ಪ್ರಜಾ ಪ್ರತಿನಿಧಿಗಳ ವಿರುದ್ಧ ಎಲ್ಲಿ ದೂರು ಸಲ್ಲಿಸೋದು, ನಮಗೆ ಟೋಪಿ ಹಾಕುವುದನ್ನು ನಿಲ್ಲಿಸುವುದು ಯಾವಾಗ? ರಾಜೀವ್ ಹೆಗಡೆ ಬರಹ
ಕಳೆದ ಕೆಲವು ದಿನಗಳಿಂದ ಸಂಸತ್ ಹಾಗೂ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ನಡೆಯುತ್ತಿರುವ ಘಟನೆಗಳು ದೇಶಾದ್ಯಂತ ಚರ್ಚೆಯಾಗುತ್ತಿದೆ. ಅಧಿವೇಶನದಲ್ಲಿ ಜನರ ಕಷ್ಟಗಳ ಬಗ್ಗೆ ಚರ್ಚಿಸಬೇಕಾದ ಜನಪ್ರತಿನಿಧಿಗಳು ಹಾವು ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಪತ್ರಕರ್ತ ರಾಜೀವ್ ಹೆಗಡೆ ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತ ವಿಧಾನಸಭೆ ಹಾಗೂ ಅತ್ತ ಲೋಕಸಭೆಯು ರಣರಂಗವಾಗುವ ಮೂಲಕ ಚಳಿಗಾಲದ ಅಧಿವೇಶನದಲ್ಲಿ ಎಲ್ಲರೂ ʼತಪಸ್ಸುʼ ಮಾಡಿಕೊಂಡು ಹೊರಟಿದ್ದಾರೆ. ಹೊಸ ಅರ್ಥದ ಪ್ರಕಾರ ಜನರ ಸಂಕಷ್ಟಗಳ ಬಿಸಿಯ ಮಧ್ಯೆ ಎಲ್ಲರೂ ತಮ್ಮ ತಮ್ಮ ಬೇಳೆ ಬೇಯಿಸಿಕೊಂಡು ಹಾಯಾಗಿ ವಾಪಸಾಗುತ್ತಿದ್ದಾರೆ. ವಿಪರ್ಯಾಸವೆಂದರೆ ಜನರ ನಿತ್ಯ ಗೋಳಿನ ಬಗ್ಗೆ ಯಾರಿಗೂ ಕಾಳಜಿಯಿಲ್ಲ.
ಜನರ ಕಷ್ಟಗಳನ್ನು ಚರ್ಚಿಸದೆ ಕಿತ್ತಾಡುತ್ತಿರುವ ಜನಪ್ರತಿನಿಧಿಗಳು
ಅದಾನಿ, ಸೊರೊಸ್, ಸೋನಿಯಾ ಗಾಂಧಿ, ಅಮಿತ್ ಷಾರ ತಿರುಚಿದ ವಿಡಿಯೋದಿಂದ ಅಂಬೇಡ್ಕರ್‌ಗೆ ಅವಮಾನದ ಆರೋಪ, ಸಂಸತ್ ಭವನದಲ್ಲಿನ ಗಲಾಟೆ, ಪಂಚಮಸಾಲಿ ಮೀಸಲಾತಿ, ಕೊಲೆಗಡುಕ-ವೇಶ್ಯೆ ಕಿತ್ತಾಟದ ಮುಂದೆ ಜನರ ಸಂಕಷ್ಟಗಳನ್ನು ಚಳಿಗಾಲದ ಕಂಬಳಿ, ರಗ್ಗಿನೊಳಗೆ ಸುತ್ತಿ ಚೆಂದವಾಗಿ ಎಲ್ಲರೂ ಸೇರಿಕೊಂಡು ಮುಚ್ಚಿಟ್ಟರು. ಆಡಳಿತ ನಡೆಸುವವರು ಇದರಲ್ಲಿಯೇ ಚಳಿ ಕಾಯಿಸಿಕೊಂಡು ಮಜಾ ನೋಡುತ್ತಿದ್ದಾರೆ. ನಾವು ಈ ಕುರಿತ ಚರ್ಚೆಗಳನ್ನು ಟಿವಿ, ಸಾಮಾಜಿಕ ಜಾಲತಾಣದಲ್ಲಿ ನೋಡಿಕೊಂಡು ಉಗ್ರರೂಪ ತಾಳುತ್ತಿದ್ದೇವೆ.
ಈ ಕಿತ್ತೋದ ದರಿದ್ರ ರಾಜಕೀಯದಲ್ಲಿ ನಮ್ಮ ರಸ್ತೆ ಹಾಳಾಗಿರುವುದು, ಸರ್ಕಾರಿ ಶಾಲೆಗಳ ಅಭಿವೃದ್ಧಿ ಮರೆತು ಹೋಗಿರುವುದು, ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಕರ್ಯ ಕೊರತೆ ಇರುವುದು, ಹವಾಮಾನ ವೈಪರೀತ್ಯದಲ್ಲಿ ರೈತ ಬಳಲುತ್ತಿರುವುದು, ಈ ವರ್ಷದ ಅತಿವೃಷ್ಟಿಯಿಂದ ಮಲೆನಾಡು, ಕರಾವಳಿ ರೈತರು ಕಣ್ಣೀರು ಸುರಿಸುತ್ತಿರುವುದು, ಬೆಲೆ ಏರಿಕೆಯು ಜನಸಾಮಾನ್ಯರ ಉಸಿರುಗಟ್ಟಿಸುತ್ತಿರುವುದು, ಸರ್ಕಾರಿ ಖಜಾನೆಯ ದುರ್ಬಳಕೆಯ ಚರ್ಚೆಯೇ ಆಗಲಿಲ್ಲ. ಈ ವಿಚಾರದ ಬಗ್ಗೆ ಯಾವುದೇ ಪಕ್ಷ, ಶಾಸಕ, ಸಂಸದರು ಧರಣಿ ಕೂರಲಿಲ್ಲ. ಜನರಿಗಾಗಿ ಧರಣಿ ಕೂರಬೇಕಿದ್ದ ಜನರು, ಜನರಿಂದ ಆಯ್ಕೆಯಾದ ಪ್ರತಿನಿಧಿಗಳ ನಾಯಕರ ಪ್ರತಿಷ್ಠೆಗಳಿಗಾಗಿ ಧರಣಿ, ಪ್ರತಿಭಟನೆ ಕೂರುತ್ತಿದ್ದಾರೆ. ಇದನ್ನು ಯಾವ ಆಯಾಮದಲ್ಲೂ ಪ್ರಜಾಪ್ರಭುತ್ವ ಎನ್ನಲೂ ಸಾಧ್ಯವೇ ಇಲ್ಲ.
ಪ್ರಜಾಪ್ರಭುತ್ವದ ಹೆಸರಲ್ಲಿ ಲೂಟಿಕೋರರ ಮಜಾಕೂಟ
ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಹೆಸರಲ್ಲಿ ಲೂಟಿಕೋರರ ಮಜಾಕೂಟವಷ್ಟೆ. ಈ ಅರಸೊತ್ತಿಗೆಗೆ ಸಂವಿಧಾನದ ಪುಸ್ತಕ, ಅಂಬೇಡ್ಕರ್ ಹೆಸರು ಹೇಳಿಕೊಂಡು ಡ್ರಾಮಾ ಕಂಪೆನಿ ನಡೆಸುತ್ತಿದ್ದಾರೆ. ಸಂವಿಧಾನವನ್ನು ಯಾವುದೇ ಪಕ್ಷ ಸಾಯಿಸುತ್ತಿಲ್ಲ. ಈ ಲೂಟಿಕೋರರು ಹಾಗೂ ಮಜಾಕೋರರನ್ನು ಸಹಿಸಿಕೊಂಡು ನಾವು ಈ ದೇಶದ ಜನರು ಸಂವಿಧಾನವನ್ನು ಸಾಯಿಸುತ್ತಿದ್ದೇವೆ. ಜಾತಿಗಳ ಹೊಲಸು ರಾಜಕೀಯ ಮಾಡಿಕೊಂಡು ಪ್ರತಿಭಟನೆ ಮಾಡುವ ನಾವು, ನಮ್ಮ ನಿಜವಾದ ಕಷ್ಟಗಳಿಗಾಗಿ ಬೀದಿಗೆ ಇಳಿಯುತ್ತಲೇ ಇಲ್ಲ. ನಮ್ಮ ಜನಪ್ರತಿನಿಧಿಗಳಿಗೇ ಬಿಸಿ ಮುಟ್ಟಿಸುತ್ತಲೇ ಇಲ್ಲ.
