Utthana Dwadashi 2023: ಉತ್ಥಾನ ದ್ವಾದಶಿ ತುಳಸಿ ಹಬ್ಬದ ದಿನ ಕಾರ್ತಿಕ ದಾಮೋದರ ಪೂಜೆಗಿದೆ ಮಹತ್ವ
Utthana Dwadashi 2023: ವಿಷ್ಣು ಪೂಜೆಯನ್ನು ಉಳಿಸಿಕೊಂಡಿದ್ದಲ್ಲಿ ಕಾರ್ತಿಕ ಮಾಸದಲ್ಲಿ ಮುಖ್ಯವಾಗಿ ಉತ್ಥಾನ ದ್ವಾದಶಿಯಂದು ಪೂಜೆಯನ್ನು ಸಲ್ಲಿಸಿದರೆ ಸಕಲ ದೋಷವೂ ಪರಿಹಾರವಾಗುತ್ತದೆ. ಕಾರ್ತಿಕ ಮಾಸದ ಶುಕ್ರಪಕ್ಷದ ದ್ವಾದಶಿಯ ದಿನ ಬೃಂದಾವನದಲ್ಲಿರುವ ತುಳಸಿಯ ಸನ್ನಿಧಾನದಲ್ಲಿ ಈ ಪೂಜೆಯನ್ನು ಮಾಡಬೇಕು.
Utthana Dwadashi 2023: ಉತ್ಥಾನ ದ್ವಾದಶಿಯ ದಿನ ತುಳಸಿಯ ಪೂಜೆಗೆ ವಿಶೇಷವಾದ ಮಹತ್ವವಿದೆ. ಸಾಕ್ಷಾತ್ ಶಿವ ಪಾರ್ವತಿಯರ ನಡುವೆ ತುಳಸಿ ಮಹಾತ್ಮೆಯ ಬಗ್ಗೆ ಸಂವಾದವೇ ನಡೆಯುತ್ತದೆ. ಮುಖ್ಯವಾಗಿ ತುಳಸಿ ಪೂಜೆಗೆ ಕಾರ್ತಿಕ ಮಾಸ ಶ್ರೇಷ್ಠ ಎಂಬ ಮಾತಿದೆ. ಬ್ರಹ್ಮದೇವರ ಪ್ರಕಾರ ಸಕಲ ದೇವತೆಗಳಲ್ಲಿ ಶ್ರೀಮನ್ನಾರಾಯಣ, ಯಾತ್ರಾ ಕ್ಷೇತ್ರಗಳಲ್ಲಿ ಬದರಿ ಆಶ್ರಮ ಮತ್ತು 12 ಮಾಸಗಳಲ್ಲಿ ಕಾರ್ತಿಕ ಮಾಸವೇ ಸರ್ವ ಶ್ರೇಷ್ಠವಾಗಿದೆ.
ಅಂಬರೀಶನಿಗೆ ದೂರ್ವಾಸರ ಶಾಪ
ಮಹರ್ಷಿಗಳಲ್ಲಿ ದೂರ್ವಾಸರಿಗೆ ಅತಿ ಕೋಪ. ಒಮ್ಮೆ ತಿಳಿದೋ ತಿಳಿಯದೆಯೋ ರಾಜ ಅಂಬರೀಶನ ದ್ವಾದಶಿ ವ್ರತವನ್ನು ಭಂಗ ಮಾಡಲು ಪ್ರಯತ್ನಿಸುತ್ತಾರೆ. ಮಹಾರಾಜನ ಆಸ್ಥಾನಕ್ಕೆ ದೂರ್ವಾಸರು ಅತಿಥಿಗಳಾಗಿ ಬರುತ್ತಾರೆ. ವ್ರತ ಭಂಗ ಮಾಡಲೆಂದೇ ದುರ್ವಾಸರು ತಡವಾಗಿ ಬರುತ್ತಾರೆ. ಆದರೆ ವಿಷ್ಣುಭಕ್ತನಾಗಿದ್ದ ರಾಜನು ದ್ವಾದಶಿ ಕಳೆಯಬಹುದೆಂಬ ಭಯದಿಂದ ಪೂಜೆಯನ್ನು ಸಂಪೂರ್ಣಗೊಳಿಸಿರುತ್ತಾನೆ. ಇದರಿಂದ ಕೋಪಗೊಂಡ ಋಷಿವರ್ಯರು ರಾಜನಿಗೆ ಶಾಪವನ್ನು ನೀಡಲು ಮುಂದಾಗುತ್ತಾರೆ. ಆಗ ಮಹಾರಾಜನು ಇಂದು ಮಾಡಿರುವ ಪೂಜೆಯು ಸಂಪೂರ್ಣವಾಗಿ ವಿಷ್ಣುವಿನ ಪಾದಕ್ಕೆ ಅರ್ಪಿಸುತ್ತಾನೆ. ಹಾಗೆಯೇ ದೂರ್ವಾಸರು ನೀಡಿದ ಈ ಶಾಪವನ್ನು ಸಹ ವಿಷ್ಣುವಿನ ಪಾದಕ್ಕೆ ಅರ್ಪಿಸುತ್ತಾನೆ. ಭಕ್ತರ ಅಧೀನನಾದ ವಿಷ್ಣುವು ದೂರ್ವಾಸರ ಶಾಪವನ್ನು ಸ್ವೀಕರಿಸುತ್ತಾನೆ. ಇದರಿಂದ ಸಿಟ್ಟಿಗೆದ್ದ ಸುದರ್ಶನನು ದೂರ್ವಾಸನನ್ನು ವಧಿಸಲು ಮುಂದಾಗುತ್ತಾನೆ. ದೇವಾನುದೇವತೆಗಳಿಗೂ ದೂರ್ವಾಸವನ್ನು ಕಾಪಾಡಲು ಸಾಧ್ಯವಾಗುವುದಿಲ್ಲ. ಆಗ ಸ್ವಯಂ ಮಹಾರಾಜನೇ ಸುದರ್ಶನನ ಕೋಪವನ್ನು ಕಡಿಮೆ ಮಾಡಿ ದೂರ್ವಾಸರನ್ನು ಕಾಪಾಡುತ್ತಾನೆ.
