ವಿಶ್ವದ 100 ಬೆಸ್ಟ್ ಆಹಾರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ 4 ಖಾದ್ಯಗಳು; ಹೈದ್ರಾಬಾದ್ ಬಿರಿಯಾನಿ ಸೇರಿ ಯಾವೆಲ್ಲಾ ಲಿಸ್ಟ್‌ನಲ್ಲಿವೆ?
ವಿಶ್ವದ ಟಾಪ್ 100 ಆಹಾರಗಳ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಭಾರತದ ಹೈದ್ರಾಬಾದಿ ಬಿರಿಯಾನಿ ಸೇರಿ ಒಟ್ಟು 4 ಆಹಾರಗಳು ಸ್ಥಾನ ಪಡೆದಿವೆ. ಹಾಗಾದರೆ ವಿಶ್ವದ ಟಾಪ್ ಆಹಾರಗಳ ಪಟ್ಟಿಗೆ ಸೇರಿದ ಆ ಖಾದ್ಯಗಳು ಯಾವುವು, ಇದರಲ್ಲಿ ನಿಮಗೂ ಇಷ್ಟವಾಗಿರುವ ಖಾದ್ಯ ಇರಬಹುದು ಗಮನಿಸಿ.
ಜಾಗತಿಕ ಆಹಾರ ಮಾರ್ಗದರ್ಶಿ ಟೇಸ್ಟ್ ಅಟ್ಲಾಸ್ ವಿಶ್ವದ ಟಾಪ್ 100 ಬೆಸ್ಟ್ ಆಹಾರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ಆಹಾರಗಳಿಗೆ ರೇಟಿಂಗ್ ನೀಡುವ ಸಂಸ್ಥೆಯಾಗಿದ್ದು, ಪ್ರತಿ ಬಾರಿ ವಿಶ್ವದ ವಿವಿಧ ದೇಶಗಳ ಆಹಾರಗಳಲ್ಲಿ ಯಾವುದು ಬೆಸ್ಟ್ ಎಂಬ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಇದೀಗ ಟೇಸ್ಟ್ ಅಟ್ಲಾಸ್ ವಿಶ್ವದ 100 ಆಹಾರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ವಿಶ್ವದ 100 ಆಹಾರಗಳ ಪಟ್ಟಿಯಲ್ಲಿ ಭಾರತದ 4 ಆಹಾರ ಖಾದ್ಯಗಳು ಸ್ಥಾನ ಪಡೆದಿದೆ. ಇದು ಭಾರತೀಯರಿಗೆ ಸಾಕಷ್ಟು ಸಂತೋಷ ಮೂಡಿಸಿರುವ ವಿಷಯವಾಗಿದೆ. ಇದರಲ್ಲಿ ಹಲವು ನಾನ್‌ವೆಜ್ ಪ್ರಿಯರ ಹೈದ್ರಾಬಾದಿ ಬಿರಿಯಾನಿ ಕೂಡ ಸೇರಿದೆ. 100 ಆಹಾರ ಪೈಕಿ ಟಾಪ್ 50 ರಲ್ಲಿ ಮುರ್ಗ್ ಮಖಾನಿ ಹಾಗೂ ಹೈದ್ರಾಬಾದಿ ಬಿರಿಯಾನಿ ಕೂಡ ಸೇರಿರುವುದು ವಿಶೇಷ.
ಯಾವ ಆಹಾರ, ಯಾವ ಸ್ಥಾನದಲ್ಲಿದೆ?
ಭಾರತದ ಅದರಲ್ಲೂ ಉತ್ತರ ಭಾರತದ ಪ್ರಸಿದ್ಧ ಖಾದ್ಯ ಮುರ್ಗ್ ಮಖಾನಿ ವಿಶ್ವದ 100 ಟಾಪ್ ಆಹಾರ ಖಾದ್ಯಗಳ ಪಟ್ಟಿಯಲ್ಲಿ 29ನೇ ಸ್ಥಾನ ಗಳಿಸಿದೆ. ದಕ್ಷಿಣ ಭಾರತದ ಮಾಂಸಾಹಾರ ಪ್ರಿಯರ ನೆಚ್ಚಿನ ಖಾದ್ಯ ಹೈದ್ರಾಬಾದಿ ಬಿರಿಯಾನಿ 31ನೇ ಸ್ಥಾನ ಗಳಿಸಿದೆ. ಈ ಎರಡೂ ಟಾಪ್ 50ರ ಒಳಗೆ ಇದ್ದರೆ ಚಿಕನ್ 65 ಹಾಗೂ ಖೀಮಾ 100 ಸ್ಥಾನದ ಒಳಗೆ ಇವೆ. ಚಿಕನ್ 65, 97ನೇ ಸ್ಥಾನ ಗಳಿಸಿದರೆ ಖೀಮಾ 100 ಸ್ಥಾನ ಗಳಿಸಿದೆ.
