Toilet Cleaning Tips: ನಿಮ್ಮ ಮನೆಯ ಶೌಚಾಲಯ ಫಳ ಫಳ ಹೊಳೆಯಬೇಕೇ? ಈ ಮನೆಮದ್ದಿನ ಸರಳ ವಿಧಾನ ಅನುಸರಿಸಿ
ಎಷ್ಟೇ ಪ್ರಯತ್ನಪಟ್ಟರೂ ಶೌಚಾಲಯ ಮತ್ತು ಸ್ನಾನಗೃಹದಲ್ಲಿ ಕಲೆಗಳು ಹೋಗ್ತಿಲ್ಲ ಅಂತ ಕೆಲವರು ದೂರುತ್ತಾರೆ. ಕೆಲವೊಂದು ಮನೆಯಲ್ಲೇ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ಟಾಯ್ಲೆಟ್ ಮತ್ತು ಬಾತ್ ರೂಂ ಫಳ ಫಳ ಹೊಳೆಯುುವಂತೆ ಮಾಡಬಹುದು. ಈ ಸರಳ ವಿಧಾನವನ್ನು ಅನುಸರಿಸಿ ನೋಡಿ.
ಮನೆಮಂದಿಯ ಆರೋಗ್ಯದಲ್ಲಿ ಮನೆಯ ಸ್ವಚ್ಛತೆ ಎಷ್ಟು ಮುಖ್ಯವೋ, ಅದೇ ರೀತಿಯಲ್ಲಿ ಮನೆಯ ಶೌಚಾಲಯ, ಸ್ನಾನಗೃಹವೂ ಅಷ್ಟೇ ಸ್ವಚ್ಛವಾಗಿರಬೇಕು. ಹಾಗಾದಾಗ ಮಾತ್ರ ಆರೋಗ್ಯಕರ ವಾತಾವರಣ ಮನೆಯೊಳಗಿರುತ್ತದೆ. ಸೂಪರ್‌ಮಾರ್ಕೆಟ್ ಮತ್ತು ಅಂಗಡಿಗಳಲ್ಲಿ ವಿಧವಿಧದ ಟಾಯ್ಲೆಟ್ ಮತ್ತು ಫ್ಲೋರ್ ಕ್ಲೀನರ್ ದ್ರಾವಣಗಳು ದೊರೆಯುತ್ತವೆ. ಅವು ದುಬಾರಿಯೂ ಹೌದು, ಜತೆಗೆ ಹೆಚ್ಚಿನ ಪ್ರಮಾಣದ ರಾಸಾಯನಿಕವನ್ನೂ ಹೊಂದಿರುತ್ತವೆ. ಅಂತಹ ಕಠಿಣ ರಾಸಾಯನಿಕದ ಬಳಕೆ ನಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡಬಹುದು. ಹೀಗಾಗಿ ರಾಸಾಯನಿಕ ಬಳಸದೆಯೇ, ನಮ್ಮ ಮನೆಯಲ್ಲಿರುವ ಕೆಲವೊಂದು ಪದಾರ್ಥಗಳನ್ನು ಬಳಸಿಕೊಂಡು ನೈಸರ್ಗಿಕವಾಗಿಯೇ ಶೌಚಾಲಯ, ಸ್ನಾನದ ಕೊಠಡಿಯನ್ನು ಸ್ವಚ್ಛಗೊಳಿಸಬಹುದು. ಹೇಗೆ ಅಂತಿರಾ? ಈ ಸರಳ ಟಿಪ್ಸ್ ಅನುಸರಿಸಿ.
ವಿನೆಗರ್
ಅಡುಗೆ ಮನೆಯಲ್ಲಿ ವಿನೆಗರ್ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಸ್ಪ್ರೇ ಬಾಟಲಿಯಲ್ಲಿ ಬಿಳಿ ವಿನೆಗರ್ ಮತ್ತು ನೀರನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ, ಟಾಯ್ಲೆಟ್ ಮೇಲೆ ಸಿಂಪಡಿಸಿ. 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ನಂತರ ಟಾಯ್ಲೆಟ್ ಬ್ರಷ್‌ನಿಂದ ಚೆನ್ನಾಗಿ ಉಜ್ಜಿದರೆ ಕಲೆಯೆಲ್ಲಾ ಮಾಯವಾಗುತ್ತದೆ. ಟಾಯ್ಲೆಟ್ ಕಮೋಡ್ ಮತ್ತು ಸೀಟ್‌ನಲ್ಲಿ ಅಂಟಿಕೊಂಡಿರುವ ಜಿಡ್ಡು, ಕಲೆಗಳೆಲ್ಲಾ ಸುಲಭದಲ್ಲಿ ಹೋಗುತ್ತವೆ.
