ಅರ್ಧದಷ್ಟು ಸದಸ್ಯರು ಬಾಯಿಗೆ ಬೀಗ ಹಾಕಿದ್ದಾರೆ, ಕರ್ನಾಟಕಕ್ಕೆ ವಿಧಾನ ಪರಿಷತ್‌ ಅಗತ್ಯವಿದೆಯೇ; ರಾಜೀವ ಹೆಗಡೆ ಬರಹ
ಕನ್ನಡ ಸುದ್ದಿ  /  ಕರ್ನಾಟಕ  /  ಅರ್ಧದಷ್ಟು ಸದಸ್ಯರು ಬಾಯಿಗೆ ಬೀಗ ಹಾಕಿದ್ದಾರೆ, ಕರ್ನಾಟಕಕ್ಕೆ ವಿಧಾನ ಪರಿಷತ್‌ ಅಗತ್ಯವಿದೆಯೇ; ರಾಜೀವ ಹೆಗಡೆ ಬರಹ

ಅರ್ಧದಷ್ಟು ಸದಸ್ಯರು ಬಾಯಿಗೆ ಬೀಗ ಹಾಕಿದ್ದಾರೆ, ಕರ್ನಾಟಕಕ್ಕೆ ವಿಧಾನ ಪರಿಷತ್‌ ಅಗತ್ಯವಿದೆಯೇ; ರಾಜೀವ ಹೆಗಡೆ ಬರಹ

ಕರ್ನಾಟಕದಲ್ಲಿನ ಅರಾಜಕತೆಗೆ ಸಂಬಂಧಿಸಿದ ವಿಷಯಕ್ಕೆ ವಿಧಾನ ಪರಿಷತ್‌ನ ಅರ್ಧದಷ್ಟು ಸದಸ್ಯರು ಬಾಯಿಗೆ ಬೀಗ ಹಾಕಿಕೊಂಡಿರುವ ಕಾರಣ ಪರಿಷತ್‌ನ ಅಗತ್ಯವೇನಿದೆ? ಯಾಕೆ ಎಂಬುದರ ಕುರಿತು ರಾಜೀವ ಹೆಗಡೆ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಲ್ಲಿದೆ ವಿವರ.

ಅರ್ಧದಷ್ಟು ಸದಸ್ಯರು ಬಾಯಿಗೆ ಬೀಗ ಹಾಕಿದ್ದಾರೆ, ಕರ್ನಾಟಕಕ್ಕೆ ವಿಧಾನ ಪರಿಷತ್‌ ಅಗತ್ಯವಿದೆಯೇ; ರಾಜೀವ ಹೆಗಡೆ ಬರಹ
ಅರ್ಧದಷ್ಟು ಸದಸ್ಯರು ಬಾಯಿಗೆ ಬೀಗ ಹಾಕಿದ್ದಾರೆ, ಕರ್ನಾಟಕಕ್ಕೆ ವಿಧಾನ ಪರಿಷತ್‌ ಅಗತ್ಯವಿದೆಯೇ; ರಾಜೀವ ಹೆಗಡೆ ಬರಹ

