ಮನೆಯಲ್ಲಿ ಆಯುಧ ಪೂಜೆ ಮಾಡುವುದು ಹೇಗೆ, ಯಾವೆಲ್ಲಾ ಪರಿಕರಗಳನ್ನು ಪೂಜೆಗೆ ಇಡಬಹುದು, ಪೂಜಾಕ್ರಮ ಹೇಗಿರಬೇಕು; ಇಲ್ಲಿದೆ ಮಾಹಿತಿ
ನವರಾತ್ರಿಯ 9ನೇ ದಿನ ಅಂದರೆ ಮಹಾನವಮಿಯ ದಿನದಂದು ಆಯುಧ ಪೂಜೆ ಮಾಡುವುದು ವಿಶೇಷ. ಈ ದಿನ ವಾಹನಗಳು, ಯಂತ್ರಗಳು, ಮನೆಯಲ್ಲಿರುವ ದಿನಬಳಕೆ ವಸ್ತುಗಳ ಜೊತೆಗೆ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೂ ಪೂಜೆ ಸಲ್ಲಿಸಲಾಗುತ್ತದೆ. ಮನೆಯಲ್ಲಿ ಆಯುಧ ಪೂಜೆ ಮಾಡುವುದು ಹೇಗೆ, ಈ ದಿನ ಯಾವೆಲ್ಲಾ ಪರಿಕರಗಳಿಗೂ ಪೂಜೆ ಸಲ್ಲಿಸಬೇಕು ಎಂಬ ವಿವರ ಇಲ್ಲಿದೆ.
ದೇಶದಾದ್ಯಂತ ನವರಾತ್ರಿ ಸಂಭ್ರಮ ಕಳೆಗಟ್ಟಿದೆ. ನಾಳೆ (ಅಕ್ಟೋಬರ್ 11) ನವರಾತ್ರಿಯ ಕೊನೆಯ ದಿನ. ಈ ದಿನದಂದು ಆಯುಧ ಪೂಜೆ ಮಾಡುವುದು ವಾಡಿಕೆ. ದಕ್ಷಿಣ ಭಾರತದಲ್ಲಿ ಆಯುಧ ಪೂಜೆಗೆ ವಿಶೇಷ ಮಹತ್ವವಿದೆ. ಈ ದಿನ ಮನೆ, ಕಚೇರಿ, ಕಾರ್ಖಾನೆಗಳು ಸೇರಿದಂತೆ ದೇವಾಲಯಗಳಲ್ಲೂ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಕಾರ್ಖಾನೆ, ಕಚೇರಿಯಂತಹ ಸ್ಥಳಗಳಲ್ಲಿ ಅದ್ದೂರಿಯಾಗಿ ಆಯುಧ ಪೂಜೆ ನೆರವೇರುತ್ತದೆ.
ಮನೆಯಲ್ಲೂ ವಿವಿಧ ಪರಿಕರಗಳನ್ನು ಇರಿಸಿ ಪೂಜೆ ಸಲ್ಲಿಸುವ ಮೂಲಕ ದುರ್ಗಾಮಾತೆಯನ್ನು ಒಲಿಸಿಕೊಳ್ಳಬಹುದು. ಹಾಗಾದರೆ ಮನೆಯಲ್ಲೇ ಆಯುಧ ಪೂಜೆ ಮಾಡುವುದು ಹೇಗೆ, ಯಾವೆಲ್ಲಾ ಪರಿಕರಗಳನ್ನು ಇರಿಸಬಹುದು ಎಂಬಿತ್ಯಾದಿ ವಿವರ ಇಲ್ಲಿದೆ.
ಮನೆಯಲ್ಲಿ ಆಯುಧ ಪೂಜೆಗೆ ಏನೆಲ್ಲಾ ಇರಿಸಬಹುದು
ಆಯುಧ ಪೂಜೆಯು ದುರ್ಗಾ ಮಾತೆಯು ಮಹಿಷಾಸುರನನ್ನು ವಧೆ ಮಾಡಿದ ದಿನವನ್ನು ನೆನಪಿಸುತ್ತದೆ. ಈ ಸಂದರ್ಭದಲ್ಲಿ ದುರ್ಗಾದೇವಿಯು ವಿವಿಧ ಮಹಿಷಾಸುರನನ್ನು ಕೊಲ್ಲಲ್ಲು ಆಯುಧಗಳನ್ನು ಪ್ರಯೋಗಿಸಿದ್ದಳು. ಹಿಂದೆಲ್ಲಾ ಕತ್ತಿ, ಚಾಕು, ಕೊಡಲಿಯಂತಹ ವಸ್ತುಗಳನ್ನು ಆಯುಧ ಪೂಜೆಗೆ ಇರಿಸಲಾಗುತ್ತಿತ್ತು. ಈ ಕಾಲದಲ್ಲಿ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನೂ ಇರಿಸಿ ಆಯುಧಪೂಜೆ ಮಾಡುವುದು ವಿಶೇಷ.
