ಮುಟ್ಟಿನ ತೊಂದರೆಯಿಂದ ಲೈಂಗಿಕಾಸಕ್ತಿ ಕುಂದುವವರೆಗೆ; ಮಹಿಳೆಯರಲ್ಲಿ ಮಾತ್ರ ಕಾಣಿಸುವ ಮಧುಮೇಹದ ಲಕ್ಷಣಗಳಿವು, ನಿರ್ಲಕ್ಷ್ಯ ಮಾಡದಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮುಟ್ಟಿನ ತೊಂದರೆಯಿಂದ ಲೈಂಗಿಕಾಸಕ್ತಿ ಕುಂದುವವರೆಗೆ; ಮಹಿಳೆಯರಲ್ಲಿ ಮಾತ್ರ ಕಾಣಿಸುವ ಮಧುಮೇಹದ ಲಕ್ಷಣಗಳಿವು, ನಿರ್ಲಕ್ಷ್ಯ ಮಾಡದಿರಿ

ಮುಟ್ಟಿನ ತೊಂದರೆಯಿಂದ ಲೈಂಗಿಕಾಸಕ್ತಿ ಕುಂದುವವರೆಗೆ; ಮಹಿಳೆಯರಲ್ಲಿ ಮಾತ್ರ ಕಾಣಿಸುವ ಮಧುಮೇಹದ ಲಕ್ಷಣಗಳಿವು, ನಿರ್ಲಕ್ಷ್ಯ ಮಾಡದಿರಿ

ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳಲ್ಲಿ ಜಗತ್ತನ್ನು ಹೆಚ್ಚು ಕಾಡುತ್ತಿರುವುದು ಮಧುಮೇಹ. ಇದು ಪುರುಷರು, ಮಹಿಳೆಯರು ಎಂಬ ಭೇದವಿಲ್ಲದೇ ಎಲ್ಲರಲ್ಲೂ ಕಾಣಿಸುತ್ತಿದೆ. ಮಹಿಳೆಯರಲ್ಲಿ ಮಾತ್ರ ಕಾಣಿಸುವ ಮಧುಮೇಹದ ಕೆಲವು ಸಂಕೇತಗಳಿವೆ. ಆ ಲಕ್ಷಣಗಳು ಯಾವುವು, ಅವು ಮಹಿಳೆಯರಲ್ಲಿ ಮಾತ್ರ ಕಾಣಿಸುವುದೇಕೆ ಎಂಬ ವಿವರ ಇಲ್ಲಿದೆ.

ಮಹಿಳೆಯರಲ್ಲಿ ಮಾತ್ರ ಕಾಣಿಸುವ ಮಧುಮೇಹ ಲಕ್ಷಣಗಳು (ಸಾಂಕೇತಿಕ ಚಿತ್ರ)
ಮಹಿಳೆಯರಲ್ಲಿ ಮಾತ್ರ ಕಾಣಿಸುವ ಮಧುಮೇಹ ಲಕ್ಷಣಗಳು (ಸಾಂಕೇತಿಕ ಚಿತ್ರ) (PC: Canva)

ಮಧುಮೇಹ ರೋಗಿಗಳ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಮಧುಮೇಹ ಎನ್ನುವುದು ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಯಾಗಿದ್ದು ಇದು ಅತಿಯಾದ ಒತ್ತಡ, ಜೀವನಶೈಲಿ ಹಾಗೂ ಅನುವಂಶಿಕ ಕಾರಣಗಳಿಂದ ಬರಬಹುದು. ಹಾರ್ಮೋನ್‌ನ ವ್ಯತ್ಯಯ, ಸಂತಾನೋತ್ಪತ್ತಿ ಆರೋಗ್ಯ ಈ ಕೆಲವು ಕಾರಣ‌ಗಳಿಂದ ಡಯಾಬಿಟಿಸ್‌ನ ಲಕ್ಷಣಗಳು ಪುರುಷರು ಹಾಗೂ ಮಹಿಳೆಯರಲ್ಲಿ ಸಾಕಷ್ಟು ಭಿನ್ನವಾಗಿರುತ್ತದೆ ಹಾಗೂ ಇದು ದೇಹ ಮೇಲೆ ಪರಿಣಾಮ ಬೀರುವ ರೀತಿಯು ಕೂಡ ಭಿನ್ನವಾಗಿರುತ್ತದೆ.

