Vastu Tips: ಮನೆಯಲ್ಲಿ ಕನ್ನಡಿ ಯಾವ ದಿಕ್ಕಿಗೆ ಇದ್ರೆ ಶುಭ, ಯಾವ ದಿಕ್ಕಿಗೆ ಇಡುವಂತಿಲ್ಲ, ಯಾವ ಬಣ್ಣ ಸೂಕ್ತ? ಇಲ್ಲಿದೆ ವಾಸ್ತು ಸಲಹೆ-spiritual news mirror vastu whichever direction is the mirror in the house is auspicious vastu tips for home sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Tips: ಮನೆಯಲ್ಲಿ ಕನ್ನಡಿ ಯಾವ ದಿಕ್ಕಿಗೆ ಇದ್ರೆ ಶುಭ, ಯಾವ ದಿಕ್ಕಿಗೆ ಇಡುವಂತಿಲ್ಲ, ಯಾವ ಬಣ್ಣ ಸೂಕ್ತ? ಇಲ್ಲಿದೆ ವಾಸ್ತು ಸಲಹೆ

Vastu Tips: ಮನೆಯಲ್ಲಿ ಕನ್ನಡಿ ಯಾವ ದಿಕ್ಕಿಗೆ ಇದ್ರೆ ಶುಭ, ಯಾವ ದಿಕ್ಕಿಗೆ ಇಡುವಂತಿಲ್ಲ, ಯಾವ ಬಣ್ಣ ಸೂಕ್ತ? ಇಲ್ಲಿದೆ ವಾಸ್ತು ಸಲಹೆ

ವಾಸ್ತುಶಾಸ್ತ್ರದಲ್ಲಿ ಮನೆಯ ಪ್ರತಿಯೊಂದು ವಸ್ತುವು ಹೀಗೇ ಇರಬೇಕು ಎಂದು ಹೇಳಲಾಗಿದೆ. ವಾಸ್ತು ಪ್ರಕಾರ ನಾವು ಬಳಸುವ ಕನ್ನಡಿಯನ್ನು ಕೂಡ ಮನೆಯ ನಿರ್ದಿಷ್ಟ ದಿಕ್ಕಿಗೆ ಇರಿಸಬೇಕು. ಕನ್ನಡಿಯ ಅಂಚು ಕೂಡ ನಿರ್ದಿಷ್ಟ ಬಣ್ಣದ್ದೇ ಆಗಿರಬೇಕು. ಇಂದಿನ ಲೇಖನದಲ್ಲಿ ವಾಸ್ತುಪ್ರಕಾರ ಕನ್ನಡಿ ಇಡುವ ಜಾಗ, ಬಣ್ಣದ ಬಗ್ಗೆ ತಿಳಿಯೋಣ (ಬರಹ: ಎಚ್‌. ಸತೀಶ್‌, ಜ್ಯೋತಿಷಿ)

ಕನ್ನಡಿ ವಾಸ್ತು
ಕನ್ನಡಿ ವಾಸ್ತು

ವಾಸ್ತುವಿನಲ್ಲಿ ಯಾವುದೇ ದೋಷವಿದ್ದರೂ ಕನ್ನಡಿಯ ಸಹಾಯದಿಂದ ಅದನ್ನು ಪರಿಹರಿಸಲು ಸಾಧ್ಯವೇ ಎಂಬ ಪ್ರಶ್ನೆ ನಿಮ್ಮನ್ನು ಈಗ ಕಾಡುತ್ತಿರಬಹುದು. ಆದರೆ ವಾಸ್ತು ನಿಯಮಗಳನ್ನ ಅನುಸರಿಸುವ ಮೂಲಕ ಕನ್ನಡಿಯಿಂದ ವಾಸ್ತುದೋಷವನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಹಾಗಾದರೆ ಕನ್ನಡಿಯನ್ನು ಯಾವ ದಿಕ್ಕಿಗೆ ಇಡಬೇಕು, ಕನ್ನಡಿಯ ಅಂಚು ಯಾವ ಬಣ್ಣ‌ದ್ದಾಗಿರಬೇಕು ಎಂಬಿತ್ಯಾದಿ ವಿವರ ಇಲ್ಲಿದೆ.

