆ. 8 ಶತಮಾನಗಳ ಹಿಂದೆ ತುಳು ಪ್ರದೇಶದ ಅತ್ಯಂತ ಶಕ್ತಿಶಾಲಿ ಮಹಾರಾಜ ವೀರಬಾಹು ಬೇಟೆಯ ಸಮಯದಲ್ಲಿ ಹುಲಿಯ ಬದಲು ತಪ್ಪಿ ಹಸುವನ್ನು ಬಾಣದಿಂದ ಹೊಡೆದಿರುತ್ತಾನೆ. ಈ ಘೋರ ಪಾಪದಿಂದ ಮುಕ್ತಿ ಪಡೆಯಲು ಒಂದು ಶಿವನ ದೇವಾಲಯವನ್ನು ನಿರ್ಮಿಸಬೇಕಾಗಿರುತ್ತದೆ. ಇದಕ್ಕೂ ಮುನ್ನ ಒಂದು ತೊಟ್ಟಿಯನ್ನು ನಿರ್ಮಿಸಿ ಆ ನಂತರ ಒಂದು ಕಲ್ಲಿನ ಬಸವ ವಿಗ್ರಹವನ್ನು ನಿರ್ಮಿಸುತ್ತಾನೆ. ಬಳಿಕ ಶಿವನ ದೇವಾಲಯ, ಕಲಾನಂತರ ಈ ದೇವಾಲಯದ ದಕ್ಷಿಣ ಗೋಡೆಯಲ್ಲಿ ದಶಭುಜ ಮಹಾಗಣಪತಿ ಉದ್ಭವಿಸಿತು ಎಂದು ಹೇಳುತ್ತಾರೆ.
5. ಇಡಗುಂಜಿ ವಿನಾಯಕ ದೇವಾಲಯ
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಇಡಗುಂಜಿ ವಿನಾಯಕ ದೇವಾಲಯವು ಸುಮಾರು 500 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಇಲ್ಲಿನ ಗಣಪತಿ ದರ್ಶನಕ್ಕೆ ಪ್ರತಿವರ್ಷ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ. ಇಲ್ಲಿನ ವಿಶೇಷವೆಂದರೆ ಗಣಪತಿ ಮೂರ್ತಿಯನ್ನು ಕಪ್ಪು ಶಿಲೆಯಿಂದ ಮಾಡಲಾಗಿದ್ದು, ನಿಂತ ಭಂಗಿಯಲ್ಲಿದೆ. ಅಪರೂಪದ ಈ ವಿಗ್ರಹ ನೋಡಲು ತುಂಬಾ ಸುಂದರವಾಗಿದೆ. ಗುಣವಂತೇಶ್ವರ ಹಾಗೂ ಮುರುಡೇಶ್ವರ ದೇವಾಲಯಗಳ ಸಮೀಪದಲ್ಲೇ ಇಡಗುಂಜಿ ಸಿದ್ದಿ ವಿನಾಯಕ ದೇವಸ್ಥಾನವಿದೆ. ಇಲ್ಲಿನ ವಿನಾಯಕನನ್ನು ಮಹೋತಭಾರ ಶ್ರೀವಿನಾಯಕ ಎಂದೂ ಕರೆಯಲಾಗುತ್ತದೆ.
6. ಸೌತಡ್ಕ ಮಹಾಗಣಪತಿ
ಬಯಲೇ ಆಲಯವೆಂದು ಕುಳಿತಿರುವ ಸೌತಡ್ಕದ ಗಣೇಶ ಭಕ್ತರ ಪವರ್‌ಫುಲ್ ದೇವರಾಗಿದ್ದಾನೆ. 800 ವರ್ಷಗಳ ಇತಿಹಾಸವನ್ನ ಹೊಂದಿರುವ ಸೌತಡ್ಕ ಗಣಪತಿ ಇಂದಿಗೂ ಬಯಲು ಪ್ರದೇಶದಲ್ಲೇ ಇದ್ದಾನೆ. ಇಲ್ಲಿನ ಗಣಪತಿಗೆ ಯಾವುದೇ ರೀತಿಯ ದೇವಸ್ಥಾನವಾಗಲಿ, ಗರ್ಭಾಂಕಣ, ನವರಂಗ, ಮುಖ ಮಂಟಪ, ರಾಜಗೋಪುರ ಹೀಗೆ ಯಾವುದೂ ಇಲ್ಲ. ಬಯಲಿನಲ್ಲಿ ಕುಳಿತಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸೌತಡ್ಕದಲ್ಲಿ ಈ ಗಣಪತಿ ಮೂರ್ತಿಯನ್ನು ಕಣ್ತುಂಬಿಕೊಳ್ಳಬಹುದು.
7. 101 ಗಣಪತಿ ದೇವಸ್ಥಾನ
ಮೈಸೂರಿನ ತ್ಯಾಗರಾಜನಗರದಲ್ಲಿ 101 ಗಣಪತಿ ದೇವಸ್ಥಾನವಿದೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಇಲ್ಲಿನ ಗಣಪತಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬುದು ಭಕ್ತರ ನಂಬಿಕೆ. ಹೀಗಾಗಿ ದೇವಾಲಯಕ್ಕೆ ಆಗಮಿಸಿ ವಿನಾಯಕನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲುತ್ತಾರೆ. ಮೈಸೂರು ಪ್ರವಾಸದ ಸಮಯದಲ್ಲಿ 101 ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಬಹುದು.