ಅತಿಯಾದ ಬಾಯಾರಿಕೆ, ಪದೇ ಪದೇ ಮೂತ್ರ ಬರುವುದು, ಆಯಾಸ ಈ ಸಾಮಾನ್ಯ ಲಕ್ಷಣಗಳು ಇಬ್ಬರಲ್ಲೂ ಒಂದೇ ರೀತಿ ಇರುತ್ತದೆ. ಆದರೆ ಮಹಿಳೆಯರು ತಮ್ಮ ಹಾರ್ಮೋನುಗಳ ಚಕ್ರಗಳು, ಗರ್ಭಧಾರಣೆ ಅಥವಾ ಋತುಬಂಧಕ್ಕೆ ಸಂಬಂಧಿಸಿದ ವಿಶಿಷ್ಟ ಲಕ್ಷಣಗಳನ್ನು ಹೊಂದಿರಬಹುದು. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ಅಥವಾ ಗರ್ಭಾವಸ್ಥೆಯ ಮಧುಮೇಹದಂತಹ ಸಮಸ್ಯೆಯು ಮಹಿಳೆಯರಲ್ಲಿ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತವೆ. ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನ್ ಮಟ್ಟದಲ್ಲಿನ ಏರಿಳಿತವು ರಕ್ತದಲ್ಲಿನ ಸಕ್ಕರೆ ನಿಯಂತ್ರಣದ ಮೇಲೆ ಪ್ರಭಾವ ಬೀರಬಹುದು. ಅದೇನೆ ಇರಲಿ ಮಧುಮೇಹದ ಕುರಿತ ಆರಂಭಿಕ ರೋಗಲಕ್ಷಣಗಳನ್ನು ಅರಿತು ಎಚ್ಚೆತ್ತುಕೊಳ್ಳುವುದು ಮುಖ್ಯ. ಮಹಿಳೆಯರಲ್ಲಿ ಮಾತ್ರ ಕಾಣಿಸುವ ಕೆಲವು ಮಧುಮೇಹದ ರೋಗಲಕ್ಷಣಗಳು ಹೀಗಿವೆ.

ಯೀಸ್ಟ್ ಸೋಂಕು

ರಕ್ತದಲ್ಲಿ ಸಕ್ಕರೆಯ ಪ್ರಮಾಣ ಏರಿಕೆಯಾಗುವುದು ಯೀಸ್ಟ್ ಬೆಳವಣಿಗೆಗೆ ಪೂರಕ ವಾತವರಣವನ್ನು ಸೃಷ್ಟಿಸುತ್ತದೆ. ಇದರಿಂದ ಪದೇ ಪದೇ ಯೋನಿ ಸೋಂಕು ಉಂಟಾಗಬಹುದು. ಇದರಿಂದ ಯೋನಿಯಲ್ಲಿ ತುರಿಕೆ, ಸುಟ್ಟ ಅನುಭವ ಹಾಗೂ ಬಿಳಿಮುಟ್ಟಿನ ಸಮಸ್ಯೆ ಎದುರಾಗಬಹುದು. ಮಧುಮೇಹ ಸಮಸ್ಯೆಯ ಆರಂಭಿಕ ಲಕ್ಷಣ ಇದಾಗಿದ್ದು, ಇದು ಮಹಿಳೆಯರಲ್ಲಿ ಮಾತ್ರ ಕಾಣಿಸುವ ಲಕ್ಷಣವಾಗಿದೆ.

ಮೂತ್ರನಾಳದ ಸೋಂಕು (ಯುಟಿಐಗಳು)

ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವುದು ಹಾಗೂ ಮೂತ್ರದಲ್ಲಿ ಸಕ್ಕರೆ ಅಂಶ ಹೆಚ್ಚಿರುವುದು ಮಹಿಳೆಯರಲ್ಲಿ ಮೂತ್ರನಾಳದ ಸೋಂಕು ಉಂಟಾಗಲು ಕಾರಣವಾಗುತ್ತದೆ. ಇದು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರಿಂದ ಆಗಾಗ್ಗೆ ಮೂತ್ರ ವಿಸರ್ಜನೆ, ಸುಡುವ ಸಂವೇದನೆಗಳು, ಮೂತ್ರ ದುರ್ವಾಸನೆಯಿಂದ ಕೂಡಿರುವುದು ಇಂತಹ ಸಮಸ್ಯೆಗಳನ್ನು ನೀವು ಎದುರಿಬೇಕಾಗಬಹುದು. ಇದಕ್ಕೆ ಚಿಕಿತ್ಸೆ ನೀಡದೇ ಬಿಟ್ಟರೆ ಮೂತ್ರಪಿಂಡದ ಸೋಂಕು ಹೆಚ್ಚುವ ಸಾಧ್ಯತೆ ಇದೆ.

ಪಿಸಿಓಎಸ್ ಲಕ್ಷಣಗಳು

ಪಿಸಿಓಎಸ್ (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್) ಇನ್ಸುಲಿನ್ ಪ್ರತಿರೋಧಕ್ಕೆ ಸಂಬಂಧಿಸಿದ ಹಾರ್ಮೋನ್ ಅಸ್ವಸ್ಥತೆಯಾಗಿದ್ದು, ಮಹಿಳೆಯರಲ್ಲಿ ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಇದರಿಂದ ಋತುಚಕ್ರದಲ್ಲಿ ವ್ಯತ್ಯಾಸವಾಗುವುದು, ಮೈಮೇಲೆ ಅತಿಯಾದ ಕೂದಲು ಬೆಳವಣಿಗೆ, ತೂಕದಲ್ಲಿನ ವ್ಯತ್ಯಾಸ ಇಂತಹ ಸಮಸ್ಯೆಗಳು ಎದುರಾಗಬಹುದು. ಪಿಸಿಓಎಸ್ ಹೊಂದಿರುವ ಮಹಿಳೆಯರು ಪಿಸಿಓಎಸ್‌ ಇಲ್ಲದವರಿಗೆ ಹೋಲಿಸಿದರೆ ಚಿಕ್ಕ ವಯಸ್ಸಿನಲ್ಲೇ ಮಧುಮೇಹದ ಸಮಸ್ಯೆ ಎದುರಿಸಬೇಕಾಗಬಹುದು.

ಗರ್ಭಾವಸ್ಥೆಯಲ್ಲಿನ ಮಧುಮೇಹ

ಹಾರ್ಮೋನುಗಳ ಬದಲಾವಣೆಗಳು ಇನ್ಸುಲಿನ್ ಕಾರ್ಯವನ್ನು ಅಡ್ಡಿಪಡಿಸಿದಾಗ ಗರ್ಭಿಣಿ ಮಹಿಳೆಯರಲ್ಲಿ ಈ ತಾತ್ಕಾಲಿಕ ಮಧುಮೇಹದ ಸ್ಥಿತಿ ಉಂಟಾಗುತ್ತದೆ. ಅತಿಯಾದ ಬಾಯಾರಿಕೆ ಮತ್ತು ಆಗಾಗ್ಗೆ ಮೂತ್ರ ವಿಸರ್ಜನೆ ಇದರ ರೋಗಲಕ್ಷಣಗಳಾಗಿರುತ್ತವೆ. ಕೆಲವು ಮಹಿಳೆಯರಿಗೆ ಮಧುಮೇಹದ ಲಕ್ಷಣಗಳು ಕಾಣಿಸದೇ ಇರಬಹುದು. ಗರ್ಭಾವಸ್ಥೆಯ ಮಧುಮೇಹವು ತಾಯಿ ಮತ್ತು ಮಗುವಿಗೆ ಅಪಾಯವನ್ನು ಹೆಚ್ಚಿಸುತ್ತದೆ, ಜೊತೆಗೆ ಭವಿಷ್ಯದ ಟೈಪ್ 2 ಮಧುಮೇಹವನ್ನು ಹೆಚ್ಚಿಸುತ್ತದೆ.

