ಕನ್ನಡ ಸುದ್ದಿ  /  Astrology  /  Udupi Temple Importance Of Kollur Mukambike History Of Kolluru Mookambika Temple Karnataka Temples Mgb

Kollur Mukambike: ವಿದ್ಯಾ ಬುದ್ಧಿ ನೀಡುವ ಕೊಲ್ಲೂರು ಮೂಕಾಂಬಿಕೆ; ದುರ್ಗೆ, ಸರಸ್ವತಿ, ಲಕ್ಷ್ಮಿಯ ಅವತಾರ ಈಕೆ

ಕೊಲ್ಲೂರಿನಲ್ಲಿರುವ ಸೌಪರ್ಣಿಕಾ ನದಿಯಲ್ಲಿ ಮಿಂದು, ಅಕ್ಷರಾಭ್ಯಾಸ ಮಾಡಿದಲ್ಲಿ ಶುಭವುಂಟಾಗುವುದು. ದುರ್ಗೆ, ಸರಸ್ವತಿ ಮತ್ತು ಲಕ್ಷ್ಮಿಯ ಅವತಾರವಾದ ಮೂಕಾಂಬಿಕೆಯು ಶಿವನೊಡನೆ ನೆಲೆಸಿರುವ ಕಾರಣ ಈ ಕ್ಷೇತ್ರದಲ್ಲಿ ಪೂಜೆಸಲ್ಲಿಸುವ ವಿದ್ಯಾರ್ಥಿಗಳಿಗೆ ಸೋಮಾರಿತನ ಕಳೆದು, ಆತ್ಮಸ್ಥೈರ್ಯ ತುಂಬಿ ಉತ್ತಮ ವಿದ್ಯೆ ಲಭಿಸುತ್ತದೆ. (ಲೇಖನ: ಎಚ್‌. ಸತೀಶ್‌, ಜ್ಯೋತಿಷಿ)

ಕೊಲ್ಲೂರು ಮೂಕಾಂಬಿಕೆ
ಕೊಲ್ಲೂರು ಮೂಕಾಂಬಿಕೆ

ಪ್ರತಿಯೊಬ್ಬರಿಗೂ ಉತ್ತಮ ವಿದ್ಯೆಯನ್ನು ಗಳಿಸುವ ತವಕವಿರುತ್ತದೆ. ಎಂತಹ ಬುದ್ಧಿವಂತರಾದರೂ ವಿದ್ಯಾರ್ಥಿಗಳ ಮನದಲ್ಲಿ ಪರೀಕ್ಷೆಯ ಭಯವಿರುತ್ತದೆ. ಗುರು ಹಿರಿಯರು ಮುಖ್ಯವಾಗಿ ಪೋಷಕರು ಒತ್ತಡವನ್ನು ಹೇರದೆ ಮಕ್ಕಳಲ್ಲಿ ಸ್ಪೂರ್ತಿಯನ್ನು ತುಂಬಬೇಕು. ನದಿಯ ದಡದಲ್ಲಿ ಇರುವ ದೇವತೆಯ ಪೂಜೆಯಿಂದ ಉತ್ತಮ ವಿದ್ಯೆ ಲಭ್ಯವಾಗುತ್ತದೆ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗುತ್ತದೆ. ಅಂತಹ ಸ್ಪೂರ್ತಿ ನಮ್ಮೆಲ್ಲರಿಗೂ ಉಡುಪಿಯ ಕೊಲ್ಲೂರಿನ ಮೂಕಾಂಬಿಕಾ ದೇವಾಲಯದಲ್ಲಿ ದೊರೆಯುತ್ತದೆ.

