Spiritual News: ಶತ್ರುಗಳಿಂದ ರಕ್ಷಿಸುವ ಕ್ಯಾತ್ಸಂದ್ರ ಚಂದ್ರಮೌಳೇಶ್ವರ; ಹಲವು ಐತಿಹ್ಯಗಳ ಗುಚ್ಛ ಈ ಸನ್ನಿಧಾನ, ಇಲ್ಲಿದೆ ದೇಗುಲದ ಮಾಹಿತಿ
ಶತ್ರುಬಾಧೆ ನಿಮ್ಮನ್ನು ಕಾಡುತ್ತಿದ್ದೆಯೇ, ಹಾಗಿದ್ದರೆ ಕರುನಾಡಿನಲ್ಲಿಯೇ ವಿಶೇಷ ಐತಿಹ್ಯವುಳ್ಳ ದೇಗುಲವೊಂದಿದೆ. ತುಮಕೂರು ಸಮೀಪದ ಕ್ಯಾತ್ಸಂದ್ರದಲ್ಲಿರುವ ಈ ದೇಗುಲದಲ್ಲಿ ದೇವರ ದರ್ಶನ ಪಡೆದರೆ ನಿಮ್ಮ ಸಕಲ ಕಷ್ಟಗಳು ನಿವಾರಣೆ ಆಗುತ್ತವೆ. ಕ್ಷೇತ್ರದ ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ. (ಬರಹ: ಎಚ್.ಸತೀಶ್
Spiritual News: ಸಾಮಾನ್ಯವಾಗಿ ಮೌನವಾಗಿರುವವರೇ ವಿವಾದಕ್ಕೆ ಈಡಾಗುತ್ತಾರೆ. ಶಾಂತಿ ಬಯಸುವವರು ವಿರೋಧವನ್ನು ಎದುರಿಸುತ್ತಾರೆ. ವಯಸ್ಸಿನ ತಾರತಮ್ಯವೇ ಇಲ್ಲದೆ ಹತ್ತು ಹಲವಾರು ವಿಚಾರಗಳಲ್ಲಿ ಕಣ್ ದೃಷ್ಟಿಯಿಂದ ಬಳಲುತ್ತಾರೆ. ಕಷ್ಟಪಟ್ಟು ದುಡಿದ ಹಣವನ್ನು ಸುಲಭವಾಗಿ ಕಳೆದುಕೊಳ್ಳುತ್ತಾರೆ. ಈ ಎಲ್ಲಾ ವಿಚಾರಗಳಿಂದ ಬಿಡುಗಡೆ ಹೊಂದಲು ಬೆಂಗಳೂರು ಮತ್ತು ತುಮಕೂರಿನ ನಡುವೆ ಪ್ರಖ್ಯಾತ ದೇವಸ್ಥಾನವಿದೆ. ಅದೇ ಕ್ಯಾತ್ಸಂದ್ರ ಗ್ರಾಮದ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನ.
ನೂರಾರು ವರ್ಷದ ಹಿಂದಿನ ಮಾತು ಒಂದು ಚಿಕ್ಕ ಊರಿನಲ್ಲಿ ಲಕ್ಷ್ಮಿನರಸಿಂಹ ಶಾಸ್ತ್ರಿಗಳು ವಾಸವಾಗಿರುತ್ತಾರೆ. ವೃತ್ತಿಯಲ್ಲಿ ಪುರೋಹಿತರಾದ ಇವರು ಬಡತನದಲ್ಲಿ ಜೀವನ ನಡೆಸಿರುತ್ತಾರೆ. ಇವರಿಗೆ ಹಲವಾರು ಬಾರಿ ಕನಸಿನಲ್ಲಿ ಬರುವ ವ್ಯಕ್ತಿ ನಾನು ಕಸದ ಮಧ್ಯೆ ಇದ್ದೇನೆ ನನ್ನನ್ನು ನಿನ್ನ ಬಳಿ ತೆಗೆದುಕೊಂಡು ಹೋಗು ಎಂದು ಹೇಳುತ್ತಿರುತ್ತಾನೆ. ಆ ಮಧ್ಯೆ ಆ ಸ್ಥಳವು ಕನಸಿನಲ್ಲಿ ಗೋಚರವಾಗುತ್ತದೆ.