ಲೈಂಗಿಕ ಅಪಸಾಮಾನ್ಯ ಕ್ರಿಯೆ

ಮಧುಮೇಹವು ಕಡಿಮೆ ರಕ್ತದ ಹರಿವು ಮತ್ತು ನರಗಳ ಹಾನಿಗೆ ಕಾರಣವಾಗಬಹುದು. ಇದರಿಂದ ಯೋನಿ ಶುಷ್ಕತೆ, ಸಂಭೋಗದ ಸಮಯದಲ್ಲಿ ಅಸ್ವಸ್ಥತೆ ಅಥವಾ ಮಹಿಳೆಯರಲ್ಲಿ ಕಾಮಾಸಕ್ತಿ ಕಡಿಮೆಯಾಗಬಹುದು. ಕಳಪೆ ಗ್ಲೂಕೋಸ್ ನಿಯಂತ್ರಣಕ್ಕೆ ಸಂಬಂಧಿಸಿರುವ ಹಾರ್ಮೋನ್ ಅಸಮತೋಲನದಿಂದಲೂ ಈ ಸಮಸ್ಯೆಗಳು ಉಂಟಾಗಬಹುದು.

ಋತುಚಕ್ರದಲ್ಲಿ ವ್ಯತ್ಯಯ

ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರಿಳಿತವಾಗುವುದು ಮುಟ್ಟಿನ ತೊಂದರೆಗೂ ಕಾರಣವಾಗುತ್ತದೆ. ಇದರಿಂದ ಅನಿಯಮಿತ ಮುಟ್ಟಿನ ತೊಂದರೆಗಳು ಕಾಡಬಹುದು. ಹಾರ್ಮೋನುಗಳ ಬದಲಾವಣೆಗಳು ಗ್ಲೂಕೋಸ್ ನಿಯಂತ್ರಣದ ಮೇಲೆ ಪರಿಣಾಮ ಬೀರುವುದರಿಂದ ಹಲವು ಸಮಸ್ಯೆಗಳು ಕಾಡಬಹುದು.

ಗರ್ಭಾವಸ್ಥೆಯ ತೊಂದರೆಗಳು

ಮೊದಲೇ ಅಸ್ತಿತ್ವದಲ್ಲಿರುವ ಮಧುಮೇಹ ಹೊಂದಿರುವ ಮಹಿಳೆಯರು ಪ್ರಿಕ್ಲಾಂಪ್ಸಿಯಾ, ಅವಧಿಪೂರ್ವ ಹೆರಿಗೆ ಮತ್ತು ಅಧಿಕ ತೂಕ ಇರುವ ಶಿಶುಗಳು (ಮ್ಯಾಕ್ರೋಸೋಮಿಯಾ) ಸೇರಿದಂತೆ ಗರ್ಭಧಾರಣೆಯ ಸಂಬಂಧಿತ ತೊಡಕುಗಳ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಗರ್ಭಾವಸ್ಥೆಯ ಮೊದಲು ಮತ್ತು ಸಮಯದಲ್ಲಿ ಸರಿಯಾದ ರಕ್ತದಲ್ಲಿನ ಸಕ್ಕರೆ ನಿಯಂತ್ರಣವು ಅಪಾಯಗಳನ್ನು ಕಡಿಮೆ ಮಾಡಲು ನಿರ್ಣಾಯಕವಾಗಿದೆ.

ಋತುಬಂಧಕ್ಕೆ ಸಂಬಂಧಿಸಿದ ಸಮಸ್ಯೆಗಳು

ಮಧುಮೇಹವು ಋತುಬಂಧದ ಲಕ್ಷಣಗಳಾದ ಮೈಬಿಸಿಯಾಗುವುದು, ರಾತ್ರಿ ಬೆವರುವಿಕೆ ಮತ್ತು ಮೂಡ್ ಸ್ವಿಂಗ್‌ಗಳನ್ನು ಉಲ್ಬಣಗೊಳಿಸಬಹುದು. ಋತುಬಂಧದ ಸಮಯದಲ್ಲಿ ಕಡಿಮೆ ಈಸ್ಟ್ರೊಜೆನ್ ಮಟ್ಟಗಳು ಇನ್ಸುಲಿನ್ ಸಂವೇದನೆ ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣವನ್ನು ಇನ್ನಷ್ಟು ಹದಗೆಡಿಸಬಹುದು, ಇದು ಹೆಚ್ಚು ಸ್ಪಷ್ಟವಾದ ಮಧುಮೇಹ-ಸಂಬಂಧಿತ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner