ಕೂಡಿಟ್ಟವರು ಅನುಭವಿಸದೆ ಹೋಗಿದ್ದಾರೆ, ಕೂಡಿಟ್ಟಿದ್ದು ಇಲ್ಲೇ ಇದೆ; ಸಿದ್ದೇಶ್ವರ ಸ್ವಾಮೀಜಿ ಹೇಳಿದ್ದ ಮುದುಕನ ಸಂಪತ್ತಿನ ಕಥೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕೂಡಿಟ್ಟವರು ಅನುಭವಿಸದೆ ಹೋಗಿದ್ದಾರೆ, ಕೂಡಿಟ್ಟಿದ್ದು ಇಲ್ಲೇ ಇದೆ; ಸಿದ್ದೇಶ್ವರ ಸ್ವಾಮೀಜಿ ಹೇಳಿದ್ದ ಮುದುಕನ ಸಂಪತ್ತಿನ ಕಥೆ

ಕೂಡಿಟ್ಟವರು ಅನುಭವಿಸದೆ ಹೋಗಿದ್ದಾರೆ, ಕೂಡಿಟ್ಟಿದ್ದು ಇಲ್ಲೇ ಇದೆ; ಸಿದ್ದೇಶ್ವರ ಸ್ವಾಮೀಜಿ ಹೇಳಿದ್ದ ಮುದುಕನ ಸಂಪತ್ತಿನ ಕಥೆ

ಯೋಗ ಮತ್ತು ಅಧ್ಯಾತ್ಮಿಕ ಬೋಧನೆಗಳಿಂದ ಹೆಸರುವಾಸಿಯಾಗಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳು ಅಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ನಡೆಸಿ ಸಾಕಷ್ಟು ಅನುಭವವನ್ನು ಪಡೆದವರು. ಅವರ ಪ್ರತಿಯೊಂದು ಪ್ರವಚನಗಳು ಮನುಷ್ಯನ ಜೀವನಕ್ಕೆ ಸ್ಫೂರ್ತಿ ತುಂಬುವಂತಿವೆ. ಸ್ವಾಮೀಜಿಗಳು ಹೇಳಿದ ಮುದುಕನ ಸಂಪತ್ತಿನ ಕಥೆಯನ್ನು ಓದಿ.

ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ ಪ್ರವಚನದ ಸಂದರ್ಭ.
ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ ಪ್ರವಚನದ ಸಂದರ್ಭ.

ಪ್ರವಚನ ಸಂದರ್ಭದಲ್ಲಿ ಸಿದ್ದೇಶ್ವರ ಸ್ವಾಮೀಜಿ ಕಥೆಯೊಂದನ್ನು ಹೇಳುತ್ತಾರೆ. ಆ ಕಥೆಯ ವಿವರ ಹೀಗಿದೆ. ಹಿಂದಿನ ಕಾಲದಲ್ಲಿ ಒಬ್ಬ ಮಹಾರಾಜ ಇದ್ದ. ಆ ಮಹಾರಾಜನ ರಾಜಧಾನಿಯೊಳಗೆ ಒಬ್ಬ ಮುಪ್ಪಿನ ಮನುಷ್ಯ. ಆತನಿಗೆ ಸುಮಾರು 70 ವಯಸ್ಸಾಗಿತ್ತು. ಒಂದು ದಿನ ಮಹಾರಾಜರ ಬಳಿ ಹೋದ ಮುದುಕ, ಮಹಾರಾಜರೇ ನಾನು 70 ವರ್ಷ ಬದುಕಿದ್ದೇನೆ. ಒಂದು ಮನೆಯಿದೆ, ಮಕ್ಕಳಿದ್ದಾರೆ. ಆದರೂ ಸಹಿತ ಜೀವನದಲ್ಲಿ ಏನಿದೆ ಹೇಳಿ. ಬರೀ ದುಡಿಯೋದಾತು, ಉಣ್ಣೋದಾತು, ಆದರೆ ಶ್ರೀಮಂತಿಕೆ ಬರಲಿಲ್ಲ ಎಂದು ಹೇಳಿದೆ. ನಂದೊಂದು ಕೊನೆಯ ಇಚ್ಛೆ ಮಹಾರಾಜರೇ, ನಾನು ಶ್ರೀಮಂತ ಅಂತ ಅನಿಸಿಕೊಂಡು ಸಾಯಬೇಕು. ಕೊರತೆ ಇರಬಾರದು, ಯಾವುದಕ್ಕೂ ಕೊರತೆ ಇರಬಾರದು ಅಂತ ಕೇಳಿದ.