ಈ ನಡುವೆ ದಿನಸಿಯನ್ನು ತರಲು ಅಂಗಡಿ ಬೀದಿಗೆ ನಡೆಯುವರು. ವಿದ್ಯುತ್ ಇಲ್ಲದೆ ಕತ್ತಲಿನ ಸಮಯ. ಅವರಿಗೆ ಅರಿವಿಲ್ಲದಂತೆ ಒಂದು ದೊಡ್ಡ ಹಳ್ಳದಲ್ಲಿ ಬಿದ್ದುಬಿಡುತ್ತಾರೆ. ಜೋರಾಗಿ ಕರೆದರೂ ಕತ್ತಲಾದ ಕಾರಣ ಸಹಾಯಕ್ಕೆ ಯಾರು ಬರಲಿಲ್ಲ. ಆ ವೇಳೆಗೆ ಆ ಹಳ್ಳದಲ್ಲಿ ಹೊರಬರಲು ಜಾಗಕ್ಕಾಗಿ ತಡಕಾಡುತ್ತಿದ್ದಾಗ ಒಂದು ಶಿವಲಿಂಗ ಅವರ ಕೈಗೆ ಸಿಗುತ್ತದೆ. ಅದನ್ನು ಪರಿಶೀಸಿದ ತಕ್ಷಣ ಎಲ್ಲಿಯೋ ಇದ್ದ ದೊಡ್ಡ ನಾಗರಹಾವು ಅವರ ಕಾಲನ್ನು ಸುತ್ತುವರಿಯುತ್ತದೆ. ಪ್ರಾಣಭಯದಿಂದ ಏನನ್ನು ತೋಚದ ಶಾಸ್ತ್ರಿಗಳು, ನನ್ನನ್ನು ಬಿಟ್ಟು ಬಿಡು ಈ ಲಿಂಗವನ್ನು ನಾನು ಪೂಜಿಸುತ್ತೇನೆ ಎಂದು ಆಶ್ವಾಸನೆ ನೀಡುತ್ತಾರೆ.
ಆಗ ಆ ನಾಗರಹಾವು ಅವರಿಂದ ದೂರ ಸರಿಯುತ್ತದೆ. ಅತಿಯಾದ ಪ್ರಯತ್ನದಿಂದ ಆ ಲಿಂಗದೊಂದಿಗೆ ಹಳ್ಳದಿಂದ ಮೇಲೆದ್ದು ಬರುತ್ತಾರೆ. ಕರ್ತವ್ಯ ನಿಷ್ಠರಾದ ಶ್ರೀ ಲಕ್ಷ್ಮೀನರಸಿಂಹ ಶಾಸ್ತ್ರಿಗಳು ತಮ್ಮ ಸ್ವಂತ ಆಸ್ತಿಯಲ್ಲಿ ಕೊಂಚ ಮಾರಾಟ ಮಾಡಿ ಅವರಿಗೆ ಸೇರಿದ ಭೂಮಿಯಲ್ಲಿ ಶ್ರೀ ಚಂದ್ರಮೌಳೇಶ್ವರಸ್ವಾಮಿ ದೇವಸ್ಥಾನವನ್ನು ಕಟ್ಟಿಸುತ್ತಾರೆ. ಅದರಿಂದ ಬಂದ ಆದಾಯದಲ್ಲಿ ತಮ್ಮ ದೊಡ್ಡ ಕುಟುಂಬವನ್ನು ಸಲಹುತ್ತ ಜೀವನ ನಡೆಸುತ್ತಾರೆ.
