ಕನ್ನಡ ಸುದ್ದಿ  /  Astrology  /  Spiritual News Bhagavad Gita Updesh Lord Krishna Result Of Control The Restless Mind Bhagavad Gita Quotes Rmy

ಭಗವದ್ಗೀತೆ: ಚಂಚಲ ಮನಸ್ಸನ್ನು ನಿಯಂತ್ರಿಸುವವನು ಮನಃಶಾಂತಿ ಸಾಧಿಸಬಲ್ಲ; ಗೀತೆಯಲ್ಲಿನ ಸಾರಾಂಶ ತಿಳಿಯಿರಿ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಚಂಚಲ ಮನಸ್ಸನ್ನು ನಿಯಂತ್ರಿಸುವವನು ಮನಃಶಾಂತಿ ಸಾಧಿಸಬಲ್ಲ ಎಂಬುದರ ಅರ್ಥ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಆಪೂರ್ಯಮಾಣಮಚಲಪ್ರತಿಷ್ಠಮ್

ಸಮುದ್ರಮಾಪಃ ಪ್ರವಿಶನ್ತಿ ಯದ್ವತ್ |

ತದ್ವತ್ ಕಾಮಾ ಯಂ ಪ್ರವಿಶನ್ತಿ ಸರ್ವೇ

ಸ ಶಾನ್ತಿಮಾಪ್ನೋತಿ ನ ಕಾಮಕಾಮೀ ||70||

ಸದಾ ನದಿಗಳು ಪ್ರವೇಶಿಸಿ ನೀರು ತುಂಬುತ್ತಿದ್ದರೂ ಶಾಂತವಾಗಿರುವ ಸಾಗರದಂತೆ, ನಿರಂತರವಾಗಿ ಹರಿದು ಬರುವ ಕಾಮಗಳಿಂದ ಮನಸ್ಸು ಕಲಕದಂತಿರುವ ಮನುಷ್ಯನು ಮಾತ್ರವೇ ಶಾಂತಿಯನ್ನು ಸಾಧಿಸಬಲ್ಲ. ಇಂತಹ ಕಾಮಗಳನ್ನು ತೃಪ್ತಿಗೊಳಿಸಲು ಶ್ರಮಿಸುವವನಿಗೆ ಶಾಂತಿ ದೊರೆಯಲಾರುದು.

ಸಾಗರವು ಯಾವಾಗಲೂ ನೀರಿನಿಂದ ತುಂಬಿರುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಹೆಚ್ಚು ನೀರು ಅದನ್ನು ತುಂಬುತ್ತದೆ. ಆದರೂ ಸಾಗರವು ಒಂದೇ ರೀತಿ ಇರುತ್ತದೆ. ಶಾಂತವಾಗಿ ಇರುತ್ತದೆ. ಅದು ಪ್ರಕ್ಷುಬ್ಧವಾಗುವುದಿಲ್ಲ ಮತ್ತು ತನ್ನ ದಡದ ಮಿತಿಯನ್ನು ಮೀರುವುದಿಲ್ಲ. ಕೃಷ್ಣಪ್ರಜ್ಞೆಯಲ್ಲಿ ಮನಸ್ಸು ನೆಲೆಸಿರುವನ ವಿಷಯದಲ್ಲಿಯೂ ಇದು ಸತ್ಯ. ಐಹಿಕ ಶರೀರವಿರುವಷ್ಟು ಕಾಲವೂ ಇಂದ್ರಿಯತೃಪ್ತಿಗಾಗಿ ಶರೀರದ ಬೇಡಿಕೆಗಳು ಇದ್ದೇ ಇರುತ್ತವೆ.

