ನೆಲಮಂಗಲ ಅಪಘಾತ; ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತದಲ್ಲಿ ಆರು ಜನರ ದುರ್ಮರಣ
Nelamangala Accident: ತುಮಕೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿದ್ದು 6 ಜನ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಮೃತರು ಒಂದೇ ಕುಟುಂಬದವರಾಗಿದ್ದು, ಎಲ್ಲರೂ ಮಹಾರಾಷ್ಟ್ರ ಮೂಲದವರು.
Nelamangala Accident: ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿದ್ದು, ಆರು ಜನ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ನೆಲಮಂಗಲ ತಾಲೂಕು ತಾಳೆಕೆರೆ ಸಮೀಪ ಈ ಭಾರಿ ದುರಂತ ಸಂಭವಿಸಿದೆ. ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಕಾರಿನ ಮೇಲೆ ಬೃಹತ್ ಕಂಟೇನರ್ ಲಾರಿ ಬಿದ್ದ ಪರಿಣಾಮ ಅದರಲ್ಲಿದ್ದ 6 ಮಂದಿ ಮೃತಪಟ್ಟಿದ್ದಾರೆ. ಮೃತರು ಒಂದೇ ಕುಟುಂಬದವರಾಗಿದ್ದು, ಮೃತರನ್ನು ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್ಸ್ ಕಂಪನಿ ಮುಖ್ಯಸ್ಥ ಚಂದ್ರಮ್ ಯಾಗಪ್ಪಗೌಳ್( 48), ಗೌರಾಬಾಯಿ (42), ದೀಕ್ಷಾ (12), ಜಾನ್ (16), ವಿಜಯಲಕ್ಷ್ಮಿ (36), ಆರ್ಯಾ (6) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಐಎಎಸ್‌ಟಿ ಕಂಪನಿ ಕಚೇರಿ ಇದೆ.
ತುಮಕೂರು- ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ ಹೇಗಾಯಿತು
ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ತಾಳೇಕೆರೆ ಗ್ರಾಮದ ಸಮೀಪ ಈ ದುರಂತ ನಡೆದಿದೆ. ದುರಂತದ ಬಳಿಕ 10 ಕಿಮೀ ದೂರ ವಾಹನ ದಟ್ಟಣೆ ಉಂಟಾಗಿತ್ತು. ಅಪಘಾತದ ವೇಳೆ ಕಾರಿನ ಮೇಲೆ ಬೃಹತ್ ಕಂಟೇನರ್ ಬಿದ್ದ ಪರಿಣಾಮ, ಆ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು. ಕಂಟೇನರ್ ಅಡಿಯಲ್ಲಿದ್ದ ಕಾರನ್ನು ಮತ್ತು ಅದರೊಳಗಿದ್ದವರನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಟ್ಟರು. ಕಂಟೇನರ್‌ನಲ್ಲಿ ಸಾಮಗ್ರಿಗಳು ಇದ್ದ ಕಾರಣ ವಿಪರೀತ ಭಾರ ಇತ್ತು. ಅದನ್ನು ಮೇಲೆತ್ತಲು ಲಾರಿ ಬೆಲ್ಟ್, ಚೈನ್‌ಗಳನ್ನು ತರಿಸಿ ಮೂರು ಕ್ರೇನ್‌ಗಳ ಮೂಲಕ ಕಂಟೇನರ್ ಮೇಲೆತ್ತಲಾಯಿತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ವಾರಾಂತ್ಯದ ರಜೆಯ ಕಾರಣ ಕೆಎ-01-ಎನ್‌ಡಿ-1536 ಸಂಖ್ಯೆಯ ಎಸ್‌ಯುವಿಯಲ್ಲಿ ಉದ್ಯಮಿಯೊಬ್ಬರ ಕುಟುಂಬ ನಗರದಿಂದ ಹೊರಟಿತ್ತು. ಕೆಎಂಎಫ್ (ನಂದಿನಿ)ಗೆ ಸೇರಿದ ಮತ್ತೊಂದು ಟ್ರಕ್‌ಗೆ ಟ್ರಕ್ ಡಿಕ್ಕಿ ಹೊಡೆದ ಕ್ಷಣ, ಕಂಟೇನರ್ ಟ್ರಕ್‌ಗೆ ಸಮಾನಾಂತರವಾಗಿ ಚಲಿಸುತ್ತಿತ್ತು. ಕಂಟೈನರ್ ಟ್ರಕ್ ಮತ್ತು ಹಾಲಿನ ಡೇರಿ ಟ್ರಕ್ ಪಲ್ಟಿಯಾಗಿದೆ. ಕಂಟೇನರ್ ಅಡಿಗೆ ಬಿದ್ದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ವೋಲ್ವೋ ಕಾರು ನಂದಿನಿ ಟ್ರಕ್‌ಗೆ ಸಮಾನಂತರದಲ್ಲಿ ಚಲಿಸುತ್ತಿತ್ತು. ಎಂದು ಪೊಲೀಸರು ತಿಳಿಸಿದ್ದಾರೆ.
