ತುಟಿ ಸಣ್ಣ ಇರೋರು ತುಂಬಾ ಕರುಣಾಮಯಿ? ತುಟಿಯ ಆಕಾರದಿಂದಲೂ ನಿಮ್ಮ ವ್ಯಕ್ತಿತ್ವ ಈ ರೀತಿ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ತುಟಿ ಸಣ್ಣ ಇರೋರು ತುಂಬಾ ಕರುಣಾಮಯಿ? ತುಟಿಯ ಆಕಾರದಿಂದಲೂ ನಿಮ್ಮ ವ್ಯಕ್ತಿತ್ವ ಈ ರೀತಿ ತಿಳಿಯಿರಿ

ತುಟಿ ಸಣ್ಣ ಇರೋರು ತುಂಬಾ ಕರುಣಾಮಯಿ? ತುಟಿಯ ಆಕಾರದಿಂದಲೂ ನಿಮ್ಮ ವ್ಯಕ್ತಿತ್ವ ಈ ರೀತಿ ತಿಳಿಯಿರಿ

ಎಲ್ಲರ ತುಟಿಗಳು ಒಂದೇ ರೀತಿ ಇರುವುದಿಲ್ಲ. ಒಬ್ಬರಿಗೆ ಸ್ವಲ್ಪ ದಪ್ಪ ಇದ್ದರೆ, ಮತ್ತೊಬ್ಬರಿಗೆ ಸಣ್ಣ, ಉದ್ದ ಹೀಗೆಲ್ಲಾ ಇರುತ್ತೆ. ತುಟಿಯ ಆಕಾರದ ಮೂಲಕವೂ ನಮ್ಮ ವ್ಯಕ್ತಿತ್ವ ತಿಳಿಯಬಹುದು. ತುಟಿಗಳು ಸಣ್ಣದಾಗಿದ್ದರೆ ಅವರ ವ್ಯಕ್ತಿತ್ವ ಹೇಗಿರುತ್ತೆ ಅನ್ನೋದನ್ನ ತಿಳಿಯೋಣ. (ಬರಹ: ಜ್ಯೋತಿಷಿ ಎಚ್‌. ಸತೀಶ್)

ತುಟಿಗಳು ಸಣ್ಣ ಇರುವವರ ವ್ಯಕ್ತಿತ್ವ ಹೇಗಿರುತ್ತೆ ಅನ್ನೋದನ್ನು ಇಲ್ಲಿ ನೀಡಲಾಗಿದೆ.
ತುಟಿಗಳು ಸಣ್ಣ ಇರುವವರ ವ್ಯಕ್ತಿತ್ವ ಹೇಗಿರುತ್ತೆ ಅನ್ನೋದನ್ನು ಇಲ್ಲಿ ನೀಡಲಾಗಿದೆ.

ಪ್ರತಿಯೊಬ್ಬರ ಜೀವನ ಮತ್ತು ವ್ಯಕ್ತಿತ್ವ ವಿಭಿನ್ನವಾಗಿರುತ್ತದೆ. ಕೆಲವರಲ್ಲಿ ಸಾಧಾರಣ ಶಕ್ತಿ ಇದ್ದರೆ ಇನ್ನೂ ಕೆಲವರು ಅಸಾಧಾರಣ ಶಕ್ತಿಯಿಂದ ಗಮನ ಸೆಳೆಯುತ್ತಾರೆ. ಒಂದಷ್ಟು ಮಂದಿಗೆ ತಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಲು ಆಸಕ್ತಿ ಹೊಂದಿರುತ್ತಾರೆ. ಮನುಷ್ಯನ ದೇಹದ ಕೆಲವು ಅಂಗಾಂಗಗಳ ಆಕಾರದ ಮೂಲಕ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು. ತುಟಿಗಳು ಆಕಾರದಲ್ಲಿ ಸಣ್ಣದಾಗಿದ್ದರೆ ಅವರ ವ್ಯಕ್ತಿತ್ವ ಹೇಗಿರುತ್ತೆ ಎಂಬುದನ್ನು ಇಲ್ಲಿ ನೀಡಲಾಗಿದೆ. ಕೆಲವರ ತುಟಿ ಅತಿ ಸಣ್ಣಗಿರುತ್ತದೆ. ಇಂಥವರು ಮಧ್ಯಮ ಮಟ್ಟದ ಜೀವನವನ್ನು ನಡೆಸುತ್ತಾರೆ. ಸದಾ ಗಾಂಭೀರ್ಯವನ್ನು ತೋರುತ್ತ ಜನರಿಂದ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಇವರನ್ನು ನೋಡಲು ಕಠೋರವಾಗಿ ಕಾಣುತ್ತಾರೆ. ಆದರೆ ಇವರಲ್ಲಿ ಮನಸ್ಸಿನಲ್ಲಿ ಸ್ನೇಹ ಮತ್ತು ಕರುಣೆ ಮನೆಮಾಡಿರುತ್ತದೆ. ತಮಗೆ ಒಪ್ಪಿಸಿದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಬಲ್ಲರು.

