Karthika Purnima: ಕಾರ್ತಿಕ ಪೂರ್ಣಿಮಾ ದಿನ ಈ ಪರಿಹಾರ ಕ್ರಮಗಳನ್ನು ಅನುಸರಿಸಿದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತೆ
ಕಾರ್ತಿಕ ಪೂರ್ಣಿಮಾ: ಕಾರ್ತಿಕ ಮಾಸದ ಹುಣ್ಣಿಮೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನದಂದು ಕೆಲವು ಕಾರ್ಯಗಳನ್ನು ಮಾಡುವುದರಿಂದ ಆರ್ಥಿಕ ಸಮೃದ್ಧಿ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ಕಾರ್ತಿಕ ಪೂರ್ಣಿಮಾವನ್ನು ಈ ವರ್ಷ ನವೆಂಬರ್ 15 ರಂದು ಆಚರಿಸಲಾಗುತ್ತದೆ.
ವಾಸ್ತವವಾಗಿ ಪ್ರತಿ ತಿಂಗಳು ಎರಡು ಏಕಾದಶ ಮತ್ತು ಒಂದು ಹುಣ್ಣಿಮೆಯ ತಿಥಿ ಇರುತ್ತದೆ. ಆದರೆ ಕಾರ್ತಿಕ ಮಾಸದಲ್ಲಿ ಬರುವ ಏಕಾದಶಿ, ಹುಣ್ಣಿಮೆಯ ತಿಥಿಗೆ ವಿಶೇಷ ಮಹತ್ವವಿದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ದೇವುತ್ಥಾನ ಏಕಾದಶಿ ಎಂದು ಕರೆಯಲಾಗುತ್ತದೆ. ವಿಷ್ಣು ನಾಲ್ಕು ತಿಂಗಳ ನಂತರ ಯೋಗ ನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ಈ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸ ಎಂದು ಕರೆಯಲಾಗುತ್ತದೆ. ಆದ್ದರಿಂದ ಈ ತಿಂಗಳು ವಿಷ್ಣುವಿಗೆ ಅತ್ಯಂತ ಮಂಗಳಕರವಾಗಿದೆ. ಈ ವರ್ಷ ಕಾರ್ತಿಕ ಪೂರ್ಣಿಮಾ ನವೆಂಬರ್ 15 ರಂದು ಬರುತ್ತದೆ. ಕಾರ್ತಿಕ ಪೌರ್ಣಿಮಾ ದಿನದ ಶುಭ ಫಲಗಳನ್ನು ಪಡೆಯಲು ಶಾಸ್ತ್ರಗಳಲ್ಲಿ ಕೆಲವು ಕ್ರಮಗಳನ್ನು ಉಲ್ಲೇಖಿಸಲಾಗಿದೆ. ಈ ದಿನದಂದು ಕೆಲವು ಕಾರ್ಯಗಳನ್ನು ಮಾಡುವುದರಿಂದ ಸಂತೋಷ, ಸಂಪತ್ತು ಹಾಗೂ ಗೌರವ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಕಾರ್ತಿಕ ಪೂರ್ಣಿಮಾ ದಿನದಂದು ಯಾವ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಯಿರಿ.
ತುಳಸಿಗೆ ನೀರು ಅರ್ಪಿಸಬೇಕು
ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಪೂಜಿಸಲಾಗುತ್ತದೆ. ತುಳಸಿ ಗಿಡಕ್ಕೆ ನಿತ್ಯ ಪೂಜೆ ಮಾಡಬೇಕು. ಆದರೆ ಕಾರ್ತಿಕ ಪೂರ್ಣಿಮೆಯಂದು ತುಳಸಿಯನ್ನು ಪೂಜಿಸುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕಾರ್ತಿಕ ಪೂರ್ಣಿಮೆಯಂದು ತುಳಸಿಗೆ ನೀರನ್ನು ಅರ್ಪಿಸಿ ಸಂಜೆ ತುಳಸಿಯ ಬಳಿ ತುಪ್ಪದ ದೀಪವನ್ನು ಹಚ್ಚಬೇಕು. ತುಳಸಿಗೆ ನಿತ್ಯವೂ ನೀರು ನೈವೇದ್ಯ ಮಾಡಿ ದೀಪ ಬೆಳಗಿಸುವುದರಿಂದ ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆ ಇದೆ.
ಲಕ್ಷ್ಮಿ ಸ್ತೋತ್ರ ಪಠಿಸಿ
ಕಾರ್ತಿಕ ಪೂರ್ಣಿಮೆಯಂದು ವಿಷ್ಣು ಸಹಸ್ರನಾಮ ಮತ್ತು ಲಕ್ಷ್ಮೀ ಸ್ತೋತ್ರಗಳನ್ನು ಪಠಿಸಬೇಕು. ಇದಾದ ನಂತರ ಸಂಜೆ ದೀಪವನ್ನು ದಾನ ಮಾಡಬೇಕು. ಇದನ್ನು ಮಾಡುವುದರಿಂದ ಜೀವನದಲ್ಲಿ ಆರ್ಥಿಕ ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ವಿಷ್ಣು ಮತ್ತು ಲಕ್ಷ್ಮಿ ದೇವಿಯ ವಿಶೇಷ ಕೃಪೆಗೆ ಪಾತ್ರರಾಗುತ್ತಾರೆ.
ಸೂರ್ಯನಿಗೆ ನೀರು ಅರ್ಪಿಸಿ
ಕಾರ್ತಿಕ ಪೂರ್ಣಿಮೆಯಂದು ಸೂರ್ಯನಿಗೆ ನೀರನ್ನು ಅರ್ಪಿಸಬೇಕು. ಸೂರ್ಯನಿಗೆ ನೀರನ್ನು ಅರ್ಪಿಸುವುದು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ಜಾತಕದಲ್ಲಿ ಸೂರ್ಯನ ಸ್ಥಾನವು ಬಲಗೊಳ್ಳುತ್ತದೆ. ಗಂಗಾ ಅಥವಾ ಯಾವುದೇ ಪವಿತ್ರ ನದಿಯಲ್ಲಿ ಸ್ನಾನ ಮಾಡಿದ ನಂತರ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳು ದೂರವಾಗುತ್ತವೆ.
ದೀಪ ದಾನ ಮಾಡಿ
ಕಾರ್ತಿಕ ಪೂರ್ಣಿಮೆಯಂದು ದೀಪವನ್ನು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ನೀವು ಬಯಸಿದರೆ ಯಾವುದೇ ನದಿ ಅಥವಾ ಕೊಳದಲ್ಲಿ ದೀಪವನ್ನು ದಾನ ಮಾಡಬಹುದು. ಅದು ಸಾಧ್ಯವಾಗದಿದ್ದರೆ ತುಳಸಿಯ ಮುಂದೆ ದೀಪ ಇಡಬಹುದು. ದೀಪವನ್ನು ಅರ್ಪಿಸುವುದರಿಂದ ಶನಿ, ರಾಹು, ಕೇತು ಮತ್ತು ಯಮಗಳ ಅಶುಭ ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ.
ಶಿವನಿಗೆ ಅಭಿಷೇಕ
ಕಾರ್ತಿಕ ಹುಣ್ಣಿಮೆ ದಿನ ಶಿವನ ದೇವಸ್ಥಾನಕ್ಕೆ ಹೋಗಿ ಅಭಿಷೇಕ ಮಾಡುವುದು ತುಂಬಾ ಒಳ್ಳೆಯದು. ಶಿವಲಿಂಗಕ್ಕೆ ಹಾಲು, ಗಂಗಾಜಲ, ಜೇನು, ಮೊಸರು ಮುಂತಾದವುಗಳಿಂದ ಅಭಿಷೇಕ ಮಾಡುವುದರಿಂದ ಜೀವನದಲ್ಲಿನ ತೊಂದರೆಗಳು ದೂರವಾಗುತ್ತವೆ. ನಿಮಗೆ ಶಿವನ ಅನಂತ ಕೃಪೆ ಸಿಗುತ್ತದೆ. ಶಿವನು ಕಾರ್ತಿಕ ಹುಣ್ಣಿಮೆಯಂದು ತ್ರಿಪುರಾಸುರ ಎಂಬ ರಾಕ್ಷಸನನ್ನು ಸಂಹರಿಸಿದನೆಂದು ಪುರಾಣಗಳು ಹೇಳುತ್ತವೆ. ಆದ್ದರಿಂದಲೇ ಇಂದು ಶಿವನ ಆರಾಧನೆಯು ಗಮನಾರ್ಹ ಫಲಿತಾಂಶಗಳನ್ನು ನೀಡುತ್ತದೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.