ಬೇಕಿಂಗ್ ಸೋಡಾ
ವಾಷ್‌ರೂಮ್‌ನಲ್ಲಿ ಅಂಟಿಕೊಂಡಿರುವ ಕಲೆ ಮತ್ತು ಜಿಡ್ಡನ್ನು ತೆಗೆಯಲು ಬೇಕಿಂಗ್ ಸೋಡಾ ಕೂಡ ಅತ್ಯುತ್ತಮ ಆಯ್ಕೆ. ಟಾಯ್ಲೆಟ್ ಸೀಟ್, ಕಮೋಡ್ ಮೇಲೆ ಅಡುಗೆ ಸೋಡಾವನ್ನು ಸಿಂಪಡಿಸಿ, ನಂತರ ಟಾಯ್ಲೆಟ್ ಬ್ರಷ್‌ನಿಂದ ಚೆನ್ನಾಗಿ ಉಜ್ಜಿ ತೊಳೆದರೆ ಕಲೆ ಮಾಯವಾಗುತ್ತದೆ. ಅಡುಗೆ ಸೋಡಾಗೆ ಸ್ವಲ್ಪ ನೀರು ಬೆರೆಸಿ ಪೇಸ್ಟ್ ರೂಪದಲ್ಲಿ ತಯಾರಿಸಿಕೊಂಡು ಕೂಡ ಬಳಸಬಹುದು.
ನಿಂಬೆ ರಸ
ನಿಂಬೆ ರಸವು ಅತ್ಯುತ್ತಮವಾದ ಒಂದು ಸೋಂಕು ನಿವಾರಕ ಮತ್ತು ಡಿಯೋಡರೆಂಟ್ ಆಗಿಯೂ ಕೆಲಸ ಮಾಡುತ್ತದೆ. ಶೌಚಾಲಯದ ಕಲೆಯನ್ನು ತೊಡೆದುಹಾಕುವ ಜತೆಗೇ ವಾಸನೆಯನ್ನು ಕೂಡ ಹೋಗಲಾಡಿಸುತ್ತದೆ. ನಿಂಬೆ ಹಣ್ಣನ್ನು ತುಂಡು ಮಾಡಿ, ಟಾಯ್ಲೆಟ್ ಮೇಲೆ ಅದರ ರಸವನ್ನು ಹಿಂಡಿ, ಸುಮಾರು 30 ನಿಮಿಷ ಬಿಟ್ಟು ನಂತರ ಚೆನ್ನಾಗಿ ಟಾಯ್ಲೆಟ್ ಬ್ರಷ್‌ನಿಂದ ಉಜ್ಜಿ ತೊಳೆದರೆ ಕಲೆ ಹೋಗುತ್ತದೆ. ಜತೆಗೆ ಸುವಾಸನೆಯೂ ಇರುತ್ತದೆ.
ನಿಯಮಿತವಾಗಿ ಶುಚಿಗೊಳಿಸುವಿಕೆ
ಮನೆಯಲ್ಲಿ ಶೌಚಾಲಯವನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬೇಕು. ಹಾಗೆ ಮಾಡುವುದರಿಂದ ಹೆಚ್ಚಿನ ಕಲೆ ಸಂಗ್ರಹವಾಗುವುದಿಲ್ಲ ಮತ್ತು ಆರೋಗ್ಯಕ್ಕೂ ಉತ್ತಮ. ಸ್ಚಚ್ಛ ಶೌಚಾಲಯ ಬಳಕೆಯಿಂದ ಆರೋಗ್ಯಕರ ಜೀವನ ನಮ್ಮದಾಗುತ್ತದೆ ಎನ್ನುವುದು ಗಮನದಲ್ಲಿರಲಿ.
