ಚೀನಾ ಪದ್ಧತಿ ವರ್ಷ ಭವಿಷ್ಯ 2025: ಡ್ರ್ಯಾಗನ್ ಗುಂಪಿಗೆ ಸೇರಿದವರು ಮಾರ್ಚ್ ನಂತರ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು
ಜ್ಯೋತಿಷ್ಯದ ನಂಬಿಕೆ ಒಂದೊಂದು ದೇಶದಲ್ಲಿ ಒಂದೊಂದು ಥರ. ಇಂದಿನ ವರ್ಷ ಭವಿಷ್ಯಕ್ಕೆ ಚೀನಾದಲ್ಲಿ ಅನುಸರಿಸುವ ಜ್ಯೋತಿಷ್ಯ ನಂಬಿಕೆ ಆಧರಿಸಿ ವಿವರ ನೀಡಲಾಗಿದೆ. ಚೀನಾದಲ್ಲಿ ಒಂದು ವರ್ಷಕ್ಕೆ ಒಂದು ಪ್ರಾಣಿಯ ಚಿಹ್ನೆ. ಅಂದರೆ 12 ವರ್ಷಕ್ಕೆ 12 ಪ್ರಾಣಿ. ಈ ಪದ್ಧತಿಯಲ್ಲಿ 5ನೇ ಚಿಹ್ನೆಯು ಡ್ರ್ಯಾಗನ್ ಆಗಿರುತ್ತದೆ. 2025ರಲ್ಲಿ ರಾಶಿ ಭವಿಷ್ಯ ಹೇಗಿರುತ್ತೆ ಎಂದು ತಿಳಿಯೋಣ.
ವರ್ಷ ಭವಿಷ್ಯ 2025 ಚೀನಾ ಪದ್ಧತಿ: ಇಲ್ಲಿ ನೀಡಿರುವುದು 2025ರ ವರ್ಷಭವಿಷ್ಯ. ಆದರೆ ಇದು ಭಾರತದಲ್ಲಿ ಅಲ್ಲ; ಚೀನಾ ದೇಶದಲ್ಲಿ ಅನುಸರಿಸುವ ವಿಧಾನ. ಅಲ್ಲಿ ಹನ್ನೆರಡು ವರ್ಷಕ್ಕೆ ಒಂದು ಚಕ್ರ. ಅಂದರೆ ಪ್ರತಿ ವರ್ಷಕ್ಕೆ ಒಂದರಂತೆ ಹನ್ನೆರಡು ವರ್ಷಕ್ಕೆ ಒಂದೊಂದು ಪ್ರಾಣಿಯ ಚಿಹ್ನೆಯನ್ನು ಇರಿಸಿಕೊಂಡಿದ್ದಾರೆ. ಹನ್ನೆರಡು ವರ್ಷದ ನಂತರ ಅವೇ ಆರಂಭದಿಂದ ಪುನರಾವರ್ತನೆ ಆಗುತ್ತವೆ. ಹಾಗೆ ಅದು ಶುರುವಾಗುವುದು ಇಲಿಯಿಂದ. ಆ ನಂತರ ಎತ್ತು, ಹುಲಿ, ಮೊಲ, ಡ್ರ್ಯಾಗನ್, ಹಾವು, ಕುದುರೆ, ಕುರಿ, ಕೋತಿ, ಹುಂಜ, ನಾಯಿ ಮತ್ತು ಹಂದಿ. ಥೇಟ್ ಭಾರತದಲ್ಲಿ ಇರುವಂತೆಯೇ; ಆದರೆ ಇಲ್ಲಿ ಮೇಷದಿಂದ ಮೀನದ ತನಕ ಹೆಸರನ್ನು ನೀಡಿದ್ದೇವೆ. ಆದರೆ ಚೀನಾದಲ್ಲಿ ಒಂದೊಂದು ಇಸವಿಗೆ ಒಂದೊಂದು ಪ್ರಾಣಿಗಳ ಹೆಸರನ್ನು ನೀಡುತ್ತಾರೆ. ಆ ಇಡೀ ವರ್ಷದಲ್ಲಿ ಯಾವುದೇ ತಿಂಗಳು ಅಥವಾ ದಿನದಂದು ಹುಟ್ಟಿದರೂ ಅವರಿಗೆ ಆ ಪ್ರಾಣಿಯೇ ರಾಶಿ ಅಂದುಕೊಳ್ಳಬೇಕು. 2025ನೇ ಇಸವಿಯನ್ನು ಪ್ರತಿನಿಧಿಸುವುದು ‘ಮರದ ಹಾವು (ವುಡ್ ಸ್ನೇಕ್)‘. ಇನ್ನು ಯಾರೆಲ್ಲಾ ‘ಡ್ರ್ಯಾಗನ್‘ ಪ್ರತಿನಿಧಿಸುತ್ತಾರೋ ಅವರ ವರ್ಷ ಭವಿಷ್ಯ ಈ ಲೇಖನದಲ್ಲಿದೆ.