ಪ್ರತಿಯೊಂದು ಮನೆಯಲ್ಲಿಯೂ ಕನ್ನಡಿ ಇದ್ದೇ ಇರುತ್ತದೆ. ಆದರೆ ಅದನ್ನು ಯಾವ ದಿಕ್ಕಿನಲ್ಲಿ ಇಡಬೇಕೆಂಬುದು ಬಹು ಮುಖ್ಯ. ಕನ್ನಡಿಗಳು ಸುಲಭವಾಗಿ ಧನಾತ್ಮಕ ಶಕ್ತಿಯನ್ನಾಗಲಿ ಅಥವಾ ಋಣಾತ್ಮಕ ಶಕ್ತಿಯನ್ನಾಗಲಿ ಆಕರ್ಷಿಸಿಕೊಳ್ಳುತ್ತದೆ. ಮಾತ್ರವಲ್ಲದೆ ಅದನ್ನು ಪ್ರತಿಪಲಿಸುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಅದನ್ನು ಬಳಸಬೇಕು. ಯಾವುದೇ ಕಟ್ಟಡದಲ್ಲಿನ ಕೆಟ್ಟ ಫಲಗಳನ್ನು ಕನ್ನಡಿಯ ಸಹಾಯದಿಂದ ಸುಲಭವಾಗಿ ಸರಿಪಡಿಸಬಹುದು. ಕನ್ನಡಿಯ ಅಳತೆಯು ದೊಡ್ಡದಾಗಿದ್ದಷ್ಟು ನಾವು ಹೆಚ್ಚಿನ ಮಟ್ಟದಲ್ಲಿ ಶುಭಫಲಗಳನ್ನು ಪಡೆಯಬಹುದು.

ಕನ್ನಡಿ ಯಾವ ದಿಕ್ಕಿಗೆ ಇದ್ರೆ ಉತ್ತಮ 

ಪೂರ್ವ ದಿಕ್ಕಿನಲ್ಲಿ ಉಪಯೋಗಿಸುವ ಕನ್ನಡಿಯು ಆಯತಾಕಾರವಾಗಿರಬೇಕು.ಇದನ್ನು ಕಟ್ಟಿಗೆಯ ಚೌಕಟ್ಟಿಗೆ ಹೊಂದಿಸುವುದು ಒಳ್ಳೆಯದು. ಸಾಧ್ಯವಿಲ್ಲದೆ ಹೋದಲ್ಲಿ ತಿಳಿ ಹಸಿರು ಬಣ್ಣದ ಪ್ಲಾಸ್ಟಿಕ್ ಚೌಕಟ್ಟಿನಲ್ಲಿ ಇದನ್ನು ಹೊಂದಿಸಬಹುದು. ಪೂರ್ವ ದಿಕ್ಕಿನಲ್ಲಿ ಕನ್ನಡಿಯನ್ನು ಇರಿಸಿದಾಗ ಆ ದಿಕ್ಕು ಬೆಳೆದಂತೆ ಕಾಣುತ್ತದೆ. ಯಾವುದೇ ಕಟ್ಟಡವಾದರೂ ಪೂರ್ವ ದಿಕ್ಕು ಹೆಚ್ಚಾಗಿದ್ದಲ್ಲಿ ವಾಸ್ತು ಬಲವು ಹೆಚ್ಚುತ್ತದೆ. ಇದರಿಂದ ಕುಟುಂಬದ ಜನರ ಮುಖ್ಯವಾಗಿ ಕುಟುಂಬದ ಯಜಮಾನನ ಆರೋಗ್ಯದಲ್ಲಿ ಸ್ಥಿರತೆ ಕಂಡು ಬರುತ್ತದೆ. ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸಿದರು ಹೆಚ್ಚಿನ ಪರಿಶ್ರಮವಿಲ್ಲದೆ ಕುಟುಂಬದವರ ಅಥವಾ ಆತ್ಮೀಯರ ಸಹಕಾರದಿಂದ ಯಶಸ್ವಿಯಾಗುತ್ತದೆ. ಕನ್ನಡಿಯನ್ನು ಪೂರ್ವ ದಿಕ್ಕಿನ ಗೋಡೆಯ ಮಧ್ಯಭಾಗದಲ್ಲಿ ಹಾಕಬಹುದು. ಪೂರ್ವ ಮತ್ತು ಉತ್ತರ ದಿಕ್ಕಿನ ಹತ್ತಿರ ಕನ್ನಡಿಯನ್ನು ಹಾಕಬಹುದು. ಇದರಿಂದ ದೇವಮೂಲೆ ಬೆಳೆದಂತೆ ಆಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಪೂರ್ವ ಮತ್ತು ದಕ್ಷಿಣ ಗೋಡೆಗೆ ಹತ್ತಿರವಾಗಿ ಕನ್ನಡಿಯನ್ನು ಹಾಕಬಾರದು.

ಯಾವ ದಿಕ್ಕಿನಲ್ಲಿ ಕನ್ನಡಿ ಇಡುವಂತಿಲ್ಲ 

ದಕ್ಷಿಣ ದಿಕ್ಕಿನಲ್ಲಿ ಸಾಮಾನ್ಯವಾಗಿ ಕನ್ನಡಿಯನ್ನು ಇಡಬಾರದು. ಆದರೆ ಅನಿವಾರ್ಯವಾದ ಪಕ್ಷದಲ್ಲಿ ಮಾತ್ರ ತ್ರಿಕೋನದ ಆಕಾರದಲ್ಲಿರುವ ಕನ್ನಡಿಯನ್ನು ಇರಿಸಬಹುದು. ಆದರೆ ಇದರ ಚೌಕಟ್ಟು ಕೆಂಪು ಬಣ್ಣದ ಮರದಿಂದ ಮಾಡಿರಬೇಕು. ಸಾಧ್ಯವಿಲ್ಲದೆ ಹೋದಲ್ಲಿ ತಿಳಿ ಕೆಂಪು ಬಣ್ಣದ ಪ್ಲಾಸ್ಟಿಕ್ ಚೌಕಟ್ಟನ್ನು ಹೊಂದಿರಬೇಕು. ಸಾಧ್ಯವಾದಷ್ಟು ಈ ಕನ್ನಡಿಯು ಪೂರ್ವದ ಗೋಡೆಯ ಕಡೆ ಇರಬೇಕು. ಯಾವುದೇ ಕಾರಣಕ್ಕೂ ಈ ಕನ್ನಡಿಯು ಪಶ್ಚಿಮದ ಗೋಡೆಯನ್ನು ಸ್ಪರ್ಶಿಸಬಾರದು. ದಕ್ಷಿಣ ದಿಕ್ಕಿನ ಗೋಡೆಗೆ ಹಾಕಿರುವ ಕನ್ನಡಿಯಲ್ಲಿ ಯಾವುದೇ ಲೋಪವು ಕಂಡು ಬಂದರೆ ಕುಟುಂಬದ ಯಜಮಾನ ಅಥವಾ ಯಜಮಾನಿಗೆ ತೊಂದರೆಯಾಗುತ್ತದೆ. ಆದ್ದರಿಂದ ಎಚ್ಚರಿಕೆ ವಹಿಸುವುದು ಅತಿ ಮುಖ್ಯ. ದಕ್ಷಿಣ ದಿಕ್ಕಿನಲ್ಲಿ ಹಾಕಿರುವ ಕನ್ನಡಿಯನ್ನು ನೋಡಿಕೊಂಡು ತಲೆ ಬಾಚಬಾರದು. ಮುಖ್ಯವಾಗಿ ಸ್ತ್ರೀಯರು ಈ ಕನ್ನಡಿಯನ್ನು ಬಳಸಲೇಬಾರದು. ಈ ಕನ್ನಡಿಯ ಮೇಲಿನ ಭಾಗದಲ್ಲಿ ಕೆಂಪು ಬಣ್ಣದ ದ್ವೀಪಗಳನ್ನು ಹಾಕಬಾರದು. ಆದರೆ ಹಾಲಿನ ಬಣ್ಣದ ದೀಪಗಳು ಶುಭಫಲಗಳನ್ನು ನೀಡುತ್ತವೆ. ಇಲ್ಲಿನ ಕನ್ನಡಿಯ ಹಿಂಭಾಗದಲ್ಲಿ ಹಸಿರು ಸಸ್ಯಗಳು, ಹರಿಯುವ ನದಿ, ಸರೋವರ, ಮಂಜುಗಡ್ಡೆ ಇರದ ಪರ್ವತಗಳ ಚಿತ್ರಗಳಿದ್ದರೆ ಶುಭಫಗಳು ಅಧಿಕ ಪ್ರಮಾಣದಲ್ಲಿ ದೊರೆಯುತ್ತವೆ.