ದೈನಂದಿನ ಕ್ಲೀನಿಂಗ್: ಟಾಯ್ಲೆಟ್‌ನ ಸೀಟ್, ಕವರ್, ಟ್ಯಾಂಕ್ ಮತ್ತು ಕೆಳಭಾಗವನ್ನು ಮೇಲೆ ಸೂಚಿಸಿದ ಯಾವುದಾದರೊಂದು ದ್ರಾವಣ ಬಳಸಿ ನಿಯತವಾಗಿ ಸ್ವಚ್ಛಗೊಳಿಸಿ.
ವಾರಕ್ಕೊಮ್ಮೆ ಕ್ಲೀನಿಂಗ್: ವಾಷ್‌ರೂಮ್‌ನ ಸ್ವಚ್ಛತೆಗೆ ಪ್ರತಿವಾರವೂ ಇಂತಿಷ್ಟು ಸಮಯ ಮೀಸಲಿರಿಸಿ. ಟಾಯ್ಲೆಟ್ ಬ್ರಷ್ ಬಳಸಿ, ಉಜ್ಜಿ ತೊಳೆಯುವುದರಿಂದ ಕೆಳಭಾಗ ಮತ್ತು ಅಂಚುಗಳಲ್ಲಿ ಅಂಟಿಕೊಂಡಿರುವ ಹಠಮಾರಿ ಕಲೆಯನ್ನು ಸುಲಭದಲ್ಲಿ ತೊಡೆದುಹಾಕಬಹುದು.
ತಿಂಗಳಿಗೊಮ್ಮೆ ಡೀಪ್ ಕ್ಲೀನಿಂಗ್: ಪ್ರತಿದಿನ ಮತ್ತು ಪ್ರತಿವಾರ ಟಾಯ್ಲೆಟ್ ಸ್ವಚ್ಚಗೊಳಿಸಿದರೂ, ಕೆಲವೊಮ್ಮೆ ನೀರು ನಿಂತು, ಅಲ್ಲಲ್ಲಿ ಕಲೆ ಉಳಿದುಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ವಿನೆಗರ್, ಅಡುಗೆ ಸೋಡಾ ಪ್ರಯೋಜನಕ್ಕೆ ಬರುತ್ತದೆ. ಅವುಗಳ ಬಳಕೆಯಿಂದ ಗಡಸು ನೀರಿನ ಕಲೆ, ರಾಸಾಯನಿಕದ ಕಲೆ ಕೂಡ ಮಾಯವಾಗಿ, ಟಾಯ್ಲೆಟ್ ಹೊಸದರಂತೆ ಹೊಳೆಯುತ್ತದೆ.
ಕಠಿಣ ಕಲೆ ಉಳಿದುಕೊಂಡಿದ್ದರೆ ಈ ವಿಧಾನ ಅನುಸರಿಸಿ
ಅಡುಗೆ ಸೋಡಾ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ದ್ರಾವಣವನ್ನು ಮಿಶ್ರ ಮಾಡಿ, ಪೇಸ್ಟ್ ಮಾಡಿಕೊಳ್ಳಿ. ನಂತರ ಆ ಪೇಸ್ಟ್ ಅನ್ನು ಕಲೆ ಇರುವಲ್ಲಿ ಹಚ್ಚಿ, 30 ನಿಮಿಷ ಹಾಗೆಯೇ ಇರಲು ಬಿಡಿ. ಬಳಿಕ ಟಾಯ್ಲೆಟ್ ಬ್ರಷ್‌ನಿಂದ ಸ್ವಚ್ಛಗೊಳಿಸಿ.