ಅವರ ನಂತರ ಅವರ ಮಗನಾದ ಜನಾನುರಾಗಿಯಾದ ಯೋಗ ನರಸಿಂಹ ಶಾಸ್ತ್ರಿಗಳು ಆ ದೇವಸ್ಥಾನದ ಪುನರ್ಜೀವನಗೊಳಿಸುತ್ತಾರೆ. ಹರಿ ಹರರಲ್ಲಿ ಬೇಧವಿಲ್ಲ ಎಂಬುದು ಸರ್ವವಿಧಿತ. ಆದರೆ ಕೆಲವರು ತಿಳಿದಿರುವಂತೆ ಶಿವನಿಗೂ ನರಸಿಂಹಸ್ವಾಮಿಗೂ ಆಗಬಾರದು. ಆದರೆ ಗಟ್ಟಿ ಮನಸ್ಸು ಮಾಡಿ ನರಸಿಂಹಸ್ವಾಮಿಯನ್ನು ಅಲ್ಲಿಯೇ ಪ್ರತಿಷ್ಠಾಪಿಸುತ್ತಾರೆ. ಶೃಂಗೇರಿಯ ಗುರುಗಳಾದ ಶ್ರೀ ಶ್ರೀ ಶ್ರೀ ಚಂದ್ರಶೇಖರ ಭಾರತಿಗಳು ಈ ಎಲ್ಲಾ ವಿಧಿ ವಿಧಾನಗಳನ್ನು ನಡೆಸಿಕೊಡುತ್ತಾರೆ. ಆನಂತರ ಶಾಸ್ತ್ರಿಗಳ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತವೆ.
ಅಂದಿನ ಶೃಂಗೇರಿಯ ಗುರುಗಳಾದ ಶ್ರೀ ಶ್ರೀ ಶ್ರೀ ಭಾರತೀ ತೀರ್ಥರು ಈ ಕ್ಷೇತ್ರವನ್ನು ಹರಿಹರ ಕ್ಷೇತ್ರ ಎಂದು ಹೆಸರಿಸುತ್ತಾರೆ. ಜಾತಿಭೇದ ತೋರದೆ ಯೋಗಾ ನರಸಿಂಹ ಶಾಸ್ತ್ರಿಗಳು ಎಲ್ಲಾ ಮಠಗಳಿಂದ ಸುಮಾರು 25 ಗುರುಗಳ ಆಶ್ರಯದಲ್ಲಿ ದೇವಾಲಯವನ್ನು ನವೀಕರಿಸಿ ಶಂಕರಾಚಾರ್ಯರು, ಲಕ್ಷ್ಮಿ, ನವಗ್ರಹಗಳು, ಆಂಜನೇಯ ದೇವರುಗಳ ಪ್ರತಿಷ್ಠೆ ಮಾಡುತ್ತಾರೆ. ಇದು 1980ರ ಮಾತು. ವಿಶೇಷವಾಗಿ ಭಾರತೀ ತೀರ್ಥರ ಅನುಗ್ರಹ ಇವರಿಗೆ ದೊರೆಯುತ್ತದೆ. ಈ ಎಲ್ಲಾ ಗುರುಗಳ ಅನುಗ್ರಹದಿಂದ ಈ ಕ್ಷೇತ್ರವು ವಿಶೇಷ ಶಕ್ತಿಯನ್ನು ಪಡೆಯುತ್ತದೆ. ಈಗ ಅದರ ಆಡಳಿತವು ಅವರ ಮಕ್ಕಳ ಕೈಯಲ್ಲಿದೆ.
ಒಮ್ಮೆ ಭಾರತದ ಅಂತರಾಷ್ಟ್ರೀಯ ಮಟ್ಟದ ಉದ್ಯಮಿಯೊಬ್ಬರು ತಮ್ಮ ಕಾರಿನಲ್ಲಿದ್ದ 25 ಲಕ್ಷಕ್ಕೂ ಹೆಚ್ಚಿನ ಹಣವನ್ನು ಕಳೆದುಕೊಳ್ಳುತ್ತಾರೆ. ಆಗ ಅವರು ಬೇರೆ ದಾರಿ ತೋರಿಸಿ ನೇರವಾಗಿ ಅವರು ನಂಬಿದ್ದ ಈ ಹರಿಹರ ಕ್ಷೇತ್ರಕ್ಕೆ ಬರುತ್ತಾರೆ. ಅಲ್ಲಿ ರುದ್ರ ಹೋಮ ಮುಂತಾದ ದೇವತಾ ಕಾರ್ಯಗಳನ್ನು ನಡೆಸುತ್ತಾರೆ. ಒಂದು ಆಶ್ಚರ್ಯದ ಸಂಗತಿ ನಡೆದು ಹೋಗುತ್ತದೆ. ಪೂರ್ಣಾಹುತಿ ಆಗುವ ಮೊದಲೇ ಅವರು ಕಳೆದುಕೊಂಡಿದ್ದ ದೊಡ್ಡ ಮೊತ್ತದ ಹಣ ಮತ್ತೆ ಕೈ ಸೇರುತ್ತದೆ.
