ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಅಸಾಧ್ಯವಾದ ಹಾಸ್ಯಪ್ರಜ್ಞೆ ಇರುತ್ತದೆ, ಶತ್ರುಗಳೂ ಸ್ನೇಹ ಬಯಸಿ ಬರುತ್ತಾರೆ; 24ನೇ ತಾರೀಖಿನಂದು ಜನಿಸಿದವರ ಗುಣ ಲಕ್ಷಣ

ಅಸಾಧ್ಯವಾದ ಹಾಸ್ಯಪ್ರಜ್ಞೆ ಇರುತ್ತದೆ, ಶತ್ರುಗಳೂ ಸ್ನೇಹ ಬಯಸಿ ಬರುತ್ತಾರೆ; 24ನೇ ತಾರೀಖಿನಂದು ಜನಿಸಿದವರ ಗುಣ ಲಕ್ಷಣ

Birth Date Astrology: ಯಾವುದೇ ವ್ಯಕ್ತಿಯ ಗ್ರಹಗತಿಗಳನ್ನು ನೋಡುವಾಗ ಜನ್ಮ ದಿನಾಂಕವನ್ನು ಪರಿಗಣಿಸಲಾಗುತ್ತದೆ. ಅದರ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯ ಹೇಗಿರಬಹುದು ಎಂದು ಅಂದಾಜಿಸಲಾಗುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆಯೂ ಅವರ ಗುಣಧರ್ಮ ಹೇಗಿದೆ ಎಂಬುದನ್ನು ಹೇಳಬಹುದು. 24ನೇ ತಾರೀಕಿನಂದು ಜನಿಸಿದವರ ಗುಣಲಕ್ಷಣ ತಿಳಿಯಿರಿ.

24ನೇ ತಾರೀಕಿನಂದು ಜನಿಸಿದವರ ಗುಣಲಕ್ಷಣ
24ನೇ ತಾರೀಕಿನಂದು ಜನಿಸಿದವರ ಗುಣಲಕ್ಷಣ (PC: Canva)

ಈ ದಿನಾಂಕದಂದು ಜನಿಸಿದವರ ಮನಸ್ಸನ್ನು ಯಾರೂ ಸುಲಭವಾಗಿ ಬದಲಾಯಿಸಲಾರರು. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಬದಲಾಯಿಸದೆ ಸುಲಭವಾಗಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಬಲ್ಲರು. ಚಿಕ್ಕ ವಯಸ್ಸಿನಲ್ಲಿ ಇವರು ಇದ್ದ ಕಡೆ ಒತ್ತಡದ ಸನ್ನಿವೇಶ ನಿರ್ಮಾಣವಾಗುತ್ತದೆ. ಇವರಲ್ಲಿ ಸಾಮಾನ್ಯವಾಗಿ ಭಯವೆಂಬುದೇ ಇರುವುದಿಲ್ಲ. ಆಪತ್ತು ಎದುರಾದಾಗ ಅದರಿಂದ ಪಾರಾಗುವ ಚಾತುರ್ಯ ಇವರಿಗಿರುತ್ತದೆ. ತಮ್ಮ ಮನಸ್ಸನ್ನು ಸದಾ ಹಿಡಿತದಲ್ಲಿ ಇಟ್ಟುಕೊಂಡಿರುತ್ತಾರೆ. ಆದರೆ ಸಣ್ಣ ಪುಟ್ಟ ವಿಚಾರಗಳಿಗೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ.

