ಉತ್ಥಾನ ದ್ವಾದಶಿ: ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆ ಮಾಡುವ ಮಹತ್ವವೇನು, ಈ ದಿನದ ಆಚರಣೆ ಹೇಗಿರಬೇಕು? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಉತ್ಥಾನ ದ್ವಾದಶಿ: ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆ ಮಾಡುವ ಮಹತ್ವವೇನು, ಈ ದಿನದ ಆಚರಣೆ ಹೇಗಿರಬೇಕು? ಇಲ್ಲಿದೆ ಮಾಹಿತಿ

ಉತ್ಥಾನ ದ್ವಾದಶಿ: ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆ ಮಾಡುವ ಮಹತ್ವವೇನು, ಈ ದಿನದ ಆಚರಣೆ ಹೇಗಿರಬೇಕು? ಇಲ್ಲಿದೆ ಮಾಹಿತಿ

ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಈ ಮಾಸದಲ್ಲಿ ಆಚರಿಸುವ ವಿಶೇಷ ದಿನ ಉತ್ಥಾನ ದ್ವಾದಶಿ. ಈ ದಿನದಂದು ತುಳಸಿ ಪೂಜೆ ಮಾಡುವುದರಿಂದ ವಿಶೇಷ ಫಲಗಳು ಸಿಗುತ್ತವೆ ಎಂಬ ನಂಬಿಕೆ ಇದೆ. ಈ ವರ್ಷ ಉತ್ಥಾನ ದ್ವಾದಶಿ ಯಾವಾಗ, ಈ ದಿನದ ಆಚರಣೆ ಇತಿಹಾಸ, ಮಹತ್ವ ತಿಳಿಯಿರಿ. (ಬರಹ: ಎಚ್‌. ಸತೀಶ್‌, ಜ್ಯೋತಿಷಿ)

ಉತ್ಥಾನ ದ್ವಾದಶಿ
ಉತ್ಥಾನ ದ್ವಾದಶಿ (PC: Canva)

ಕಾರ್ತಿಕ ಮಾಸ ಶುಕ್ಲಪಕ್ಷದ ದ್ವಾದಶಿ ದಿನದಂದು ತುಳಸಿ ಪೂಜೆಯನ್ನು ಆಚರಿಸಲಾಗುತ್ತದೆ. ಇದನ್ನು ಉತ್ಥಾನ ದ್ವಾದಶಿ, ಕ್ಷೀರಾಬ್ಧಿವ್ರತ ಮತ್ತು ಮಥನ ದ್ವಾದಶಿ ವ್ರತ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ರಾಮಾಯಣ ಮತ್ತು ಮಹಾಭಾರತದ ಕಾಲದಿಂದಲೂ ತುಳಸಿ ಪೂಜೆಗೆ ವಿಶೇಷವಾದ ಮಹತ್ವವಿದೆ. ಇಂಗ್ಲೆಂಡ್ ಮತ್ತು ಸ್ಪೈನ್ ದೇಶದಲ್ಲಿ ಸಹ ತುಳಸಿ ಪೂಜೆ ಆಚರಣೆ ಇತ್ತೆಂದು ಚರಿತ್ರೆಯಿಂದ ತಿಳಿದುಬರುತ್ತದೆ. ತುಳಸಿ ಪೂಜೆಯಲ್ಲಿ ವಿಶೇಷ ರೀತಿ ಇಲ್ಲ. ಷೋಡಶೋಪಚಾರಗಳಿಂದ ತುಳಸಿಯನ್ನು ಅರ್ಚಿಸಬೇಕು. ಕಳಶ ಪೂಜೆಯಿಂದ ಆರಂಭವಾಗಿ ಪ್ರಾಣಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ವಸ್ತ್ರ ಇತ್ಯಾದಿಗಳಿಂದ ಸಂಪೂರ್ಣಗೊಳ್ಳುತ್ತದೆ. ಉತ್ಥಾನದ್ವಾದಶಿ ಆಚರಣೆಯ ಹಿಂದೆ ಎರಡು ಮೂರು ರೀತಿಯ ಕತೆಗಳಿವೆ.  