ನಾನು ಪತ್ರಿಕೋದ್ಯಮಕ್ಕೆ ಬರುವ ಮೊದಲು ಪತ್ರಿಕೆ ಹಾಗೂ ರಾಜಕೀಯದಲ್ಲಿ ನನಗೆ ಅತಿ ಹೆಚ್ಚು ಆಸಕ್ತಿಕರವಾದ ವಿಚಾರವೆಂದರೆ ಅಧಿವೇಶನದ ಕಲಾಪವಾಗಿತ್ತು. ಪತ್ರಿಕೆಯ ಬಹುತೇಕ ಮಧ್ಯದ ಪುಟದಲ್ಲಿ ಬರುತ್ತಿದ್ದ ಈ ಚರ್ಚೆಗಳನ್ನು ಚಾಚು ತಪ್ಪದೇ ಓದುತ್ತಿದ್ದೆ. ಆ ಕಾಲದಲ್ಲಿ ಎಂ.ಸಿ ನಾಣಯ್ಯ ರೀತಿಯ ಹಿರಿಯರು ಎತ್ತುತ್ತಿದ್ದ ವಿಚಾರ ಹಾಗೂ ಅವರು ಮಾತನಾಡುತ್ತಿದ್ದ ಪರಿಯನ್ನು ನೋಡಿದರೆ ರೋಮಾಂಚನವಾಗುತ್ತಿತ್ತು. ವಿರೋಧಿ ಸ್ಥಾನದಲ್ಲಿ ಕೂತವರು ಕೂಡ ತಲೆ ಆಡಿಸುವಂತೆ ವಿಷಯಗಳ ಮಂಡನೆ ಮಾಡುತ್ತಿದ್ದರು. ಅವರ್ಯಾರು ಜನಪರವಾದ ವಿಷಯದ ಚೌಕಟ್ಟು ಬಿಟ್ಟು ಹೊರಗೆ ಹೋಗುತ್ತಿರಲಿಲ್ಲ. ಹಾಗೆಯೆ ಜನರ ಸಂಕಷ್ಟಗಳ ವಿಚಾರ ಬಂದಾಗ ಎಲ್ಲ ರಾಜಕೀಯವನ್ನು ಬದಿಗಿಟ್ಟು ಮುನ್ನೆಲೆಗೆ ತರುತ್ತಿದ್ದರು. ಆದರೆ ಇವತ್ತಿನ ಕಲಾಪವನ್ನು ನೋಡಿದರೆ ಹೇಸಿಗೆಯಾಗುತ್ತದೆ.
ಸಂಸತ್ ಭವನವನ್ನು ಸರ್ಕಸ್ ಆಗಿ ಪರಿವರ್ತಿಸಿದ ರಾಹುಲ್ ಗಾಂಧಿ
ಗ್ಯಾರಂಟಿ ಯೋಜನೆ ಹಾಗೂ ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಒಂದೇ ಒಂದು ಗಹನವಾದ ಚರ್ಚೆ ನಡೆಯಲಿಲ್ಲ. ರಾಜ್ಯದ ಹಲವು ಭಾಗಗಳಲ್ಲಿ ಅತಿವೃಷ್ಟಿಯಾದರೂ ನಯಾಪೈಸೆ ಬೆಳೆ ಪರಿಹಾರ ಧನ ನೀಡದ ಸರ್ಕಾರದ ಬಗ್ಗೆ ಸಣ್ಣ ಧರಣಿ ಕೂಡ ನಡೆಯಲಿಲ್ಲ. ರಾಜ್ಯದ ರಸ್ತೆಗಳು ಹೊಂಡಗಳಲ್ಲಿಯೇ ತುಂಬಿಕೊಂಡು ಜನ ಸಾಯುತ್ತಿದ್ದರೂ ಚಕಾರ ಎತ್ತಲಿಲ್ಲ. ರಾಜ್ಯದ ಶಿಕ್ಷಣ ಇಲಾಖೆಯು ಗಬ್ಬೆದ್ದು ಹೋಗಿರುವಾಗ ಚರ್ಚೆಯೇ ನಡೆಯಲಿಲ್ಲ. ಜನರ ಈ ಕಷ್ಟಗಳಿಗಾಗಿ ಧರಣಿ ಕೂರಬೇಕು ಅಥವಾ ಸರ್ಕಾರದ ಕುತ್ತಿಗೆಪಟ್ಟಿ ಹಿಡಿದು ಪ್ರಶ್ನಿಸಿ ನಡುಕ ಹುಟ್ಟಿಸಬೇಕು ಹಾಗೂ ಈ ಮೂಲಕ ಜನರಲ್ಲಿ ಅಭಿಪ್ರಾಯ ಮೂಡಿಸಬೇಕು ಎನಿಸಲೇ ಇಲ್ಲ.