ಇವರಿಗೆ ಒಳ್ಳೆಯ ವಿದ್ಯೆ ಇರುತ್ತದೆ. ವಿದ್ಯೆಗಿಂತಲೂ ಹೆಚ್ಚಿನ ಬುದ್ಧಿಶಕ್ತಿ ಇರುತ್ತದೆ. ಆದರೆ ಕಲಿತ ವಿದ್ಯೆಗಳಿಗೆ ಇವರ ಬಳಿ ಸರಿಯಾದ ಪುರಾವೆಗಳು ಇರುವುದಿಲ್ಲ. ಬೇರೆಯವರು ಮಾಡುವ ಕೆಲಸ ಕಾರ್ಯಗಳನ್ನು ಒಮ್ಮೆ ವೀಕ್ಷಿಸಿದರೆ ಅದರ ರಹಸ್ಯಗಳೆಲ್ಲಾ ಇವರಿಗೆ ಕರಗತವಾಗುತ್ತದೆ. ಯಾರೊಂದಿಗೂ ದ್ವೇಷವನ್ನು ಬಯಸುವುದಿಲ್ಲ. ಆದರೆ ಇವರೊಂದಿಗೆ ನಡೆಯುವ ವಾದ ವಿವಾದಗಳಲ್ಲಿ ಗೆಲ್ಲಲಾರದೆ ಜನರೆ ದೂರ ಸರಿಯುತ್ತಾರೆ. ಇವರು ಆಡುವ ಒಂದೊಂದು ಮಾತಿನಲ್ಲಿಯೂ ಅನೇಕ ರೀತಿಯ ಅರ್ಥಗಳು ತುಂಬಿರುತ್ತವೆ. ಇವರ ಒಂದು ವಿಶೇಷತೆ ಎಂದರೆ ತಮಗೆ ತಿಳಿದಿರದ ವಿಚಾರದಲ್ಲಿಯೂ ಸಲಹೆ ನೀಡಲು ಪ್ರಯತ್ನಿಸುತ್ತಾರೆ. ಸಾಮಾನ್ಯವಾಗಿ ಇವರ ಜೀವನದಲ್ಲಿ ವಿದ್ಯಾಭ್ಯಾಸವು ಒಮ್ಮೆ ನಿಂತು ನಂತರ ಮುಂದುವರೆಯುತ್ತದೆ.

ಸದಾ ಯಶಸ್ಸಿನ ದಾರಿಯಲ್ಲಿ ಸಾಗುತ್ತಾರೆ

ಎಷ್ಟೇ ಬುದ್ದಿವಂತರಾದರೂ ಕೆಲವೊಮ್ಮೆ ಏನು ಅರಿಯದವರಂತೆ ವರ್ತಿಸುತ್ತಾರೆ. ಸಂದಿಗ್ದ ಸನ್ನಿವೇಶದಿಂದ ಪಾರಾಗಲು ಮಾಡುವ ಉಪಾಯವೇ ಇದು. ಜಗಳ, ಗಲಾಟೆ ಎಂದರೆ ಇಷ್ಟಪಡದ ಇವರು ತಪ್ಪನ್ನು ಒಪ್ಪಿದವರನ್ನು ಕ್ಷಮಿಸಿ ಬಿಡುತ್ತಾರೆ. ಗುರು ಹಿರಿಯರ ಮಾರ್ಗದರ್ಶನದಲ್ಲಿ ಸದಾ ಯಶಸ್ಸಿನಿಂದ ಸಾಗುತ್ತಾರೆ. ಇವರ ಪ್ರಗತಿಯ ಹಾದಿಯಲ್ಲಿ ಹಲವರ ಪಾತ್ರವಿರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಬದಲಾಯಿಸುವುದಿಲ್ಲ. ಎದುರಾಗುವ ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ದೂರವಾಗಿಸುತ್ತಾರೆ. ಸಮಯಕ್ಕೆ ತಕ್ಕಂತೆ ಇವರಲ್ಲಿ ಅಡಗಿರುವ ಬುದ್ಧಿವಂತಿಕೆ ಹೊರ ಬರುತ್ತದೆ. ಇವರಲ್ಲಿನ ಪ್ರತಿಭೆಯು ಹೊರ ಬರಲು ಹೆತ್ತವರು ಅಥವಾ ಪೋಷಕರು ಹೆಚ್ಚಿನ ಪ್ರಯತ್ನ ಪಡಬೇಕು. ಇವರನ್ನು ಸುಲಭವಾಗಿ ನಮ್ಮ ದಾರಿಗೆ ತರಲು ಸಾಧ್ಯವಾಗುವುದಿಲ್ಲ.

