ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Lord Rama Temples: ಭಾರತದ ಖ್ಯಾತ ಶ್ರೀರಾಮನ ದೇವಸ್ಥಾನಗಳಿವು; ರಾಮನವಮಿಯಂದು ನೆರವೇರಲಿದೆ ವಿಶೇಷ ಪೂಜೆ, ಪುನಸ್ಕಾರ

Lord Rama Temples: ಭಾರತದ ಖ್ಯಾತ ಶ್ರೀರಾಮನ ದೇವಸ್ಥಾನಗಳಿವು; ರಾಮನವಮಿಯಂದು ನೆರವೇರಲಿದೆ ವಿಶೇಷ ಪೂಜೆ, ಪುನಸ್ಕಾರ

Rama Temples in India: ಭಾರತದಲ್ಲಿ ರಾಮ ಮಂದಿರ ಎಂದಾಕ್ಷಣ ಸದ್ಯ ನೆನಪಾಗುವುದೇ ಅಯೋಧ್ಯೆ. ಆದರ ಇದರ ಜೊತೆಯಲ್ಲಿ ಭಾರತದಲ್ಲಿ ಪ್ರತೀತಿ ಪಡೆದಿರುವ ಇನ್ನಷ್ಟು ರಾಮ ದೇಗುಲಗಳ ಕುರಿತ ವಿವರ ಹಾಗೂ ಹಿನ್ನೆಲೆ ಇಲ್ಲಿದೆ ನೋಡಿ.

ಭಾರತದಲ್ಲಿರುವ ಖ್ಯಾತ ರಾಮನ ದೇವಾಲಯಗಳು
ಭಾರತದಲ್ಲಿರುವ ಖ್ಯಾತ ರಾಮನ ದೇವಾಲಯಗಳು (PC: Itishree @Itishree001)

ರಾಮನವಮಿ ಎಂದರೆ ಸಾಕು ರಾಮನ ವ್ಯಕ್ತಿತ್ವಗಳು ನೆನಪಾಗುತ್ತದೆ. ಅದರ ಜೊತೆಯಲ್ಲಿ ರಾಮನಿಗೆ ಸಂಬಂಧಿಸಿದ ದೇಗುಲಗಳೂ ನೆನಪಾಗುತ್ತದೆ. ಈ ಬಾರಿಯಂತೂ ಅಯೋಧ್ಯೆಯ ರಾಮಮಂದಿರ ರಾಮ ನವಮಿಯ ಹೈಲೈಟ್ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮರ್ಯಾದಾ ಪುರುಷೋತ್ತಮ ಎಂದೇ ಕರೆಸಿಕೊಳ್ಳುವ ಭಗವಾನ್ ಶ್ರೀರಾಮ ಸತ್ಯ, ನಿಷ್ಠೆ, ಪ್ರಾಮಾಣಿಕತೆ, ಆದರ್ಶ ಪುತ್ರ, ಆದರ್ಶ ಪತಿ ಹೀಗೆ ಪ್ರತಿಯೊಂದು ರೀತಿಯಲ್ಲೂ ರಾಮ ಪ್ರತಿಯೊಬ್ಬರಿಗೂ ಆದರ್ಶ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಭಗವಾನ್ ರಾಮ ತ್ರೇತಾಯುಗದಲ್ಲಿ ಜನಿಸಿದ್ದು ರಾಮನನ್ನು ಮೂರ್ತಿ ರೂಪದಲ್ಲಿ ಪೂಜಿಸಲಾಗುತ್ತದೆ. ರಾಮನ ಜನ್ಮಸ್ಥಳವಾದ ಅಯೋಧ್ಯೆ 500 ವರ್ಷಗಳ ಹೋರಾಟದ ಬಳಿಕ ಹಿಂದೂಗಳಿಗೆ ಮರಳಿ ಸಿಕ್ಕಿದೆ. ಭಾರತದಲ್ಲಿರುವ ರಾಮನಿಗೆ ಅನೇಕ ದೇವಾಲಯಗಳಿವೆ. ಅವುಗಳಲ್ಲಿ ಪ್ರಸಿದ್ಧ ದೇಗುಲಗಳ ಬಗ್ಗೆ ಇಲ್ಲಿದೆ ಮಾಹಿತಿ.

