18 ಬೌಂಡರಿ, 7 ಸಿಕ್ಸರ್, 170 ರನ್ ಚಚ್ಚಿದ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ; ರಿಷಭ್ ಪಂತ್ ಬದಲಿಗೆ ಉಳಿಸಿಕೊಂಡ ಕ್ರಿಕೆಟಿಗನ ಅಬ್ಬರ
Abhishek Porel: ರಿಷಭ್ ಪಂತ್ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡ ವಿಕೆಟ್ ಕೀಪರ್ ಬ್ಯಾಟರ್ ಅಭಿಷೇಕ್ ಪೊರೆಲ್, ವಿಜಯ್ ಹಜಾರೆ ಟ್ರೋಫಿಯ ಮೊದಲ ಪಂದ್ಯದಲ್ಲೇ ಬಿರುಸಿನ ಶತಕ ಸಿಡಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟಿದ್ದಾರೆ.
ಬಹುನಿರೀಕ್ಷಿತ ವಿಜಯ್ ಹಜಾರೆ ಟ್ರೋಫಿ 2025 ಅದ್ಧೂರಿ ಆರಂಭ ಪಡೆದುಕೊಂಡಿದೆ. ಪ್ರತಿಭಾವಂತ ಕ್ರಿಕೆಟಿಗರಿಗೆ ಇದೊಂದು ಉತ್ತಮ ವೇದಿಕೆ ಎಂಬುದಕ್ಕೆ ಮತ್ತೊಮ್ಮೆ ಸಾಬೀತಾಗಿದೆ. ನವೆಂಬರ್ನಲ್ಲಿ ನಡೆದ ಮೆಗಾ ಹರಾಜಿನಲ್ಲಿ ಉಳಿಸಿಕೊಂಡ-ಖರೀದಿಸಿದ ಆಟಗಾರರ ಮೇಲೆ ಫ್ರಾಂಚೈಸಿಗಳ ಕಣ್ಣು ಹೆಚ್ಚಿರುತ್ತದೆ. ಅಂತಹ ಆಟಗಾರನೊಬ್ಬ ವಿಜಯ್ ಹಜಾರೆ ಟ್ರೋಫಿಯ ಮೊದಲ ಪಂದ್ಯದಲ್ಲೇ ಬಿರುಸಿನ ಶತಕ ಸಿಡಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟಿದ್ದಾರೆ. ರಿಷಭ್ ಪಂತ್ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡ ಆಟಗಾರ ಈತ ಎಂಬುದು ವಿಶೇಷ. ಆತನೇ ವಿಕೆಟ್ ಕೀಪರ್ ಬ್ಯಾಟರ್ ಅಭಿಷೇಕ್ ಪೊರೆಲ್.
ಡಿಸೆಂಬರ್ 21ರ ಶನಿವಾರ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ದೆಹಲಿ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ಬಂಗಾಳ ಆಟಗಾರ ಅಭಿಷೇಕ್, ಸ್ಮರಣೀಯ ಇನ್ನಿಂಗ್ಸ್ ಆಡಿದರು. ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದೆಹಲಿ ತಂಡ 7 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿತು. ಡೆಲ್ಲಿ ಪರ 7ನೇ ಕ್ರಮಾಂಕದಲ್ಲಿ ಬಂದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಅನೂಜ್ ರಾವತ್ ಕೇವಲ 66 ಎಸೆತಗಳಲ್ಲಿ 79 ರನ್ ಸಿಡಿಸಿದ್ದು ಗರಿಷ್ಠ ಸ್ಕೋರ್. ಹಿಮ್ಮತ್ ಸಿಂಗ್ 60 ರನ್ ಗಳಿಸಿದರೆ, ವೈಭವ್ ಕಂಡ್ಪಾಲ್ (47), ನಾಯಕ ಆಯುಷ್ ಬದೋನಿ (41) ಕೂಡ ಉಪಯುಕ್ತ ಇನ್ನಿಂಗ್ಸ್ ಆಡಿದರು.