ಆಕಾರದಲ್ಲಿ ತುಟಿ ಸಣ್ಣ ಇರುವವರು ತಮ್ಮ ಮನಸ್ಸಿಗೆ ಇಷ್ಟವೆನಿಸುವ ಮತ್ತು ಸರಿಯನಿಸುವ ಕೆಲಸ ಕಾರ್ಯಗಳನ್ನು ಆಯ್ದುಕೊಳ್ಳುತ್ತಾರೆ. ಸತ್ಯನಿಷ್ಠರು ಆದ್ದರಿಂದ ವಿರೋಧಿಗಳ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಪ್ರಾಮಾಣಿಕ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ. ವಯಸ್ಸಿನ ಅಂತರವಿಲ್ಲದೆ ಎಲ್ಲರಿಗೂ ಸಹಾಯವನ್ನು ಮಾಡುತ್ತಾರೆ. ದಾಂಪತ್ಯ ಜೀವನದಲ್ಲಿ ಸುಖ ಸಂತೋಷಗಳಿಗೆ ಅಡ್ಡಿ ಇರುವುದಿಲ್ಲ.

ಇವರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಕಷ್ಟದ ಕೆಲಸ. ಕೋಪ ಬೇಗನೆ ಬರುತ್ತದೆ. ಕೆಲಸ ಕಾರ್ಯಗಳು ತಡವಾದರೂ ಸಹನೆ ಕಳೆದುಕೊಳ್ಳುತ್ತಾರೆ. ಬೇರೆಯವರನ್ನು ಆಶ್ರಯಿಸದೆ ಸ್ವಂತ ಪರಿಶ್ರಮದಿಂದ ಕೆಲಸ ಸಾಧಿಸುವರು. ಅಧಿಕಾರದ ಆಸೆ ಇರುತ್ತದೆ. ಆದರೆ ಅಧಿಕಾರಕ್ಕಾಗಿ ತಪ್ಪು ಹಾದಿ ಹಿಡಿಯುವುದಿಲ್ಲ. ಜೀವನದಲ್ಲಿ ನೆನಪಿನಲ್ಲಿ ಉಳಿಯುವ ಕೆಲಸಗಳನ್ನು ಮಾಡಿ ಉತ್ತಮ ಹೆಸರು ಮತ್ತು ಕೀರ್ತಿಯನ್ನು ಸಂಪಾದಿಸುತ್ತಾರೆ. ನಾಚಿಕೆಯ ಸ್ವಭಾವ ಇರುತ್ತದೆ. ಮನೆಗೆ ಹಿರಿಯರ ಒಪ್ಪಿಗೆಯಂತೆ ವಿವಾಹವಾಗುತ್ತದೆ. ನಾನೇ ದೊಡ್ಡವ ನಾನು ಮಾಡುವ ಕೆಲಸ ಕಾರ್ಯಗಳೇ ಸರಿ ಎಂಬ ಭಾವನೆ ಇರುತ್ತದೆ.