ತುಳಸಿಯ ಪ್ರಯೋಜನಗಳು 

ತುಳಸಿ ಪೂಜೆ ಮತ್ತು ತುಳಸಿ ತೀರ್ಥ ಸೇವಿಸುವುದರಿಂದ ಹಲವು ಧಾರ್ಮಿಕ ಮತ್ತು ವೈದ್ಯಕೀಯ ಉಪಯೋಗಗಳಿವೆ. ತುಳಸಿ ಗಿಡ ಇರುವ ಜಾಗದಲ್ಲಿ ಬಾಲಗ್ರಹ ಅಥವ ಭೂತಬಾಧೆ ಇರುವುದಿಲ್ಲ ಎಂಬ ನಂಬಿಕೆ ಇದೆ. ಕ್ಯಾನ್ಸರ್ ಅಂತಹ ರೋಗಗಳಿಗೂ ಇದರಿಂದ ಔಷಧಿಯನ್ನು ತಯಾರಿಸಲಾಗುತ್ತದೆ. ತುಳಸಿ ಪೂಜೆಯಿಂದ ಶನಿಕಾಟದಿಂದ ಪಾರಾಗಬಹುದು. ಆದರೆ ತುಳಸಿಯನ್ನು ಸಂಗ್ರಹಿಸಲು ಅನೇಕ ನೀತಿ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

ಉತ್ಥಾನ ದ್ವಾದಶಿಯ ಇತಿಹಾಸ, ಮಹತ್ವ

ನಾರದ ಮುನಿಗಳು ಒಮ್ಮೆ ಬ್ರಹ್ಮದೇವರನ್ನು ಕುರಿತು, ಇರುವ ಹನ್ನೆರಡು ಮಾಸಗಳಲ್ಲಿ ಅತಿ ಶ್ರೇಷ್ಠವಾದ ಮಾಸ ಯಾವುದು ಎಂದು ಕೇಳುತ್ತಾರೆ. ಆಗ ಬ್ರಹ್ಮರು ದ್ವಾದಶ ಮಾಸದಲ್ಲಿ ಕಾರ್ತಿಕ ಮಾಸವೇ ಅತಿ ಶ್ರೇಷ್ಠ ಎಂದು ತಿಳಿಸುತ್ತಾರೆ. ಈ ಮಾಸದಲ್ಲಿ ಮಹಾ ವಿಷ್ಣುವಿನ ವಿಗ್ರಹಕ್ಕೆ ತುಳಸಿಯನ್ನು ಅರ್ಪಿಸಿದಲ್ಲಿ ಸಕಲ ಪಾಪಗಳಿಂದ ದೂರವಾಗಬಹುದು. ಈ ದಿನದಂದು ಮುಂಜಾನೆಯೇ ಎದ್ದು ಮನೆಯ ದೇವರ ಕೋಣೆಯಲ್ಲಿ, ಮನೆಯ ಮುಂಬಾಗಿಲಿನಲ್ಲಿ, ತುಳಸಿಗಿಡದ ಮುಂದೆ ಮತ್ತು ಹಸುವಿರುವ ಕಡೆ ಜೋಡಿ ದೀಪಗಳನ್ನು ಹಚ್ಚಬೇಕು. ಇದರಿಂದ ವಿಷ್ಣುವಿನ ಅನುಗ್ರಹವನ್ನು ಪಡೆಯಬಹುದಾಗಿದೆ. ಉತ್ಥಾನ ದ್ವಾದಶಿಯ ದಿನದಂದು ನೆಲ್ಲಿ ಮರದ ಕೆಳಗೆ ಶ್ರೀ ವಿಷ್ಣುವಿನ ಪೂಜೆಯನ್ನು ಮಾಡಿದಲ್ಲಿ ಪ್ರಯಾಗ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದ ಫಲಗಳನ್ನು ಪಡೆಯುವರು. ಈ ಕಾರಣದಿಂದಾಗಿ ಈ ದಿನದಂದು ತುಳಸಿಗಿಡದ ಜೊತೆಯಲ್ಲಿ ಅಗಸೆ ಮತ್ತು ನೆಲ್ಲಿ ಕೊಂಬೆಗಳನ್ನು ಇಡಲಾಗುತ್ತದೆ. ತುಳಸಿಗಿಡದ ಮುಂದೆ ತಂಬಿಟ್ಟನ್ನು ಮಾಡಿ ಐದು ಕಬ್ಬಿನ ತುಂಡುಗಳಿಂದ ಚಿಲುಕು ಕುಟ್ಟುವ ಸಂಪ್ರದಾಯವು ನಮ್ಮಲ್ಲಿದೆ.

