ಕೃತಕ ಬುದ್ಧಿಮತ್ತೆ, ಚಾಟ್ ಜಿಪಿಟಿಯ ಸವಾಲುಗಳೇನು; ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೈಎನ್ ಮಧು ಮಂಡಿಸಿರುವ ವಿಷಯದ ವಿವರ ಹೀಗಿದೆ
ಎಐ ತಂತ್ರಜ್ಞಾನ ಮನುಷ್ಯನ ಕೆಲಸಗಳನ್ನು ಸುಲಭಗೊಳಿಸಿದೆ. ಇದರ ಜೊತೆ ಜೊತೆಗೆ ಹಲವಾರು ಸವಾಲುಗಳು ಎದುರಾಗಿವೆ. ಈ ವಿಷಯದ ಬಗ್ಗೆ ಲೇಖಕರಾದ ಮಧು ವೈಎನ್ ಅವರು ಮಂಡ್ಯದಲ್ಲಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ವಿಷಯವನ್ನು ಮಂಡಿಸಿದ್ದಾರೆ.
ಮಂಡ್ಯದಲ್ಲಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕರಾದ ಮಧು ವೈಎನ್ ಅವರು ಕೃತಕ ಬುದ್ಧಿಮತ್ತೆ ಮತ್ತು ಚಾಟ್ ಜಿಪಿಟಿಯ ಸವಾಲುಗಳೇನು ಎಂಬುದರ ವಿಷಯವನ್ನು ಮಂಡಿಸಿದ್ದಾರೆ. ಅವರು ಮಂಡಿಸಿರುವ ವಿಷಯವನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ.
ಸಮ್ಮೇಳನದಲ್ಲಿ ನನ್ನ ವಿಷಯ ಮಂಡನೆ
ಎಲ್ಲರಿಗೂ ನಮಸ್ಕಾರ. ನಾನು ಕೃತಕ ಬುದ್ಧಿಮತ್ತೆ ಮತ್ತು ಚಾಟ್ ಜಿಪಿಟಿ ಸೃಷ್ಟಿಸಿರುವ ಸವಾಲುಗಳು ಎಂಬ ವಿಷಯದ ಬಗ್ಗೆ ಒಂದಷ್ಟು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇನೆ. ಮಾತನ್ನು ಸಂಕ್ಷಿಪ್ತವಾಗಿಡಲು ಇಲ್ಲಿಂದ ಮುಂದೆ ಕೃತಕ ಬುದ್ಧಿಮತ್ತೆಯನ್ನು ಎಐ ಎಂದು ಕರಿತೇನೆ. ಎಐ ಎಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬುದರ ಸಂಕ್ಷಿಪ್ತೀಕರಣ.
ಮೊದಲಿಗೆ ಎಐ ಎಂದರೆ ಒಂದು ತಂತ್ರಜ್ಞಾನ. ಚಾಟ್ ಜಿಪಿಟಿ ಎಂದರೆ ಆ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಿರುವ ಉಪಕರಣ. ಇನ್ನೂ ಸ್ವಲ್ಪ ಒಳಗೆ ಹೋಗಿ ನೋಡಿದರೆ ಎಐ ಎಂಬ ವಿಶಾಲ ಸಾಗರದಲ್ಲಿ ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್ ಅಂದರೆ ಎನ್ ಎಲ್ ಪಿ ಎಂಬ ಉಪಭಾಗದಲ್ಲಿ ಬರುವ ಉಪಕರಣ. ಎನ್ ಎಲ್ ಪಿ ಎಂದರೆ ಮನುಷ್ಯ ಭಾಷೆಯನ್ನು ಅರ್ಥಮಾಡಿಕೊಂಡು ಮನುಷ್ಯನ ಭಾಷೆಯಲ್ಲಿಯೇ ಉತ್ತರಿಸುವ ಕೌಶಲ್ಯ. ಚಾಟ್ ಜಿಪಿಟಿ ಓಪನ್ ಎಐ ಎಂಬ ಒಂದು ಕಂಪನಿಯದ್ದು. ಇದಕ್ಕೆ ಸಮನಾಗಿ ಗೂಗಲ್ ನ ಜೆಮಿನಿ ಎಂಬ ಉಪಕರಣವಿದೆ. ಫೇಸ್ಬುಕ್ಕಿನ ಮೆಟಾ ಎಐ ಕೂಡ ಇದೆ.
ನಾವು ಈ ತನಕ ತಯಾರಿಸುತ್ತಿದ್ದ ಎಐ ಹೊರತಾದ ಸಾಫ್ಟವೇರ್ ಉಪಕರಣಗಳು ಎಂಜಿನಿಯರುಗಳು ಕೊಡುವ ನಿರ್ದಿಷ್ಟ ಸೂಚನೆಗಳ ಮೇರೆಗೆ ಕೆಲಸ ಮಾಡುತ್ತಿದ್ದವು. ಅದರ ಹೊರತಾಗಿ ಏನನ್ನೂ ಮಾಡಲಾರದಾಗಿದ್ದವು. ಇಂಥ ಸಾಫ್ಟವೇರುಗಳನ್ನು ನಾವು ರೂಲ್ ಬೇಸ್ಡ್ ಪ್ರೋಗ್ರಾಮಿಂಗ್ ಎನ್ನುತ್ತೇವೆ. ನೀವು ಒಬ್ಬ ಕ್ಲರ್ಕ್ ಗೆ ಒಂದು ಫೈಲ್ ತಗೊಂಡು ಬಾ ಎಂದಾಗ ಆತ ಕಡತಗಳ ಕೋಣೆ ಹೊಕ್ಕು ನಿರ್ದಿಷ್ಟ ಕಡತವನ್ನು ಹುಡುಕಿ ತಂದು ಕೊಡುತ್ತಾನೆ. ಅದೇ ಹೀಗೇ ಮಾಡು ಇಷ್ಟೇ ಮಾಡು ಎಂಬ ಸೂಚನೆಗಳ ಬದಲಾಗಿ ಒಂದಷ್ಟು ಗಣಿತದ ಸೂತ್ರಗಳನ್ನು ಇಟ್ಟುಕೊಂಡು, ನಾವು ಉತ್ಪಾದಿಸಿರುವ ಮಾಹಿತಿಯನ್ನೆಲ್ಲಾ ಈ ಸೂತ್ರಗಳ ಮೇರೆಗೆ ವಿಂಗಡಿಸಿ ವಿಷ್ಲೇಶಿಸಿದಾಗ ಹುಟ್ಟುವ ಸಾಫ್ಟವೇರೇ ಎಐ ಉಪಕರಣ. ಇಲ್ಲಿ ಕ್ಲರ್ಕ್ ಏಕ್ದಂ ಸಹಾಯಕ ಹುದ್ದೆ ಏರಿರುತ್ತಾನೆ. ಅವನಿಗೆ ‘ಈ ಕೇಸ್ ಏನಾಯ್ತು ನೋಡಪ್ಪ’ ಅಂದರೆ ಸಾಕು. ಮಿಕ್ಕಿದ್ದೆಲ್ಲವನ್ನೂ ಅವನೇ ಹುಡುಕಿಕೊಂಡು ಕೇಸ್ ಸಾಲ್ವ್ ಮಾಡಿ ನಿಮ್ಮೆದುರು ಅಂತಿಮ ವರದಿಯನ್ನು ಸಲ್ಲಿಸುತ್ತಾನೆ.
ಇಷ್ಟು ಅಡಿಪಾಯ ಇಟ್ಟುಕೊಂಡು ಎಐ ಎಸೆಯುತ್ತಿರುವ ಸವಾಲುಗಳು ಏನು? ನೊಡೋಣ.
1. ಅಲ್ಗೋರಿತಂ ಬಯಾಸ್. ಇದರ ಅರ್ಥ ಎಐ ಉಪಕರಣಗಳ ತರಬೇತಿಗೆ ನಾವು ಯಾವ ಮಾಹಿತಿಯನ್ನು ಕೊಡುತ್ತೀವೋ ಅವು ಅದನ್ನು ಹಂಗಂಗೇ ಕಲಿಯುತ್ತವೆ. ಥೇಟ್ ಒಂದು ಮಗು ಇವರ ಮನೆಯಲ್ಲಿ ಬೆಳೆದರೆ ಒಂದು ಥರ ಅವರ ಮನೆಯಲ್ಲಿ ಬೆಳೆದರೆ ಇನ್ನೊಂದು ಥರ ಆಲೋಚನೆಗಳು ಬದಲಾಗುತ್ತವಲ್ಲ ಹಾಗೆ. ಉಪಕರಣಗಳನ್ನು ವಿಶ್ವಮಾನವರನ್ನಾಗಿಸುವ ಜವಾಬ್ದಾರಿ ಕಡೆಗೂ ಅವುಗಳ ತಯಾರಕ/ಮಾಲೀಕರ ಮೇಲೆಯೇ ಅವಲಂಬಿತವಾಗಿರುತ್ತದೆ. ಇಲ್ಲದೇ ಹೋದರೆ ಒಂದು ಲೋನ್ ಅಪ್ಲಿಕೇಶನ್ ಅಪ್ರೂ ಆಗುವುದರಲ್ಲಿ, ನಿಮ್ಮ ರೆಸ್ಯೂಮೆ ಇಂಟರ್ವ್ಯೂಗೆ ಸೆಲೆಕ್ಟ್ ಆಗುವುದರಲ್ಲಿ ಏರ್ಫೊರ್ಟಿನ ಚೆಕಿಂಗ್ ಸಿಸ್ಟಮ್ಮಿನಲ್ಲಿ- ಹೀಗೆ ಅನೇಕ ಕಡೆ ಒಬ್ಬರಿಗೆ ಲಾಭ ಇನ್ನೊಬ್ಬರಿಗೆ ನಷ್ಟ ಉಂಟಾಗಬಹುದು.