ಸಮಯ ವ್ಯರ್ಥ ಮಾಡದೆ ಕಷ್ಟದಿಂದ ಕೆಲಸ ಕಾರ್ಯ ನಿರ್ವಹಿಸುತ್ತಾರೆ. ಸ್ವಂತ ಉದ್ಯಮವಿದ್ದರೆ ಉತ್ತಮ ಲಾಭ ದೊರೆಯುತ್ತದೆ. ಅನಾರೋಗ್ಯ ಸದಾಕಾಲ ಕಾಡುತ್ತದೆ. ಬೇಡದ ವಿಚಾರಗಳಿಗೆ ತಲೆ ಹಾಕುವುದಿಲ್ಲ. ಅನಾವಶ್ಯಕವಾಗಿ ಹಣವನ್ನು ಖರ್ಚು ಮಾಡುವುದಿಲ್ಲ. ಇವರ ಕೆಲಸ ಕಾರ್ಯಗಳು ಬೇರೆಯವರಿಗೆ ಸ್ಪೂರ್ತಿ ನೀಡುತ್ತದೆ. ಕೋಪವನ್ನು ತಡೆಯಲು ಸಾಧ್ಯವಿಲ್ಲ. ಆರಂಭಿಸಿದ ಕೆಲಸ ಕಾರ್ಯಗಳು ಪೂರ್ಣಗೊಳ್ಳುವವರೆಗೂ ಯಾರಿಗೂ ತಿಳಿಸುವುದಿಲ್ಲ ಹಣದ ವ್ಯವಹಾರದಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಾರೆ. ಚಿಕ್ಕ ವಯಸ್ಸಿನಿಂದಲೂ ಆಟ ಮತ್ತು ಮನರಂಜನೆಯಲ್ಲಿ ಆಸಕ್ತಿ ತೋರುವುದಿಲ್ಲ.

ತುಟಿ ಸಹಜಕ್ಕಿಂತ ಹೆಚ್ಚು ದಪ್ಪ ಇದ್ದವರ ವ್ಯಕ್ತಿತ್ವ ಹೇಗಿರುತ್ತೆ?

ತುಟಿಯು ಸಹಜಕ್ಕಿಂತ ಹೆಚ್ಚು ದಪ್ಪನಾಗಿದ್ದಲ್ಲಿ ಅವರದು ನಿಗೂಢ ವ್ಯಕ್ತಿತ್ವ ಮತ್ತು ನಡಿಗೆಯಾಗಿರುತ್ತದೆ. ಇವರಿಗೆ ಅಸೂಯ ಗುಣವಿರುತ್ತದೆ. ಆದರೆ ಇವರನ್ನು ನಂಬಿ ಬಂದವರು ಸುಖ ಸಂತೋಷದಿಂದ ಜೀವನ ನಡೆಸುತ್ತಾರೆ. ಇವರ ನೆನಪಿನ ಶಕ್ತಿ ವಿಶೇಷವಾಗಿರುತ್ತದೆ. ವಿವೇಕದಿಂದ ಎಲ್ಲರೊಳನೆ ವರ್ತಿಸುತ್ತಾರೆ. ಇವರ ಕೆಲಸ ಕಾರ್ಯಗಳು ಇತರರಿಗೆ ಸ್ಪೂರ್ತಿಯಾಗುತ್ತದೆ. ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸುತ್ತಾರೆ. ಭವಿಷ್ಯದ ಜೀವನವನ್ನು ಗುರಿಯಾಗಿಸಿಕೊಂಡು ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಉತ್ತಮ ಕಾರ್ಯನಿಯೋಜನೆಯಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುತ್ತಾರೆ.