4 ಖಾದ್ಯಗಳೂ ಮಾಂಸಾಹಾರ
ವಿಶ್ವ 100 ಟಾಪ್ ಖಾದ್ಯಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿದ ಎಲ್ಲಾ ಖಾದ್ಯಗಳು ಮಾಂಸಾಹಾರವಾಗಿವೆ. ಈ ಬಾರಿ ಟೇಸ್ಟ್ ಅಟ್ಲಾಸ್ ಭಾರತದ ಯಾವುದೇ ಸಸ್ಯಹಾರಿ ಖಾದ್ಯಗಳಿಗೆ ಟಾಪ್ 100ರ ಒಳಗಿನ ಸ್ಥಾನ ನೀಡಿಲ್ಲ ಎನ್ನುವುದು ಬೇಸರದ ವಿಚಾರ.
ವಿಶ್ವದ ಟಾಪ್ ಆಹಾರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ 4 ಆಹಾರಗಳಲ್ಲಿ ಹೈದ್ರಾಬಾದಿ ಬಿರಿಯಾನಿ ಹಾಗೂ ಚಿಕನ್ 65 ತುಂಬಾನೇ ಫೇಮಸ್ಸ್, ಈ ಎರಡೂ ಖಾದ್ಯಗಳು ಹಲವು ಮಾಂಸಾಹಾರ ಪ್ರಿಯರಿಗೆ ಫೇವರಿಟ್ ಖಾದ್ಯವಾಗಿರುವುದು ಸುಳ್ಳಲ್ಲ. ಬೆಂಗಳೂರಿನಲ್ಲೂ ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್‌ಗಳಲ್ಲಿ ಹೆಚ್ಚು ಆರ್ಡರ್ ಮಾಡುವುದು ಹೈದ್ರಾಬಾದಿ ಬಿರಿಯಾನಿಯನ್ನು. ವಿದೇಶಿಗರೂ ಕೂಡ ಹೈದ್ರಾಬಾದಿ ಬಿರಿಯಾನಿಯ ರುಚಿ ಹಾಡಿ ಹೊಗಳಿದ್ದಾರೆ.
ಮುರ್ಗ್ ಮುಖಾನಿಯನ್ನ ಬಟರ್ ಚಿಕನ್ ಎಂದೂ ಕೂಡ ಕರೆಯುತ್ತಾರೆ. ಇದು ಕೂಡ ಮಾಂಸಾಹಾರ ಪ್ರಿಯರಿಗೆ ಅಚ್ಚುಮೆಚ್ಚು. ಕೊಂಚ ಸಿಹಿ ರುಚಿ ಇರುವ ಬಟರ್ ಚಿಕನ್ ರೋಟಿ, ಚಪಾತಿ ಜೊತೆ ನೆಂಜಿಕೊಂಡು ತಿನ್ನಲು ಸಖತ್ ಆಗಿರುತ್ತೆ.
ಕೀಮಾವನ್ನು ಮಟನ್‌ನಿಂದ ತಯಾರಿಸಲಾಗುತ್ತದೆ. ಈ ಭಕ್ಷ್ಯವು ಮಸಾಲೆಯುಕ್ತ ಮತ್ತು ರುಚಿಕರವಾಗಿದೆ. ಕೀಮಾವನ್ನು ಚಿಕನ್‌ನೊಂದಿಗೆ ಕೂಡ ತಯಾರಿಸಲಾಗುತ್ತದೆ. ಒಟ್ಟಾರೆಯಾಗಿ, ಟೆಸ್ಟ್ ಅಟ್ಲಾಸ್ ಟಾಪ್-100 ಪಟ್ಟಿಯಲ್ಲಿ ಭಾರತದ ನಾಲ್ಕು ಭಕ್ಷ್ಯಗಳು ಸ್ಥಾನ ಪಡೆದಿವೆ.
ವಿಶ್ವದ ಟಾಪ್ 5 ಖಾದ್ಯಗಳು
ಟೇಸ್ಟ್ ಅಟ್ಲಾಸ್‌ನ ಟಾಪ್ 5 ಸ್ಥಾನಗಳ ಪಟ್ಟಿಯಲ್ಲಿ ಲೆಚೋನಾ (ಕೊಲಂಬಿಯಾ), ಪಿಜ್ಜಾ ನೆಪೋಲೆಟಾನಾ (ಇಟಲಿ), ಪಿಕಾನ್ಹಾ (ಬ್ರೆಜಿಲ್), ರೆಚ್ಟಾ ( ಅಲ್ಜೀರಿಯಾ) ಮತ್ತು ಫಾನೆಂಗ್ ಕರಿ (ಥೈಲ್ಯಾಂಡ್) ಖಾದ್ಯಗಳಿವೆ.