ಈ ಡ್ರ್ಯಾಗನ್ ಗುಂಪನ್ನು ಪ್ರತಿನಿಧಿಸುವವರು 2025ರಲ್ಲಿ ಬಹಳಷ್ಟು ಉತ್ತಮ ಅವಕಾಶಗಳನ್ನು ಹೊಂದಿರುತ್ತಾರೆ, ಜೊತೆಗೆ ರಿಸ್ಕ್ ಕೂಡಾ ಎದುರಿಸಬೇಕಾಗಿರುತ್ತದೆ. ಡ್ರ್ಯಾಗನ್‌ಗಳು ಇಚ್ಛಾಶಕ್ತಿ ಮತ್ತು ಉತ್ಸಾಹದೊಂದಿಗೆ ಸಂಬಂಧ ಹೊಂದಿದೆ. ಯಾವುದೇ ಕ್ಷೇತ್ರವಾಗಿರಲಿ ಯಾವಾಗ ಮುಂದೆ ಹೆಜ್ಜೆ ಇಡಬೇಕು? ಯಾವಾಗ ಕಾಯಬೇಕು? ಎಂಬುದರ ಬಗ್ಗೆ ನೀವು ತಿಳಿದುಕೊಳ್ಳುವುದು ಅಗತ್ಯವಾಗಿದೆ. ನಿಮ್ಮ ವೈಯಕ್ತಿಕ, ವೃತ್ತಿ ಜೀವನದ ವಿಚಾರಗಳಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. ನಿಮ್ಮ ಕನಸುಗಳನ್ನು , ಗುರಿಗಳನ್ನು ನನಸು ಮಾಡಿಕೊಳ್ಳುವಲ್ಲಿ ಈ ವರ್ಷ ಸಹಕಾರಿಯಾಗಿದೆ.
1952, 1964, 1976, 1988, 2000, 2012, 2024 ರಲ್ಲಿ ಜನಿಸಿದವರು ʼಡ್ರ್ಯಾಗನ್ʼ
ಉದ್ಯೋಗ-ವೃತ್ತಿ ಭವಿಷ್ಯ
2025 ರಲ್ಲಿ, ವೃತ್ತಿಜೀವನದಲ್ಲಿ ನಿಮಗೆ ಅನೇಕ ಅವಕಾಶಗಳು ಒದಗಿಬಂದರೂ, ಅದರಲ್ಲಿ ಸಾಕಷ್ಟು ರಿಸ್ಕ್ ಇದೆ. ಆದ್ದರಿಂದ ಅದನ್ನು ಚಾಲೆಂಜ್ ಆಗಿ ಸ್ವೀಕರಿಸಿ , ಉತ್ತಮವಾಗಿ ನಿರ್ವಹಿಸಬೇಕು. ತಮ್ಮ ವೃತ್ತಿ ಜೀವನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಯಸುತ್ತಿರುವವರಿಗೆ ಇದು ಉತ್ತಮ ಅವಕಾಶದ ಅವಧಿಯಾಗಿದೆ. ಕೆಲಸ ಹುಡುಕುತ್ತಿರುವವರಿಗೆ ಉದ್ಯೋಗ ದೊರೆಯುತ್ತದೆ. ಡ್ರ್ಯಾಗನ್‌ಗಳು ಸಾಹಸಮಯ ಪ್ರವೃತ್ತಿಯನ್ನು ಹೊಂದಿರುವುದರಿಂದ ನಿಮ್ಮ ಕೆಲಸದಲ್ಲಿ ಏನಾದರೂ ಸಾಧಿಸಲು ಇದು ಉತ್ತಮ ಸಮಯವಾಗಿದೆ. ಹಾಗೇ ನೀವು ಹೊಸ ಉದ್ಯೋಗ ಹುಡುಕುತ್ತಿದ್ದರೆ, ನಿಮಗೆ ವಿಫುಲ ಅವಕಾಶಗಳಿರುವ ಸ್ಥಾನಕ್ಕೆ ಆದ್ಯತೆ ನೀಡಿ. ಕಚೇರಿ ಮೀಟಿಂಗ್‌ಗಳಲ್ಲಿ ನಿಮ್ಮ ಐಡಿಯಾಗಳನ್ನು ಹಂಚಿಕೊಳ್ಳಿ. ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಇರಲಿ. ಇದರಿಂದ ನೀವು ಇನ್ನಷ್ಟು ಎತ್ತರಕ್ಕೆ ಬೆಳೆಯುವಿರಿ. ಕೆಲಸದ ಸ್ಥಳದಲ್ಲಿ ರಾಜಕೀಯದಿಂದ ನಿಮ್ಮ ಕೆಲಸಗಳಿಗೆ ಅಡ್ಡಿಯುಂಟಾಗಬಹುದು. ವಾದ ವಿವಾದ ಇಲ್ಲದೆ, ಎಲ್ಲವನ್ನೂ ತಾಳ್ಮೆಯಿಂದ ನಿಭಾಯಿಸಿ.
ಹಣಕಾಸು ಭವಿಷ್ಯ
2025 ರಲ್ಲಿ, ಡ್ರ್ಯಾಗನ್ ಗುಂಪಿಗೆ ಸೇರಿದವರ ಆರ್ಥಿಕ ಭವಿಷ್ಯ ಚೆನ್ನಾಗಿದೆ. ನೀವು ಉತ್ತಮ ಹೂಡಿಕೆ ಮತ್ತು ತಮ್ಮ ಸಂಪನ್ಮೂಲಗಳಗಳನ್ನು ಒಂದೊಳ್ಳೆ ರೀತಿಯಲ್ಲಿ ಹೂಡಿಕೆ ಮಾಡುವಲ್ಲಿ ಗಮನ ಕೇಂದ್ರೀಕರಿಸುವಿರಿ. ಲಾಭ ಮಾಡುವಲ್ಲಿ ನಿಮಗೆ ಅನೇಕ ಅವಕಾಶ ದೊರೆಯುತ್ತದೆ. ಸ್ವಲ್ಪ ಕಷ್ಟಪಟ್ಟರೆ ಷೇರು ಮಾರುಕಟ್ಟೆಯಲ್ಲಿ ನೀವು ಒಳ್ಳೆ ಲಾಭ ಮಾಡಬಹುದು. ಜೊತೆಗೆ ಭವಿಷ್ಯದಲ್ಲಿ ನಿಮಗೆ ಲಾಭ ನೀಡುವ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದು ಬಹಳ ಮುಖ್ಯವಾಗಿದೆ. ನೀವು ಹೈಟೆಕ್ ಯೋಜನೆಗಳಲ್ಲಿ ಆಸಕ್ತಿ ಹೊಂದಿರುವುದರಿಂದ ಡಿಜಿಟಲ್ ಸ್ವತ್ವುಗಳ ಕಡೆ ಕೂಡಾ ಗಮನ ಹರಿಸಬಹುದು. ಈಗಾಗಲೇ ಸ್ವಂತ ವ್ಯಾಪಾರ ವ್ಯವಹಾರಗಳನ್ನು ಹೊಂದಿರುವ ಈ ಗುಂಪಿನವರು ತಮ್ಮ ವ್ಯಾಪಾರಗಳನ್ನು ವಿಸ್ತರಿಸಲು ಇದು ಉತ್ತಮ ಸಮಯವಾಗಿದೆ.