ಹಾಗೆಯೇ ಕೇಂದ್ರದಲ್ಲೂ ರಾಜಕೀಯ ಹಸುಳೆಯಂತೆ ಆಡುವ ರಾಹುಲ್ ಗಾಂಧಿಗೆ ಅದಾನಿ, ಅಂಬೇಡ್ಕರ್ ವಿಚಾರವೇ ಪ್ರಮುಖವಾಯಿತು. ಆದರೆ ಜನರ ನಿಜವಾದ ಸಂಕಷ್ಟವಾಗಿರುವ ಬೆಲೆ ಏರಿಕೆಯನ್ನು ರಾಷ್ಟ್ರೀಯ ವಿಚಾರವನ್ನಾಗಿಸಿಕೊಂಡು ಮಧ್ಯಮ ವರ್ಗದ ಮತವನ್ನು ಸೆಳೆಯಬೇಕು ಎನ್ನುವ ಕನಿಷ್ಠ ಜ್ಞಾನವೂ ಇಲ್ಲ. ಇಂತವರೆಲ್ಲ ನಮ್ಮ ದೇಶಕ್ಕೆ ಪ್ರತಿಪಕ್ಷ ನಾಯಕರಾಗಿದ್ದಾರೆ ಎನ್ನುವುದೇ ದೊಡ್ಡ ಹೇಸಿಗೆಯ ವಿಚಾರ. ಬಾಯೆತ್ತಿದರೆ ತಾನೇ ಓದದ ಸಂವಿಧಾನದ ಪುಸ್ತಕ ಹಾಗೂ ಅದಾನಿ ಬಗ್ಗೆ ರಾಹುಲ್ ಗಾಂಧಿ ಮಾತನಾಡುತ್ತಾರೆ. ಆದರೆ ಇವೆರಡೂ ವಿಚಾರ ಮತಗಳಾಗಿ ಬದಲಾಗುವುದಿಲ್ಲ ಎನ್ನುವುದು ಈಗಾಗಲೇ ಹತ್ತು ಹಲವು ಚುನಾವಣೆಗಳಲ್ಲಿ ಸಾಬೀತಾಗಿದೆ. ಜನರ ಕಷ್ಟ ಹಾಗೂ ಆರ್ಥಿಕ ವಲಯದಲ್ಲಿ ವೈಫಲ್ಯವನ್ನು ಇರಿಸಿಕೊಂಡು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕಿರುವ ರಾಹುಲ್ ಗಾಂಧಿ, ಸಂಸತ್ ಭವನವನ್ನು ಅಕ್ಷರಶಃ ಸರ್ಕಸ್ ಆಗಿ ಪರಿವರ್ತಿಸುತ್ತಿದ್ದಾರೆ. ಸಂಸತ್ ಭವನದಲ್ಲಿ ಸರ್ಕಸ್ ನಡೆಸುವ ರಿಂಗ್ ಮಾಸ್ಟರ್ ರೀತಿ ಕಾಣಿಸುತ್ತಿದ್ದಾರೆ. ಇಂತಹ ಜೋಕರ್‌ಗಳೆಲ್ಲಾ ಪ್ರತಿಪಕ್ಷ ನಾಯಕರಾಗಿದ್ದರೆ ಆಡಳಿತ ಪಕ್ಷ ಚುರುಕಾಗಲು ಸಾಧ್ಯವೇ ಇಲ್ಲ.