2. ಬ್ಲಾಕ್ ಬಾಕ್ಸ್ ಗುಣ. ತಂತ್ರಜ್ಞಾನಿಗಳು ನಿರ್ದಿಷ್ಟ ಗಣಿತದ ಸೂತ್ರ, ನಿರ್ದಿಷ್ಟ ಮಾಹಿತಿ, ಮತ್ತು ಒಂದಷ್ಟು ಫೈನ್ ಟ್ಯೂನ್- ಇಷ್ಟನ್ನು ಮಾತ್ರ ಮಾಡುತ್ತಾರೆ. ಆನಂತರ ಈ ಉಪಕರಣ ಒಂದು ಪ್ರಶ‌್ನೆಗೆ ಇದೇ ಉತ್ತರ ಎಂದು ಹೇಗೆ ಹೇಳುತ್ತದೆ? ಇದು ಖುದ್ದು ತಂತ್ರಜ್ಞಾನಿಗಳಿಗೂ ಹೇಳಲು ಬರುವುದಿಲ್ಲ. ಒಬ್ಬ ನ್ಯಾಯಾಧೀಶ ಕೊಡುವ ತೀರ್ಪು ಯಾವ ಪುಟದ ಯಾವ ಪರಿಚ್ಛೇದದ ಅಥವಾ ಯಾವ ಹಳೆಯ ತೀರ್ಪಿನ ಮೇಲೆ ಎಂದು ನಾವು ಖಚಿತವಾಗಿ ಹೇಳಬಹುದು. ಎಐ ಉಪಕರಣಗಳಲ್ಲಿ ಇದು ಅಸಾಧ್ಯ. ಆದ್ದರಿಂದ ಇಲ್ಲಿ ಪಾರದರ್ಶಕತೆಯ ಸಮಸ್ಯೆ ಉದ್ಭವಿಸುತ್ತದೆ.
3. ಸಂಭಾವ್ಯ ಡೀಹ್ಯೂಮನೈಸೇಶನ್. ಅಂದರೆ ಉದ್ದಕ್ಕೂ ನಮ್ಮ ಸಮಾಜ ಮನುಷ್ಯನ ಶುದ್ಧ ಭಾವನೆ, ವಿವೇಚನೆ, ಮತ್ತು ವರ್ತನೆಗಳ ಮೇಲೆ ನಡೆಯುತ್ತ ಬಂದಿದಾನೆ. ಜಗತ್ತು ಡಿಜಿಟಲೀಕರಣಗೊಳ್ಳುತ್ತಾ ಈ ಭಾವನೆ, ವಿವೇಚನೆ ಮತ್ತು ವರ್ತನೆಗಳೂ ಡಿಜಿಟಲೈಜ್ ಆಗತೊಡಗಿವೆ. ಉದಾಹರಣೆಗೆ ನಮ್ಮ ಸಹಜ ನಗುವಿನ ಸ್ಥಾನದಲ್ಲಿ ಈಗ ಸ್ಮೈಲಿಗಳು ಆಕ್ರಮಿಸಿಕೊಂಡಿವೆ. ನಮಗೆ ಅನೇಕ ಬಗೆಯ ನಗು ಇದ್ದವು. ಅಷ್ಟೂ ನಗುಗಳು ಈಗ ಹಿಡಿಯಷ್ಟು ಸ್ಮೈಲಿಗಳಾಗಿವೆ. ಅವೂ ನಾವು ನಕ್ಕಂತೆ ಅಲ್ಲದಾಗಿವೆ. ಮುಂಬರುವ ದಿನಗಳಲ್ಲಿ ಎಐ ಈ ಪರಿವರ್ತನೆಯನ್ನು ಸಾವಿರಪಟ್ಟು ಹೆಚ್ಚಿಸಲಿದೆ. ನಿಮಗೆ ಕೃತಕ ಸ್ನೇಹಿತ, ಕೃತಕ ಮಾನಸಿಕ ಸಂಗಾತಿ, ಕೃತಕ ದೈಹಿಕ ಸಂಗಾತಿಯರೂ ಒದಗಲಿದ್ದಾರೆ. ನಮ್ಮ ಸಹಜ ಭಾಷೆಯೂ ತನ್ನ ಸಾವಯುವತೆ ಕಳೆದುಕೊಂಡು ಹೊಸತಾದ ರಸವಿಲ್ಲದ ಚಾಟ್ ಜಿಪಟಿ ಭಾಷೆ ಉದ್ಭವಿಸುವ ಸಂಭವವಿದೆ.