ಮನೆಯಲ್ಲಿ ಇರುವ ಕತ್ತಿ, ಚಾಕು, ಗ್ರೈಂಡರ್, ಮಿಕ್ಸಿ, ಕಂಪ್ಯೂಟರ್, ಮೊಬೈಲ್ ಲ್ಯಾಪ್‌ಟಾಪ್, ಮಕ್ಕಳ ಆಟಿಕೆಗಳು, ಕೃಷಿ ಪರಿಕರಗಳು ಹಾಗೂ ಇತರ ಗೃಹಬಳಕೆಯ ವಸ್ತುಗಳನ್ನು ಇರಿಸಿ ಪೂಜೆ ಮಾಡಬಹುದು. ಸಂಗೀತ ವಾದ್ಯಗಳು, ಪುಸ್ತಕ ಹಾಗೂ ಪೆನ್ನನ್ನು ಕೂಡ ಆಯುಧ ಪೂಜೆಗೆ ಇರಿಸಬಹುದು. ಈ ಎಲ್ಲವನ್ನೂ ಒಂದೇ ಜಾಗದಲ್ಲಿ ಇರಿಸಿ ಅಂದರೆ ಜೋಡಿಸಿ ಪೂಜೆ ಮಾಡಬೇಕು.
ಪೂಜೆ ಮಾಡುವ ಮುನ್ನ ಈ ಕ್ರಮ ಪಾಲಿಸಿ
ಆಯುಧ ಪೂಜೆಗೆ ನೀವು ಯಾವುದೇ ವಸ್ತುಗಳನ್ನು ಇರಿಸುವ ಮೊದಲು ಅದನ್ನು ಸ್ಚಚ್ಛ ಮಾಡಬೇಕು. ಮಿಕ್ಸರ್, ಗ್ರೈಂಡರ್ ಅನ್ನು ಪೂಜೆ ಮಾಡುವುದಾದರೆ ಅವುಗಳ ಪ್ರತಿ ಭಾಗವನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಒಣಗಿಸಿ ನಂತರ ಪೂಜೆಗೆ ಇಡಿ. ಕತ್ತಿ, ಚಾಕುವಿನಂತಹ ವಸ್ತುಗಳನ್ನು ತೊಳೆಯುವಾಗ ಹುಣಸೆರಸ ಬಳಸಬಹುದು. ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್‌ಗಳನ್ನ ಬಟ್ಟೆಯಿಂದ ನೀಟಾಗಿ ಒರೆಸಿ ನಂತರವಷ್ಟೇ ಪೂಜೆಗೆ ಇಡಬೇಕು.
ಆಯುಧ ಪೂಜೆ ಮಾಡಲು ಪರಿಕರಗಳು
ಪೂಜೆ ಮಾಡುವ ಅರಿಸಿನ, ಕುಂಕುಮ, ಎಲೆ, ಅಡಿಕೆ, ಕುಂಬಳಕಾಯಿ, ನಿಂಬೆಹಣ್ಣು, ಬಾಳೆಹಣ್ಣು, ಇತರ ಹಣ್ಣುಗಳು, ಅಗರಬತ್ತಿ, ಕರ್ಪೂರ, ದೀಪ, ತೆಂಗಿನಕಾಯಿ, ಸಿಹಿ ತಿನಿಸುಗಳು ಈ ಎಲ್ಲವನ್ನೂ ಅಗತ್ಯವಾಗಿದೆ. ಕೆಲವು ಕಡೆ ಆಯಧ ಪೂಜೆಗೆ ಮಂಡಕ್ಕಿಯನ್ನು ನೈವೇದ್ಯ ಮಾಡುತ್ತಾರೆ. ಅಲ್ಲದೇ ಆಯುಧ ಪೂಜೆ ಮುಗಿದ ನಂತರ ಸಿಹಿ ತಿಂಡಿ ಹಂಚುವುದು ಕೂಡ ವಾಡಿಕೆ.
ಪೂಜೆ ಮಾಡುವ ವಿಧಾನ
ಬೆಳಗ್ಗೆ ಬೇಗ ಎದ್ದು, ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ, ದೇವರ ಕೋಣೆಯನ್ನು ಸ್ವಚ್ಛಗೊಳಿಸಿ ನಿತ್ಯ ಪೂಜೆ ಮುಗಿಸಿ. ಎಲ್ಲಾ ಆಯುಧಗಳಿಗೆ ಗಂಗಾಜಲ ಸಿಂಪಡಿಸಿ. ಗಂಗಾಜಲ ಇಲ್ಲದೆ ಇದ್ದರೆ ಕುಂಕುಮದ ನೀರು ಸಿಂಪಡಿಸಬಹುದು. ವಾಹನ ಅಥವಾ ಆಯುಧಗಳನ್ನು ಹೂವುಗಳಿಂದ ಅಲಂಕರಿಸಿ. ಆಯುಧಗಳಿಗೆ ಕುಂಕುಮ, ತಿಲಕ ಹಚ್ಚಿ. ಮಹಾಕಾಳಿ ಸ್ತ್ರೋತ್ರ ಪಠಿಸಿ. ಆಯುಧಗಳಿಗೆ ಆರತಿ ಮಾಡಿ. ಆಯುಧ ಪೂಜೆ ಮಾಡಿದ ದಿನ ಆ ಆಯುಧಗಳನ್ನು ಬಳಸಬೇಡಿ.