ಅಡುಗೆ ಮನೆಯಲ್ಲಿರುವ ಕಾಗದದ ಟವೆಲ್ ಅನ್ನು ವಿನೆಗರ್‌ನಲ್ಲಿ ನೆನೆಸಿ. ನಂತರ ಕಲೆ ಇರುವ ಜಾಗಕ್ಕೆ ಆ ಟವೆಲ್ ಹಚ್ಚಿ, ಬೀಳುವಂತಿದ್ದರೆ ಗಮ್ ಟೇಪ್ ಬಳಸಿ ಅಂಟಿಸಿ. ರಾತ್ರಿ ಪೂರ್ತಿ ಹಾಗೆಯೇ ಇರಲು ಬಿಡಿ, ಮರುದಿನ ಕಾಗದವನ್ನು ತೆಗೆದು, ಬ್ರಷ್‌ನಿಂದ ಕಲೆಯನ್ನು ಉಜ್ಜಿದರೆ, ಎಲ್ಲವೂ ಸ್ವಚ್ಛವಾಗುತ್ತದೆ.
ಟಾಯ್ಲೆಟ್ ಬ್ಲಾಕ್ ಆಗಿದ್ದರೆ:
ಕಮೋಡ್ ಅಥವಾ ಟಾಯ್ಲೆಟ್ ಕಟ್ಟಿಕೊಂಡು, ಬ್ಲಾಕ್ ಆಗಿದ್ದರೆ, ಅದಕ್ಕೆ ಬಿಸಿ ನೀರನ್ನು ಸುರಿದರೆ ಸಹಾಯವಾಗುತ್ತದೆ. ಬಿಸಿ ನೀರಿನಿಂದ ಪ್ರಯೋಜನವಾಗುತ್ತಿಲ್ಲ ಎಂದಾದರೆ ಪ್ಲಂಗರ್ ಸಾಧನವನ್ನು ಕೂಡ ಬಳಸಬಹುದು, ಆಗಲೂ ಬ್ಲಾಕ್ ಸ್ವಚ್ಛವಾಗದಿದ್ದರೆ ಪ್ಲಂಬಿಂಗ್ ಪೈಪ್ ಬಳಸಬೇಕಾಗುತ್ತದೆ.
ಚೆನ್ನಾಗಿ ಗಾಳಿಯಾಡುತ್ತಿರಲಿ:
ಶೌಚಾಲಯದಲ್ಲಿ ಹೆಚ್ಚಿನ ಕಲೆ ಉಂಟಾಗುವುದು ನೀರು ನಿಲ್ಲುವುದರಿಂದ.. ಸೂಕ್ತ ಗಾಳಿ ಮತ್ತು ಬೆಳಕು ಇಲ್ಲದಿದ್ದರೆ, ನೆಲದಲ್ಲಿರುವ ನೀರು ಅಲ್ಲಿಯೇ ಶೇಖರವಾಗಿ ಪಾಚಿ ಕಟ್ಟಿಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಸರಿಯಾದ ಕಿಟಕಿ ವ್ಯವಸ್ಥೆ ಮತ್ತು ಗಾಳಿಯಾಡುವಂತೆ ಮಾಡಿದರೆ, ನೀರು ನಿಲ್ಲುವುದಿಲ್ಲ.
ಎಕ್ಸಾಸ್ಟ್ ಫ್ಯಾನ್ ಬಳಸಿ:
ಶೌಚಾಲಯದ ಸ್ವಚ್ಛತೆಯಲ್ಲಿ ಎಕ್ಸಾಸ್ಟ್ ಫ್ಯಾನ್ ಕೂಡ ಮುಖ್ಯ ಪಾತ್ರ ವಹಿಸುತ್ತದೆ. ಹೊಸ ಹೊಸ ಮಾದರಿಗಳು ಇಂದು 1000 ರೂ.ಗೂ ಕಡಿಮೆ ದರದಲ್ಲಿ ಲಭ್ಯವಿದೆ. ಅದರ ವಿದ್ಯುತ್ ಬಳಕೆ ಕೂಡ ಕಡಿಮೆ. ಹೀಗಾಗಿ ಎಕ್ಸಾಸ್ಟ್ ಫ್ಯಾನ್ ಬಳಸುವುದರಿಂದ ಒಳಗಿನ ತೇವಾಂಶವೂ ಕಡಿಮೆಯಾಗುತ್ತದೆ. ಕೆಟ್ಟ ವಾಸನೆಯನ್ನೂ ಹೋಗಲಾಡಿಸಿ, ಶೌಚಾಲಯ ತಾಜಾ ಆಗಿ ಉಳಿಯುವಂತೆ ಮಾಡುತ್ತದೆ.