ಇಲ್ಲಿ ಇನ್ನೂ ಒಂದು ವಿರೋಧಾಭಾಸ ಅಡಗಿದೆ. ನಾವೇನೋ ಒಳ್ಳೆಯ ಉದ್ದೇಶದಿಂದ ಉಪಕರಣಗಳನ್ನು ಬಹಳ ಸಂಭಾವಿತರನ್ನಾಗಿ ಸೌಮ್ಯವನ್ನಾಗಿ ಮಾಡಿಬಿಡಬಹುದು. ಉಪಕರಣಗಳು ಏರೋಪ್ಲೇನಿನ ಏರ್ ಹೊಸ್ಟೆಸ್ಸಿನಂತೆ ವರ್ತಿಸಬಹುದು. ಆದರೆ ನಿಜಜೀವನದಲ್ಲಿ ಮನುಷ್ಯ ಹಾಗಿಲ್ಲ ತಾನೇ? ಮನುಷ್ಯ ಕಲಿಯುವುದು ಗಟ್ಟಿಯಾಗುವುದು ಸಾಧಿಸುವುದು ಸುಳ್ಳು ವಂಚನೆ ಅವಮಾನಗಳನ್ನು ಎದುರಿಸಿದಾಗ. ಈಗಿನ ಜೆನ್ ಜಿ ಮಕ್ಕಳಿಗೆ ನೋವು ಹಸಿವು ಚುಚ್ಚು ಮಾತು ಸಹಿಸಿಕೊಳ್ಳುವ ಮಾನಸಿಕ ಶಕ್ತಿಯಿಲ್ಲ. ಈ ಅತಿ ಸೌಮ್ಯ ಉಪಕರಣಗಳಿಂದಾಗಿ ಮುಂದಿನ ಮಕ್ಕಳು ಮಾನಸಿಕವಾಗಿ ಇನ್ನಷ್ಟು ದುರ್ಬಲರಾಗಬಹುದು.
4. ಫ್ರೀ ವಿಲ್ ಮತ್ತು ಆಟೋನಮಿ- ಅಂದ್ರೆ ಮನುಷ್ಯ ಯಾವತ್ತಿಗೂ ತಾನು, ತನ್ನ ಆಲೋಚನೆಗಳು ಸರ್ವ ಸ್ವತಂತ್ರ ಎಂದು ಭಾವಿಸಿದ್ದ. ಅವನ ನಡೆ ನುಡಿಗಳಿಗೆ ತಾನೇ ಕಾರಣನೆಂದು ತಿಳಿದಿದ್ದ. ಹೆಚ್ಚೆಂದರೆ ಅನಾಹುತ ಸಂದರ್ಭಗಳಲ್ಲಿ ದೇವರ ಆಟ ಅಥವಾ ಲೀಲೆ ಎಂದು ಸುಮ್ಮನಾಗುತ್ತಿದ್ದ.
ಎಐ ಅಲ್ಗೋರಿತಮುಗಳು ಮನುಷ್ಯನ ಭಾವನೆ ಮತ್ತು ವರ್ತನೆಗಳನ್ನು ಊಹಿಸುವ ಪ್ರಯತ್ನ ಮಾಡುತ್ತವೆ. ಅದರ ಮೇರೆಗೆ ನಿಮ್ಮ ಮುಂದಿನ ಆಲೋಚನೆ ಮತ್ತು ವರ್ತನೆಯನ್ನು ತಾವೇ ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ನೀವು ಇವತ್ತು ಒಂದು ಸಿನಿಮಾಗೆ, ಮಾಲ್ ಹೋಗಿದ್ದರೆ, ನಿರ್ದಿಷ್ಟ ಬಣ್ಣದ ಬಟ್ಟೆ ತೆಗೆದುಕೊಂಡಿದ್ದರೆ, ನಿರ್ದಿಷ್ಟ ಸ್ಥಳಕ್ಕೆ ಪ್ರವಾಸಕ್ಕೆಂದು ಹೋಗಿದ್ದರೆ- ಅದು ನಿಮ್ಮದೇ ನಿರ್ಧಾರ ಎಂದು ಹೇಳಲು ಬರುವುದಿಲ್ಲ. ಇದನ್ನು ಕೇವಲ ಜಾಹೀರಾತು ಎಂದು ಸರಳೀಕರಣಗೊಳಿಸಬಾರದು. ನೀವು ಒಬ್ಬರೊಂದಿಗೆ ಹೇಗೆ ಸಂವಹನ ಮಾಡಿದ್ದೀರಿ ಎಂಬುದರ ಮೇರೆಗೆ ಅ್ಲಗೋರಿತಮುಗಳು ನಿಮ್ಮ ವ್ಯಕ್ತಿತ್ವವನ್ನೇ ಅಳೆದು ನಿಮ್ಮನ್ನು ಅದೇ ದಿಕ್ಕಿನಲ್ಲಿ ಎಳೆದುಕೊಂಡು ಹೋಗಿಬಿಡಬಹುದು. ನಾಳೆ ನೀವು ನಿಮ್ಮ ಸಂಗಾತಿಯೊಡನೆ ಜಗಳ ಆಡಿಕೊಂಡರೂ, ಸೈದ್ಧಾಂತಿಕವಾಗಿ ನಿರ್ದಿಷ್ಟ ದಿಕ್ಕಿನಲ್ಲಿ ಚಲಿಸಿದರೂ, ನಿರ್ದಿಷ್ಟ ಪಕ್ಷಕ್ಕೆ ಓಟ್ ಹಾಕಿದರೂ- ಅದೂ ಸಹ ನಿಮ್ಮದೇ ವಿವೇಚನೆಯ ನಿರ್ಧಾರವಾಗಿರಲ್ಲ. ಎಲ್ಲ ಅಲ್ಗೋರಿತಂ ಲೀಲೆ ಅಂದುಕೊಳ್ಳುವುದೇ ಸೂಕ್ತ.
