ಚಿನ್ನದ ಬಣ್ಣ ಇರುವ ಮೀನಿನ ಫೋಟೊ ಮನೆಯಲ್ಲಿದ್ದರೆ ಯಾವ ರಾಶಿಯವರಿಗೆ ಏನು ಲಾಭವಿದೆ? ಕುದುರೆ, ಆನೆ ಚಿತ್ರಗಳಿಂದಲೂ ಪ್ರಯೋಜನವಿದೆ
ಕೆಲವು ಪ್ರಾಣಿಗಳ ಫೋಟೊಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಅದೃಷ್ಟ ಬರಲಿದೆ, ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಚಿನ್ನದ ಬಣ್ಣದ ಮೀನು, ಮುಂದಿನ 2 ಕಾಲುಗಳನ್ನು ಮೇಲಕ್ಕೆ ಎತ್ತಿದಂತಿರುವ ಕುದುರೆ ಹಾಗೂ ಆನೆಯ ಫೋಟೊ ಮನೆಯಲ್ಲಿದ್ದರೆ ಯಾವ ರಾಶಿಯವರಿಗೆ ಲಾಭಗಳಿಗೆ ಅನ್ನೋದನ್ನ ತಿಳಿಯೋಣ. (ಬರಹ: ಜ್ಯೋತಿಷಿ ಎಚ್ ಸತೀಶ್)
ದೇವತೆಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರಾಣಿಗಳನ್ನು ವಾಹನಗಳನ್ನಾಗಿ ಮಾಡಿಕೊಂಡಿರುವುದನ್ನು ಸನಾತನ ಮತ್ತು ಹಿಂದೂ ಧರ್ಮದಲ್ಲಿ ನೋಡಿದ್ದೇವೆ. ಕೆಲವು ಪ್ರಾಣಿಗಳ ಫೋಟೊಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಶಾಂತಿ, ಸಮೃದ್ಧಿ ನೆಲೆಸುತ್ತದೆ. ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಬೆಳ್ಳಿ ಅಥವಾ ಬಂಗಾರದ ಬಣ್ಣದ ಮೀನಿನ ಪ್ರತಿಮೆಯು ದಿನನಿತ್ಯದ ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ತರಬಹುದು. ಮೇಷ, ಕಟಕ, ಸಿಂಹ, ವೃಶ್ಚಿಕ, ಮೀನಾ ಮತ್ತು ಧನು ರಾಶಿಯವರು ಬಂಗಾರದ ಬಣ್ಣದ ಮೀನಿನ ಪ್ರತಿಮೆಯಿಂದ ಪ್ರಯೋಜನಕಾರಿ ಬದಲಾವಣೆಗಳನ್ನು ಕಾಣುತ್ತಾರೆ. ಹಾಗೆಯೇ ವೃಷಭ, ಮಿಥುನ, ಕನ್ಯಾ, ತುಲಾ, ಮಕರ ಮತ್ತು ಕುಂಭ ರಾಶಿಯವರು ಬೆಳ್ಳಿ ಬಣ್ಣದ ಮೀನಿನ ಪ್ರತಿಮೆಯಿಂದ ಸಕಾರಾತ್ಮಕ ಬದಲಾವಣೆಗಳನ್ನು ಕಾಣುತ್ತಾರೆ. ಪ್ರಮುಖವಾಗಿ ಈ ಪ್ರತಿಮೆಯನ್ನು ಮನೆಯಲ್ಲಿ ಇಟ್ಟಾಗ ಕುಟುಂಬದಲ್ಲಿನ ಸದಸ್ಯರ ಮಾನಸಿಕ ಶಕ್ತಿಯು ಹೆಚ್ಚುತ್ತದೆ. ಅನಾವಶ್ಯಕವಾದ ಯೋಚನೆಗಳು ದೂರವಾಗುತ್ತವೆ. ಮನದಲ್ಲಿ ಧನಾತ್ಮಕ ಚಿಂತನೆಗಳು ಮೂಡುತ್ತವೆ.