ಆದಿ ಶಂಕರರು ಸುಮಾರು 1200 ವರ್ಷಗಳಷ್ಟು ಹಿಂದೆಯೇ ದೇವಸ್ಥಾನದಲ್ಲಿ ದೇವತೆಯ ವಿಗ್ರಹವನ್ನು ಪ್ರತಿಷ್ಠಾಪಿಸಿದರು ಎಂದು ನಂಬಲಾಗಿದೆ. ಇಲ್ಲಿ ನೆಲೆಸಿರುವ ಮೂಕಾಂಬಿಕಾ ದೇವತೆಯು ಶಕ್ತಿ, ಸರಸ್ವತಿ ಮತ್ತು ಮಹಾಲಕ್ಷ್ಮಿಯ ಸಂಯೋಜಿತ ಅವತಾರ ಎಂಬುದಾಗಿ ತಿಳಿದುಬರುತ್ತದೆ. ಶಕ್ತಿ ಎಂದರೆ ದುರ್ಗಾಮಾತೆಯಿಂದ ಆತ್ಮವಿಶ್ವಾಸ, ಸರಸ್ವತಿಯಿಂದ ವಿದ್ಯೆ ಮತ್ತು ಮಹಾಲಕ್ಷ್ಮಿಯಿಂದ ಬಾಳಿನ ಗುರಿ ದೊರೆಯುತ್ತದೆ. ಅಲ್ಲಿರುವ ಸರಸ್ವತಿ ಮಂಟಪದಲ್ಲಿ ಅಶುಭ ಎಂದು ತಿಳಿದಿರುವ ಅಮಾವಾಸ್ಯೆಯ ದಿನವೂ ಅಕ್ಷರಾಭ್ಯಾಸವನ್ನು ಮಾಡುತ್ತಾರೆ. ಇದಕ್ಕೆ ಕಾರಣ ಇಲ್ಲಿರುವ ದೇವತೆ.

ಶ್ರೀಚಕ್ರದ ಮೇಲೆ ಸ್ಥಾಪಿಸಲಾಗಿರುವ ದೇವತೆಯ ಪಂಚಲೋಹದ ವಿಗ್ರಹವನ್ನು ಆದಿ ಶಂಕರಾಚಾರ್ಯರು ಈ ಸ್ಥಳದಲ್ಲಿ ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ. ದೇವತೆಯ ಮೂಲಸ್ಥಳವು ಕೊಡಚಾದ್ರಿ ಶಿಖರದ ತುತ್ತ ತುದಿ. ಆದರೆ ಭಕ್ತಾದಿಗಳು ಮೂಲಸ್ಥಳವನ್ನು ತಲುಪುವುದು ಅತ್ಯಂತ ಕಷ್ಟಕರವಾದ ವಿಚಾರ. ಆದ್ದರಿಂದ ಶಂಕರಾಚಾರ್ಯರು ಮೂಕಾಂಬಿಕೆಯ ದೇವಸ್ಥಾನವನ್ನು ಕೊಲ್ಲೂರಿನಲ್ಲಿ ಸ್ಥಾಪಿಸಿದರು ಎಂದು ನಂಬಲಾಗಿದೆ. ಇಲ್ಲಿ ಪಂಚಮುಖಿ ಗಣಪತಿಯ ವಿಗ್ರಹವಿದೆ. ಇದಲ್ಲದೆ ಶ್ರೀ ಸುಬ್ರಮಣ್ಯ, ಶ್ರೀ ಪಾರ್ಥೀಶ್ವರ, ಶ್ರೀ ಚಂದ್ರಮೌಳೀಶ್ವರ, ಶ್ರೀ ಪ್ರಾಣಲಿಂಗೇಶ್ವರ, ಶ್ರೀ ನಂಜುಂಡೇಶ್ವರ, ಶ್ರೀ ಆಂಜನೇಯ, ಶ್ರೀ ವೆಂಕಟರಮಣ, ಶ್ರೀ ತುಳಸಿ ಗೋಪಾಲಕೃಷ್ಣ ಇದೆ. ಸಕಲ ವಿದ್ಯೆಯೂ ಈಶ್ವರನಿಂದಲೇ ಎಂದು ಋಗ್ವೇದದಲ್ಲಿ ತಿಳಿಸಲ್ಪಟ್ಟಿದೆ. ಆದ್ದರಿಂದ ಈ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದಲ್ಲಿ ಉತ್ತಮ ವಿದ್ಯೆ ಲಭಿಸುತ್ತದೆ ಎಂಬುದು ಸರ್ವ ವಿಧಿತ. ನವರಾತ್ರಿಯ ದಿನಗಳಂದು ಇಲ್ಲಿನ ಸರಸ್ವತಿ ಮಂಟಪದಲ್ಲಿ ಮಕ್ಕಳಿಗೆ ವ್ಯಾಸಂಗದಲ್ಲಿ ದೀಕ್ಷೆ ಅಥವಾ ಉಪದೇಶವನ್ನು ನೀಡಲಾಗುತ್ತದೆ.