ಫ್ಲಶಿಂಗ್ ಕೆಲಸ ಮಾಡದಿದ್ದರೆ:
ಟಾಯ್ಲೆಟ್‌ನ ಫ್ಲಶ್ ಟ್ಯಾಂಕ್ ಕೆಲವೊಮ್ಮೆ ಸರಿಯಾಗಿ ಕೆಲಸ ಮಾಡುವುದಿಲ್ಲ. ಫ್ಲಶ್ ಮಾಡಿದಾಗ ನೀರು ಸರಿಯಾಗಿ ಹರಿಯದೇ ಇದ್ದರೆ ಸಮಸ್ಯೆಯಾಗುತ್ತದೆ. ಫ್ಲಶ್ ಟ್ಯಾಂಕಿನಲ್ಲಿರುವ ಪ್ಲಾಸ್ಟಿಕ್ ಭಾಗಗಳಿಂದಾಗಿ ನೀರಿನ ಹರಿಯುವಿಕೆಗೆ ಸಮಸ್ಯೆಯಾಗಿರಬಹುದು. ಹಾಗಾದಾಗ ಪ್ರತಿ ಬಾರಿ ಅದನ್ನು ತೆರೆದು, ಸರಿಸಿ ಸ್ವಚ್ಛ ಮಾಡುವುದು ಕಷ್ಟವಾಗಬಹುದು. ಸರಿಯಾಗಿ ಫ್ಲಶ್ ಆಗದೇ ಇದ್ದರೆ, ಟ್ಯಾಂಕಿನೊಳಗೆ ಕೆಟ್ಟ ನೀರು ನಿಂತು ವಾಸನೆ ಬರಬಹುದು. ಹಾಗಾದಾಗ ಟಾಯ್ಲೆಟ್ ಕ್ಲೀನರ್ ಬಳಸಿ, ಫ್ಲಶ್‌ನಿಂದ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬಹುದು. ಜತೆಗೆ ಉಪ್ಪು ನೀರಿನಿಂದ ಉಂಟಾಗಿರುವ ಕೊಳೆಯನ್ನು ಕೂಡ ತೊಡೆದುಹಾಕಬಹುದು.
ಸೋರಿಕೆಯನ್ನು ತಡೆಯಿರಿ: ಶೌಚಾಲಯದ ಕೆಳಗೆ ಮತ್ತು ಫ್ಲಶ್‌ಟ್ಯಾಂಕ್‌ನಿಂದ ನೀರು ಸೋರಿಕೆಯಾಗುತ್ತಿದ್ದರೆ ಅದನ್ನು ಮೊದಲು ನಿಲ್ಲಿಸಬೇಕು. ಇಲ್ಲವಾದರೆ ಹನಿ ನೀರು ಸೋರಿಕೆಯಾಗಿ, ನೆಲದಲ್ಲಿ ತೇವಾಂಶ ಉಳಿದುಕೊಳ್ಳುತ್ತದೆ. ಅದರಿಂದ ಪಾಚಿ ಕಟ್ಟಿಕೊಂಡು, ಕಲೆ ಸೃಷ್ಟಿಯಾಗಬಹುದು, ಜತೆಗೆ ಕೆಟ್ಟ ವಾಸನೆಯೂ ಬರುತ್ತದೆ. ಹೀಗಾಗಿ ಸೋರಿಕೆಯನ್ನು ಪತ್ತೆ ಹಚ್ಚಿ ನಿಲ್ಲಿಸಬೇಕು.
ಕೈಗಳ ಸ್ವಚ್ಛತೆಗೆ ಗಮನವಿರಲಿ:
ಶೌಚಾಲಯ ಬಳಸಿದ ಬಳಿಕ, ಸ್ವಚ್ಛಗೊಳಿಸಿದ ಬಳಿಕ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ಹರ್ಬಲ್ ಹ್ಯಾಂಡ್‌ವಾಷ್, ಸ್ಯಾನಿಟೈಸರ್ ಕೂಡ ಬಳಸಬಹುದು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿರುತ್ತದೆ ಎನ್ನುವುದನ್ನು ಮರೆಯಬಾರದು.