ವಿದ್ಯಾರ್ಥಿಗಳಿಗೆ ಸೋಮಾರಿತನವು ದೂರವಾಗಿ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳುವ ಮನೋಭಾವನೆ ಉಂಟಾಗುತ್ತದೆ. ಪೂರ್ವ ದಿಕ್ಕಿನಲ್ಲಿ ಮೀನಿನ ಮುಖವು ನಮ್ಮನ್ನು ನೋಡುವಂತೆ ಇದ್ದಲ್ಲಿ ಆರೋಗ್ಯದಲ್ಲಿ ಸ್ಥಿರತೆ ಕಂಡು ಬರುತ್ತದೆ. ಗುರು ಹಿರಿಯರ ನಡುವೆ ಉತ್ತಮ ಬಾಂಧವ್ಯ ರೂಪಗೊಳ್ಳುತ್ತದೆ. ವಿದ್ಯಾರ್ಥಿಗಳಿಗೆ ಈ ದಿಕ್ಕು ಪ್ರಯೋಜನಕಾರಿಯಾಗಿದೆ. ಇದೇ ಪ್ರತಿಮೆಯನ್ನು ಉತ್ತರ ದಿಕ್ಕಿನಲ್ಲಿ ಇರಿಸದಲ್ಲಿ ಕುಟುಂಬದಲ್ಲಿ ಯಾವುದೇ ಕಾನೂನಿನ ತೊಂದರೆ ಇದ್ದರೂ ಪರಿಹಾರ ಗೊಳ್ಳುತ್ತದೆ. ಹಣಕಾಸಿನ ವಿಚಾರದ ವಿವಾದಗಳಿಗೆ ಪರಿಹಾರ ಉಂಟಾಗುತ್ತದೆ. ಆದಾಯವು ಹೆಚ್ಚದೇ ಹೋದರು ಖರ್ಚು ವೆಚ್ಚಗಳು ಕಡಿಮೆಯಾಗುತ್ತವೆ.
ಈ ರೀತಿಯ ಕುದುರೆ ಫೋಟೂ ಇದ್ದರೆ ಏನೆಲ್ಲಾ ಫಲಗಳಿವೆ?
ಮುಂದಿನ ಎರಡು ಕಾಲುಗಳು ಮೇಲೆ ಎತ್ತಿದಂತೆ ಇರುವ ಕುದುರೆಯ ಫೋಟೊ ಉತ್ತಮ ಫಲಗಳನ್ನು ನೀಡುತ್ತದೆ. ಒಂಬತ್ತು ಅಥವಾ ಏಳು ಬಿಳಿ ಬಣ್ಣದ ಕುದುರೆಗಳು ಇರುವ ಭಾವಚಿತ್ರಗಳನ್ನು ಸಹ ಬಳಸಬಹುದು. ಆದರೆ ಈ ಚಿತ್ರವು ಜೋರಾಗಿ ಕೆನೆಯುವಂತೆ ಇರಬಾರದು. ಮುಂದಿನ ಎರಡು ಕಾಲುಗಳನ್ನು ಮೇಲೆತ್ತಿ ಕುಪ್ಪಳಿಸುತ್ತಿರುವ ಅಥವಾ ನಾಗಲೋಟದಿಂದ ಓಡುತ್ತಿರುವ ಪ್ರತಿಮೆ ಅಥವ ಭಾವಚಿತ್ರವು ಒಳ್ಳೆಯದು. ಆದರೆ ಕುದುರೆಗಳು ಬೀಳುತ್ತಿರುವ ಪ್ರತಿಮೆಯನ್ನಾಗಲಿ ಅಥವಾ ಭಾವಚಿತ್ರವನ್ನಾಗಲಿ ಬಳಸಬಾರದು. ಇದನ್ನು ಕೇವಲ ಉತ್ತರ ದಿಕ್ಕಿನಲ್ಲಿ ಮಾತ್ರ ಇರಿಸತಕ್ಕದ್ದು. ಇದರಿಂದಾಗಿ ಕೇವಲ ಹಣಕಾಸಿನ ಅನುಕೂಲವಷ್ಟೇ ಅಲ್ಲದೇ ಸಮಾಜದಲ್ಲಿನ ಗೌರವ ಪ್ರತಿಷ್ಠೆಗಳು ಹೆಚ್ಚುತ್ತವೆ.
ಕುಟುಂಬದ ಹಿರಿಯರ ಜೊತೆಯಲ್ಲಿ ಅನ್ಯೋನ್ಯತೆ ಮೂಡುತ್ತದೆ. ತಂದೆ ಮಕ್ಕಳ ನಡುವೆ ಇರುವ ಮನಸ್ತಾಪವು ಕೊನೆಗೊಳ್ಳುತ್ತದೆ. ಅನಿರೀಕ್ಷಿತ ಧನ ಲಾಭ ಉಂಟಾಗುತ್ತದೆ. ಕುಟುಂಬದ ಹಿರಿಯರಿಗೆ ದೀರ್ಘಕಾಲದಿಂದ ಬಳಲುತ್ತಿರುವ ಅನಾರೋಗ್ಯವಿದ್ದರೆ ಅದಕ್ಕೆ ಸೂಕ್ತ ಪರಿಹಾರ ದೊರೆಯುತ್ತದೆ. ಎಲ್ಲರ ಆತ್ಮವಿಶ್ವಾಸವು ಹೆಚ್ಚುತ್ತದೆ. ಆದರೆ ಅತಿಯಾದ ಆತ್ಮವಿಶ್ವಾಸವು ಒಳ್ಳೆಯದಲ್ಲ. ಚಿಕ್ಕ ವಯಸ್ಸಿನ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯ ಕೊರತೆ ಇದ್ದಲ್ಲಿ ಪರಿಹಾರ ದೊರೆಯುತ್ತದೆ. ಬಹುದಿನದಿಂದ ಕನಸು ಕಾಣುತ್ತಿದ್ದ ಸ್ವಂತ ಮನೆಯ ಆಸೆಯು ಸುಲಭವಾಗಿ ಕೈಗೂಡುತ್ತದೆ.
ಆನೆಯ ಫೋಟೊದಿಂದಲೂ ಇದೆ ಪರಿಹಾರ
ಆನೆಯು ವಾಸ್ತುವಿನ ಪರಿಹಾರದ ವಿಚಾರದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಸೊಂಡಿಲನ್ನು ಮೇಲೆತ್ತಿರುವ ಒಂಟಿ ಆನೆ ಅಥವಾ ಜೋಡಿ ಆನೆಯ ಭಾವಚಿತ್ರವನ್ನು ಉಪಯೋಗಿಸಬಹುದು. ಇದರಿಂದ ಸಂತಾನ ದೋಷವು ದೂರವಾಗಿ ಸಂತಾನ ಪ್ರಾಪ್ತಿಯಾಗುತ್ತದೆ. ಇದರಿಂದ ಅದೃಷ್ಟದ ದಿನಗಳು ನಿಮ್ಮದಾಗುತ್ತದೆ. ಇದರಿಂದ ಐಶ್ವರ್ಯ ಹೆಚ್ಚಾಗುತ್ತದೆ
ಆದರೆ ಆನೆಯ ಭಾವಚಿತ್ರವನ್ನು ಮನೆಯಲ್ಲಿ ಇರಿಸುವುದುಒಳ್ಳೆಯದಲ್ಲ. ಆನೆಯ ಮೇಲೆ ಪ್ರಭಾವಳಿ ಇರುವುದು, ದೇವರ ವಿಗ್ರಹವಿರುವುದು, ಚಿನ್ನದ ಬಣ್ಣದ ವಸ್ತ್ರವನ್ನು ಇರುವ ಭಾವಚಿತ್ರ ಆದಲ್ಲಿ ಶುಭ ಉಂಟಾಗುತ್ತದೆ. ಆನೆಯ ಮೇಲೆ ಚಿನ್ನದ ಆಭರಣ ಅಥವಾ ಚಿನ್ನದ ವರಹಗಳಿರುವ ಭಾವಚಿತ್ರವನ್ನು ಉತ್ತರ ದಿಕ್ಕಿನಲ್ಲಿ ಹಾಕಿದಲ್ಲಿ ಹಣಕಾಸಿನ ತೊಂದರೆಯೂ ದೂರವಾಗುತ್ತದೆ. ಆದರೆ ಬಹು ಮುಖ್ಯ ವಿಚಾರವೆಂದರೆ ಆನೆಯ ಸೊಂಡಿಲು ಮೇಲೆ ಎತ್ತಿರುವಂತೆ ಇರಬೇಕು.
ಒಂಟಿ ಆನೆಯ ಪ್ರತಿಮೆಯನ್ನು ಮನೆಯ ಮುಂಭಾಗಿಲನ್ನು ನೋಡುವಂತೆ ಇಟ್ಟಲ್ಲಿ ಸಮಾಜದಲ್ಲಿ ಗೌರವದ ಜೊತೆ ಉನ್ನತ ಸ್ಥಾನಮಾನವು ದೊರೆಯುತ್ತದೆ. ಜನಾಕರ್ಷಕ ವ್ಯಕ್ತಿತ್ವವು ನಿಮ್ಮಲ್ಲಿ ರೂಪುಗೊಳ್ಳುತ್ತದೆ. ಜೋಡಿ ಆನೆಗಳನ್ನು ಪೂರ್ವ ದಿಕ್ಕಿನಲ್ಲಿ ಅಥವಾ ಮಲಗುವ ಕೊಠಡಿಯಲ್ಲಿ ಇಟ್ಟರೆ ಉತ್ತಮ ಸಂತಾನ ಪ್ರಾಪ್ತಿಯಾಗುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿಯು ಮೂಡುತ್ತದೆ. ಆರೋಗ್ಯದಲ್ಲಿನ ತೊಂದರೆಯು ಕಡಿಮೆಯಾಗುತ್ತದೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.