ಪೊರೆಲ್ ಏಕಾಂಗಿ ಹೋರಾಟಕ್ಕೆ ಬೌಲರ್‌ಗಳು ಸುಸ್ತು
ಬೆಂಗಾಲ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಎಡಗೈ ಬ್ಯಾಟ್ಸ್‌ಮನ್ ಅಭಿಷೇಕ್, ಕ್ರೀಸ್ಗೆ ಬಂದ ಕೂಡಲೇ ಆಕ್ರಮಣಕಾರಿ ಬ್ಯಾಟಿಂಗ್ ಆರಂಭಿಸಿದರು. ಅವರ ಆರಂಭಿಕ ಪಾಲುದಾರ ಮತ್ತು ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಹೆಚ್ಚು ಕಾಲ ಉಳಿಯದಿದ್ದರೂ ಅಭಿಷೇಕ್ ಆರ್ಭಟಕ್ಕೆ ಬ್ರೇಕ್ ಹಾಕಲು ಡೆಲ್ಲಿಗೆ ಕಷ್ಟಕರವಾಯಿತು. ಈ ಯುವ ಬ್ಯಾಟರ್ ಸುನಾಮಿ ಬ್ಯಾಟಿಂಗ್ಗೆ ದೆಹಲಿ ಬೌಲರ್‌ಗಳು ಸುಸ್ತಾದರು. ಕೇವಲ 130 ಎಸೆತಗಳಲ್ಲಿ 170 ರನ್‌ಗಳ ಬೆಂಕಿ-ಬಿರುಗಾಳಿ ಇನ್ನಿಂಗ್ಸ್ ಕಟ್ಟುವ ಮೂಲಕ ಸಂಚಲನ ಮೂಡಿಸಿದರು. ಇದರೊಂದಿಗೆ ಬೆಂಗಾಲ್ ಕೇವಲ 41.3 ಓವರ್‌ಗಳಲ್ಲಿ 274 ರನ್ ಗಳಿಸಿ ಗೆದ್ದು ಬೀಗಿತು. ಈ ಪೈಕಿ 170 ರನ್ ಪೊರೆಲ್ ಗಳಿಸಿದ್ದು. ಪೊರೆಲ್ ಇನ್ನಿಂಗ್ಸ್‌ನಲ್ಲಿ 18 ಬೌಂಡರಿ, 7 ಸಿಕ್ಸರ್‌ಗಳಿದ್ದವು ಎಂಬುದು ವಿಶೇಷ.
ರಿಷಭ್ ಪಂತ್ ಬದಲಿಗೆ ಪೊರೆಲ್ರನ್ನು ಡೆಲ್ಲಿ ರಿಟೇನ್
ಈ ವರ್ಷದ ಮೆಗಾ ಹರಾಜಿಗೂ ಮುನ್ನ ಅಭಿಷೇಕ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿತ್ತು. ಈ ಅನ್‌ಕ್ಯಾಪ್ಡ್ ಆಟಗಾರನನ್ನು ಡೆಲ್ಲಿ 4 ಕೋಟಿಗೆ ಉಳಿಸಿಕೊಂಡಿದೆ. 2 ವರ್ಷಗಳ ಹಿಂದೆ ನಡೆದ ಹರಾಜಿನಲ್ಲಿ ಪೊರೆಲ್ ಅವರನ್ನು ಯಾವುದೇ ತಂಡ ಖರೀದಿಸಿರಲಿಲ್ಲ ಎಂಬುದು ಅಚ್ಚರಿಯ ಸಂಗತಿ. ರಿಷಭ್ ಪಂತ್ ಅವರ ಅಪಘಾತದ ನಂತರ, ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು 2023ರ ಆವೃತ್ತಿಗೆ 20 ಲಕ್ಷಕ್ಕೆ ಬದಲಿಯಾಗಿ ಸೇರಿಸಿಕೊಂಡಿತ್ತು. ಅಂದಿನಿಂದ ಅವರು ಡೆಲ್ಲಿ ಭಾಗವಾಗಿದ್ದಾರೆ. ಇದೀಗ ರಿಷಭ್ ತಂಡದಲ್ಲಿ ಉಳಿಯಲು ಹಿಂದೇಟು ಹಾಕಿದ ಕಾರಣ ಆತನ ಬದಲಿಗೆ ಪೊರೆಲ್ರನ್ನು ಉಳಿಸಿಕೊಳ್ಳುವ ಮೂಲಕ ಗಮನ ಸೆಳೆಯಿತು. 14 ಪಂದ್ಯಗಳಲ್ಲಿ ಅವರು 159.51 ರ ಸ್ಫೋಟಕ ಸ್ಟ್ರೈಕ್ ರೇಟ್‌ನಲ್ಲಿ 327 ರನ್ ಗಳಿಸಿದ್ದರ ಪರಿಣಾಮ ರಿಟೇನ್ ಮಾಡಿಕೊಂಡಿತ್ತು.