ಸದ್ಯ ಉಣ್ಣೋಕೆ ಕೊರತೆ ಇಲ್ಲ, ಉಡಾಕೆ ಕೊರತೆ ಇಲ್ಲ. ಮನ್ಯಾಗ ಜನ ಇದ್ದಾರೆ, ಇರಾಕ ಮನೆ ಇದೆ. ಆದರೆ ಇಡಾಕ ಸಂಪತ್ತು ಇಲ್ಲ ಅಂತ ಕೊರಗಿದೆ ಎಂದು ಹೇಳಿದ. ಆದಕ್ಕೆ ಮಹಾರಾಜರ ಬಳಿ ಹೋಗಿ ಮಹಾರಾಜರೇ ನಾನೇನು ಬಾಳದಿನ ಬದುಕೋದಿಲ್ಲ, ಇರೋದ್ರೊಳಗೆ ನಾನು ಶ್ರೀಮಂತ ಅಂತ ಅನಿಸಿಕೊಂಡ ಸಾಯಬೇಕು ಅಂತ ಇಚ್ಛೆಯನ್ನು ವ್ಯಕ್ತಪಡಿಸಿದ. ಅದಕ್ಕೆ ಮಹಾರಾಜ ಹೇಳಿದ, ಆಯ್ತು ನಿನಗೆ ಕೊಡ್ತೀನಿ, ಆದರೆ ನಿನ್ನ ಇಚ್ಛೆಗೆ ಎಷ್ಟು ಬೇಕೋ ಅಷ್ಟು ಕೊಡ್ತೀನಿ. ಆದರೆ ಇದಕ್ಕೆ ಒದು ಕರಾರು ಅಷ್ಟೇ. ಮುದುಕ ಏನದು ಅಂತ ಕೇಳಿದ.

ಯಾವಾಗಲೂ ಮನುಷ್ಯ ಗಳಿಸಬೇಕಾಗುತ್ತದೆ, ಸುಮ್ಮನೆ ಕೊಟ್ಟರೆ ಭಿಕ್ಷೆಯಿಂದ ಶ್ರೀಮಂತನಾದ ಅಂತ ಆಗುತ್ತೆ. ಒಂದು ಕೆಲಸ ಮಾಡು, ನಾನು ಆ ಕೆಲಸಕ್ಕೆ ಸರಿಯಾಗ ಕೊಡ್ತೀನಿ ಅಂತ ಹೇಳಿದ. ಏನು ಅಂತ ಕೇಳಿದ ಮುದುಕ. ನಮ್ಮ ರಾಜಧಾನಿ ಸಮೀಪ ನದಿ ಇದೆ. ನೀನು ಆ ದಂಡೆಯಿಂದ ಈಕಡೆಗೆ ಈಜಿಕೊಂಡು ಬರಬೇಕು. ಹೀಗೆ ಮಾಡಿದರೆ ಒಂದು ಸಲ ಹೋಗಿ ಬಂದರೆ ಬಂಗಾರದ ನಾಣ್ಯ ಕೊಡ್ತೀನಿ ಅಂದ. ಇದನ್ನು ಕೇಳಿದ ಮುದುಕನಿಗೆ ತುಂಬಾ ಖುಷಿಯಾಯಿತು. ಮಹಾನುಭವರೇ ಯಾವಾಗ ಶುರು ಮಾಡಲಿ ಅಂತ ಕೇಳಿದ. 70 ವರ್ಷದ ಮುದುಕನಿಗೆ ತನ್ನ ವಯಸ್ಸು ನೆನಪಾಗಿಲ್ಲ, ವಯಸ್ಸು 70 ಅನ್ನೋದನ್ನ ಮರೆತು 20 ವರ್ಷ ಅಂತ ತಿಳಿದುಕೊಂಡ. ಈ ಕೆಲಸವನ್ನು ನಾನು ಮಾಡುತ್ತೀನಾ ಅಂತಲೂ ಯೋಚಿಸಲಿಲ್ಲ. ಮನೆಗೆ ಹೋಗಿ ಕುಟುಂಬದವರಿಗೆ ಖುಷಿಯಿಂದ ಹೇಳಿದ, ಆನಂದವೋ ಆನಂದ. ನಾಳೆಯೇ ನಾವು ಶ್ರೀಮಂತ ಅಂತ ಹೇಳಿದ.