1. ಅಯೋಧ್ಯೆ ರಾಮಮಂದಿರ, ಉತ್ತರ ಪ್ರದೇಶ

ಇದು ಭಗವಾನ್ ಶ್ರೀರಾಮನ ಜನಸ್ಥಳ. ಭಾರತದ ಅತ್ಯಂತ ಪ್ರಾಚೀನ ನಗರ ಕೂಡ ಹೌದು. ಸರಯೂ ನದಿ ದಡದಲ್ಲಿರುವ ಅಯೋಧ್ಯೆಯು ಹಿಂದೂಗಳ ಪ್ರಮುಖ 7 ಯಾತ್ರಾ ಸ್ಥಳಗಳ ಪೈಕಿ ಒಂದಾಗಿದೆ. ಅಯೋಧ್ಯೆಯಲ್ಲಿ 2020ರ ಆಗಸ್ಟ್ 5ರಂದು ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದ್ದು ಈ ವರ್ಷ ಜನವರಿ ತಿಂಗಳಲ್ಲಿ ಅಯೋಧ್ಯೆ ರಾಮಮಂದಿರವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.

2. ರಾಮರಾಜ ದೇವಸ್ಥಾನ, ಮಧ್ಯ ಪ್ರದೇಶ

ಮಧ್ಯಪ್ರದೇಶ ಓರ್ಚಾ ಎಂಬಲ್ಲಿರುವ ಈ ದೇಗುಲವು ಭಾರತದ ಪ್ರಸಿದ್ಧ ಶ್ರೀರಾಮ ದೇಗುಲಗಳ ಪೈಕಿ ಒಂದಾಗಿದೆ. ಈ ದೇಗುಲವು ಬೆಟ್ವಾ ನದಿಯ ದಡದಲ್ಲಿದೆ. ಓರ್ಚಾದ ರಾಣಿಯು ಭಗವಾನ್ ಶ್ರೀರಾಮನ ಭಕ್ತೆಯಾಗಿದ್ದಳು. ಒಂದು ದಿನ ಅಯೋಧ್ಯೆಗೆ ತೆರಳಿದ ರಾಣಿಯು ರಾಮನ ಬಳಿ ತನ್ನ ಊರಿಗೆ ಬರುವಂತೆ ಕೇಳಿದಳು. ಭಗವಾನ್ ರಾಮನು ಆಕೆಯೊಂದಿಗೆ ಓರ್ಚಾಗೆ ಬರಲು ಒಪ್ಪಿದನು, ಆದರೆ ನಾನು ಒಂದು ದೇಗುಲದಿಂದ ಇನ್ನೊಂದು ದೇಗುಲಕ್ಕೆ ಬರುವುದಿಲ್ಲ. ಓರ್ಚಾದಲ್ಲಿ ಮೊದಲು ನೀನು ನನಗೆ ಎಲ್ಲಿ ಜಾಗ ನೀಡುತ್ತಿಯೋ ಅಲ್ಲಿ ನಾನು ಇರುತ್ತೇನೆ ಎಂದು ಹೇಳಿದ್ದನು ಎನ್ನಲಾಗಿದೆ.

ಇದಾದ ನಂತರ ಓರ್ಚಾದಲ್ಲಿ ಶ್ರೀರಾಮನಿಗೆ ದೇವಾಲಯ ನಿರ್ಮಿಸಲಾಯಿತು. ದೇವಾಲಯವು ಸಿದ್ಧವಾದ ಬಳಿಕ ರಾಣಿಯೊಂದಿಗೆ ಈ ಮೊದಲೇ ಮಾಡಿಕೊಂಡ ಷರತ್ತಿನಂತೆ ರಾಮನು ಬೇರೆ ಕಡೆಗೆ ಸ್ಥಳಾಂತರಗೊಳ್ಳಲು ನಿರಾಕರಿಸುತ್ತಾನೆ. ಹೀಗಾಗಿ ರಾಮನು ರಾಣಿಯ ಅರಮನೆಯಲ್ಲಿಯೇ ಇರುತ್ತಾನೆ. ಇದಾದ ಬಳಿಕ ಆ ಅರಮನೆಯು ರಾಮರಾಜ ದೇವಾಲಯವಾಗಿ ಬದಲಾಯಿತು. ಇಲ್ಲಿ ರಾಮನನ್ನು ಕೇವಲ ದೇವರಾಗಿ ಮಾತ್ರವಲ್ಲ, ರಾಜನಾಗಿ ಕೂಡ ಆರಾಧಿಸಲಾಗುತ್ತದೆ.

3. ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನ, ತೆಲಂಗಾಣ

ಇದು ಕೂಡ ಭಾರತದ ಪ್ರಸಿದ್ಧ ರಾಮನ ದೇಗುಲಗಳ ಪೈಕಿ ಒಂದಾಗಿದೆ. ಇದು ತೆಲಂಗಾಣದ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಭದ್ರಾಚಲಂನಲ್ಲಿದೆ. ರಾಮ ನವಮಿಯ ದಿನದಂದು ಭಗವಾನ್ ರಾಮ ಹಾಗೂ ಸೀತೆಯ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ. ಈ ದೇವಾಲಯವನ್ನು ಭದ್ರಾಚಲಂ ದೇಗುಲ ಎಂದೂ ಕರೆಯುತ್ತಾರೆ. ಇನ್ನು ರಾಮಾಯಣದಲ್ಲಿ ಭದ್ರಾಚಲಂ ಹಾಗೂ ವಿಜಯನಗರ ಎಂಬ ಎರಡು ಸ್ಥಳಗಳ ಉಲ್ಲೇಖವಿದೆ. ಸೀತಾ, ರಾಮ ಹಾಗೂ ಲಕ್ಷ್ಮಣ ಭದ್ರಾಚಲಂನಿಂದ 35 ಕಿಲೋ ಮೀಟರ್ ದೂರದಲ್ಲಿರುವ ಪರ್ಣಶಾಲಾದಲ್ಲಿ ತಂಗಿದ್ದರು ಎನ್ನಲಾಗಿದೆ. ಶ್ರೀರಾಮನು ಸೀತೆಯನ್ನು ರಕ್ಷಿಸಲು ಶ್ರೀಲಂಕಾಕ್ಕೆ ತೆರಳುವ ಸಂದರ್ಭದಲ್ಲಿ ಗೋದಾವರಿ ನದಿ ದಾಟಿದ್ದ ಎನ್ನಳಾಗಿದೆ. ಈ ನದಿಯ ಉತ್ತರ ದಡದಲ್ಲಿ ಭದ್ರಾಚಲಂ ದೇಗುಲವಿದೆ.

4. ರಾಮಸ್ವಾಮಿ ದೇವಸ್ಥಾನ, ತಮಿಳುನಾಡು

ಈ ದೇವಾಲಯವು ತಮಿಳುನಾಡಿನ ಕುಂಭಕೋಣಂ ಎಂಬಲ್ಲಿದೆ. ಈ ದೇಗುಲವನ್ನು 400 ವರ್ಷಗಳ ಹಿಂದೆ ರಾಜ ರಘುನಾಥ ನಾಯ್ಕರ್ ನಿರ್ಮಿಸಿದನು ಎನ್ನಲಾಗಿದೆ. ಈ ದೇವಾಲಯವು ರಾಮಾಯಣದ ವರ್ಣಚಿತ್ರಗಳನ್ನು ಹೊಂದಿದೆ. ದೇವಾಲಯದ ತುಂಬೆಲ್ಲಾ ರಾಮಾಯಣಕ್ಕೆ ಸಂಬಂಧಿಸಿದ ಸಂಕೀರ್ಣ ಕೆತ್ತನೆಗಳಿವೆ. ರಾಮ ಸೀತೆ ಮದುವೆಯ ಭಂಗಿಯಲ್ಲಿ ಗರ್ಭಗುಡಿಯಲ್ಲಿ ಸ್ಥಾಪಿತರಾಗಿದ್ದಾರೆ. ಶತ್ರುಘ್ನ ಎಡಭಾಗದಲ್ಲಿದ್ದರೆ ಭರತನು ರಾಮನಿಗೆ ಛತ್ರಿಯನ್ನು ಹಿಡಿದಿದ್ದಾನೆ. ಬಲಭಾಗದಲ್ಲಿ ಎಂದಿನಂತೆ ಬಿಲ್ಲು ಹಿಡಿದ ಲಕ್ಷ್ಮಣನನ್ನು ಕಾಣಬಹುದಾಗಿದೆ.