ಉದ್ಯೋಗದಲ್ಲಿ ಪ್ರಯೋಜನಕಾರಿ ಬದಲಾವಣೆಗಳು ತರಲು ಕಾರಣರಾಗುತ್ತಾರೆ. ಎಲ್ಲಾ ರೀತಿಯ ಅನುಕೂಲತೆಗಳಿದ್ದರೂ ಮನಸ್ಸಿನಲ್ಲಿ ಅಸುರಕ್ಷತೆಯ ಭಾವನೆ ಕಂಡು ಬರುತ್ತದೆ. ಇವರಲ್ಲಿ ಅನ್ವೇಷಣಾ ಗುಣವಿರುತ್ತದೆ. ಉತ್ತಮ ಸಂಶೋಧಕರಾಗಬಹುದು. ಗಣಿತ ಮತ್ತು ಹಣದ ವ್ಯವಹಾರದಲ್ಲಿ ಪರಿಪೂರ್ಣ ಜ್ಞಾನವಿರುತ್ತದೆ. ಕುಟುಂಬದ ಮೇಲೆ ನಿಯಂತ್ರಣ ಸಾಧಿಸುವರು. ಖರ್ಚು ವೆಚ್ಚಗಳನ್ನು ನಿಯಂತ್ರಿಸುವರು. ಮನೆಯವರು ಮತ್ತು ಬೇರೆಯವರನ್ನು ಒಂದೇ ದೃಷ್ಟಿಯಿಂದ ನೋಡುತ್ತಾರೆ. ಬೇರೆಯವರ ಅಧೀನದಲ್ಲಿ ಇರದೆ ಸ್ವತಂತ್ರವಾಗಿ ಜೀವನ ನಡೆಸಲು ಇಷ್ಟಪಡುವರು.

ಚಿರುಕಿನ ಬುದ್ಧಿ ಇರುತ್ತದೆ. ಭಾವೋದ್ವೇಗಿ ಆಗಿರುತ್ತಾರೆ. ಆರೋಗ್ಯ ಕಾಪಾಡಿಕೊಳ್ಳಲು ಶ್ರಮಿಸುತ್ತಾರೆ. ಒತ್ತಡದ ಜೀವನವನ್ನು ಇಷ್ಟಪಡುವುದಿಲ್ಲ. ಹಾಗೆಯೇ ಬೇರೆಯವರ ಮೇಲೆ ಒತ್ತಡವನ್ನು ಹಾಕುವುದಿಲ್ಲ. ಕಷ್ಟದ ಸನ್ನಿವೇಶದಲ್ಲೂ ಸುಳ್ಳು ಹೇಳದೆ ನಿಜವನ್ನೇ ನುಡಿತ್ತಾರೆ. ಅವಶ್ಯಕತೆ ಇದ್ದವರಿಗೆ ಮಾತ್ರ ಸಹಾಯ ಮಾಡುತ್ತಾರೆ. ಸ್ವಂತ ಉದ್ದಿಮೆ ನಡೆಸಲು ಉತ್ತಮ ಅವಕಾಶವನ್ನು ಎದುರು ನೋಡುತ್ತಾರೆ. ಕುಟುಂಬದ ರಹಸ್ಯವನ್ನು ಯಾರಿಗೂ ಹೇಳುವುದಿಲ್ಲ. ಆರಂಭಿಸಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುತ್ತಾರೆ. ವಂಶದ ಆಸ್ತಿಯಲ್ಲಿ ವಿವಾದ ಉಂಟಾಗಬಹುದು. ಅಪರೂಪದ ಕಲೆಯೊಂದು ಇವರಿಗೆ ಸಿದ್ಧಿಸುತ್ತದೆ. ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗುತ್ತವೆ. ಆದರೂ ಹಣವನ್ನು ಉಳಿಸಲು ಸಫಲರಾಗುತ್ತಾರೆ. ಮಹಿಳೆಯರು ಆರೋಗ್ಯದ ಬಗ್ಗೆ ಗಮನ ವಹಿಸಬೇಕು. ಸಂಬಂಧದಲ್ಲಿ ವಿವಾಹ ಆಗುವ ಸಾಧ್ಯತೆಗಳೆ ಹೆಚ್ಚು.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.