5. ಎಕೋ ಚೇಂಬರ್: ನೀವೊಂದು ಬಾವಿಯ ತಳದಲ್ಲಿ ನಿಂತು ಕೂಗಿದರೆ ಎಲ್ಲಾ ಕಡೆಯಿಂದಲೂ ನಿಮ್ಮದೇ ಧ್ವನಿ ಪ್ರತಿಧ್ವನಿಸುತ್ತದೆ. ಎಐ ಉಪಕರಣಗಳು ನಿರಂತರವಾಗಿ ಕಲಿಯುತ್ತಿರುತ್ತವೆ. ಇಂಟರ್ನೆಟ್ ಜಾಲಾಡುವ ಮೂಲಕ. ಇಲ್ಲೊಂದು ಸಮಸ್ಯೆ ಇದೆ. ಎಐ ಉಪಕರಣಗಳಿಂದಲೇ ಉತ್ಪತ್ತಿಯಾದ ಡೇಟಾ ಸಹ ಇಂಟರ್ನೆಟ್ಟಿನಲ್ಲಿಯೇ ಇರುತ್ತದೆ, ಹಂಚಿಕೆಯಾಗುತ್ತದೆ. ಒಂದು ಘಟನೆಗೆ ಪ್ರತ್ಯಕ್ಷದರ್ಶಿಯಾಗಿದ್ದು ಬರೆದು ಕೊಡುವ ವರದಿಗೂ ಅವನು ಬರೆದ ವರದಿ ಮೇಲೆ ಇನ್ನೊಬ್ಬ ಬರೆವ ವರದಿಗೂ ವ್ಯತ್ಯಾಸವಿರುತ್ತದಲ್ಲ.. ಇಲ್ಲಿಯೂ ಹಾಗಾಗುತ್ತದೆ. ಇದು ಬಹಳ ಅಪಾಯಕರ ಸ್ಥಿತಿ. ಮಾನವನ ಸಹಜ ಜೀವನವೇ ಗೌಣವಾಗಿ ಎಐ ಸೃಷ್ಟಿಸಿದ ಜಗತ್ತೇ ಮುನ್ನಲೆಗೆ ಬಂದು ಅದೇ ನಿಯಮ ಅದೇ ಬದುಕಾಗುವ ಸಾಧ್ಯತೆಯಿದೆ.
6. Technological imperialism: ಅಂದರೆ ಎಐ ಉಪಕರಣಗಳು ಸರ್ಕಾರಗಳ, ಬಿಲಿಯನೇರುಗಳ, ಅನ್ಯದೇಶದ ದುಷ್ಟಶಕ್ತಿಗಳ ಗೂಢಾಚಾರಿಕೆಯ. ಒಬ್ಬರು ಇನ್ನೊಬ್ಬರನ್ನು ನಿಯಂತ್ರಿಸುವ ಉಪಕರಣಗಳಾಗಿ ಮಾರ್ಪಡಬಹುದು. ಯಾವ ದೇಶ ಜಾಗತಿಕ ಶಕ್ತಿಯಾಗಲಿದೆ ಎಂಬುದನ್ನು ಎಐ ಪ್ರಾಬಲ್ಯ ನಿರ್ಧರಿಸಬಹುದು. ಜನಸಾಮಾನ್ಯರು ಕ್ರಮೇಣ ಒಂದು ಕುರಿಹಿಂಡಾಗಿ ಮಾರ್ಪಡಬಹುದು. ಮಾನವ ಕುಲ ಒಂದೇ ಜಾತಿಯೆಂದರೂ ನಮ್ಮಲ್ಲೇ ಅನೇಕ ಬಗೆಯ ವೈವಿಧ್ಯತೆ ಇದೆ. ಊಟ ಬಟ್ಟೆ ನುಡಿ ಆಲೋಚನೆ ಸಂಸ್ಕಾರ ದೇಶದಿಂದ ದೇಶಕ್ಕೆ ಬಿಡುತ್ತದೆ. ಎಐ ಉಪಕರಣಗಳು ಹೆಚ್ಚಾಗಿ ಪಶ್ಚಿಮದಲ್ಲಿ ಉತ್ಪಾದನೆಯಾಗುವ ಮಾಹಿತಿಯನ್ನು ಕಲಿತಾಗ ಅದನ್ನು ಬಳಸುವ ಭಾರತೀಯರಿಗೆ ಭಾರತೀಯ ಮೌಲ್ಯಗಳಿಲ್ಲದೇ ಹೋಗಿ ಗೊಂದಲವಾಗಬಹುದು. ಉಪಕರಣಗಳು ಹೆಚ್ಚಾಗಿ ಇಂಗ್ಲೀಷಿನಲ್ಲಿರುವ ಮಾಹಿತಿ ಕಲಿಯುವುದಿರಂದ ಕನ್ನಡಿಗರಿಗೆ ಕನ್ನಡ ಸಂವೇದನೆ ಸಿಗದೇ ಹೋಗಬಹುದು.