ಈ ದೇವಾಲಯದ ಬಗ್ಗೆ ಪೌರಾಣಿಕ ಕಥೆಯೊಂದು ಕೇಳಿ ಬರುತ್ತದೆ. ಕಂಬಾಸುರನೆಂಬ ರಾಕ್ಷಸನಿಗೆ ಸಂಬಂಧಿಸಿದ್ದು. ಬ್ರಹ್ಮನಿಂದ ಮರಣವೇ ಇಲ್ಲವೆಂಬ ವರವನ್ನು ಪಡೆದ ಕಂಬಾಸುರನು ಋಷಿಮುನಿಗಳಿಗೆ ಕಷ್ಟ ನೀಡಲು ಆರಂಭಿಸುತ್ತಾನೆ. ಇವನ ಉಪಟಳದಿಂದ ಬೇಸತ್ತ ಕೋಲಮರ್ಷಿಯು ದುರ್ಗೆಯನ್ನು ಕುರಿತು ತಪಸ್ಸು ಮಾಡುತ್ತಾನೆ. ಆಗ ಪ್ರತ್ಯಕ್ಷವಾದ ದುರ್ಗೆಯು ಕೆಟ್ಟವರು ಬಹಳ ಕಾಲ ಉಳಿಯಲು ಸಾಧ್ಯವಿಲ್ಲ ಎಂದು ಹೇಳುತ್ತಾಳೆ.

ಇತ್ತ ಕಂಬಾಸುರನು ತನ್ನ ಗುರುವಾದ ಶುಕ್ರಾಚಾರ್ಯರ ಅಣತಿಯಂತೆ ಶಿವನನ್ನು ಕುರಿತು ತಪಸ್ಸನ್ನು ಮಾಡಲು ಆರಂಭಿಸುತ್ತಾನೆ. ದೇವಾನುದೇವತೆಗಳು ಎಷ್ಟೇ ಪ್ರಯತ್ನ ಪಟ್ಟರು ಕಂಬಾಸುರನ ತಪಸ್ಸನ್ನು ಭಂಗಪಡಿಸಲು ಸಾಧ್ಯವಾಗುವುದಿಲ್ಲ.