ತುಮಕೂರಿನ ಒಂದು ಬಡ ಕುಟುಂಬ ಎಷ್ಟೇ ಕಷ್ಟ ಪಟ್ಟರು ಜೀವನದಲ್ಲಿ ಅಭಿವೃದ್ಧಿ ಕಾಣದು. ಆ ಬಡತನದಲ್ಲಿಯೂ ಇಬ್ಬರು ಮಕ್ಕಳು. ಆ ಮಕ್ಕಳಲ್ಲಿ ಒಂದು ಮಗುವಿಗೆ ಸದಾ ಅನಾರೋಗ್ಯ ಕಾಡುತ್ತಿರುತ್ತದೆ. ನೀರಿನಂತೆ ಅವರಿವರ ಸಹಾಯದಿಂದ ಹಣವನ್ನು ಖರ್ಚು ಮಾಡಿದರೂ ಆರೋಗ್ಯ ಸುಧಾರಿಸುವುದಿಲ್ಲ. ಆಗ ಅವರು ಕೊನೆಯ ಆಸೆ ಎಂಬಂತೆ ಈ ಹರಿಹರ ಕ್ಷೇತ್ರಕ್ಕೆ ಬರುತ್ತಾರೆ. ಅಲ್ಲಿನ ಅರ್ಚಕರು ಶ್ರೀ ನರಸಿಂಹ ಸ್ವಾಮಿಗೆ ಪೂಜೆ ಮಾಡಿ ಪ್ರಸಾದವನ್ನು ನೀಡುತ್ತಾರೆ. ಲಕ್ಷ್ಮಿಗೆ ಕುಂಕುಮರ್ಚನೆ ಮಾಡಿ ಕುಂಕುಮವನ್ನು ನೀಡುತ್ತಾರೆ. ಕುಂಕುಮವನ್ನು ಮಗುವಿನ ಹಣೆಗೆ ಇಟ್ಟಾಗ ಆಶ್ಚರ್ಯವೆಂಬಂತೆ ಆ ಮಗುವಿನ ಆರೋಗ್ಯವು ಸಹಜ ಸ್ಥಿತಿಗೆ ಮರಳುತ್ತದೆ. ಇದಿಷ್ಟು ಹಿರಿಯರಿಂದ ನಾನು ಕೇಳಿರುವ ವಿಚಾರ. ಅಲ್ಲದೆ ಹರಿಹರ ಕ್ಷೇತ್ರಕ್ಕೆ ಭೇಟಿ ನೀಡಿದಾಗ ನನ್ನ ಜೀವನದಲ್ಲಿಯೂ ಅನೇಕ ಬದಲಾವಣೆಗಳು ಉಂಟಾದವು.
ಈ ಹರಿಹರ ಕ್ಷೇತ್ರ ಇರುವುದಾದರೂ ಎಲ್ಲಿ. ಬೆಂಗಳೂರಿನಿಂದ ಸುಮಾರು 65 ಕಿಮೀ ದೂರ ಇರುವ ಕ್ಯಾತಸಂದ್ರ ಎಂಬ ಊರಿನಲ್ಲಿ. ಈ ಊರಿನ ಒಳಭಾಗದಲ್ಲಿ ಈ ದೇವಸ್ಥಾನವಿದೆ. ಈ ದೇವರ ಪೂಜೆಯಿಂದ ಅನೇಕರಿಗೆ ಶುಭ ಫಲಗಳು ದೊರೆತಿವೆ ಎಂಬುದು ನಿರ್ವಿವಾದದ ವಿಷಯ.
ವರದಿ: ಎಚ್. ಸತೀಶ್ ಜ್ಯೋತಿಷಿ
ರಾಶಿ ಭವಿಷ್ಯ, ಜಾತಕ, ದೇಗುಲ ದರ್ಶನ, ಕುಂಡಲಿ ಹೀಗೆ ಜ್ಯೋತಿಷ್ಯ ಮತ್ತು ಧಾರ್ಮಿಕ ವಿಚಾರಗಳ ಕುರಿತ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