7. ಮುಂಬರುವ ದಿನಗಳಲ್ಲಿ ಎಐ ಉಪಕರಣಗಳು ಕತೆ ಕವನ ಕಾದಂಬರಿಗಳನ್ನು ಬರೆದುಕೊಡಲಿವೆ. ಸುಶ್ರಾವ್ಯವಾಗಿ ಹಾಡು ಹಾಡಲಿವೆ. ಮನುಷ್ಯ ಹಾಗಾದರೆ ಇಲ್ಲಿ ತನ್ನ ಪಾತ್ರವೇನು ಎಂಬ ಪ್ರಶ್ನೆ ಉದ್ಭವಿಸಲಿದೆ. ಕಲೆ, ಸೃಜನಶೀಲತೆ ಮನುಷ್ಯನ ಸಹಜ ವೈಯುಕ್ತಿಕ ಪ್ರಜ್ಞೆಯಿಂದ ದೂರ ಸರಿದು ಕಲಸುಮೇಲೋಗರ ಪ್ರಜ್ಞೆಯತ್ತ ಸಾಗಬಹುದಾಗಿದೆ.
8. ತುರ್ತಿನ ಸವಾಲುಗಳು: ಔದ್ಯೋಗಿಕ ಪಲ್ಲಟ. ನಾನು ನಷ್ಟವೆನಲ್ಲ ಪಲ್ಲಟವೆನ್ನುತ್ತಿದ್ದೇನೆ. ಖಂಡಿತ ಅನೇಕ ಈಗಿರುವ ಉದ್ಯೋಗಗಳು ಹೋಗಲಿವೆ. ಎಲ್ಲೆಲ್ಲಿ ಮನುಷ್ಯನ ಭಾಷೆಯಲ್ಲಿ ಸಂವಹಿಸುವುದೇ ಒಂದು ಉದ್ಯೋಗ ಕೌಶಲ್ಯವಾಗಿತ್ತೋ ಅಲ್ಲೆಲ್ಲಾ ಎಐ ಬಂದು ಕೂರಲಿದೆ. ಧ‌್ವನಿಪ್ರಧಾನವಾಗಿದ್ದ- ಕಾಲ್ ಸೆಂಟರ್, ಕಸ್ಟಮರ್ ಸರ್ವೀಸ್ ಮತ್ತು ಸಪೋರ್ಟ್, ಅಕೌಂಟೆಂಟ್ಸ್, ಕ್ಲೆರಿಕಲ್ ಜಾಬ್ಸ್, ಟೆಲಿ ಮಾರ್ಕೆಟಿಂಗ್ ಮುಂತಾಗಿ.
ಕೃಷಿ ಕಾರ್ಮಿಕರು, ಕೈಗಾರಿಕಾ ಕಾರ್ಮಿಕರು, ಕಟ್ಟಡ ಕಾರ್ಮಿಕರು- ಇಲ್ಲೇಲ್ಲಾ ಜಾಬ್ ಹೋಗುತ್ತಾ ಎಂದರೆ ಹೇಳಕ್ಕಾಗಲ್ಲ. ಅಲ್ಲಿ ಹೂಡಿದ ಹಣ ಹೆಚ್ಚು ಲಾಭ ತರಿಸುತ್ತದೆ ಎನ್ನುವಂಗಿದ್ದರೆ ಅಲ್ಲಿಯೂ ಎಐ ಉಪಕರಣಗಳು ಬರಹಬುದು.