ಮಹಾರಾಜ ಹೇಳಿದ ನಾಳೆ ಬೆಳಗ್ಗೆ ಸೂರ್ಯೋದಕ್ಕೆ ಅಲ್ಲಿಗೆ ಬರ್ತೀನಿ. ಸಂಪತ್ತು ಅಲ್ಲೇ ತಂದು ಇಟ್ಟಿರುತ್ತದೆ. ಒಂದು ಸಲ ಹೊಳೆಯ ಈ ದಡದಿಂದ ಆ ದಡಕ್ಕೆ ಹೋಗಿ ಬಂದ ಕೂಡಲೇ ಒಂದು ಸುಂದರವಾದ ನಾಣ್ಯವನ್ನು ಕೊಡುತ್ತೀನಿ ಅಂದ. 10 ಸಲ ಹೋಗಿ ಬಂದರೆ 1 ಕೆಜಿ ಬಂಗಾರ ಕೊಡ್ತೀನಿ. ನಾನು ಮಂತ್ರಿಗಳು, ಜನರು ಎಲ್ಲರೂ ಹೊಳೆಯ ಬಳಿ ಸೇರುತ್ತೇವೆ. ನೀನು ಈಜಬೇಕು ಅಂದ್ರು. ದೊಡ್ಡ ನದಿ ಮುದುಕನಿಗೆ ಸಣ್ಣದಾಗಿ ಕಾಣಲು ಶುರುವಾಯ್ತು, ಹಣ ಬರುತ್ತೆಂದರೆ ನಮ್ಮಲ್ಲಿ ಉತ್ಸಾಹ ಹೆಚ್ಚಾದಾಗ ದೊಡ್ಡವು ಸಹಿತ ಸಣ್ಣದಾಗಿ ಕಾಣಲು ಶುರುವಾಗುತ್ತೆ, ಈತನ ಮನಸು ಹೇಗೆ ಕೆಲಸ ಮಾಡಿತು. ಇದೇನು ಈಜುವುದು ಬಹಳ ದೊಡ್ಡ ಕೆಲವೇನಲ್ಲ, ಗಂಟೆಗೆ 10 ಸಲ ಈಜಬಲ್ಲೇ, 10 ಸಲ ಈ ದಡದಿಂದ ಆ ದಡಕ್ಕೆ ಹೋಗಿ ಬರಬಲ್ಲೇ, 5 ನಿಮಿಷ ಹೋಗೋದು, 5 ನಿಮಿಷ ಬರೋದು, ಒಂದು ಸಲ ಹೋಗಿ ಬಂದ್ರೆ ಎಷ್ಟು ಬಂಗಾರ ಸಿಗುತ್ತೆ, ಅದೇ 10 ಸಲ ಈಜುವುರಿಂದ ಎಷ್ಟು ಬಂಗಾರ ಸಿಗುತ್ತೆ ಕೆಜಿಗಟ್ಟಲೇ ಬಂಗಾರ ನನಗೆ ಸಿಗುತ್ತೆ ಅಂತ ಲೆಕ್ಕಹಾಕಿದ. ಒಬ್ಬ ಮನುಷ್ಯನು ಕೂಡ ನನ್ನಷ್ಟು ಶ್ರೀಮಂತ ಇರೋದಿಲ್ಲ ಅಂತ ಮುದುಕ ಅಂದುಕೊಂಡ. ಇನ್ನೂ ಬಂದಿಲ್ಲ, ಆದರೆ ಈಗ ಬರುತ್ತೆ ಅಂತ ಮನಸ್ಸಿನಲ್ಲಿ ಲೆಕ್ಕಾಚಾರ ಮಾಡಿಕೊಂಡ.