ಪ್ರೀತಿ-ಪ್ರೇಮ, ಮದುವೆ ಇತ್ಯಾದಿ
ಡ್ರ್ಯಾಗನ್ ಗುಂಪಿಗೆ ಸೇರಿದವರಿಗೆ 2025 ರೋಚಕ ಕ್ಷಣಗಳಿಂದ ತುಂಬಿರುತ್ತದೆ. ನಿಮ್ಮ ಸಂಬಂಧದಲ್ಲಿ ನೀವು ಹೆಚ್ಚಿನ ಕಾಳಜಿ ತೋರಿದರೆ ಸಂತೋಷದ ಕ್ಷಣಗಳನ್ನು ಹೊಂದಬಹುದು. ಈ ಗುಂಪಿನವರು ಹೊಸ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ. ನಿಮ್ಮ ವ್ಯಕ್ತಿತ್ವವು ಎಲ್ಲರ ಗಮನ ಸೆಳೆಯುತ್ತದೆ. ಪಾರ್ಟಿ, ದೂರ ಪ್ರಯಾಣದಲ್ಲಿ ನೀವು ವಿಶೇಷ ವ್ಯಕ್ತಿಯೊಬ್ಬರನ್ನು ಭೇಟಿ ಆಗಲಿದ್ದೀರಿ. ಆನ್‌ಲೈನ್ ಡೇಟಿಂಗ್ ಕೂಡಾ ನಿಮಗೆ ಸಹಾಯವಾಗಬಹುದು. ಆದರೆ ಸಂಬಂಧಗಳಿಗೆ ಹೊಂದಿಕೊಳ್ಳುವ ಮುನ್ನ ನಿಮ್ಮ ಹಾಗೂ ಅವರ ಬೇಕು ಬೇಡಗಳ ಬಗ್ಗೆ ಒಬ್ಬರಿಗೊಬ್ಬರು ತಿಳಿದುಕೊಳ್ಳುವುದು ಉತ್ತಮ. ಈಗಾಗಲೇ ಪ್ರೀತಿಯಲ್ಲಿರುವವರು ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಇದು ಉತ್ತಮ ಸಮಯ. ನಿಮ್ಮ ಆಲೋಚನೆಗಳು, ಭಾವನೆಗಳು ಮತ್ತು ನಿರೀಕ್ಷೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ. ಇದು ಹೊಸ ಸಂಬಂಧದಲ್ಲಿ ಸಂತೋಷವನ್ನು ಉಂಟು ಮಾಡುತ್ತದೆ.
ಆರೋಗ್ಯ ಭವಿಷ್ಯ
ಈ ವರ್ಷ ಆರೋಗ್ಯದ ಕಡೆಗೆ ನೀವು ಹೆಚ್ಚಿನ ಗಮನ ಹರಿಸಬೇಕು. ನಿಮ್ಮ ದೇಹದ ಅಗತ್ಯಗಳನ್ನು ಪೂರೈಸಿ. ಈ ವರ್ಷ ನೀವು ಗಂಟಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಗಂಟಲಿನ ಆರೋಗ್ಯವನ್ನು ವೃದ್ಧಿಸುವ ಬಿಸಿ ನೀರು, ಗಿಡಮೂಲಿಕೆಗಳ ಚಹಾವನ್ನು ಸೇವಿಸಿ. ಮಾರ್ಚ್ ತಿಂಗಳಲ್ಲಿ ವಿಶೇಷವಾಗಿ ನೀವು ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕು. ಗಂಟಲಿನ ಸಮಸ್ಯೆ ಜೊತೆಗೆ ಉಸಿರಾಟ ಸಮಸ್ಯೆ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕೂಡಾ ನಿಮಗೆ ಕಾಡಬಹುದು. ಮಾನಸಿಕ ಆರೋಗ್ಯವನ್ನು ಕೂಡಾ ಕಡೆಗಣಿಸದಿರಿ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)