9. ಕಾಪಿರೈಟ್ ಉಲ್ಲಂಘನೆ: ಎಐ ಬರುವ ಮುನ್ನ ಇದು ಬರಲಿದೆ ಎಂದು ತಿಳಿಯದೆ ಅನೇಕ ಕಲಾವಿದರು ತಮ್ಮ ಹಾಡು, ಪದ್ಯ, ಕತೆ, ಕಾದಂಬರಿಗಳನ್ನು ಅಥವಾ ಅದರ ತುಣುಕುಗಳನ್ನು ಇಂಟರ್ನೆಟ್ಟಿನಲ್ಲಿ ಹಂಚಿಕೊಂಡಿದ್ದರು. ಎಐ ಉಪಕರಣಗಳು ಸಾರ್ವವಜನಿಕವಾಗಿ ಲಭ್ಯವಿದ್ದ ಈ ಡೇಟಾವನ್ನು ತಮ್ಮ ತರಬೇತಿಗೆ ಬಳಸಿಕೊಂಡವು. ಈ ಉಪಕರಣಗಳು ಈಗ ನಮಗೆ ಸೃಷ್ಟಿಸಿಕೊಡುವ ಹಾಡು, ಕವಿತೆ, ಕತೆ ಅಥವಾ ಇನ್ನಾವುದೇ ಮೌಲ್ಯಯುತ ಬರಹಗಳು ಯಾರ ಕೃಪೆ ಎಂಬ ಗೊಂದಲವಿದೆ. ಇದರ ಶ್ರೇಯಸ್ಸು ರಾಯಲ್ಟಿ ಯಾರಿಗೆ ಸಲ್ಲಬೇಕು? ಉಪಕರಣಕ್ಕೋ ತಂತ್ರಜ್ಞಾನಿಗೋ ಅಥವಾ ಡೇಟಾದ ಕರ್ತೃ ಕಲಾವಿದನಿಗೋ? ಪುಸ್ತಕ ಪ್ರಕಾಶಕರು ಮ್ಯೂಜಿಕ್ ಕಂಪನಿಗಳು ಇದರ ರಾಯಲ್ಟಿ ತಮಗೆ ಬರಬೇಕು ಎಂಬುದು ಅವರ ವಾದ. ಯಾಕಂದರೆ ಎಐ ಕಂಪನಿಗಳು ಉಪಕರಣಗಳನ್ನು ಸಾರ್ವಜನಿಕರಿಗೆ ಬಾಡಿಗೆಗೆ ಬಿಟ್ಟು ಲಾಭ ಮಾಡಿಕೊಳ್ಳುತ್ತಿವೆ.
10. ಇದೊಂದು ಟ್ರಾನ್ಸಿಶನ್ ಸಮಯ. ಜಗತ್ತು ಇನ್ನೂ ಎಜುಕೇಟ್ ಆಗುತ್ತಿರುವಂತಹ ಸಮಯ. ನಾವು ಮೊಬೈಲುಗಳಿಗೆ ಹೊಂದಿಕೊಳ್ಳಲು ನಮ್ಮ ಜೀವನಕ್ರಮವನ್ನು ಬದಲಿಸಿಕೊಳ್ಳಲು ಹತ್ತದಿನೈದು ವರ್ಷ ತಗೊಂಡಿದ್ದೆವು. ಹಾಗೆ ಎಐಗೂ ಸಮಯ ಬೇಕಾಗುತ್ತದೆ. ಈ ಹೊತ್ತಿನಲ್ಲಿ ಅಜ್ಞಾನ, ಅಸಮರ್ಪಕ, ಎಚ್ಚರ ತಪ್ಪಿದ ಬಳಕೆಯಿಂದಾಗಿ ಅಪಾಯಗಳು ಅನಾಹುತಗಳು ಉಂಟಾಗಬಹುದು. ಡೀಪ್ ಫೇಕ್ ವಿಡಿಯೋಗಳು, ಸುಳ್ಳು ಸುದ್ದಿಗಳು ಅಥವಾ ವರದಿಗಳು, ಫಿಶಿಂಗ್ ಸ್ಕಾಮುಗಳು-ಹೀಗೆ ಅನೇಕ ರೀತಿಯಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಗುರುತಿಸಲು ವಿಫಲವಾಗಿ ನಮ್ಮ ಹಣ, ಮಾನ, ಜ್ಞಾನಗಳಿಗೆ ಧಕ್ಕೆಯಾಗಬಹುದು.
ಹಾಗಾದರೆ ನಾನು ಇಲ್ಲಿ ನಿಂತು ಪ್ರಳಯದ ಕಹಳೆ ಊದುತ್ತಿದ್ದೇನೆಯೇ? ಇಲ್ಲ. ಇದರಿಂದ ಪಾರಾಗಲು ಸಾಧ್ಯವೇ ಇಲ್ಲವೇ? ಅದೂ ಇಲ್ಲ.
- ಎಐ ಬರಲಿದೆ, ಇರಲಿದೆ. ತಪ್ಪಿಸಿಕೊಂಡು ಹೋಗುವಂತಿಲ್ಲ. ಜಗತ್ತು ಹಿಂದೆಂದೂ ಹಿಂದೆ ತಿರುಗಿ ನಡೆದಿರುವ ಉದಾಹರಣೆಗಳಿಲ್ಲ.