ಉತ್ಥಾನ ದ್ವಾದಶಿಯಂದು ವಿಷ್ಣು ಪೂಜೆಗಿದ ಮಹತ್ವ
ಈ ಕಾರಣದಿಂದ ವಿಷ್ಣು ಪೂಜೆಯನ್ನು ಮಾಡುವುದನ್ನು ಮರೆತಲ್ಲಿ ಅಥವಾ ವಿಷ್ಣು ಪೂಜೆಗೆ ಅಡ್ಡಿಪಡಿಸಿದಲ್ಲಿ ಸಂಕಷ್ಟಕ್ಕೆ ಸಿಲುಕುವುದು ಖಚಿತ. ಒಂದು ವೇಳೆ ವಿಷ್ಣು ಪೂಜೆಯನ್ನು ಉಳಿಸಿಕೊಂಡಿದ್ದಲ್ಲಿ ಕಾರ್ತಿಕ ಮಾಸದಲ್ಲಿ ಮುಖ್ಯವಾಗಿ ಉತ್ಥಾನ ದ್ವಾದಶಿಯಂದು ಪೂಜೆಯನ್ನು ಸಲ್ಲಿಸಿದರೆ ಸಕಲ ದೋಷವೂ ಪರಿಹಾರವಾಗುತ್ತದೆ. ಕಾರ್ತಿಕ ಮಾಸದ ಶುಕ್ರಪಕ್ಷದ ದ್ವಾದಶಿಯ ದಿನ ಬೃಂದಾವನದಲ್ಲಿರುವ ತುಳಸಿಯ ಸನ್ನಿಧಾನದಲ್ಲಿ ಈ ಪೂಜೆಯನ್ನು ಮಾಡಬೇಕು. ಆರಂಭದಲ್ಲೇ ಸಂಕಲ್ಪ ಮಾಡುವುದು ಬಹಳ ಮುಖ್ಯ. ನಂತರ ಕಳಶ ಪೂಜೆ ಮತ್ತು ಪ್ರಾಣ ಪ್ರತಿಷ್ಠೆಯನ್ನು ಮಾಡಬೇಕು. ತುಳಸಿಯ ಅಂಗಪೂಜೆಯನ್ನು ಮಾಡಬೇಕು. ಆನಂತರ ತುಳಸಿ ಮಾತೆಯ ದ್ವಾದಶ ನಾಮವನ್ನು ಜಪಿಸಬೇಕು. ಇದನ್ನು ಪ್ರತಿದಿನವೂ ಜಪಿಸಿದರೆ ಜನ್ಮ ಜನ್ಮಾಂತರದ ಪಾಪವು ಪರಿಹಾರವಾಗುವುದು ಎಂಬ ಅಭಿಪ್ರಾಯವಿದೆ.