ಶಿವನು ಪ್ರತ್ಯಕ್ಷನಾಗುತ್ತಾನೆ. ಕಂಬಾಸುರನ ಮನಸ್ಸಿನಲ್ಲಿ ಮರಣವೇ ಬೇಡವೆಂದು ಕೇಳಬೇಕೆಂಬ ಸಂಕಲ್ಪ ವಿರುತ್ತದೆ. ಆದರೆ ದುರ್ಗಾ ಮಾತೆಯು ಅವನ ನಾಲಿಗೆಯಲ್ಲಿ ಕುಳಿತು ಮಾತು ಬಾರದಂತೆ ಮಾಡುತ್ತಾಳೆ. ಕಂಬಾಸುರನು ಮೂಕನಾಗಿ ಬಿಡುತ್ತಾನೆ. ಆದರೆ ಶುಕ್ರಾಚಾರ್ಯರು ಸರಸ್ವತಿಯನ್ನು ಕುರಿತು ತಮ್ಮೆಲ್ಲ ತಪಸ್ಸಿನ ಫಲವನ್ನು ದಾರೆ ಎರದು ಕಂಬಾಸುರನಿಗೆ ಮಾತು ಬರುವಂತೆ ಮಾಡುತ್ತಾರೆ. ಆನಂತರವೂ ಗುರುಗಳ ಸಲಹೆಯನ್ನೂ ಬದಿಗೊತ್ತಿ ಮತ್ತೊಮ್ಮೆ ದೇವತೆಗಳು ಮತ್ತು ಋಷಿಮುನಿಗಳಿಗೆ ತೊಂದರೆ ನೀಡುತ್ತಾನೆ. ಆಗ ದೇವಾನುದೇವತೆಗಳ ಬೇಡಿಕೆಗೆ ಮಣಿದು ದುರ್ಗಾಮಾತೆಯು ಕಂಬಾಸುರನನ್ನು ಸಂಹರಿಸುತ್ತಾಳೆ. ಆಗಲೂ ದುರ್ಗೆಯ ರೋಷಾವೇಷಗಳು ಕಡಿಮೆಯಾಗಿರುವುದಿಲ್ಲ. ಆಗ ಎದುರಾದ ಆದಿ ಶಂಕರರು ದುರ್ಗೆಯನ್ನು ಸ್ತುತಿಸಿ ಶಾಂತಿ ರೂಪಕ್ಕೆ ತರುತ್ತಾರೆ. ಆಗ ದುರ್ಗೆಯು ತನ್ನನ್ನು ಸ್ವರ್ಣರೇಖೆ ಇರುವ ಲಿಂಗದ ಬಳಿ ಸ್ಥಾಪಿಸುವಂತೆ ಸೂಚಿಸುತ್ತಾಳೆ.

ಈಕಾರಣದಿಂದಾಗಿ ಕೊಲ್ಲೂರಿನಲ್ಲಿರುವ ಸೌಪರ್ಣಿಕಾ ನದಿಯಲ್ಲಿ ಮಿಂದು, ಅಕ್ಷರಾಭ್ಯಾಸ ಮಾಡಿದಲ್ಲಿ ಶುಭವುಂಟಾಗುವುದು. ದುರ್ಗೆ, ಸರಸ್ವತಿ ಮತ್ತು ಲಕ್ಷ್ಮಿಯ ಅವತಾರವಾದ ಮೂಕಾಂಬಿಕೆಯು ಶಿವನೊಡನೆ ನೆಲೆಸಿರುವ ಕಾರಣ ಈ ಕ್ಷೇತ್ರದಲ್ಲಿ ಪೂಜೆಸಲ್ಲಿಸುವ ವಿದ್ಯಾರ್ಥಿಗಳಿಗೆ ಸೋಮಾರಿತನ ಕಳೆದು, ಆತ್ಮಸ್ಥೈರ್ಯ ತುಂಬಿ ಉತ್ತಮ ವಿದ್ಯೆ ಲಭಿಸುತ್ತದೆ. ಇಲ್ಲಿ ಮೂಕಾಂಬಿಕೆಯು ಶ್ರೀಚಕ್ರದ ಮೇಲೆ ನೆಲೆಸಿದ್ದಾಳೆ. ಈ ಕ್ಷೇತ್ರಕ್ಕೆ ಬರಲಾಗದವರು ಇರುವಲ್ಲಿಯೇ ಮೂಕಾಂಬಿಕೆ ಮತ್ತು ಶ್ರೀ ಶಂಕರರ ಭಾವಚಿತ್ರ ಇಟ್ಟು ಪೂಜಿಸಿದರೆ ಉತ್ತಮ ಪಲಿತಾಂಶವನ್ನು ಪಡೆಯಬಹುದು.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).