ಎಂಸಿ ನಾಣಯ್ಯ, ಬಸವರಾಜ್‌ ಹೊರಟ್ಟಿ, ಬಿಎಲ್‌ ಶಂಕರ್‌, ವಿಆರ್‌ ಸುದರ್ಶನ್‌ ರೀತಿಯ ಅದ್ಭುತ ರಾಜಕಾರಣಿಗಳು ಹಾಗೂ ವಾಗ್ಮಿಗಳನ್ನು ವಿಧಾನ ಪರಿಷತ್‌ ಹೊಂದಿತ್ತು. ಇವರು ಮಾತನಾಡಲು ನಿಂತಾಗ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕರು ಕೂಡ ಬಾಯಿ ಮೇಲೆ ಬೆರಳಿಟ್ಟು ಕೇಳುತ್ತಿದ್ದರು. ಇಂತಹ ವಿಧಾನ ಪರಿಷತ್‌ನಲ್ಲಿ 25 ಸದಸ್ಯರು, ಸ್ಥಳೀಯ ಸಂಸ್ಥೆಗಳು ಹಾಗೂ ಇನ್ನು 14 ಸದಸ್ಯರು ಶಿಕ್ಷಣ ವಲಯದಿಂದ ಆಯ್ಕೆಯಾಗಿ ಬರುತ್ತಾರೆ. ಇವರನ್ನು ಬಿಟ್ಟು ಇನ್ನುಳಿದ ಸದಸ್ಯರು ವಿಧಾನಸಭೆ ಹಾಗೂ ರಾಜ್ಯಪಾಲರ ಮೂಲಕ ಪರಿಷತ್‌ಗೆ ಬರುತ್ತಾರೆ. ಆದರೆ ಇತ್ತೀಚೆಗೆ ಈ ಸದಸ್ಯರ ಆಯ್ಕೆ ಪ್ರಕ್ರಿಯೆ ಹಾಗೂ ಅರ್ಹತೆಯ ಮಾನದಂಡ ಅತ್ಯದ್ಭುತವಾಗಿದೆ. ಹೀಗಿರುವಾಗ ವಿಧಾನಸಭೆಯ ಕಿವಿ ಹಿಂಡುವ ಸ್ಥಾನದಲ್ಲಿರಬೇಕಿದ್ದ ಹಿರಿಯರ ಮನೆಯು ಅನಗತ್ಯ ಎನ್ನುವ ಮಟ್ಟಿಗೆ ಬೇಸರ ಮೂಡಿಸುತ್ತಿದೆ.

ಇಂತಹದೊಂದು ವಾದಕ್ಕೆ ನನ್ನ ಬಳಿ ಎರಡು ಪ್ರಬಲ ವಿಚಾರಗಳಿವೆ. ಇವೆರಡೂ ಕರ್ನಾಟಕದಲ್ಲಿನ ಅರಾಜಕತೆಗೆ ಸಂಬಂಧಿಸಿದ ವಿಷಯವಾಗಿದೆ. ಹಾಗೆಯೇ ವಿಧಾನ ಪರಿಷತ್‌ನ ಅರ್ಧದಷ್ಟು ಸದಸ್ಯರ ನೇರ ಜವಾಬ್ದಾರಿಗೆ ಸಂಬಂಧಿಸಿದ್ದಾಗಿದೆ. ವಿಪರ್ಯಾಸವೆಂದರೆ ಈ ಅರ್ಧದಷ್ಟು ಸದಸ್ಯರು ಬಾಯಿಗೆ ಬೀಗ ಹಾಕಿಕೊಂಡಿರುವಾಗ ಪರಿಷತ್‌ನ ಅಗತ್ಯವೇನಿದೆ? ನಮ್ಮ ತೆರಿಗೆ ಹಣವನ್ನು ಯಾವ ಕಾರಣಕ್ಕೆ ಖರ್ಚು ಮಾಡಬೇಕು ಎಂದು ತಿಳಿದವರು ದಯವಿಟ್ಟು ವಿವರಿಸಿ.

ಅಧಿಕಾರವಿಲ್ಲದ ಗ್ರಾಮ ರಾಜ್ಯ!

ಬಾಯೆತ್ತಿದ್ದರೆ ಗಾಂಧಿಯ ಗ್ರಾಮ ರಾಜ್ಯ, ಅಂಬೇಡ್ಕರ್‌ ಸಂವಿಧಾನ ಎಂದು ಭಾಷಣ ಮಾಡುತ್ತಾರೆ. ಆದರೆ ಕರ್ನಾಟಕದಲ್ಲಿನ ಸರ್ಕಾರಕ್ಕೆ ಗಾಂಧಿಯ ಗ್ರಾಮ ಅಥವಾ ಅಂಬೇಡ್ಕರ್‌ ಸಂವಿಧಾನದ ಮೇಲೆ ಕಿಂಚಿತ್‌ ಕಾಳಜಿಯೂ ಇಲ್ಲ. ಸುಮ್ಮನೇ ವೇದಿಕೆಯಲ್ಲಿ ಭಾಷಣ ಮಾಡಲು, ದೇಶಕ್ಕೆ ಜಾತಿ ಹೆಸರಲ್ಲಿ ಬೆಂಕಿ ಹಚ್ಚಲು ಸಂವಿಧಾನದ ಪುಸ್ತಕ ಹಿಡಿದುಕೊಂಡು ಓಡಾಡುತ್ತಾರೆಯಷ್ಟೆ. ಕರ್ನಾಟಕದಲ್ಲಿ ಬಹುತೇಕ ಕಳೆದ ನಾಲ್ಕು ವರ್ಷಗಳಿಂದ ತಾಲೂಕು ಪಂಚಾಯತ್‌ ಹಾಗೂ ಜಿಲ್ಲಾ ಪಂಚಾಯತ್‌ ಚುನಾವಣೆಗಳೇ ನಡೆದಿಲ್ಲ. ಆಡಳಿತಾಧಿಕಾರಿಗಳ ಮೂಲಕ ಈ ಸ್ಥಳೀಯ ಸಂಸ್ಥೆಗಳನ್ನು ನಡೆಸಲಾಗುತ್ತಿದೆ. ಬೆಂಗಳೂರು ಮಹಾನಗರ ಪಾಲಿಕೆಯ ಕಥೆಯೂ ವಿಭಿನ್ನವಾಗಿಲ್ಲ.