ಕಂಟೇನರ್ ಚಾಲಕ ಆರಿಫ್ ಅನ್ಸಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಎದುರು ಬಂದ ಕಾರನ್ನು ತಪ್ಪಿಸಲು ಹೋದಾಗ, ಕಂಟೇನರ್ ನಿಯಂತ್ರಣ ತಪ್ಪಿತು. ಡಾಬಸ್‌ಪೇಟೆ ಕೈಗಾರಿಕಾ ಪ್ರದೇಶದಿಂದ ಅಲ್ಯುಮಿನಿಯಂ ಸಾಮಗ್ರಿ ಕಂಟೇನರ್‌ನಲ್ಲಿತ್ತು. 41 ಟನ್ ತೂಕ ಇತ್ತು. 40 ಕಿಮೀ ವೇಗದಲ್ಲಿತ್ತು ಕಂಟೇನರ್. ಕಾರಿನಲ್ಲಿದ್ದವರನ್ನು ಬಚಾವ್ ಮಾಡಲು ಹೊರಟಾಗ ಅದು ಡಿವೈಡರ್ ಹಾರಿ ಪಕ್ಕದ ರಸ್ತೆ ಮೇಲೆ ಸಂಚರಿಸುತ್ತಿದ್ದ ಕಾರಿನ ಮೇಲೆ ಬಿದ್ದುಬಿಡ್ತು. ಮುಂದೇನಾಯಿತು ಗೊತ್ತಿಲ್ಲ, ಈಗ ಆಸ್ಪತ್ರೆಯಲ್ಲಿದ್ದೇನೆ ಎಂದು ಅನ್ಸಾರಿ ಹೇಳಿದ್ದಾರೆ.
ಎರಡು ತಿಂಗಳ ಹಿಂದಷ್ಟೇ ಕಾರು ಖರೀದಿಸಿದ್ದ ಚಂದ್ರಯಾಗಪ್ಪ
ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್ಸ್ ಕಂಪನಿ ಸ್ಥಾಪಿಸಿ ಸುಮಾರು 300 ಜನರಿಗೆ ಉದ್ಯೋಗ ಕೊಟ್ಟಿರುವ ಚಂದ್ರಯಾಗಪ್ಪ ಅವರು ಎರಡು ತಿಂಗಳ ಹಿಂದಷ್ಟೆ ಐಷಾರಾಮಿ ವೋಲ್ವೋ ಕಾರು (KA 01 ND 1536) ಖರೀದಿಸಿದ್ದರು. ಇದು ಹೈ ಎಂಡ್ ಕಾರು, ಅಂದಾಜು 1 ಕೋಟಿ ರೂಪಾಯಿ ಬೆಲೆಬಾಳುವಂಥದ್ದು. ವಾರಾಂತ್ಯದ ಪ್ರವಾಸಕ್ಕೆ ಹೊರಟಿದ್ದ ವೇಳೆ ಈ ದುರಂತ ಸಂಭವಿಸಿದೆ.
ಈ ದುರಂತದಿಂದ ಐಎಎಸ್‌ಟಿ ಕಂಪನಿ ಉದ್ಯೋಗಿಗಳು ಬಹಳ ದುಃಖಕ್ಕೀಡಾಗಿದ್ದು, ಇಂದು ದುರಂತದ ವಿಚಾರ ತಿಳಿದ ಕೂಡಲೇ ಕೆಲಸ ಸ್ಥಗಿತಗೊಳಿಸಿ ದುರಂತ ಸ್ಥಳಕ್ಕೆ ದೌಡಾಯಿಸಿದರು ಎಂದು ಕೆಲವು ಉದ್ಯೋಗಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.