ಸಂವಿಧಾನ ಅಥವಾ ಪ್ರಜಾಪ್ರಭುತ್ವವು ಅಪಾಯಕ್ಕೆ ಹೋಗುತ್ತಿದ್ದರೆ ಆಡಳಿತ ಪಕ್ಷ ಮಾತ್ರ ಕಾರಣವಾಗುವುದಿಲ್ಲ. ಇಂತಹ ನಿಷ್ಪ್ರಯೋಜಕ ಪ್ರತಿಪಕ್ಷ ನಾಯಕರು ಕೂಡ ಕಾರಣವಾಗುತ್ತಾರೆ. ಅಂದ ಹಾಗೆ ಯುಪಿಎ ಸರ್ಕಾರದ ಪತನವಾಗಲು ಕಾರಣವಾಗಿದ್ದು, ಭ್ರಷ್ಟಾಚಾರಕ್ಕಿಂತ ಬೆಲೆ ಏರಿಕೆ ವಿಚಾರವು ರಾಷ್ಟ್ರ ಮಟ್ಟದ ವಿಚಾರವನ್ನಾಗಿ ಮಾಡಲು ಬಿಜೆಪಿ ಯಶಸ್ವಿಯಾಗಿದ್ದು ಎನ್ನುವುದನ್ನು ಈ ರಿಂಗ್ ಮಾಸ್ಟರ್ ಅರ್ಥ ಮಾಡಿಕೊಳ್ಳಬೇಕಿದೆ. ಹಾಗೆಯೇ ಕರ್ನಾಟಕದ ಪ್ರತಿಪಕ್ಷಗಳಲ್ಲಿಯೂ ಅದೇ ರೀತಿ ರಾಹುಲ್ ಗಾಂಧಿಗಳೇ ತುಂಬಿಕೊಂಡಿದ್ದಾರೆ.
ಜನರು ರಾಜಕೀಯ ನಾಯಕರ ವಿರುದ್ಧ ಎಲ್ಲಿ ದೂರು ಸಲ್ಲಿಸೋದು?
ಲೋಕಸಭೆ ಹಾಗೂ ವಿಧಾನಸಭೆಗಳು ಸರ್ಕಾರದ ಕಾರ್ಯ ಕಲಾಪಕ್ಕೆ ಸೀಮಿತವಾಗಿರುವುದಲ್ಲ. ಆಳುವ ಸರ್ಕಾರವು ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಅದನ್ನೇ ಬಯಸುತ್ತದೆ. ಆದರೆ ಪ್ರತಿಪಕ್ಷಗಳು ಜನರ ಸಂಕಷ್ಟವನ್ನು ಸರ್ಕಾರಕ್ಕೆ ತಿಳಿಸಲು ಹಾಗೂ ಜಾಗೃತಿ ಮೂಡಿಸಲು ಶಾಸನ ಸಭೆಯನ್ನು ಬಳಸಿಕೊಳ್ಳಬೇಕು. ಆದರೆ ದೇಶ ಹಾಗೂ ರಾಜ್ಯದಲ್ಲಿ ಇದ್ಯಾವುದೇ ಚಿತ್ರಣ ಕಾಣಿಸುತ್ತಲೇ ಇಲ್ಲ. ಶಾಸನ ಸಭೆಗಳು ಸರ್ಕಸ್‌ಗಳಾಗಿ ಪರಿವರ್ತನೆಯಾಗಿವೆ.
ಅಂಬೇಡ್ಕರ್, ರಾಹುಲ್, ನೆಹರು, ಸೋನಿಯಾ, ಅಮಿತ್ ಷಾ ವಿಚಾರ ಬಂತೆಂದು ಎಲ್ಲ ಜನಪ್ರತಿನಿಧಿಗಳು ಅಯ್ಯಯ್ಯೋ ಎಂದು ಕಿರುಚಾಡಿ ಶಾಸನ ಸಭೆಗಳನ್ನು ಮೈಲಿಗೆ ಮಾಡಿದರು. ಅಷ್ಟಕ್ಕೂ ಅನಗತ್ಯ ಹೇಳಿಕೆಗಳನ್ನು ನೀಡಿ ವಿವಾದ ಹುಟ್ಟಿಸುವುದು ರಾಜಕಾರಣಿಗಳಿಗೆ ಹೊಸತೇನಲ್ಲ. ಇದರಲ್ಲಿ ಯಾರೂ ಹೆಚ್ಚು, ಕಡಿಮೆ ಇಲ್ಲ. ಒಟ್ಟಾರೆ ಈ ಡ್ರಾಮಾ ಕಂಪೆನಿಗಳ ಮೂಲಕ ನೂರಾರು ಕೋಟಿ ಹಣವನ್ನು ಹೊಳೆಯಲ್ಲಿ ಹುಣಸೆ ಹಣ್ಣು ತೊಳದಂತೆ ಖರ್ಚು ಮಾಡಲಾಯಿತು. ಕೊನೆಗೆ ಅತ್ತ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ಆಯಿತು. ಇತ್ತ ಆಳುವವರನ್ನು ಖುಷಿಪಡಿಸಲು ಸಿ.ಟಿ ರವಿ ಅವರನ್ನು ಪೊಲೀಸ್ ಜೀಪಿನಲ್ಲಿ ಬೆಳಗಾವಿ ಜಿಲ್ಲಾ ದರ್ಶನ ಮಾಡಿಸಲಾಯಿತು. ಆದರೆ ನಮಗೆ ಮೋಸ ಮಾಡುತ್ತಿರುವ ಈ ಲೂಟಿಕೋರರ ವಿರುದ್ಧ ನಾವೆಲ್ಲಿ ಎಫ್‌ಐಆರ್ ಹಾಕುವುದು, ಅವರನ್ನೆಲ್ಲಿ ಸುತ್ತಾಡಿಸುವುದು? ಕನಿಷ್ಠ ಪಕ್ಷ ನಮ್ಮ ಕಷ್ಟ ಕೇಳಿಸಿಕೊಳ್ಳುವ ಸೌಜನ್ಯವನ್ನಾದರೂ ಬೆಳೆಸಿಕೊಳ್ಳುವುದು ಯಾವಾಗ? ಈ ನಾಟಕಗಳ ಮೂಲಕ ನಮಗೆ ಟೋಪಿ ಹಾಕುವುದನ್ನು ನಿಲ್ಲಿಸುವುದು ಯಾವಾಗ?