5. ಕಲಾರಾಮ ದೇವಸ್ಥಾನ, ನಾಸಿಕ್, ಮಹಾರಾಷ್ಟ್ರ

ಮಹಾರಾಷ್ಟ್ರದ ನಾಸಿಕ್ ನಗರದ ಪಂಚವಟಿ ಪ್ರದೇಶದಲ್ಲಿ ಈ ದೇಗುಲವಿದೆ. ಶ್ರೀರಾಮನು ತನ್ನ ವನವಾಸದ ಸಂದರ್ಭದಲ್ಲಿ ಈ ದೇಗುಲದಲ್ಲಿ ತಂಗಿದ್ದ ಎನ್ನಲಾಗಿದೆ. 12 ವರ್ಷಗಳ ಹಿಂದೆ ದೇಗುಲದ ನವೀಕರಣ ಕಾರ್ಯ ಮಾಡಲಾಗಿದೆ. ಪಶ್ಚಿಮ ಭಾರತದ ರಾಮನ ಅತ್ಯುತ್ತಮ ಆಧುನಿಕ ದೇಗುಲ ಇದಾಗಿದೆ. ಇಲ್ಲಿ ಶ್ರೀರಾಮ, ಸೀತೆ, ಕಪ್ಪು ಶಿಲೆಯ ಲಕ್ಷ್ಮಣನ ಮೂರ್ತಿಯನ್ನು ಕಾಣಬಹುದಾಗಿದೆ.

6. ತ್ರಿಪ್ರಯಾರ್ ಶ್ರೀರಾಮ ದೇವಸ್ಥಾನ, ಕೇರಳ

ಈ ದೇವಾಲಯವು ಕೇರಳದ ತ್ರಿಶೂರ್ ಜಿಲ್ಲೆಯಲ್ಲಿದೆ. ದೇವಾಲಯದಲ್ಲಿರುವ ಭಗವಾನ್ ರಾಮ ದೇವರನ್ನು ತ್ರಿಪ್ರಯಾರ್ ತೇವರ್ ಅಥವಾ ತ್ರಿಪ್ರಯಾರಪ್ಪನ್ ಎಂದು ಕರೆಯಲಾಗುತ್ತದೆ. ಪುರಾಣದಲ್ಲಿ ಉಲ್ಲೇಖವಾಗಿರುವ ಪ್ರಕಾರ ಇಲ್ಲಿ ಶ್ರೀರಾಮನನ್ನು ಭಗವಾನ್ ಶ್ರೀಕೃಷ್ಣ ಪೂಜಿಸುತ್ತಿದ್ದನು ಎನ್ನಲಾಗಿದೆ. ಶ್ರೀಕೃಷ್ಣನ ನಂತರ ಮೂರ್ತಿಯನ್ನು ಸಮುದ್ರದಲ್ಲಿ ಮುಳುಗಿಸಲಾಗಿತ್ತು. ಇದಾದ ಬಳಿಕ ಈ ಮೂರ್ತಿಯು ಕೇರಳದ ಚೆಟ್ಟುವಾ ಎಂಬ ಪ್ರದೇಶದಲ್ಲಿ ಮೀನುಗಾರರ ಕೈಗೆ ಸಿಕ್ಕಿತು. ಇದಾದ ಬಳಿಕ ವಕ್ಕಯಿಲ್ ಕೈಮಾನ್ ಎಂಬ ಸ್ಥಳೀಯ ಆಡಳಿತಗಾರನು ತ್ರಿಪ್ರಯಾರ್ ಎಂಬಲ್ಲಿ ಈ ಮೂರ್ತಿಗೆ ದೇಗುಲ ನಿರ್ಮಿಸಿದನು ಎನ್ನಲಾಗಿದೆ. ಭಗವಾನ್ ಶ್ರೀರಾಮನ ವಿಗ್ರಹವು ಶಂಖ, ತಟ್ಟೆ, ಬಿಲ್ಲು ಹಾಗೂ ಹಾರವನ್ನು ಹೊಂದಿದೆ.