ಶಾಸಕರು ಹಾಗೂ ಸಂಸದರಿಗೆ ಇಂತಹದೊಂದು ವ್ಯವಸ್ಥೆಯಿಲ್ಲದಿದ್ದರೆ ಆರಾಮು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇದೇ ಕಾರಣಕ್ಕಾಗಿ ಕೋರ್ಟ್‌, ಕಾನೂನು ನೆಪಗಳನ್ನು ಇರಿಸಿಕೊಂಡು ಮುಂದೂಡಲಾಗುತ್ತಿದೆ. ಆದರೆ ವಾಸ್ತವದಲ್ಲಿ ಈ ಚುನಾವಣೆಗೆ ಖರ್ಚು ಮಾಡುವುದು ಶಾಸಕರು ಹಾಗೂ ಸಂಸದರಿಗೆ ಬೇಕಾಗಿಲ್ಲ ಎನ್ನುವುದು ಸತ್ಯ. ಸ್ಥಳೀಯ ಆಡಳಿತ ವ್ಯವಸ್ಥೆಯಿಂದ ಭ್ರಷ್ಟಾಚಾರ ಇನ್ನಷ್ಟು ವ್ಯಾಪಿಸಿದೆ ಎನ್ನುವ ಆರೋಪಗಳಿರಬಹುದು. ಆದರೆ ಸ್ಥಳೀಯ ಸಮಸ್ಯೆಗಳನ್ನು ಗಾಜಿನ ಮಹಲ್‌ನಲ್ಲಿ ಕೂತವರಿಗೆ ತಲುಪಿಸಲು ಇರುವ ಸಂವಹನ ಮಾಧ್ಯಮ ಕೂಡ ಹೌದೆನ್ನುವುದನ್ನು ಅಲ್ಲಗಳೆಯುವಂತಿಲ್ಲ. ವಾಸ್ತವದಲ್ಲಿ ಈ ಚುನಾವಣೆ ನಡೆಸಬೇಕು ಎಂದು 25 ಸ್ಥಳೀಯ ಸಂಸ್ಥೆಗಳ ಶಾಸಕರು ಧರಣಿ ಕೂರಬೇಕಿತ್ತು. ಸಂವಿಧಾನದ ಕಗ್ಗೊಲೆ ಇಲ್ಲಾಗುತ್ತಿದೆ ಎಂದು ಪುಸ್ತಕ ಹಿಡಿದುಕೊಂಡು ಪ್ರತಿಭಟನೆ ಮಾಡಬೇಕಿತ್ತು. ಆಗ ನಿಜವಾದ ಪ್ರಜಾಪ್ರಭುತ್ವ ಉಳಿದಂತಾಗುತ್ತಿತ್ತು. ಅಂಬೇಡ್ಕರ್ ಸಂವಿಧಾನಕ್ಕೂ ಗೌರವ ಸಿಗುತ್ತಿತ್ತು, ಗಾಂಧೀಜಿಯ ಗ್ರಾಮ ರಾಜ್ಯಕ್ಕೆ ಬೆಲೆ ಬರುತ್ತಿತ್ತು. ಚುನಾವಣೆ ನಡೆಸಲು ಬಿಜೆಪಿ ಸರ್ಕಾರವು ಮೊದಲು ಕೋವಿಡ್‌ ಕಾರಣ ನೀಡಿತು. ಇದನ್ನು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಟೀಕಿಸಿದ್ದ ಕಾಂಗ್ರೆಸ್‌ ಪಕ್ಷವು ಕಳೆದ ಒಂದೂವರೆ ವರ್ಷಗಳಿಂದಲೂ ಹಗಲಿರುಳು ಅದೇ ಕಗ್ಗೊಲೆ ಮಾಡುತ್ತಿದೆ. ಅಲ್ಲಿಗೆ ಎರಡೂ ಪಕ್ಷದಲ್ಲಿ ಪ್ರಜಾಪ್ರಭುತ್ವದ ಕೊಲೆಗಡುಕರೇ ತುಂಬಿಕೊಂಡಿದ್ದಾರೆ ಎನ್ನುವುದು ಸಾಬೀತಾಯಿತು.

ವಿದ್ಯಾರ್ಥಿಗಳ ಹೊರತಾದ ಶಿಕ್ಷಣ!

ವಿಧಾನ ಪರಿಷತ್‌ನಲ್ಲಿ 14 ಶಾಸಕರು ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಅದರಲ್ಲಿ ಏಳು ಸದಸ್ಯರು ಶಿಕ್ಷಕರ ವಲಯ ಹಾಗೂ ಇನ್ನುಳಿದವರು ಪದವೀಧರರ ಕ್ಷೇತ್ರದಿಂದ ಆಯ್ಕೆಯಾಗುತ್ತಾರೆ. ಬಸವರಾಜ್‌ ಹೊರಟ್ಟಿ, ಎಚ್‌.ಕೆ ಪಾಟೀಲ್‌, ಗಣೇಶ್‌ ಕಾರ್ಣಿಕ್‌, ಅರುಣ್‌ ಶಹಾಪೂರ್‌ ರೀತಿಯ ಸದಸ್ಯರು ಈ ಕ್ಷೇತ್ರವನ್ನು ಅತ್ಯುತ್ತಮವಾಗಿ ಪ್ರತಿನಿಧಿಸಿದ್ದರು. ಆ ಹುದ್ದೆಗೆ ಶೋಭೆ ತಂದಿದ್ದರು. ಅದೆಷ್ಟೋ ಬಾರಿ ಶಿಕ್ಷಣ ವಲಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಎತ್ತಿರುವುದನ್ನು ನಾನು ನೋಡಿದ್ದೆ ಅಥವಾ ಓದಿದ್ದೆ. ಆದರೆ ದಿನ ಕಳೆದಂತೆ ಶಿಕ್ಷಣ ಕ್ಷೇತ್ರವೆಂದರೆ ಖಾಸಗಿ, ಅನುದಾನಿತ ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿನ ನೌಕರರು ಎನ್ನುವ ಮಟ್ಟಿಗಾಗಿದೆ. ಶಿಕ್ಷಕರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಉತ್ತಮ ಶಿಕ್ಷಣ ವ್ಯವಸ್ಥೆ, ವಿದ್ಯಾರ್ಥಿಗಳಿಲ್ಲದೇ ಶಿಕ್ಷಕರು ಹಾಗೂ ಸಂಸ್ಥೆಗಳಿಲ್ಲ ಎನ್ನುವುದು ಈ ವಿಧಾನ ಪರಿಷತ್‌ ಸದಸ್ಯರಿಗೆ ಅರ್ಥವೇ ಆದಂತಿಲ್ಲ. ಶಿಕ್ಷಕರ ಬೇಡಿಕೆ, ಸಂಬಳ ಹೆಚ್ಚಳ, ಬಾಕಿ ವೇತನ ಬಿಡುಗಡೆ, ಶಾಲೆಗಳ ಅನುದಾನ ಬಿಡುಗಡೆ ರೀತಿಯ ವಿಷಯಗಳೇ ಇತ್ತೀಚೆಗೆ ಮಹತ್ವ ಪಡೆದುಕೊಳ್ಳುತ್ತಿವೆ. ಹಾಗಂದ ಮಾತ್ರಕ್ಕೆ ಇವು ಗಮನಿಸಬೇಡದ ವಿಷಯಗಳು ಎಂದೇನಲ್ಲ. ಆದರೆ ಮೂಲಭೂತವಾಗಿ ಒಂದಿಷ್ಟು ಗಂಭೀರ ವಿಚಾರಗಳು ಕರ್ನಾಟಕದಲ್ಲಿವೆ.

ಶಿಕ್ಷಣದ ಗಂಧಗಾಳಿ ಗೊತ್ತಿರದ ಸಚಿವರು ಇಲಾಖೆಯನ್ನು ಬಿಬಿಎಂಪಿ ಕಸದ ಗುಡ್ಡೆಯನ್ನಾಗಿ ಮಾಡಿದ್ದಾರೆ. ದಾರಿ ಹೋಕರ ಸಲಹೆ ಪಡೆದು ಸರಣಿ ಪರೀಕ್ಷೆ ಮಾಡುವುದು, ಸಮಯಕ್ಕೆ ಸರಿಯಾಗಿ ಪಠ್ಯ ಪುಸ್ತಕಗಳನ್ನು ಪೂರೈಸದಿರುವುದು, ಭಾಷೆ ಅಥವಾ ವಿಷಯ ಜ್ಞಾನವಿಲ್ಲದ ಶಿಕ್ಷಕರ ಮೇಲೆ ಒತ್ತಡ ಹೇರಿ ಮೌಲ್ಯಮಾಪನ ಮಾಡಿಸುವುದು, ಫಲಿತಾಂಶ ಏರಿಕೆಗೆ ವಾಮ ಮಾರ್ಗ ಹಿಡಿಯಲು ಒತ್ತಡ ಹೇರುವುದು, ನೆಪ ಮಾತ್ರಕ್ಕೆ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಿ ಪಠ್ಯ ಹಾಗೂ ಶಿಕ್ಷಕರನ್ನು ನೀಡದಿರುವುದು, ಶಿಕ್ಷಕರನ್ನು ಕ್ಲರ್ಕ್‌ ಮಾಡಿರುವುದು, ಸರ್ಕಾರಿ ಶಿಕ್ಷಣ ಸಂಸ್ಥೆಗಳ ಮೇಲೆ ಖಾಸಗೀಕರಣದ ಗುಮ್ಮ ಕೂರಿಸುವುದು....... ಹೀಗೆ ಪಟ್ಟಿ ಮಾಡುತ್ತಾ ಸಾಗಿದರೆ ಒಂದು ಪುಸ್ತಕ ಬರೆಯುವಷ್ಟು ವಿಚಾರಗಳಿವೆ. ರಾಜ್ಯದ ಶಿಕ್ಷಣ ವಲಯದಲ್ಲಿನ ಅವ್ಯವಸ್ಥೆ, ಗೊಂದಲ, ದುರಾಡಳಿತದ ಬಗ್ಗೆ ಬರೋಬ್ಬರಿ ಒಂದು ತಿಂಗಳು ಚರ್ಚೆ ಮಾಡುವಷ್ಟು ವಿಷಯಗಳಿವೆ. ಆದರೆ ಇದರಲ್ಲಿ ಒಂದು ವಿಚಾರಕ್ಕಾಗಿಯಾದರೂ ಧರಣಿ ಕೂರುವುದು, ಚರ್ಚೆಗೆ ಹಠ ಹಿಡಿದು ಸರ್ಕಾರದ ಕಿವಿ ಹಿಂಡುವ ಕೆಲಸವನ್ನು ಈ ಸದಸ್ಯರು ಮಾಡುವ ಸಣ್ಣ ಪ್ರಯತ್ನವನ್ನೂ ಮಾಡಿದ್ದು ಗಮನ ಸೆಳೆದಿಲ್ಲ.

ಇದರೊಂದಿಗೆ ಈ ಬಾರಿ ಪ್ರತಿಪಕ್ಷಗಳಿಗೆ ಸುವರ್ಣ ಅವಕಾಶವಿತ್ತು. ಆಡಳಿತ ಪಕ್ಷಕ್ಕೆ ಪರಿಷತ್‌ನಲ್ಲಿ ಬಹುಮತವಿಲ್ಲ. ನಿಮಗೆ ವಿಧೇಯಕಗಳನ್ನು ಅನುಮೋದನೆ ಮಾಡಿಕೊಡಬೇಕು ಎಂದಾದರೆ ನಾವು ಕೆಲವು ವಿಷಯಗಳನ್ನು ಚರ್ಚಿಸಲು ಅವಕಾಶ ಮಾಡಿಕೊಡಿ ಎಂದು ಹಠ ಹಿಡಿಯಬಹುದಿತ್ತು. ಆದರೆ ಜನೋಪಯೋಗಿ ವಿಷಯಗಳಿಂದ ಲಾಭವೇನಿದೆಯಲ್ಲವೇ?

ಪರಿಷತ್‌ ಹೇಗಿರಬೇಕು?

ದಶಕಗಳ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕೆಪಿಎಸ್‌ಸಿ ಹಗರಣವು ಭಾರಿ ಸದ್ದು ಮಾಡಿತ್ತು. ವಿಧಾನಸಭೆಯಲ್ಲಿ ಜೆಡಿಎಸ್‌ ನಾಯಕರಾಗಿದ್ದ ಕುಮಾರಸ್ವಾಮಿ ಅವರು ಕೆಪಿಎಸ್‌ಸಿ ಅಭ್ಯರ್ಥಿಗಳ ಪರವಾದ ನಿಲುವು ಹೊಂದಿದ್ದರು. ಒಂದರ್ಥದಲ್ಲಿ ಕೆಪಿಎಸ್‌ಸಿ ಅಕ್ರಮ ಎನ್ನುವುದು ಅನಿವಾರ್ಯ ಎನ್ನುವ ದಾಟಿಯಲ್ಲಿ ಮಾತನಾಡಿದ್ದರು. ಆದರೆ ವಿಧಾನ ಪರಿಷತ್‌ನಲ್ಲಿ ಎಂ.ಸಿ ನಾಣಯ್ಯ ಅವರು ಅಕ್ರಮದ ವಿರುದ್ಧ ಧ್ವನಿ ಎತ್ತಿದ್ದರು. ಪಕ್ಷದ ದಾಟಿಯನ್ನೇ ಬದಲಿಸಿ, ರಾಜ್ಯ ಸರ್ಕಾರವನ್ನು ಭಾರಿ ಇಕ್ಕಟ್ಟಿಗೆ ಸಿಲುಕಿಸಿದ್ದರು. ಅಕ್ರಮ ಗಣಿಗಾರಿಕೆ ಹಾಗೂ ಇನ್ನಿತರ ಸಾಕಷ್ಟು ವಿಚಾರಗಳಲ್ಲಿ ನಾಣಯ್ಯ ಅವರು ಸರ್ಕಾರವನ್ನು ಅದೆಷ್ಟು ಚೆಂದವಾಗಿ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು.

ಕೊನೆಯದಾಗಿ: ಯಾವುದೇ ಕೂಗಿಗೆ ಸ್ಪಂದಿಸದೇ, ಆನೆ ನಡೆದಿದ್ದೇ ದಾರಿ ಎಂದು ಅಹಂಕಾರದಿಂದ ವರ್ತಿಸುವ ಸರ್ಕಾರ ಮೊದಲಿನಿಂದಲೂ ಇದೆ. ಆದರೆ ವ್ಯವಸ್ಥೆ ಬಗ್ಗೆ ಧ್ವನಿ ಎತ್ತದೇ ಅವಕಾಶವಾದಿಗಳ ರೀತಿಯಲ್ಲಿ ವಿಧಾನ ಪರಿಷತ್‌ ಸದಸ್ಯರೂ ವರ್ತಿಸಲು ಆರಂಭಿಸಿದರೆ, ಅಂತಹ ಶಾಸನ ಸಭೆಯೂ ರಾಜ್ಯದ ಬೊಕ್ಕಸ ಹಾಗೂ ಜನರಿಗೆ ಹೊರೆಯಾಗಿಯೇ ಕಾಣುತ್ತದೆ. ಒಂದೊಮ್ಮೆ ರಾಜ್ಯಕ್ಕೆ ವಿಧಾನ ಪರಿಷತ್‌ ಬೇಕಿದೆ ಎಂದು ಯಾರಾದರೊಬ್ಬ ಶಾಸಕರು ಹೇಳಿದರೆ, ಅದನ್ನು ಕೆಲಸದ ಮೂಲಕ ಸಾಬೀತು ಮಾಡಬೇಕಾಗಿ ವಿನಂತಿ.

ಗಮನಕ್ಕೆ: ರಾಜೀವ ಹೆಗಡೆ ಅವರ ಫೇಸ್​ಬುಕ್ ಪೋಸ್ಟ್​​ ಅನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ.

Whats_app_banner