ಧಾರ್ಮಿಕ ಗ್ರಂಥಗಳ ಅನ್ವಯ ಕಾರ್ತಿಕ ಮಾಸದ ಶುಕ್ಲ ಪೂರ್ಣಿಮೆಯ ಶುಕ್ರವಾರದ ದಿನದಂದು ತುಳಸಿಯ ಜನನವಾಗಿದೆ ಎಂದು ತಿಳಿದುಬರುತ್ತದೆ. ಶ್ರೀ ಲಕ್ಷ್ಮೀಪೂಜೆಯಿಂದ ಧರ್ಮಧ್ವಜ ಮತ್ತು ಮಾಧವಿ ದಂಪತಿಗಳೇ ತುಳಸಿಯ ತಂದೆ ತಾಯಿ. ಉತ್ಥಾನ ದ್ವಾದಶಿಯ ದಿನದಂದು ವೃಂದೆಯು ರುಕ್ಮಿಣಿಯ ಅವತಾರ ತಾಳಿ ಭಗವಾನ್ ವಿಷ್ಣುವನ್ನು ವರಿಸುತ್ತಾಳೆ. ಆದ್ದರಿಂದ ಇಂದು ತುಳಸಿ ಕಲ್ಯಾಣವನ್ನು ಆಚರಿಸುತ್ತಾರೆ.

ತಮ್ಮ ಸಾಮ್ರಾಜ್ಯವನ್ನು ಕಳೆದುಕೊಂಡ ಪಾಂಡವರನ್ನು ಕಾಣಲು ವ್ಯಾಸರು ಆಗಮಿಸುತ್ತಾರೆ. ಆಗ ಮನನೊಂದ ಧರ್ಮರಾಯನು ವ್ಯಾಸರನ್ನು ಕುರಿತು ಸಕಲ ಕಾರ್ಯಗಳು ಸಿದ್ದಿಸುವ ಯಾವುದಾದರೊಂದು ವ್ರತಾಚರಣೆಯನ್ನು ತಿಳಿಸಲು ಕೇಳುತ್ತಾನೆ. ಆಗ ವ್ಯಾಸರು ಕ್ಷೀರಾಬ್ಧಿ ವ್ರತದ ಬಗ್ಗೆ ತಿಳಿಸುತ್ತಾರೆ. ಸ್ವಯಂ ವಿಷ್ಣುವೇ ಈ ವ್ರತದ ಬಗ್ಗೆ ತಿಳಿಸಿದ್ದಾನೆ. ಈ ದಿನದಂದ ಲಕ್ಷ್ಮೀ ಸಮೇತ ನನ್ನ ಪೂಜೆ ಮಾಡಿ ದೀಪದಾನವನ್ನು ಮಾಡುವರೋ ಅವರಿಗೆ ಸಕಲ ಸೌಭಾಗ್ಯವನ್ನೂ ನೀಡುವೆ ಎಂದು ತಿಳಿಸುತ್ತಾನೆ. ಆದಿನ ತುಳಸಿಯ ಚರಿತ್ರೆಯನ್ನು ಕೇಳುವುದು ಅಥವಾ ಓದುವುದು ಬಲು ಮುಖ್ಯ ಎನ್ನಲಾಗಿದೆ. ಅಂದು ನಾಲ್ಕು ಬತ್ತಿಗಳಿರುವ ದೀಪವನ್ನು ಹಚ್ಚುವುದು ಬಲು ಶ್ರೇಷ್ಠಕರ. ಹಸುವಿನ ತುಪ್ಪವನ್ನು ಬಳಸಿ ದೀಪವನ್ನು ಬೆಳಗಿಸಬೇಕು. ಶ್ರೀ ಪುರುಷಸೂಕ್ತ ಪಠಣೆಯಿಂದ ವಿಶೇಷವಾದ ಫಲಗಳು ದೊರೆಯುತ್ತವೆ. 

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.