ಆದರೆ ಭಕ್ತನ ಪೂರ್ಣತೆಯನ್ನು ಪಡೆದಿರುವುದರಿಂದ ಅವನ ಮನಸ್ಸು ಇಂತಹ ಆಸೆಗಳಿಂದ ಕದಡುವುದಿಲ್ಲ. ಕೃಷ್ಣಪ್ರಜ್ಞೆಯುಳ್ಳ ಮನುಷ್ಯನಿಗೆ ಯಾವುದರ ಅಗತ್ಯವೂ ಇಲ್ಲ. ಏಕೆಂದರೆ ಭಗವಂತನೇ ಅವನ ಎಲ್ಲ ಐಹಿಕ ಅಗತ್ಯಗಳನ್ನು ಪೂರೈಸುತ್ತಾನೆ. ಆದುದರಿಂದ ಆತನು ಸಮುದ್ರದಂತೆ ಯಾವಾಗಲೂ ತನ್ನಲ್ಲೇ ಪೂರ್ಣತೆ ಇರುವವನು. ಸಮುದ್ರದೊಳಕ್ಕೆ ಹರಿಯುವ ನದಿಯ ನೀರಿನಂತೆ ಬಯಕೆಗಳು ಅವನಿಗೆ ಬರಬಹುದು. ಆದರೆ ಅವನು ತನ್ನ ಚಟುವಟಿಕೆಗಳಲ್ಲಿ ಸ್ಥಿರನಾಗಿ ಇರುತ್ತಾನೆ. ಇಂದ್ರಿಯತೃಪ್ತಿಯ ಬಯಕೆಗಳಿಂದ ಅವನಿಗೆ ಒಂದಿಷ್ಟೂ ಕ್ಷೋಭೆಯಾಗುವುದಿಲ್ಲ.

ಒಬ್ಬ ಮನುಷ್ಯನಲ್ಲಿ ಕೃಷ್ಣಪ್ರಜ್ಞೆಯು ಇದೆ ಎನ್ನುವುದಕ್ಕೆ ಇದೇ ಸಾಕ್ಷ್ಯಾಧಾರ. ಅವನಲ್ಲಿ ಬಯಕೆಗಳಿದ್ದರೂ ಐಹಿಕ ಇಂದ್ರಿಯತೃಪ್ತಿಯ ಒಲವು ಇರುವುದೇ ಇಲ್ಲ. ಅವನು ಭಗವಂತನ ದಿವ್ಯಪ್ರೇಮದ ಸೇವೆಯಲ್ಲಿ ತೃಪ್ತನಾಗಿರುವುದರಿಂದ ಸಮುದ್ರದಂತೆ ಸ್ಥಿರನಾಗಿರಬಲ್ಲ. ಆದುದರಿಂದ ಸಂಪೂರ್ಣವಾಗಿ ಶಾಂತಿಯನ್ನು ಅನುಭವಿಸಬಲ್ಲ. ಐಹಿಕ ಯಶಸ್ಸಿನ ಬಯಕೆಯಾಗಿರಲಿ, ಮುಕ್ತಿಯ ಬಯಕೆಯೇ ಆಗಿರಲಿ, ಬಯಕೆಗಳನ್ನು ತೃಪ್ತಿಪಡಿಸಲು ಅಪೇಕ್ಷಿಸುವವರಿಗೆ ಶಾಂತಿ ಎಂಬುದೇ ಇಲ್ಲ.

ಕಾಮ್ಯಕರ್ಮಿಗಳು, ಮೋಕ್ಷಾರ್ಥಿಗಳು ಹಾಗೂ ಯೋಗಸಿದ್ಧಿಯನ್ನು ಬಯಸುವವರು ಪೂರೈಕೆಗೂಳ್ಳದ ಬಯಕೆಗಳಿಂದಾಗಿ ಅಸುಖಿಗಳಾಗಿರುತ್ತಾರೆ. ಆದರೆ ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನು ಭಗವಂತನ ಸೇವೆಯಲ್ಲಿಯೇ ಸುಖ ಹೊಂದುತ್ತಾನೆ. ಅವನಿಗೆ ತೃಪ್ತಿಗೊಳಿಸಬೇಕಾದ ಬಯಕೆಗಳು ಯಾವುವೂ ಇರುವುದಿಲ್ಲ. ವಾಸ್ತವವಾಗಿ ಯಾವುದನ್ನು ಐಹಿಕ ಬಂಧನ ಎಂದು ಕರೆಯುತ್ತೇವೆಯೋ ಅದರಿಂದ ಸಹ ಆತನು ಬಿಡುಗೆಯನ್ನು ಅಪೇಕ್ಷಿಸುವುದಿಲ್ಲ. ಕೃಷ್ಣನ ಭಕ್ತರಿಗೆ ಪ್ರಾಪಂಚಿಕ ಬಯಕೆಗಳಿಲ್ಲ. ಆದುದರಿಂದ ಅವರು ಪರಿಪೂರ್ಣ ಶಾಂತಿಯಲ್ಲಿರುತ್ತಾರೆ.

ವಿಹಾಯ ಕಾಮಾನ್ ಯಃ ಸರ್ವಾನ್ ಪುಮಾಂಶ್ಚರತಿ ನಿಃಸ್ಪೃಹಃ |

ನಿರ್ಮಮೋ ನಿರಹನ್ಕಾರಃ ಸ ಶಾನ್ತಿಮಧಿಗಚ್ಛತಿ ||71||

ಯಾವ ಮನುಷ್ಯನು ಇಂದ್ರಿಯ ತೃಪ್ತಿಯ ಎಲ್ಲ ಬಕೆಯನ್ನು ತ್ಯಜಿಸಿದ್ದಾನೋ, ಬಯಕೆಗಳಿಂದ ಮುಕ್ತನಾಗಿ ಬದುಕುತ್ತಾನೋ, ಒಡೆತನದ ಭಾವವನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟಿದ್ದಾನೋ ಮತ್ತು ಅಹಂಕಾರ ರಹಿತನಾಗಿದ್ದಾನೋ ಅವನು ಮಾತ್ರ ನಿಜವಾದ ಶಾಂತಿಯನ್ನು ಪಡೆಯಬಲ್ಲ.

ಕಾಮರಹಿತನಾಗಿರುವುದೆಂದರೆ ಇಂದ್ರಿಯ ತೃಪ್ತಿಗಾಗಿ ಏನನ್ನೂ ಬಯಸದಿರುವುದು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಕೃಷ್ಣಪ್ರಜ್ಞೆಯನ್ನು ಬಯಸುವುದೇ ವಾಸ್ತವವಾಗಿ ಕಾಮರಹಿತನಾಗಿರುವುದು. ಈ ಜಡದೇಹವೇ ತಾನು ಎಂಬ ಕಲ್ಪನೆಗೊಳಗಾಗದೆ, ಜಗತ್ತಿನಲ್ಲಿ ಯಾವುದಕ್ಕೂ ತಾನು ಒಡೆಯನೆಂದು ತಪ್ಪಾಗಿ ಭಾವಿಸದೆ, ತಾನು ಎಂದೆಂದೂ ಕೃಷ್ಣನ ಸೇವಕ ಎನ್ನುವ ತನ್ನ ನಿಜವಾದ ಸ್ಥಾನವನ್ನು ಅರ್ಥಮಾಡಿಕೊಳ್ಳುವುದೇ ಕೃಷ್ಣಪ್ರಜ್ಞೆಯ ಪರಿಪೂರ್ಣ ಸ್ಥಿತಿ. ಈ ಪರಿಪೂರ್ಣ ಸ್ಥಿತಿಯಲ್ಲಿರುವವನು, ಕೃಷ್ಣನೇ ಎಲ್ಲದರ ಒಡೆಯ, ಎಲ್ಲವನ್ನೂ ಕೃಷ್ಣನ ಸಂತೃಪ್ತಿಗಾಗಿ ಒಳಸಬೇಕು ಎನ್ನುವುದನ್ನು ತಿಳಿದಿರುತ್ತಾನೆ.