8. ಪಂಚಮುಖಿ ಗಣಪತಿ ದೇವಸ್ಥಾನ
ಪಂಚಮುಖಿ ಗಣಪತಿ ದೇವಾಲಯ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿದೆ. ಈ ಗಣಪತಿ ದೇವಾಲಯದಲ್ಲಿ ವಿನಾಯಕನ ಐದು ಬದಿಗಳನ್ನು ಕಾಣಬಹುದು. ಶಿವ, ಅಯ್ಯಪ್ಪ, ಪಾರ್ವತಿ ದೇವರುಗಳನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ದೇವಾಲಯವು ನೆಲಮಟ್ಟದಿಂದ 30 ಅಡಿ ಗೋಪುರವನ್ನು ಹೊಂದಿದ್ದು, 1984ರ ಫೆಬ್ರವರಿ 6 ರಂದು ಶೃಂಗೇರಿಯ ಅಭಿನವ ವಿದ್ಯಾತೀರ್ಥ ಸ್ವಾಮೀಜಿಗಳು ಗಣಪತಿ ದೇವಸ್ಥಾನದ ಪ್ರತಿಷ್ಠಾಪನಾ ಕಾರ್ಯವನ್ನು ನೆರವೇರಿಸಿದ್ದರು. ನಿತ್ಯ ಪೂಜೆಗಳೊಂದಿಗೆ ವಿಶೇಷ ದಿನಗಳಂದು ಇಲ್ಲಿ ಪೂಜೆಗಳಿಗೆ ಭಕ್ತರು ಸಾಕ್ಷಿಯಾಗುತ್ತಾರೆ.
9. ಸಾಸಿವೆಕಾಳು ಗಣೇಶ, ಹಂಪಿ
ದೈತ್ಯ ಏಕಶಿಲೆಯ ಗಣೇಶ ಮೂರ್ತಿಯನ್ನು ಸಾಸಿವೆಕಾಳು ಗಣೇಶನೆಂದು ಕರೆಯಲಾಗುತ್ತದೆ. ಇಲ್ಲಿನ ಗಣೇಶ ಮೂರ್ತಿಯ ಹೊಟ್ಟೆಯ ಸುತ್ತ ಹಾವನ್ನು ಚಿತ್ರಿಸಿರುವುದನ್ನು ಕಾಣುತ್ತೇವೆ. ಹಿಂದೂ ಪುರಾಣಗಳ ಪ್ರಕಾರ, ಒಮ್ಮೆ ಗಣಪತಿ ಹೊಟ್ಟೆ ತುಂಬಾ ಆಹಾರ ಸೇವಿಸಿರುತ್ತಾನೆ. ಇನ್ನೇನು ಹೊಟ್ಟೆ ಒಡೆದು ಹೋಗುತ್ತೆ ಎನ್ನುವಷ್ಟರಲ್ಲಿ ಗಣಪತಿ ಹಾವನ್ನು ತನ್ನ ಹೊಟ್ಟೆಗೆ ಸುತ್ತಿಕೊಳ್ಳುತ್ತಾನೆ. ಸುಮಾರು 2.4 ಮೀಟರ್ ಅಳತೆಯ ಏಕಶಿಲೆಯ ಗಣೇಶನ ಮೂರ್ತಿ ಇಲ್ಲಿದೆ. ವಿಜಯನಗರ ರಾಜ ಎರಡನೇ ನರಸಿಂಹ ಅವರ ಸ್ಮರಣಾರ್ಥ 1491-1505 ರಲ್ಲಿ ಚಂದ್ರಗಿರಿಯ ವ್ಯಾಪಾರಿಯೊಬ್ಬ ಈ ವಿಗ್ರಹವನ್ನು ನಿರ್ಮಿಸಿದ್ದಾನೆ ಎಂದು ಇತಿಹಾಸ ಹೇಳುತ್ತೆ. ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಸಾಸಿವೆಕಾಳು ಗಣಪತಿ ಮೂರ್ತಿಯನ್ನು ಕಾಣಬಹುದು.
10. ಕಮಂಡಲ ಗಣಪತಿ ದೇವಸ್ಥಾನ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೆಸವೆ ಗ್ರಾಮದ ಕಮಂಡಲ ಗಣಪತಿ ದೇವಸ್ಥಾನ ಕೂಡ ಪ್ರಸಿದ್ಧವಾಗಿದೆ. ಈ ದೇವಾಲಯಕ್ಕೆ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿದೆ. ದೇವಾಲಯವು ಬೆಳಗ್ಗೆ 7.30 ರಿಂದ ಮಧ್ಯಾಹ್ನ 12 ಗಂಟೆಗೆಯವರಿಗೆ ತೆರೆದಿರುತ್ತದೆ. ಮಧ್ಯಾಹ್ನ 12 ಗಂಟೆಯ ನಂತರ ಇಲ್ಲಿ ಪೂಜೆಯಗಳು ನಡೆಯುವುದಿಲ್ಲ. ಕಮಂಡಲ ಗಣಪತಿ ದೇವರ ಭೇಟಿಗೆ ಹೋಗಬೇಕಾದರೆ ಚಿಕ್ಕಮಗಳೂರು ಅಥವಾ ಶಿವಮೊಗ್ಗದಲ್ಲಿ ತಂಗಬೇಕಾಗುತ್ತದೆ.
ಗಮನಿಸಿ: ಇಲ್ಲಿ ನೀಡಲಾಗಿರುವ ಗಣಪತಿ ದೇವಾಲಯಗಳ ಜೊತೆಗೆ ಇನ್ನೂ ಅನೇಕ ಪ್ರಸಿದ್ಧ ಗಣಪತಿ ದೇವಾಲಯಗಳು ಕರ್ನಾಟಕದಲ್ಲಿವೆ. ಆದರೆ ಕೆಲವು ದೇವಸ್ಥಾನಗಳ ಬಗ್ಗೆ ಮಾತ್ರ ಇಲ್ಲಿ ಮಾಹಿತಿ ನೀಡಲಾಗಿದೆ.