ಅನೇಕ ರೀತಿಯ ಹಣಕಾಸಿನ ಯೋಜನೆಗಳಲ್ಲಿ ಹಣ ಹೂಡುತ್ತಾರೆ. ಭವಿಷ್ಯದ ಜೀವನದ ಬಗ್ಗೆ ಸದಾ ಕಾಲ ಯೋಚನೆ ಮತ್ತು ಚಿಂತೆ ಇವರಲ್ಲಿ ಇರುತ್ತದೆ. ಬರವಣಿಗೆಯಲ್ಲಿ ಸದಾಕಾಲ ಮುಂದಿರುತ್ತಾರೆ. ಬೇರೆಯವರ ಅಧಿಕಾರದಲ್ಲಿ ಕೆಲಸ ಮಾಡುವ ಇವರು ಸ್ವಂತ ಉದ್ದಿಮೆಯನ್ನು ಆರಂಭಿಸುವಲ್ಲಿಯೂ ಯಶಸ್ಸನ್ನು ಗಳಿಸುತ್ತಾರೆ. ಇವರ ಶತ್ರುಗಳು ಸಹ ಇವರ ಸ್ನೇಹವನ್ನು ಬಯಸಿ, ರಾಜಿ ಮಾಡಿಕೊಳ್ಳುತ್ತಾರೆ.

ಅಸಾಧ್ಯವಾದ ಹಾಸ್ಯಪ್ರಜ್ಞೆ ಇರುತ್ತದೆ

ಇವರಲ್ಲಿ ಅಸಾಧ್ಯವಾದಂತಹ ಹಾಸ್ಯಪ್ರಜ್ಞೆ ಇರುತ್ತದೆ. ಈ ದಿನಾಂಕದಲ್ಲಿ ಜನಿಸಿದ ಸ್ತ್ರೀಯರಿಗೆ ವಿಶೇಷವಾದಂತಹ ಅನುಕೂಲತೆಗಳು ಇರುತ್ತವೆ. ಇವರಿಗೆ ವಿರೋಧಿಗಳೇ ಇರುವುದಿಲ್ಲ. ಸಾರ್ವಜನಿಕ ವಲಯದಲ್ಲಿ ವಿಶೇಷ ಸ್ಥಾನಮಾನ ದೊರೆಯುತ್ತದೆ. ಜನಪ್ರಿಯತೆಯ ತುತ್ತ ತುದಿಯಲ್ಲಿ ಇರುವ ಇವರು ತಮ್ಮವರಿಂದಲೇ ಅವಮಾನ ಅನುಭವಿಸುತ್ತಾರೆ.

ಪರಿಚಯ ಇರುವವರ ಜೊತೆ ಅಥವಾ ಸಂಬಂಧದಲ್ಲಿ ವಿವಾಹವಾಗುತ್ತದೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಆದರೆ ಇವರ ಮಕ್ಕಳು ಇವರ ಮಟ್ಟಕ್ಕೆ ಬೆಳೆಯಲಾರರು. ಧೈರ್ಯ ಸಾಹಸದ ಗುಣವಿರುವ ಇವರು ಅಪಾಯಕಾರಿ ಕ್ರೀಡೆ ಅಥವಾ ಹವ್ಯಾಸಗಳಲ್ಲಿ ಮುಂದುವರೆಯುತ್ತಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುವ ಕಾರಣ ಯೋಗ ಪ್ರಾಣಾಯಾಮವನ್ನು ಅಭ್ಯಾಸ ಮಾಡುತ್ತಾರೆ. ತಾವು ನಡೆಯುವ ಮಾರ್ಗದಲ್ಲೇ ಮಕ್ಕಳು ನಡೆಯಬೇಕು ಎಂಬುವ ಮನಸ್ಸು ಇರುವುದಿಲ್ಲ. ತಾವು ಸ್ವತಂತ್ರವಾಗಿ ಬೆಳೆದಂತೆಯೇ ಮಕ್ಕಳಿಗೂ ಸ್ವಾತಂತ್ರ್ಯವನ್ನು ನೀಡುತ್ತಾರೆ. ಬಹುತೇಕ ಈ ದಿನಾಂಕದಲ್ಲಿ ಜನಿಸಿದವರು ತಮ್ಮ ಜೀವಿತಾವಧಿಯ ಕೊನೆಯ ದಿನದವರೆಗೂ ಹಣ ಸಂಪಾದನೆಯಲ್ಲಿ ಮುಳುಗಿರುತ್ತಾರೆ. ಇವರಿಗೆ ಇಳಿ ವಯಸಿನಲ್ಲಿಯೂ ವಿಶ್ರಾಂತಿ ಎಂಬುದೇ ಇರುವುದಿಲ್ಲ .

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).