ತುಳಸಿಯ ದ್ವಾದಶನಾಮ
ಓಂ ಶ್ರೀ ತುಳಸ್ಯೈ ನಮಃ ।
ಓಂ ನಂದಿನ್ಯೈ ನಮಃ ।
ಓಂ ದೇವ್ಯೈ ನಮಃ ।
ಓಂ ಶಿಖಿನ್ಯೈ ನಮಃ ।
ಓಂ ಧಾರಿಣ್ಯೈ ನಮಃ ।
ಓಂ ಧಾತ್ರ್ಯೈ ನಮಃ ।
ಓಂ ಸಾವಿತ್ರ್ಯೈ ನಮಃ ।
ಓಂ ಸತ್ಯಸನ್ದಾಯೈ ನಮಃ ।
ಓಂ ಕಲಹಾರಿಣ್ಯೈ ನಮಃ ।
ಓಂ ಗೌರ್ಯೈ ನಮಃ ।
ಓಂ ದೇವಗೀತಾಯೈ ನಮಃ ।
ಓಂ ದ್ರವ್ಯಸ್ಯೈ ನಮಃ ।
ದ್ವಾದಶನಾಮಗಳಿಂದ ತುಳಸಿಯ ಪೂಜೆ ಮಾಡಿದರೂ ನಂತರ ಅಷ್ಟೋತ್ತರದ ಮೂಲಕ ಅರಿಶಿನ ಮತ್ತು ಕುಂಕುಮದಿಂದ ಪೂಜಿಸಬೇಕು. ತುಳಸಿಯ ಪೂಜೆ ಆದ ನಂತರ ಪುರುಷಸೂಕ್ತದ ಮೂಲಕ ಭಗವಾನ್ ವಿಷ್ಣುವನ್ನು ಸ್ತುತಿಸಬೇಕು. ಇಲ್ಲಿ ಭಗವಾನ್ ವಿಷ್ಣು ಭಗವಾನರನ್ನು ದಾಮೋದರ ಎಂದು ಕರೆಯಲಾಗುತ್ತದೆ. ಸಂಕಲ್ಪದ ವೇಳೆ ತುಳಸಿ ಸಮೇತ ದಾಮೋದರ ದೇವತಾ ಪ್ರೀತ್ಯರ್ಥಂ ಎಂದೆ ಹೇಳಬೇಕು.
ತುಳಸಿ-ದಾಮೋದರ ವಿವಾಹ
ಈ ದಿನ ಪೂಜೆಯ ಮುಖಾಂತರ ತುಳಸಿ ದಾಮೋದರ ವಿವಾಹ ಮಾಡಲಾಗುತ್ತದೆ. ಇದರಿಂದಾಗಿ ಹೆಣ್ಣು ಮಕ್ಕಳಿಗೆ ಸಕಲ ಸೌಭಾಗ್ಯ ದೊರೆಯುತ್ತದೆ. ಕೆಲವು ಪ್ರಾಂತ್ಯಗಳಲ್ಲಿ ತುಳಸಿ ಮತ್ತು ಶ್ರೀಕೃಷ್ಣನನ್ನು ಪ್ರತ್ಯೇಕವಾಗಿ ಪೂಜಿಸಿ ಆನಂತರ ಮದುವೆಗೆ ಸಂಬಂಧಪಟ್ಟಂತಹ ಮಂಗಳಾಷ್ಟಕದೊಂದಿಗೆ ಒಂದೆಡೆ ಕೂಡಿಸುತ್ತಾರೆ. ಇದು ಅವರವರ ಸಂಪ್ರದಾಯವನ್ನು ಅವಲಂಬಿಸಿದೆ. ಇನ್ನೂ ಕೆಲವೆಡೆ ತುಳಸಿ ಮತ್ತು ಕೃಷ್ಣನ ವಿಗ್ರಹಗಳ ನಡುವೆ ತೆರೆವಸ್ತ್ರವನ್ನು ಹಿಡಿದು ಮಂಗಳಾಷ್ಟಕ ಹೇಳುತ್ತಾರೆ. ಆನಂತರ ತುಳಸಿಯನ್ನು ಕೃಷ್ಣನ ಕೈಗೆ ಅರ್ಪಿಸುವ ವಾಡಿಕೆ ಕಂಡುಬರುತ್ತದೆ. ವ್ರತದ ಕೊನೆಯಲ್ಲಿ ತುಳಸಿಯ ಸಮೇತ ಕೃಷ್ಣನ ವಿಗ್ರಹವನ್ನು ಮನೆಯ ಒಳಗೆ ತೆಗೆದುಕೊಂಡು ಹೋಗುತ್ತಾರೆ. ಗೃಹಪ್ರವೇಶದ ಶಾಸ್ತ್ರವನ್ನು ಸಹ ನೆರವೇರಿಸಬೇಕು. ಆ ನಂತರ ತುಳಸಿ ದಾಮೋದರರಿಗೆ ಆರತಿಯನ್ನು ಮಾಡಬೇಕು. ಅಂತ್ಯದಲ್ಲಿ ಉಪಾಯನ ದಾನ ನೀಡುವ ಮೂಲಕ ಈ ವ್ರತವು ಮುಕ್ತಾಯ ಮಾಡಬೇಕು. ಇದೇ ದಿನ ಪ್ರದೋಷವೂ ಬಂದಿರುವುದು ವಿಶೇಷ.