ಉತ್ತರ ದಿಕ್ಕಿನಲ್ಲಿ ನೀಲಿ ಬಣ್ಣದ ಚೌಕಟ್ಟಿರುವ ವೃತ್ತಾಕಾರದಲ್ಲಿ ಇರುವ ಕನ್ನಡಿಯನ್ನು ಬಳಸಬಹುದು.ಇದರಿಂದಾಗಿ ಪ್ರಮುಖವಾಗಿ ಕುಟುಂಬದ ಸದಸ್ಯರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ವಂಶದ ಆಸ್ತಿಯಲ್ಲಿನ ತೊಂದರೆ ಮತ್ತು ಮನಸ್ತಾಪಗಳು ದೂರವಾಗುತ್ತವೆ. ಕುಟುಂಬದಲ್ಲಿರುವ ಹಿರಿಯರು ಮತ್ತು ಕಿರಿಯರ ನಡುವೆ ಉತ್ತಮ ಬಾಂಧವ್ಯ ಉಂಟಾಗುತ್ತದೆ. ಈ ದಿಕ್ಕಿನಲ್ಲಿ ಕನ್ನಡಿ ಇದ್ದಲ್ಲಿ ಉತ್ತರ ದಿಕ್ಕು ಬೆಳೆದಂತೆ ಭಾಸವಾಗುತ್ತದೆ. ಯಾವುದೇ ಕಟ್ಟಡವಾದರೂ ಅಥವಾ ಮನೆಯಾದರೂ ಪೂರ್ವದಿಕ್ಕಿನಂತೆಯೇ ಉತ್ತರ ದಿಕ್ಕು ಸಹ ಬೆಳೆದಿರಬೇಕು. ಇದರಿಂದ ಶುಭ ಫಲಗಳು ಅಧಿಕವಾಗಿ ದೊರೆಯುತ್ತವೆ. ವ್ಯಾಪಾರ ವ್ಯವಹಾರ ಮಾಡುವ ಸಂಸ್ಥೆಯಲ್ಲಿ ಪೂರ್ವ ದಿಕ್ಕಿನಲ್ಲಿ ಕನ್ನಡಿ ಇದ್ದರೆ ಆ ಕನ್ನಡಿಯನ್ನು ಕೇವಲ ಆ ಸಂಸ್ಥೆಯ ಯಜಮಾನ ಮಾತ್ರ ಬಳಸುವಂತಿರಬೇಕು. ಇದರಿಂದ ಕಾರ್ಮಿಕರ ಜೊತೆಯಲ್ಲಿ ಸೋದರತೆ, ಪ್ರೀತಿ, ವಿಶ್ವಾಸ ಬೆಳೆಯುತ್ತದೆ. ಯಾವುದೇ ಕಾರಣಕ್ಕೂ ಉತ್ತರ ಮತ್ತು ಪಶ್ಚಿಮ ದಿಕ್ಕಿನ ನಡುವೆ ಕನ್ನಡಿಯನ್ನು ಇರಿಸಬಾರದು. ಆದರೆ ಉತ್ತರ ಮತ್ತು ಪೂರ್ವ ದಿಕ್ಕಿಗೆ ಸೇರಿದಂತೆ ಕನ್ನಡಿಯನ್ನು ಇರಿಸಿದ್ದಲ್ಲಿ ನಾನಾ ವಿಧದ ಶುಭಫಲಗಳು ದೊರೆಯುತ್ತವೆ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.