ಮುದುಕ ನದಿಯಲ್ಲಿ ಈ ದಡದಿಂದ ಆ ದಡಕ್ಕೆ ಈಜಬೇಕಾದ ಸಮಯ ಬಂತು. ಈತನ ಸಾಹಸವನ್ನು ನೋಡೋಕೆ ಎಲ್ಲರೂ ಸೇರಿದರು. ಮುದುಕನ ಹೆಂಡತಿ, ಮಕ್ಕಳು, ಸೊಸೆಯಂದಿರು ಸೇರಿ ಎಲ್ಲರೂ ಸೇರಿದ್ದಾರೆ. ಮುದುಕನ ಈಜು ನೋಡೋದಿಕ್ಕೆ ಊರಿನ ಜನರೂ ಸೇರಿದ್ದಾರೆ. ಮಹಾರಾಜ ಹೇಳಿದ ಸವಾಧಾನವಾಗಿ ಈಜಾಡು, ನಿಧಾನವಾಗಿ ಈಜಾಡು, 12 ತಾಸು ಸಮಯವಿದೆ. ಶ್ರೀಮಂತ ಆಗೋದಿಕ್ಕೆ ಎಷ್ಟೋ ಬೇಕೋ ಅದೇ ರೀತಿಯಲ್ಲಿ ಈಜಾಡು ಅಂತ ಹೇಳಿದ. ಈ ವಿಚಾರದಲ್ಲಿ ಮಹಾರಾಜ ಬಾಳ ಜಾಣ ಇದ್ದ. ಆದರೆ ಮಹಾಮಂತ್ರಿಗೆ ಆತಂಕ ಇತ್ತು. ಇದೇ ಸಮಯದಲ್ಲಿ ಮಹಾಮಂತ್ರಿ ಹೇಳಿದ, ಮಹಾರಾಜರೇ ಹಿಂಗ್ ನೀವು ಕೊಡೋಕೆ ಶುರು ಮಾಡಿದರೆ ಭಂಡಾರ ಹೇಗೆ ಉಳಿಯುತ್ತೆ ಅಂತ ಕೇಳಿದ. ನಾಳೆ ಇನ್ನೊಬ್ಬ ಮುದುಕ ಬರ್ತಾನೆ, ಮತ್ತೊಬ್ಬ ಬರ್ತಾನೆ, ನಾನು ಈಜುತ್ತೇನೆ ಅಂತ ಬಾರ್ತಾನೆ, ಹಿಂಗಾದರೆ ಹೇಗೆ ಅಂತ ಕೇಳಿದ. ಇದಕ್ಕೆ ಮಹಾರಾಜ ಉತ್ತರಿಸಿದ ನೋಡ್ತಾ ಇರು, ಮನುಷ್ಯನ ಮನಸ್ಸು ಹೇಂಗ್ ಕೆಲಸ ಮಾಡುತ್ತೆ ಅಂತ ಹೇಳಿದ.