- ಜನ ವ್ಯಾಪಕವಾಗಿ ಇದರ ಬಗ್ಗೆ ಎಜುಕೇಟ್ ಆಗಬೇಕು. ಪ್ರತಿ ವ್ಯಕ್ತಿ, ಪ್ರತಿ ಸಂಸ್ಥೆ, ಪ್ರತಿ ಪ್ರಜೆ ಅಗತ್ಯವಿದ್ದಷ್ಟು ತಿಳಿದಿರಬೇಕು. ಕಲಿತಿರಬೇಕು.
- ಎಐ ಉಪಕರಣಗಳ ತಯಾರಕರು, ಸರ್ಕಾರಗಳು ಈ ವಿಚಾರದಲ್ಲಿ ಆರಂಭದಿಂದಲೇ ಹೆಚ್ಚು ಪಾರದರ್ಶಕತೆಯನ್ನು ಅಳವಡಿಸಿಕೊಳ್ಳಬೇಕು.
- ಎಐ ಉಪಕರಣಗಳಿಗೆ ಜನರೇ ಪ್ರಯೋಗಪಶುಗಳಾಗಬಾರದು. ಹೊಸ ಉಪಕರಣಗಳು ಒಂದಷ್ಟು ಪ್ರಬುದ್ಧತೆ ಸಾಧಿಸುವವರೆಗೆ ಸೀಮಿತವಾಗಿ ಅಥವಾ ಲ್ಯಾಬಿನಲ್ಲಿ ತರಬೇತಿ ನಡೆಯಬೇಕು. ನೀವು ಮೆಟಾ ಎಐನ ಹುಚ್ಚಾಟವನ್ನು ಗಮನಿಸಿರುತ್ತೀರಿ. ಜನರಿಗೆ ಮಂಗನ ಕೈಲಿ ಮಾಣಿಕ್ಯ ಕೊಟ್ಟಂತಾಗಿದೆ.
- ಕನ್ನಡಿಗರು ಇಂಟರ್ನೆಟ್ಟಿನಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳಬೇಕು. ಪ್ರತಿ ಮಾತು, ಬರಹವನ್ನು ಕನ್ನಡದಲ್ಲಿ ಟೈಪಿಸಬೇಕು. ಪ್ರತಿ ಮಾಹಿತಿಯನ್ನು ಕನ್ನಡೀಕರಿಸಬೇಕು. ಕನ್ನಡ ಪ್ರಜ್ಞೆ ಕನ್ನಡ ಸಂವೇದನೆಯನ್ನು ಇಂಟರ್ನೆಟ್ಟಿನಲ್ಲಿ ತುಂಬಬೇಕು. ಈ ನಿಟ್ಟಿನಲ್ಲಿ ನಿಮ್ಮ ಪುಸ್ತಕಗಳು ಅಥವಾ ಹಳೆಯ ಪುಸ್ತಕಗಳು ಮಾರುಕಟ್ಟೆಯಲ್ಲಿ ಇನ್ನೂ ಕೊಂಡು ಓದುವ ಚಾಲ್ತಿಯಲ್ಲಿ ಇರದಿದ್ದರೆ- ಅದನ್ನು ಇಂಟರ್ನೆಟ್ ಆರ್ಕೈವ್ ಗೆ ಅಪ್ಲೋಡ್ ಮಾಡುವ ಉದಾರತೆ ತೋರಬೇಕಿದೆ.
- ನಾವು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯವಾಗಿದೆ. ಒಂದು ಸರಕಾರಿ ಉದ್ಯೋಗ ಸಿಕ್ಕಿತು ಇನ್ನು ರಿಟೈರ್ ಆಗುವವರೆಗೆ ನಿಶ್ಚಿಂತೆ ಎಂದು ಕೂರುವಂತಿಲ್ಲ. ಯಾವಾಗ ಬೇಕಾದರೂ ಆ ಉದ್ಯೋಗ ಆ ಕೌಶಲ್ಯ ಗೌಣವಾಗಿ ನೀವು ಹೊಸ ಕೌಶಲ್ಯ ಬೆಳೆಸಿಕೊಳ್ಳುವ ಅಗತ್ಯ ಉದ್ಭವಿಸಬಹುದು.
ಒಟ್ಟಾರೆ ನಾವು ಹೊಸ ಜಗತ್ತಿಗೆ ತುರ್ತಾಗಿ ಸಿದ್ಧವಾಗಬೇಕಿದೆ. ನಮ್ಮ ಬದುಕನ್ನು ಕಲಿಕೆ, ಜ್ಞಾನ ಮತ್ತು ವಿವೇಚನೆಗಳಿಂದ ನಮ್ಮದೇ ಕೈಲಿಟ್ಟುಕೊಳ್ಳುವ ಜಾಣ್ಮೆ ತೋರಬೇಕಿದೆ.