ಅರ್ಜುನನು ತನ್ನ ಇಂದ್ರಿಯ ತೃಪ್ತಿಗಾಗಿ ಯುದ್ಧಮಾಡಲು ಬಯಸಲಿಲ್ಲ. ಆದರೆ ಅವನು ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯನ್ನು ಪಡೆದಾಗ ತಾನು (ಅರ್ಜುನನು) ಯುದ್ಧಮಾಡಬೇಕೆಂದು ಕೃಷ್ಣನು ಬಯಸುತ್ತಾನೆ ಎನ್ನುವುದಕ್ಕಾಗಿ ಯುದ್ಧ ಮಾಡಿದ. ತನಗಾಗಿ ಯುದ್ಧಮಾಡಬೇಕೆಂಬ ಬಯಕೆ ಅವನಿಗಿರಲಿಲ್ಲ. ಆದರೆ ಅದೇ ಅರ್ಜುನನು ಕೃಷ್ಣನಿಗಾಗಿ ತನ್ನಿಂದಾದಷ್ಟು ಸಾಮರ್ಥ್ಯದಿಂದ ಯುದ್ಧಮಾಡಿದ. ನಿಜವಾಗಿ ಕಾಮವಿಲ್ಲದಿರುವುದೆಂದರೆ ಕೃಷ್ಣನನ್ನು ತೃಪ್ತಿಪಡಿಸಬೇಕೆಂಬ ಬಯಕೆ. ಬಯಕೆಗಳನ್ನು ತೊಡೆದುಹಾಕಬೇಕೆಂಬ ಕೃತಕಕ ಪ್ರಯತ್ನವಲ್ಲ.

ಜೀವನ ಬಯಕೆಗಳಿಲ್ಲದೇ ಅಥವಾ ಇಂದ್ರಿಯಗಳಿಲ್ಲದೆ ಇರಲು ಸಾಧ್ಯವಿಲ್ಲ. ಆದರೆ ಆತನು ಬಯಕೆಗಳ ಗುಣವನ್ನು ಬದಲು ಮಾಡಬೇಕು. ಐಹಿಕವಾಗಿ ಬಯಕೆಗಳಿಲ್ಲದ ಮನುಷ್ಯನಿಗೆ ಎಲ್ಲವೂ ಕೃಷ್ಣನಿಗೆ ಸೇರಿದುದು (ಈಶಾವಾಸ್ಯಮ್ ಇದಂ ಸರ್ವಮ್) ಎಂದು ತಿಳಿದಿರುತ್ತದೆ. ಆದುದರಿಂದ ಆತನು ಹುಸಿಯಾಗಿ ಯಾವುದರ ಮೇಲಿನ ಒಡೆತವನ್ನೂ ಸಾಧಿಸುವುದಿಲ್ಲ. ಈ ಅಲೌಕಿಕ ಜ್ಞಾನಕ್ಕೆ ಆತ್ಮಸಾಕ್ಷಾತ್ಕಾರವೇ ಆಧಾರ. ಆತ್ಮಸಾಕ್ಷಾತ್ಕಾರವೆಂದರೆ, ಆಧ್ಯಾತ್ಮಿಕ ವ್ಯಕ್ತಿತ್ವದಲ್ಲಿ ಪ್ರತಿಯೊಂದು ಜೀವಿಯೂ ಎಂದೆಂದಿಗೂ ಕೃಷ್ಣನ ಒಂದು ವಿಭಿನ್ನಾಂಶ. ಆದುದರಿಂದ ಜೀವಿಯ ನಿರಂತರ ಸ್ಥಾನವು ಕೃಷ್ಣನ ಸ್ಥಾನಕ್ಕೆ ಸಮವಾಗಿಯಾಗಲೀ ಅದಕ್ಕಿಂತ ಉನ್ನತವಾಗಿಯಾಗಲೀ ಇರುವುದಿಲ್ಲ ಎನ್ನುವುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದು. ಕೃಷ್ಣಪ್ರಜ್ಞೆಯ ಅರಿವೇ ನಿಜವಾದ ಶಾಂತಿಯ ಮೂಲಸೂತ್ರ.

ವಿಭಾಗ