ಮುದುಕ ಈಜುವ ಸಮಯ ಬಂತು. ಮೊದಲು ಈಜುವಾಗ ಭಾರಿ ವೇಗವಾಗಿ ಈಜಿದ, ಬೇಗ ಗಳಿಸಬೇಕೆಂಬ ಆತನಲ್ಲಿದ್ದ ಛಲ, ಈ ದಡದಿಂದ ಆ ದಡಕ್ಕೆ ಹೋಗಿ ಬಂದ. ಆಗ ಕೂಡಲೇ ಮಹಾರಾಜ ನೋಡು ಈ ನಾಣ್ಯ ನಿಂದು ಅಂತ ಹೇಳಿ ಕೊಟ್ಟ. ಮುದುಕನ ಉತ್ಸಾಹ ಹೆಚ್ಚಾಯಿತು. ಈಜಾಡಿದ, ಒಂದು ತಾಸು, ಎರಡು ತಾಸು, ಹೀಗೆ ಈಜುತ್ತಲೇ ಇದ್ದ. ನಾಣ್ಯಗಳು ರಾಶಿಯಾದವು. ಅದು ಸಂಪತ್ತಿನ ರಾಶಿ. ಮಧ್ಯಾಹ್ನ ಆದರೂ ಈಜುತ್ತಲೇ ಇದ್ದಾನೆ. ನೀರು ಕುಡಿದಿಲ್ಲ, ಅನ್ನ ತಿಂದಿಲ್ಲ. ಗಳಿಸಲೇಬೇಕು ಅನ್ನೋದು ಆತನ ಮನಸ್ಸಿನಲ್ಲಿದೆ. ಅನ್ನಕ್ಕಾಗಿ ಗಳಿಕೆ ಅನ್ನೋದನ್ನು ಮರ್ತೇಬಿಟ್ಟ. ಅನ್ನ ಬಿಟ್ಟ ಗಳಿಕೆ ಶುರುವಾಯ್ತು. ನಾಣ್ಯಗಳ ರಾಶಿಯನ್ನು ನೋಡಿ ನೋಡಿ ಮುದುಕನಿಗೆ ಆನಂದ ಆಗುತ್ತಿತ್ತು.

ನದಿಯಲ್ಲಿ ಹೋಗೋದು ಬರೋದು ಮಾಡ್ತಿದ್ದ. ಸಾಯಂಕಾಲ ಆಯ್ತು. ಸಂಪತ್ತು ರಾಶಿಯಾಗಿ ಬಿತ್ತು. ಎಲ್ಲಾ ನಂದೇ ಅಂದ. ನಾವು ಶ್ರೀಮಂತರಾದೆವು ಅಂತ ಮಕ್ಕಳು ತುಂಬಾ ಆನಂದವಾಗಿದ್ದರು. ಆದರೆ ಇಷ್ಟೆಲ್ಲಾ ಕಳೆದುಕೊಳ್ಳುತ್ತೇವೆ ಅಂತ ಮಹಾಮಂತ್ರಿಗೆ ಆತಂಕ ಆಯ್ತು. ಮಹಾರಾಜ ಮಾತ್ರ ನೋಡುತ್ತಲೇ ಇದ್ದ. ಸಾಕಲ್ವಾ, ಬೇಕಾದಷ್ಟು ಆಯ್ತು ಅಂತ ಮಹಾರಾಜ ಮುದುಕನಿಗೆ ಹೇಳಿದ. ಮುದುಕ ಹೇಳಿದ ಮಹಾರಾಜರೇ ಇನ್ನೂ ಸೂರ್ಯ ಮುಳುಗಿಲ್ಲ. ಇದೇ ಒಂದು ಅವಕಾಶ, ಸುವರ್ಣ ಅವಕಾಶ, ತಾನಾಗಿಯೇ ಲಕ್ಷ್ಮಿ ಬರುವಾಗ ಯಾರಾದರೂ ಬೇಡ ಅಂತ ಹೇಳ್ತಾರಾ? ತಿರಸ್ಕಾರ ಮಾಡ್ತಾರಾ ಇನ್ನೂ ಸಮಯ ಇದೆ, ಮಹಾನುಭಾವರೇ ಹೊಟ್ಟೆ ಹಸಿದರೆ ಏನಾಯ್ತು, ಮೈ ದಣಿದರೆ ಏನಾಯ್ತು, ಇನ್ನೊಂದು ಇಷ್ಟು ಈಜಬೇಕು ಅಂತ ಹೇಳ್ತಾನೆ.