ಎಲ್ಲರಿಗೂ ಒಂದು ವಿಷಯ ನೆನಪಿರಲಿ ನಮಗೆ ಭಾರತಕ್ಕಿಂತ ಯಾವುದೇ ವ್ಯಕ್ತಿ, ಸಂಸ್ಥೆ, ಧರ್ಮ ದೊಡ್ಡದಲ್ಲ. ಒಂದೂವರೆ ಶತ ಕೋಟಿ ಜನರಿರುವ ಭಾರತ ಎನ್ನುವ ದೊಡ್ಡ ಶಕ್ತಿಯ ಬಳಿಕ ಇದೆಲ್ಲವೂ ಬರುತ್ತದೆ. ಭಾರತಕ್ಕಿಂತ ಗಾಂಧಿ, ನೆಹರು, ಅಂಬೇಡ್ಕರ್, ಮೋದಿ ಯಾರೂ ದೊಡ್ಡವರಲ್ಲ. ಹೀಗಾಗಿ ಭಾರತ ಹಾಗೂ ಈ ದೇಶದ ಜನರನ್ನು ಮರೆತು ಅದೆಷ್ಟು ಸಂವಿಧಾನ, ಪ್ರಜಾಪ್ರಭುತ್ವ ಎಂದು ಮಾತನಾಡಿದರೂ ಅದಕ್ಕೆ ಬೆಲೆಯಿಲ್ಲ.
ಕೊನೆಯದಾಗಿ: ರಾಹುಲ್ ಗಾಂಧಿ ಹಾಗೂ ಸಿ.ಟಿ ರವಿ ವಿರುದ್ಧದ ಎಫ್‌ಐಆರ್, ಆರೋಪಗಳಲ್ಲಿ ಸಾಕಷ್ಟು ಸಾಮ್ಯತೆಯಿದೆ. ಎರಡೂ ಪ್ರಕರಣದಲ್ಲಿ ವಿಡಿಯೋ ಸಾಕ್ಷ್ಯಗಳಿಲ್ಲ. ಆದರೆ ಪ್ರತ್ಯಕ್ಷದರ್ಶಿಗಳ ಸಾಕ್ಷ್ಯವಷ್ಟೇ ಇದೆ. ಇಲ್ಲಿಯ ಕಾಂಗ್ರೆಸ್ ಸುಪ್ರೀಂ ನಾಯಕರನ್ನು ಖುಷಿಪಡಿಸಲು ರವಿ ಅವರನ್ನು ಪೊಲೀಸರು ನಡೆಸಿಕೊಂಡ ರೀತಿಯಲ್ಲೇ, ಮೋದಿ-ಷಾರನ್ನು ಖುಷಿಪಡಿಸಲು ದೆಹಲಿ ಪೊಲೀಸರು ವರ್ತಿಸಿದ್ದರೆ ಸಂವಿಧಾನವು ಎಷ್ಟರ ಮಟ್ಟಿಗೆ ಅಪಾಯದಲ್ಲಿ ಇರುತ್ತಿತ್ತು ಅಲ್ವೇ?
ಎಂದು ರಾಜೀವ್ ಹೆಗ್ಡೆ ಅವರು ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
(ಬರಹ - ರಾಜೀವ್ ಹೆಗಡೆ)