ಈಜಾಡಿದ್ದ ಕಣ್ಣು ಮಂಜಾಗಿತ್ತು, ಆದರೆ ಕಣ್ಣೊಳಗೆ ಬಂಗಾರ ದುಂಬಿತ್ತು

ಆದರೆ ಈತನಿಗೆ ಈಜುವ ಶಕ್ತಿ ಕಡಿಮೆ ಆಯಿತು, ದೇಹ ದಣಿದಿತ್ತು, ದಿನದ 12 ಗಂಟೆ ಈಜಾಡಿದ್ದ ಕಣ್ಣು ಮಂಜಾಗಿತ್ತು, ಆದರೆ ಕಣ್ಣೊಳಗೆ ಬಂಗಾರ ದುಂಬಿತ್ತು. ಆದರೂ ಇದೊಂದು ಕೊನೆಯ ಸಲ ಹೋಗ್ತೀನಿ ಅಂತ ಮಹಾರಾಜರಿಗೆ ಹೇಳಿದ. ಆಯ್ತು ನಿನ್ನ ಇಚ್ಥೆ ಹೋಗು ಅಂದ್ರು. ಹೋಗಿ ಬಾ ಅನ್ನಲಿಲ್ಲ, ಹೋಗು ಅಂದ್ರು. ಸೋತಿದ್ದ ಮುದುಕ, ದೇಹದಲ್ಲಿ ಶಕ್ತಿ ಇರಲಿಲ್ಲ, ಕೊನೆಯ ಬಾರಿ ಹೋದ, ಆ ಕಡೆ ದಡೆ ಮುಟ್ಟಿದ, ತಿರುಗಿ ವಾಪಸ್ ಬಂದ, ಇನ್ನೇನು ಇತ್ತ ದಡ ಮುಟ್ಟಬೇಕು ಎನ್ನುವಷ್ಟರಲ್ಲಿ ಆತನ ಹೃದಯ ಬಡಿತ ನಿಂತುಹೋಯ್ತು. ಮುದುಕ ಹೋದ, ಮಹಾರಾಜ ನಕ್ಕ. ಹೇಳಿದ ಚಿಂತಿ ಮಾಡಬೇಡ ಮಹಾಮಂತ್ರಿ, ನಮ್ಮ ಸಂಪತ್ತು ಎಲ್ಲಿಗೂ ಹೋಗುವುದಿಲ್ಲ, ಅವರೇ ಹೋಗ್ತಾರೆ, ಯಾಕೆಂದರೆ ಅದು ಅವರ ಒಳಗೆ ಹಾಗೆ ಮಾಡಿಸುತ್ತೆ, ಆಸೆ ಒಮ್ಮೆ ಆರಂಭವಾಯ್ತು ಅಂದ್ರೆ ಅದು ನಮ್ಮನ್ನು ಮುಗಿಸುತ್ತೆ ವಿನಃ ನಮ್ಮನ್ನು ಶ್ರೀಮಂತ ಮಾಡೋದಲ್ಲ, ಮುಗಿಸುತ್ತೆ. ಇದುವರೆಗೆ ಯಾರೂ ಅನುಭವಿಸಿಲ್ಲ. ಕೂಡಿಟ್ಟು ಹೋಗಿದ್ದಾರೆ. ಕೂಡಿಟ್ಟವರೆಲ್ಲರೂ ಹೋಗಿದ್ದಾರೆ. ಕೂಡಿಟ್ಟಿದ್ದು ಉಳಿದಿದೆ ಅಷ್ಟೇ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.